ತೂಕ ಇಳಿಸುವ ವಿಷಯ (5 Seeds for Weight Loss) ಬಂದರೆ, ತಿನ್ನುವುದಕ್ಕಿಂತ ತಿನ್ನದೇ ಇರುವುದಕ್ಕೇ ಅಧಿಕ ಮಹತ್ವ ನೀಡುತ್ತೇವೆ ನಾವು. ವಿಷಯವೇನೆಂದರೆ ತೂಕ ಇಳಿಸುವುದಕ್ಕೆ ತಿನ್ನಬೇಕು, ಆದರೆ ಸರಿಯಾಗಿ ತಿನ್ನಬೇಕು. ಬಹಳಷ್ಟು ರೀತಿಯ ಖನಿಜಗಳು ಮತ್ತು ಜೀವಸತ್ವಗಳು ಹಾಗೂ ನಾರು ಇರುವಂಥ ಆಹಾರಗಳ ಜೊತೆಗೆ ಲೀನ್ ಪ್ರೊಟೀನ್ ತಿನ್ನುವುದು ಮಹತ್ವದ್ದೆನಿಸುತ್ತದೆ. ಇವೆಲ್ಲವನ್ನೂ ಹೊಂದಿರುವಂಥ ಕೆಲವು ಸಂಪೂರ್ಣ ಆಹಾರಗಳ ಪೈಕಿ ಕಿರುಬೀಜಗಳು ಮುಂಚೂಣಿಯ ಸ್ಥಾನ ಪಡೆಯುತ್ತವೆ. ಚಿತ್ರ ಗಾತ್ರದ ಈ ಬೀಜಗಳಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳು ಹುದುಗಿವೆ. ಅದರಲ್ಲೂ ತೂಕ ಇಳಿಸುವವರಿಗೆ ಇಂಥ ಬೀಜಗಳು ಅಮೂಲ್ಯ ನೆರವನ್ನು ನೀಡುತ್ತವೆ. ಯಾವ ಬೀಜಗಳವು? ಇವುಗಳಿಂದ ತೂಕ ಇಳಿಸುವುದಕ್ಕೆ ಏನು ಮತ್ತು ಹೇಗೆ ಪ್ರಯೋಜನ?
ಸೂರ್ಯಕಾಂತಿ ಬೀಜ
ಪ್ರೊಟೀನ್, ನಾರು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಈ ಬೀಜಗಳಲ್ಲಿ ಖನಿಜಗಳು ಮತ್ತು ಜೀವಸತ್ವಗಳು ಭರಪೂರ ಇವೆ. ಇದರಲ್ಲಿರುವ ನಾರು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ಆಗಾಗ ತಿನ್ನಬೇಕು ಎನ್ನುವ ಬಯಕೆಯನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಇ ಅಂಶವು ದೇಹದ ಚಯಾಪಚಯವನ್ನು ಹೆಚ್ಚಿಸುವಂಥ ಉತ್ಕರ್ಷಣ ನಿರೋಧಕದಂತೆ ಕೆಲಸ ಮಾಡುತ್ತದೆ. ಜೊತೆಗೆ ಈ ಬೀಜಗಳು ತಿನ್ನುವುದಕ್ಕೆ ರುಚಿಯಾಗಿದ್ದು, ಯಾವುದೇ ಬಡಿವಾರವಿಲ್ಲದೇ ಸುಮ್ಮನೆಯೂ ತಿನ್ನಬಹುದು.
ಅಗಸೆ ಬೀಜ
ಸಸ್ಯಾದಿಗಳಲ್ಲಿ ದೊರೆಯುವ ಒಮೇಗಾ ೩ ಕೊಬ್ಬಿನಾಮ್ಲದ ಮೂಲಗಳ ಪೈಕಿ ಅಗಸೆ ಬೀಜ ಅತ್ಯಂತ ಹೆಚ್ಚಿನದ್ದು. ಆಲ್ಫಲಿನೊಲೆನಿಕ್ ಆಮ್ಲವು ಈ ಸಣ್ಣ ಬೀಜಗಳಲ್ಲಿ ಸಾಂದ್ರವಾಗಿದೆ. ಇದಲ್ಲದೆ, ನಾರು, ಪ್ರೊಟೀನ್, ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಇದರಲ್ಲಿ ಹೇರಳವಾಗಿವೆ. ಹಾಗಾಗಿ ಈ ಬೀಜದ ಚಟ್ಣಿಪುಡಿಯಿಂದ ತೊಡಗಿ, ಎಣ್ಣೆಯವರೆಗೆ ಹಲವು ರೀತಿಯಲ್ಲಿ ಇದನ್ನು ನಿತ್ಯವೂ ಆಹಾರದಲ್ಲಿ ಉಪಯೋಗಿಸುವುದರಿಂದ ತೂಕ ಇಳಿಕೆಗೆ ಅನುಕೂಲವಾಗುತ್ತದೆ. ಇವುಗಳನ್ನು ಪುಡಿ ಮಾಡಿ ತಿನ್ನಿ, ಒಗ್ಗರಣೆಗೆ ಬಳಸಿ, ಟ್ರೇಲ್ ಮಿಕ್ಸ್‌ಗೆ ಉಪಯೋಗಿಸಿ- ಹೇಗಾದರೂ ಸರಿ, ತಿನ್ನಿ.
