Site icon Vistara News

Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

Almonds

ಕೆಲವು ಆಹಾರಗಳ್ನು ಕೆಲವು ಹೊತ್ತಿನಲ್ಲಿ ತಿಂದರೆ ಆ ಆಹಾರದ ಸರ್ವ ಗುಣಗಳ ಲಾಭವನ್ನೂ ನಾವು ಪಡೆಯಬಹುದು ಎನ್ನುತ್ತಾರೆ ತಜ್ಞರು. ಆಹಾರವೇ ಹಾಗೆ, ಹೊತ್ತಲ್ಲದ ಹೊತ್ತಿನಲ್ಲಿ ತಿಂದರೆ ಲಾಭಕ್ಕಿಂತ ನಷ್ಟ ಹೆಚ್ಚು. ಯಾವಾಗ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ಸಾಮಾನ್ಯ ಜ್ಞಾನ, ನಮಗೆ ತಿಳಿದಿರಬೇಕು. ಅದು ಪ್ರತಿ ಆಹಾರಕ್ಕೂ ಅನ್ವಯಿಸುತ್ತದೆ. ಇನ್ನು ಕೆಲವು ಆಹಾರಗಳನ್ನು ಇಂತಹ ಹೊತ್ತಿನಲ್ಲಿ ತಿಂದರೆ, ಹೆಚ್ಚು ಅಡ್ಡ ಪರಿಣಾಮಗಳಾಗದು ಎಂಬ ಸತ್ಯವೂ ಇದೆ. ಒಟ್ಟಾರೆ, ಆಹಾರದ ಬಗೆಗಿನ ಸಾಮಾನ್ಯ ಜ್ಞಾನ ಜೀವನದಲ್ಲಿ ನಮಗಿದ್ದರೆ, ಆರೋಗ್ಯವೂ ನಮ್ಮ ಕೈಯಲ್ಲಿದ್ದಂತೆ. ಯಾಕೆಂದರೆ, ನಮ್ಮ ಆರೋಗ್ಯದ ಬಹುಪಾಲು ಗುಟ್ಟು ಅಡಗಿರುವುದು ನಾವು ತಿನ್ನುವ ಆಹಾರದಲ್ಲಿಯೇ.
ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ (Almonds Benefits) ಕಾರಣಗಳನ್ನು ತಿಳಿಯೋಣ.

ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ

ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಆಹಾರದಲ್ಲಿರುವ ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ. ಬಾದಾಮಿಯಲ್ಲಿರುವ ಪ್ರೊಟೀನ್‌ ಹಾಗೂ ಕೊಬ್ಬು ಈ ಕೆಲಸವನ್ನು ಮಾಡುತ್ತವೆ. ಬಾದಾಮಿಯ ಸೇವನೆಯ ನಂತರ ನಮ್ಮ ದೇಹಕ್ಕೆ ಸೇರಿದ ಆಹಾಋದ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ

ನೀವು ತೂಕ ಇಳಿಸುವವರಾಗಿದ್ದರೆ, ಈ ಅಭ್ಯಾಸ ಬಹಳ ಒಳ್ಳೆಯದು. ಬಾದಾಮಿಯಲ್ಲಿ ಹೆಚ್ಚು ನಾರಿನಂಶ ಹಾಗೂ ಪ್ರೊಟೀನ್‌ ಇರುವುದರಿಂದ ಇದು ಹೆಚ್ಚು ಹಸಿವಾಗಲು ಬಿಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ಸೇವಿಸಿದ್ದರಿಂದ ಹಸಿವು ಕೊಂಚ ನಿಯಂತ್ರಣಕ್ಕೆ ಬಂದು ನೀವು ಕಡಿಮೆ ತಿನ್ನುತ್ತೀರಿ. ಸಹಜವಾಗಿಯೇ, ಕ್ಯಾಲರಿ ಕಡಿಮೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯತ್ತ ಸಾಗುತ್ತದೆ.

ಜೀರ್ಣಕ್ರಿಯೆ ಹೆಚ್ಚಳ

ನಿಮ್ಮ ಜೀರ್ಣಕ್ರಿಯೆಯ ಶಕ್ತಿ ಇಮ್ಮಡಿಗೊಳ್ಳುತ್ತದೆ. ಬಾದಾಮಿಯಲ್ಲಿ ನಾರಿನಂಶವು ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ತಾಕತ್ತನ್ನು ಹೊಂದಿದೆ.

