Site icon Vistara News

Guava Benefits: ಸೀಬೆ ಹಣ್ಣು ಎಂಬ ʻಸೂಪರ್‌ ಫುಡ್ʼ; ಇದು ಔಷಧೀಯ ಗುಣಗಳ ಕಣಜ!

Guava Benefits

ಪೇರಳೆ ಅಥವಾ ಸೀಬೇಹಣ್ಣು ಅಥವಾ ಚೇಪೇಕಾಯಿ ʻಹಣ್ಣುಗಳ ರಾಣಿʼ ಎಂಬುದು ನಿಮಗೆ ಗೊತ್ತೇ? ಹೌದು. ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಇದರಲ್ಲಿರುವ ಪೋಷಕಾಂಶಗಳಿಗೆ, ಉರಿಯೂತಗಳು, ಋತುಗಳಿಗನುಸಾರವಾಗಿ ವಕ್ಕರಿಸುವ ಸಾಮಾನ್ಯ ರೋಗಗಳನ್ನು (guava benefits) ಬಡಿದಟ್ಟುವ ಗುಣವಿದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮಧುಮೇಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಅದಕ್ಕೇ ಸೀಬೆ ಹಣ್ಣುಗಳ ರಾಣಿ!

ಆದರೆ, ಸೀಬೆ ಹಣ್ಣನ್ನು ಕಂಡರೆ ನಮಗ್ಯಾಕೋ ಸದರ. ಮಾರುಕಟ್ಟೆಯಲ್ಲಿ ಯಾವು ಯಾವುದೋ ಊರುಗಳಿಂದ ಲಗ್ಗೆಯಿಡುವ ಥಳಥಳಿಸುವ ಸ್ಟಿಕ್ಕರ್‌ ಅಂಟಿಸಿ ಬರುವ ಹಣ್ಣುಗಳನ್ನು ತಿನ್ನುವ ನಾವು, ಮನೆಯಂಗಳದಲ್ಲೇ ಬೆಳವ, ಸ್ಥಳೀಯ ಹಣ್ಣಾದ ಸೀಬೆಯ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಆದರೆ, ಸೀಬೆಯ ಗುಣಗಳನ್ನು ತಿಳಿದರೆ, ನಾವು ಯಾಕೆ ಈ ಹಣ್ಣನ್ನು ತಿನ್ನುವುದು ಅಗತ್ಯ ಎಂಬ ಮನವರಿಕೆಯಾದೀತು. ಬನ್ನಿ, ಸೀಬೆ ಹಣ್ಣಿನ ಅದ್ಭುತ ಲಾಭಗಳನ್ನು ತಿಳಿಯೋಣ.

ಮಧುಮೇಹಿಗಳಿಗೆ ಒಳ್ಳೆಯದು

ಸೀಬೆಯ ಚಿಗುರೆಲೆಗಳ ಸೇವನೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್‌ ಮಟ್ಟದಲ್ಲಿ ಏರುಪೇರು ಸಮಸ್ಯೆ ಇರುವ ಮಂದಿಗೂ ಇದು ಬಹಳ ಒಳ್ಳೆಯದು. ನಿತ್ಯವೂ ಪೇರಳೆಯ ಚಿಗುರೆಲೆ ಚಹಾ ಮಾಡಿ ಕುಡಿದರೆ, ಮಧುಮೇಹಿಗಳು ಫಲಿತಾಂಶ ಕಾಣಬಹುದು.

ಇದು ಹೃದಯಸ್ನೇಹಿ

ಸೀಬೆ ಹಣ್ಣು ಹೃದಯ ಸ್ನೇಹಿ. ಹೃದಯದ ಆರೋಗ್ಯ ಕಾಪಾಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ವಿಟಮಿನ್‌ಗಳು ಫ್ರೀ ರ್ಯಾಡಿಕಲ್‌ಗಳ ಮೂಲಕ ಹೃದಯಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿ ಹೆಚ್ಚು ಪೊಟಾಶಿಯಂ ಇದ್ದು, ಇದು ಹೃದಯಕ್ಕೆ ಒಳ್ಳೆಯದು. ಪೇರಳೆ ಎಲೆಯು ಅಧಿಕ ರಕ್ತದೊತ್ತಡವನ್ನೂ ಕಡಿಮೆಗೊಳಿಸುತ್ತದೆ. ಕೆಟ್ಟ ಕೊಲೆಸ್ಟರಾಲ್‌ ಅನ್ನೂ ಹತೋಟಿಗೆ ತರುತ್ತದೆ. ಆ ಮೂಲಕ ಪರೋಕ್ಷವಾಗಿ ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ.

ಇದು ಸೂಪರ್‌ ಫುಡ್‌ ಏಕೆಂದರೆ

ಸೀಬೆಹಣ್ಣು ಒಂದು ಸೂಪರ್‌ಫುಡ್‌. ಯಾಕೆ ಗೊತ್ತಾ? ಇದರಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಸಮೃದ್ಧವಾಗಿವೆ. ಇದರಲ್ಲಿ ಫೋಲಿಕ್‌ ಆಸಿಡ್‌, ವಿಟಮಿನ್‌ ಬಿ೯ಗಳೂ ಇರುವುದರಿಂದ ಇದು ಸಣ್ಣ ಮಕ್ಕಳ ಮೆದುಳು ಹಾಗೂ ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರು ಸೇಬುಹಣ್ಣನ್ನು ತಿನ್ನುವುದು ಒಳ್ಳೆಯದು.

ತೂಕ ಇಳಿಸಲು ಅನುಕೂಲ

ತೂಕ ಇಳಿಸುವ ಮಂದಿಗೂ ಇದು ಶುಭಸುದ್ದಿ. ಸೀಬೆ ಅತ್ಯಂತ ಕಡಿಮೆ ಕ್ಯಾಲರಿ ಇರುವ ಹಣ್ಣು. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶವೂ ಇರುವುದರಿಂದ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಜೊತೆಗೆ ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆಯ ಅಂಶ ಇರುವುದರಿಂದ ಹೊಟ್ಟೆ ತುಂಬಿಸುವ ಜೊತೆಗೆ ತೂಕವನ್ನೂ ಇಳಿಸುತ್ತದೆ.

ಕ್ಯಾನ್ಸರ್‌ ನಿರೋಧಕ

ಸೀಬೆಹಣ್ಣಿನಲ್ಲಿ ಲೈಕೋಪೀನ್‌ ಎಂಬ ಆಂಟಿ ಆಕ್ಸಿಡೆಂಟ್‌ ಇದ್ದು, ಇದು ಕ್ಯಾನ್ಸರ್‌ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ.

ಹೇರಳ ವಿಟಮಿನ್‌ ಎ

ಸೀಬೆಹಣ್ಣಿನಲ್ಲಿ ವಿಟಮಿನ್‌ ಎ ಹೇರಳವಾಗಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೂ ಸೀಬೆ ಒಳ್ಳೆಯದು. ವಯಸ್ಸಾಗುತ್ತಿದ್ದ ಹಾಗೆ ಕಾಡುವ ಕಣ್ಣಿನ ಪೊರೆಯಂಥ ಸಮಸ್ಯೆಗಳನ್ನು ಬಹುಬೇಗನೆ ಬರದಂತೆ ಇದು ತಡೆಯುತ್ತದೆ.

ಮಾಂಸಖಂಡಗಳಿಗೆ ಅನುಕೂಲ

ಸೀಬೆಯಲ್ಲಿ ಮೆಗ್ನೀಶಿಯಂ ಕೂಡಾ ಹೇರಳವಾಗಿ ಇರುವುದರಿಂದ ಇದು ದಣಿದ ಮಾಂಸಖಂಡಗಳು ಹಾಗೂ ನರಮಂಡಲವನ್ನು ರಿಲ್ಯಾಕ್ಸ್‌ ಮಾಡಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೂ ಇದು ಒಳ್ಳೆಯದು. ಅಷ್ಟೇ ಅಲ್ಲ, ಇದರಲ್ಲಿರುವ ಮ್ಯಾಂಗನೀಸ್‌, ದೇಹ ಸಮರ್ಪಕವಾಗಿ ಆಹಾರಗಳಿಂದ ಪೋಷಕಾಂಶಗಳನ್ನು ಹೀರಲು ಪ್ರಚೋದಿಸುತ್ತದೆ.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Exit mobile version