Site icon Vistara News

Child Rescued : ಪ್ಯಾಂಟ್‌ ಬಟನ್‌ ನುಂಗಿದ 2 ತಿಂಗಳ ಮಗು; ಪ್ರಾಣ ಉಳಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು

Child swallows button

ಕಾರವಾರ: ತನ್ನ ಕೈಗೆ ಸಿಕ್ಕಿದ ಪ್ಯಾಂಟ್‌ ಬಟನನ್ನು (Pant Button) ಬಾಯಿಗೆ ಹಾಕಿಕೊಂಡು ಉಸಿರುಗಟ್ಟುವ ಸ್ಥಿತಿಗೆ ತಲುಪಿದ್ದ ಎರಡು ತಿಂಗಳ ಹಸುಳೆಯನ್ನು (Two month old Child) ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡಿ (timely treatment by Doctors) ರಕ್ಷಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ (Uttara Kannada News) ಭಟ್ಕಳ ತಾಲೂಕಿನ ರಂಗಿನಕಟ್ಟೆಯಲ್ಲಿ ನಡೆದ ಘಟನೆ ನಡೆದಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯ (Bhatkal Government Hospital) ವೈದ್ಯರು ಮತ್ತು ಸಿಬ್ಬಂದಿ ಕೂಡಲೇ ಸ್ಪಂದಿಸಿ ಮಗುವಿನ ರಕ್ಷಣೆ (Child rescued) ಮಾಡಿದ್ದಾರೆ.

ರಂಗಿನ ಕಟ್ಟೆಯ ಕಿಶೋರ್ ಮತ್ತು ಕಮಲಾ ದಂಪತಿಯ ಪುತ್ರಿಯಾಗಿರುವ ಎರಡು ತಿಂಗಳ ಮಗು ಅಮೃತಾ ಮಂಚದ ಮೇಲೆ ಮಲಗಿದ್ದಳು. ಅವಳ ಜತೆಗೆ ಅಕ್ಕ ಅಂದರೆ ಇನ್ನೂ ಎರಡು ವರ್ಷದ ಪುಟ್ಟ ಮಗು ನಮ್ರತಾ ಕುಳಿತು ಆಟವಾಡುತ್ತಿದ್ದಳು. ನಮ್ರತಾಳ ಕೈಯಲ್ಲಿ ಪ್ಯಾಂಟ್‌ನ ಬಟನ್‌ ಇತ್ತು. ಆಕೆ ಪುಟ್ಟ ಮಕ್ಕಳು ಸರ್ವೇ ಸಾಮಾನ್ಯವಾಗಿ ಆಟವಾಡುವಂತೆ ಚಾಕ್ಲೇಟ್‌ ಬೇಕಾ ಎಂದು ಕೇಳಿ ಅಮೃತಾಳ ಮುಂದೆ ಹಿಡಿದಿದ್ದಾಳೆ.

ಅಮೃತಾಳಿಗೆ ಚಾಕಲೇಟ್‌ ಅಂದರೆ ಏನೂ ಅಂತಾನೇ ಗೊತ್ತಿರಲಿಕ್ಕಿಲ್ಲ. ಅಕ್ಕ ಏನೋ ಕೊಟ್ಟಿದ್ದಾಳೆ ಎಂದು ಕೈಯಲ್ಲಿ ತೆಗೆದುಕೊಂಡು ಎಲ್ಲ ಮಕ್ಕಳು ಮಾಡುವಂತೆ ಬಾಯಿಗೆ ಹಾಕಿಕೊಂಡಿದ್ದಾಳೆ.

ನಿಜವೆಂದರೆ ಈ ಯಾವ ವಿಚಾರಗಳು ಹೆತ್ತವರಿಗೆ ಗೊತ್ತಿರಲಿಲ್ಲ. ಸ್ವಲ್ಪ ಹೊತ್ತಲ್ಲಿ ಮಗು ಉಸಿರಾಡಲು ಪರದಾಡುತ್ತಿರುವುದನ್ನು ಗಮನಿಸಿದರು. ಆಗ ಪಕ್ಕದಲ್ಲಿದ್ದ ನಮ್ರತಾಳನ್ನು ಕೇಳಿದಾಗ ಆಕೆ ಬಟನ್‌ ಬಾಯಿಗೆ ಹಾಕಿಕೊಂಡಿದ್ದಳು ಎಂದು ಹೇಳಿದ್ದಾಳೆ. ಮನೆಯವರು ಮಗುವನ್ನು ಮೇಲೆ ಕೆಳಗೆ ಮಾಡಿ ಬಾಯಿಯೊಳಗೆ ಲೈಟ್‌ ಹಾಕಿ ನೋಡಿದರು. ಅವರಿಗೆ ಏನೂ ಗೊತ್ತಾಗಲಿಲ್ಲ.

ಕೂಡಲೇ ಮಗುವನ್ನು ಹಿಡಿದುಕೊಂಡು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಓಡಿಬಂದರು. ಅಲ್ಲಿ ಪುಣ್ಯಾತ್ಮರಂತೆ ಇಎನ್‌ಟಿ ತಜ್ಞ ವೈದ್ಯರಾದ ಡಾ. ಸತೀಶ್‌ ಅವರು ಸಿಕ್ಕಿದರು. ಮಗುವಿನ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಉಸಿರಾಟಕ್ಕೆ ತೊಂದರೆ ಮಾಡುತ್ತಿದ್ದ ಬಟನ್‌ ತೆಗೆಯಲು ಅವರೇ ಸಿಕ್ಕಿದ್ದು ಚೆನ್ನಾಗಿ ವರ್ಕೌಟ್‌ ಆಯಿತು.

ಭಟ್ಕಳ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡುತ್ತಿರುವುದು

ಇಎನ್‌ಟಿ ತಜ್ಞರಾದ ಡಾ. ಸತೀಶ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನಡೆಸಿದ್ದಲ್ಲದೆ, ಕೊಳವೆ ಮೂಲಕ ಬಟನ್ ಹೊರತೆಗೆದು ಹಸುಗೂಸಿ‌ನ ಜೀವ ಉಳಿಸಿದರು. ವೈದ್ಯರ ಕಾರ್ಯಕ್ಕೆ ಸಾರ್ವಜನಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗುವನ್ನು ಕರೆದುಕೊಂಡು ಬಂದ ಕೂಡಲೇ ತ್ವರಿತವಾಗಿ ಸ್ಪಂದಿಸಿ ಜೀವ ಉಳಿಸಲು ಎಲ್ಲ ರೀತಿಯಲ್ಲೂ ಸಹಕರಿಸಿದ ವೈದ್ಯರು ಮತ್ತು ಸಿಬ್ಬಂದಿಯ ಸಕಾಲಿಕ ನೆರವನ್ನು ಭಟ್ಕಳದ ಜನರು ಶ್ಲಾಘಿಸಿದರು.

ಇದನ್ನೂ ಓದಿ: KILLER BMTC : ಬಿಎಂಟಿಸಿ ಬಸ್‌ ಹರಿದು ದುರಂತ; ಅಪ್ಪನೊಂದಿಗೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗು ಸಾವು

ಮಕ್ಕಳ ವಿಚಾರದಲ್ಲಿ ಹುಷಾರಾಗಿರಿ

ಪುಟ್ಟ ಮಕ್ಕಳ ಪೋಷಣೆ ವಿಚಾರದಲ್ಲಿ ಸಣ್ಣ ಸಣ್ಣ ವಿಚಾರಗಳೂ ಬಾರಿ ಪರಿಣಾಮವನ್ನು ಬೀರುತ್ತವೆ. ಹೀಗಾಗಿ ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ.

  1. ಯಾವ ಕಾರಣಕ್ಕೂ ಎಳೆ ಹಸುಳೆಗಳ ಪಕ್ಕದಲ್ಲಿ ಬಾಯಿಗೆ ಹಾಕಿಕೊಳ್ಳಬಹುದಾದಷ್ಟು ಸಣ್ಣದಾದ ಯಾವುದೇ ಸೂಜಿ, ಪಿನ್‌, ಬಟನ್‌, ವಯರ್‌ಗಳನ್ನು ಇಡಬೇಡಿ. ಸಣ್ಣ ಪುಟಾಣಿಗಳಿಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸವಿರುತ್ತದೆ.
  2. ಯಾವ ಕಾರಣಕ್ಕೂ ಮಕ್ಕಳನ್ನು ಒಂದೇ ಆಗಿ ಮಂಚದಲ್ಲಿ ಬಿಟ್ಟು ಹೋಗಬೇಡಿ. ಅತಿ ವೇಗದಲ್ಲಿ ಹೊರಳಾಡುವ ಅವುಗಳು ಯಾವುದೇ ಕ್ಷಣ ಕೆಳಗೆ ಉರುಳಿ ಬೀಳುವ ಅಪಾಯವಿರುತ್ತದೆ.
  3. ಮಕ್ಕಳು ಮಂಚದಿಂದ ಕೆಳಗೆ ಬೀಳದಂತೆ ತಡೆಗಳಿದ್ದರೆ ಓಕೆ, ಇಲ್ಲವಾದರೆ ನೆಲದಲ್ಲಿ ಮಲಗಿಸಿ.
  4. ಪುಟ್ಟ ಪುಟ್ಟ ಮಕ್ಕಳು ಎಚ್ಚರಾದ ಕೂಡಲೇ ಎದ್ದು ಹೊರಗಡೆ ಹೋಗುವ ಅಪಾಯವೂ ಇರುತ್ತದೆ. ಹಾಗಾಗಿ ಬಾಗಿಲು ಹಾಕಿರುವುದು ಉತ್ತಮ
  5. ಮನೆಯಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿದ್ದನ್ನು ತೆಗೆದು ವಯರನ್ನು ಹಾಗೇ ಬಿಡಬೇಡಿ. ಯಾಕೆಂದರೆ, ಈಗಷ್ಟೇ ನಡಿಗೆ ಕಲಿತ ಇಲ್ಲವೇ ಹೊರಳಾಡುವ ಮಕ್ಕಳು ಅದನ್ನು ಜಗ್ಗಿ ಬಾಯಿಗೆ ಹಾಕಿಕೊಳ್ಳುವುದು ಸರ್ವೇಸಾಮಾನ್ಯ.
  6. ಮನೆಯ ಕಿಟಕಿ, ಟಿವಿ ಆಸುಪಾಸಿನಲ್ಲಿ ಹರಿತವಾದ, ಚೂಪಾದ ಯಾವುದೇ ವಸ್ತುವನ್ನು ಇಡಬೇಡಿ.
  7. ಸಾಧ್ಯವಾದಷ್ಟು ಮಕ್ಕಳು ದೊಡ್ಡವರಾಗುವವರೆಗೆ ಅವರನ್ನು ಆದಷ್ಟು ಹತ್ತಿರದಿಂದ ಗಮನಿಸುವುದು ಉತ್ತಮ.

ಇದನ್ನೂ ಓದಿ: Child death : ಅಯ್ಯೋ ದೇವ್ರೆ! ಮೊಬೈಲ್‌ ಚಾರ್ಜರ್‌ನಿಂದ ಶಾಕ್‌ ತಗುಲಿ 8 ತಿಂಗಳ ಮಗು ಸಾವು

Exit mobile version