ಚಿಯಾ ಬೀಜ
ಈ ಬೀಜಗಳಂತೂ ಅಗಸೆ ಬೀಜಕ್ಕಿಂತಲೂ ಸಣ್ಣವು. ಆದರೆ ಒಮೇಗಾ ೩ ಕೊಬ್ಬಿನಾಮ್ಲದ ವಿಷಯಕ್ಕೆ ಬಂದರೆ ಮಾತ್ರ ಸಣ್ಣವಲ್ಲ. ಇದರಲ್ಲೂ ಆಲ್ಫ ಲಿನೋಲೆನಿಕ್ ಆಮ್ಲ ಧಾರಾಳವಾಗಿದೆ. ಇದನ್ನು ಆಹಾರದಲ್ಲಿ ಬಳಸುವುದೂ ಸಹ ಕಷ್ಟವಲ್ಲ. ನಿತ್ಯವೂ ನೀರಿಗೆ ಹಾಕಿ ಕುಡಿದರೂ ಸಾಕಾಗುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ, ತೂಕ ನಿರ್ವಹಣೆಗೆ ಸಹಾಯವಾಗುತ್ತದೆ, ಹೃದಯದ ಆರೋಗ್ಯ ರಕ್ಷಣೆಗೂ ನೆರವಾಗುತ್ತದೆ. ಇದರಲ್ಲಿರುವ ಪ್ರೊಟೀನ್ ಅಂಶವು ತೂಕ ಇಳಿಕೆಗೆ ಪೂರಕವಾಗಿದ್ದು, ಕ್ಯಾಲ್ಶಿಯಂನಂಥ ಖನಿಜಗಳು ಮೂಳೆಗಳ ರಕ್ಷಣೆಗೆ ಬೇಕಾದವು.
ಹೆಂಪ್ ಬೀಜಗಳು
ಭಾರತದಲ್ಲಿ ಅಷ್ಟಾಗಿ ಪ್ರಚಲಿತವಿಲ್ಲದ ಬೀಜಗಳಿವು. ಆದರೆ ಸತ್ವಗಳ ವಿಷಯದಲ್ಲಿ ಕಡಿಮೆಯಿಲ್ಲ. ಇದರಲ್ಲಿಯೂ ಒಮೇಗಾ 3 ಕೊಬ್ಬಿನಾಮ್ಲ ಸಾಂದ್ರವಾಗಿದೆ. ಜೊತೆಗೆ ಹಲವು ರೀತಿಯ ಖನಿಜಗಳು ದೇಹಕ್ಕೆ ದೊರೆಯುತ್ತವೆ. ಇದರಲ್ಲಿ ಎಲ್ಲಾ ಒಂಬತ್ತು ರೀತಿಯ ಅಮೈನೊ ಆಮ್ಲಗಳು ಲಭ್ಯವಿದ್ದು, ಸಂಪೂರ್ಣ ಪ್ರೊಟೀನ್‌ಗಳ ಸಾಲಿಗೆ ಸೇರುತ್ತವೆ. ಇದರ ತೈಲವೂ ಲಭ್ಯವಿದ್ದು, ಅಡುಗೆಗೆ ಬಳಸಲು ಸಾಧ್ಯವಿದೆ. ಗೋಡಂಬಿಯಂತೆಯೇ ಹೆಂಪ್ ಬೀಜಗಳನ್ನು ಸಹ ನಾನಾ ಖಾದ್ಯಗಳಿಗೆ ಉಪಯೋಗಿಸಬಹುದು.
ಕುಂಬಳಕಾಯಿ ಬೀಜ
ಹಲವು ಸಮಸ್ಯೆಗಳಿಗೆ ಸರಳ ಸಮಾಧಾನದಂತೆ ಈ ಪುಟ್ಟ ಬೀಜಗಳು ಕಂಡುಬರುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಹೃದಯದ ಆರೋಗ್ಯ ಸುಧಾರಿಸುವವರೆಗೆ ಹಲವು ರೀತಿಯಲ್ಲಿ ಕುಂಬಳಬೀಜ ನಮಗೆ ಉಪಕಾರಿಯಾಗಬಲ್ಲದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಬೀಜಗಳು, ಕಳ್ಳ ಹಸಿವೆಯನ್ನು ನಿವಾರಿಸುವುದನ್ನು ಸುಮ್ಮನೆ ಬಾಯಾಡುವುದಕ್ಕೆ ಜೊತೆಯಾಗುತ್ತವೆ. ಇದನ್ನು ಗೋಡಂಬಿಯಂತೆ ಹಲವು ಖಾದ್ಯಗಳಿಗೆ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ಹುರಿದರೆ, ಚಹಾ ಜೊತೆಗೆ ಬಾಯಿಗೆಸೆದುಕೊಳ್ಳಬಹುದು. ಕುಂಬಳಬೀಜದಲ್ಲಿ ಟ್ರಿಪ್ಟೊಫ್ಯಾನ್ ಎಂಬ ಅಮೈನೊ ಆಮ್ಲವಿದೆ. ಇದು ಸೆರೊಟೋನಿನ್ ಮತ್ತು ಮೆಲಟೋನಿನ್‌ನಂಥ ಹ್ಯಾಪಿ ಹಾರ್ಮೋನುಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಈ ಹಾರ್ಮೋನುಗಳು ನಮ್ಮ ಮೂಡ್ ಮತ್ತು ನಿದ್ದೆಯನ್ನು ನಿಯಂತ್ರಿಸುತ್ತವೆ. ಹಾಗಾಗಿ ಕಣ್ತುಂಬಾ ನಿದ್ದೆ ತರಿಸಿ, ತೂಕ ಇಳಿಸುವುದಕ್ಕೆ ಸೂಕ್ತವಾಗುವಂತೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ.