Site icon Vistara News

ದಾಖಲೆ ಬರೆದ ಬಾಳೆ ಹಣ್ಣು ಮೇಳ, ಜೋಡಿಸಲಿಕ್ಕೇ 3 ದಿನ ಬೇಕಾಯ್ತಂತೆ!

ಬೃಹತ್‌ ಗಾತ್ರದ ಬಾಳೆ ಹಣ್ಣಿನ ವಿಷಯದಲ್ಲಿ ದಾಖಲೆ ಇರಬಹುದು, ಅತಿ ದೊಡ್ಡ ಗೊನೆ ಎಂಬ ಲೆಕ್ಕದಲ್ಲೂ ದಾಖಲೆ ಇರಬಹುದು, ಒಂದು ಗೊನೆ ಎಷ್ಟು ಕೆಜಿ ಇದೆ ಎನ್ನುವುದರ ಆಧಾರದಲ್ಲೂ ದಾಖಲೆಗಳಿರಬಹುದು. ಆದರೆ, ಇಲ್ಲೊಂದು ವಿಶೇಷವಾದ ದಾಖಲೆ ನಿರ್ಮಾಣವಾಗಿದೆ. ಅದೇನೆಂದರೆ, ಒಂದು ಬೃಹತ್‌ ಬಾಳೆ ಹಣ್ಣು ಮೇಳ ದಲ್ಲಿ ಎಷ್ಟು ಕೆಜಿ ಬಾಳೆ ಹಣ್ಣಿತ್ತು ಎನ್ನುವುದೇ ಈ ದಾಖಲೆ.

ವಿಶ್ವದ ಅತಿ ದೊಡ್ಡ ಫಲ ಪ್ರದರ್ಶನ ಏರ್ಪಡಿಸುವ ಮೂಲಕ ಅಮೆರಿಕದ ದಿನಸಿ ಅಂಗಡಿಯೊಂದು ಗಿನ್ನೆಸ್‌ ದಾಖಲೆ ಸೇರಿದೆ. ಶಿಕಾಗೋದ ವೆಸ್ಟ್‌ಮಾಂಟ್‌ನಲ್ಲಿ ಏರ್ಪಡಿಸಿರುವ ʻಬನಾನಾ ಬೊನಾನ್ಜʼ ಹೆಸರಿನ ಈ ಪ್ರದರ್ಶನದಲ್ಲಿ ಸುಮಾರು 31,700 ಕೆ.ಜಿ. ಬಾಳೆಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಫ್ರೆಶ್‌ ಡೆಲ್‌ಮಾಂಟ್‌ ಮತ್ತು ಜೆವೆಲ್-ಆಸ್ಕೋ ಸೂಪರ್‌ ಮಾರ್ಕೆಟ್‌ ಸರಣಿ ಜಂಟಿಯಾಗಿ ಈ ಪ್ರದರ್ಶನವನ್ನು ಏರ್ಪಡಿಸಿದ್ದವು.

ಬೃಹತ್‌ ಪ್ರಮಾಣದಲ್ಲಿ ಇರಿಸಲಾಗಿದ್ದ ಈ ಹಣ್ಣುಗಳನ್ನು ಜೋಡಿಸಲು ಸುಮಾರು ಮೂರು ದಿನಗಳ ಕಾಲ ಇಲ್ಲಿನ ಸಿಬ್ಬಂದಿ ಶ್ರಮಿಸಿದ್ದಾರೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಗಿನ್ನೆಸ್‌ ಬುಕ್‌ ಅಧಿಕಾರಿಗಳು, ವಿಶ್ವದ ಅತಿದೊಡ್ಡ ಫಲ ಪ್ರದರ್ಶನವೆಂಬ ಮಾನ್ಯತೆಯನ್ನು ನೀಡಿದ್ದಾರೆ. ಈ ಪ್ರದರ್ಶನದ ನಂತರ, ಅಲ್ಲಿ ನೆರೆದಿದ್ದ ಜನರಿಗೆ ಬಾಳೆಹಣ್ಣನ್ನು ವಿತರಿಸಲಾಯಿತು. ಹಂಚಿ ಉಳಿದ ಹಣ್ಣನ್ನು ಆ ಪ್ರದೇಶದ ಆಹಾರ ಬ್ಯಾಂಕ್‌ಗೆ ದಾನ ಮಾಡಲಾಯಿತು ಎಂದು ವರದಿಯೊಂದು ಹೇಳಿದೆ.

ಇದಕ್ಕಿಂತ ಹಿಂದಿನ ದಾಖಲೆ 2016ರಲ್ಲಿ ಬ್ರೆಜಿಲ್‌ನಲ್ಲಿ ನಿರ್ಮಾಣವಾಗಿತ್ತು. ಇದರಲ್ಲಿ ಅನಾನಸು, ಕಿತ್ತಳೆ, ಸೇಬು, ಸ್ಟ್ರಾಬೆರಿ ಸೇರಿದಂತೆ 19 ನಾನಾ ರೀತಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸುಮಾರು 18,800 ಕೆ.ಜಿ. ತೂಗುತ್ತಿದ್ದ ಈ ಹಣ್ಣುಗಳನ್ನು ಪ್ರದರ್ಶನದ ನಂತರ ಜನರಿಗೆ ವಿತರಿಸಲಾಗಿತ್ತು.

ಇದನ್ನೂ ಓದಿ| ದೈತ್ಯಾಕಾರದ ಜೆರ್ಸಿ, ಗಿನ್ನಿಸ್ ದಾಖಲೆ ಬರೆದ ಐಪಿಎಲ್‌-2022

Exit mobile version