ಚಯಾಪಚಯಕ್ರಿಯೆ ಚುರುಕು

ಚಯಾಪಚಯಕ್ರಿಯೆ ಚುರುಕಾಗುತ್ತದೆ. ದೇಹದಲ್ಲಿ ಈ ಕ್ರಿಯೆಗೆ ಚುರುಕು ಬಂದ ತಕ್ಷಣ ಶಕ್ತಿ ಉತ್ಪಾದನೆಯೂ ಹೆಚ್ಚಾಗುತ್ತದೆ. ನಿಮ್ಮ ಸುಸ್ತು, ಬೇಸರಗಳೆಲ್ಲ ಮಾಯವಾಗಿ ನಿಮ್ಮ ದೇಹ ಚುರುಕಾಗುತ್ತದೆ.

ಹೃದಯ ಸ್ನೇಹಿ

ಎಲ್ಲಕ್ಕಿಂತ ಮುಖ್ಯವಾಗಿ ಬಾದಾಮಿ ಹೃದಯ ಸ್ನೇಹಿ. ಇದರಲ್ಲಿರುವ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ. ಹೃದಯದಲ್ಲಿ ರಕ್ತಪೂರಣಕ್ಕೆ ಚುರುಕು ಮುಟ್ಟುತ್ತದೆ. ಹೃದಯದ ಸಮಸ್ಯೆಗಳು ದೂರ ನಿಲ್ಲುತ್ತವೆ.

ಸಕ್ಕರೆ ಮಟ್ಟ ಏರಿಕೆ ಕಡಿಮೆ

ಬಾದಾಮಿಯಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ತೀರಾ ಕಡಿಮೆ ಇದೆ. ಇದರಿಂದ ಸಹಜವಾಗಿಯೇ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯ ಪರಿಣಾಮ ಕಡಿಮೆಯೇ ಇರುತ್ತದೆ.

ಚರ್ಮದ ಆರೋಗ್ಯಕ್ಕೆ ಪೂರಕ

ಚರ್ಮದ ಕಾಳಜಿ ವಹಿಸುವ ಮಂದಿ ಇದನ್ನು ಖಂಡಿತ ಬಳಸಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಜೀವಸತ್ವಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಇವು ಆಂಟಿ ಏಜಿಂಗ್‌ ಕೂಡಾ. ಚರ್ಮವನ್ನು ನಯವಾಗಿ ಹೊಳಪಾಗಿ ಇರಿಸುವ ಜೊತೆಗೆ ಚರ್ಮಕ್ಕೆ ಬೇಕಾದ ಪೋಷಣಾಯನ್ನು ನೀಡುತ್ತವೆ.

ರೋಗ ನಿರೋಧಕ ಶಕ್ತಿ

ಬಾದಾಮಿಯಲ್ಲಿ ವಿಟಮಿನ್‌ ಇ ಹಾಗೂ ಝಿಂಕ್‌ ಇರುವುದರಿಂದ ಇವು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತವೆ. ದೇಹವನ್ನು ಇನ್‌ಫೆಕ್ಷನ್‌ನಿಂದ ದೂರವಿರಿಸುತ್ತದೆ. ಒಟ್ಟಾರೆ ರೋಗನಿರೋಧಕತೆ ಹೆಚ್ಚುತ್ತದೆ.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ

ಬಾದಾಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರೂ ಇದೆ ಎಂದರೆ ನೀವು ನಂಬಲೇ ಬೇಕು. ಅದು ಒಣವಾಗಿ ಕಂಡರೂ, ತನ್ನ ಒಣ ಅಂಶದಷ್ಟೇ ಪ್ರಮಾಣದಲ್ಲಿ ನೀರನ್ನೂ ಹೊಂದಿದೆ ಎಂದರೆ ನೀವು ನಂಬಬೇಕು. ಹೀಗಾಗಿ, ದೇಹವನ್ನು ಸದಾ ಹೈಡ್ರೇಟ್‌ ಆಗಿ ಇಡುವಲ್ಲಿ ಇದು ತನ್ನ ಕಾಣಿಕೆಯನ್ನೂ ನೀಡುತ್ತದೆ.

Exit mobile version