Site icon Vistara News

Belly Fat Loss Tips: ಚಿಂತೆ ಮಾಡಬೇಡಿ, ನಿಮ್ಮ ಹೊಟ್ಟೆ ಕರಗಿಸಲು ಸಾಧ್ಯ!

Belly Fat Loss Tips

ಮಜ್ಜಿಗೆಯೊಳಗಿಂದ ಸದಾ (Belly Fat Loss Tips) ಮೇಲೆಯೇ ತೇಲುವ ಬೆಣ್ಣೆಯಂತೆ, ಸದಾ ಶರೀರದಿಂದ ಮುಂದೆಯೇ ಬಂದಿರುತ್ತದೆ ಹೊಟ್ಟೆ. ಇಂಥ ಹಠಮಾರಿಯನ್ನು ಕರಗಿಸುವುದೆಂದರೆ ಸಣ್ಣ ವಿಷಯವಲ್ಲ. ಆದರೆ ಕೆಲವು ಸಣ್ಣ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ, ದೇಹದಲ್ಲಿ ಕೂರುವ ಹಠಮಾರಿ ಕೊಬ್ಬು ಕರಗಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೊಬ್ಬು ಕರಗಿಸುವ ಬಗ್ಗೆ ಇಲ್ಲೊಂದು ಸರಳ, ಆದರೆ ಪರಿಣಾಮಕಾರಿಯಾದ ಸಲಹೆಯಿದೆ. ಏನು ಎನ್ನುವುದನ್ನು ಓದಿ, ತಿಳಿಯಿರಿ.

ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಆಸ್ತಿ, ಅಂತಸ್ತು, ಖ್ಯಾತಿ, ಸಂಬಂಧಗಳು, ವಯಸ್ಸು… ಎಲ್ಲವೂ ಬಂದ ಮೇಲೆ ಎಂದಾದರೂ ಹೋಗಿಬಿಡುತ್ತವೆ. ಜಗತ್ತಿನ ಈ ನಿಯಮವನ್ನು ಮೀರಿದ್ದು ಒಂದೇ ಒಂದು- ಹೊಟ್ಟೆ… ಬಂದಿದ್ದು ಹೋಗುವುದೇ ಇಲ್ಲ! ಹೀಗೆ ಸೃಷ್ಟಿ ನಿಯಮವನ್ನೂ ಮೀರಿ ಸೃಷ್ಟಿಗೊಳ್ಳುವ ಹೊಟ್ಟೆಯ ಪತನಕ್ಕೆ ಪ್ರಯತ್ನಿಸದ ಮಾನವರು ಯಾರಿದ್ದಾರೆ? ಹೊಟ್ಟೆಯನ್ನು ಕರಗಿಸುವುದಕ್ಕೆ ಹೊಟ್ಟೆ ಕಟ್ಟಿ, ಅಂದರೆ ಡಯೆಟ್‌ ಮಾಡಿ, ನಡೆದು, ಓಡಿ, ಹಾರಿ, ಕುಣಿದು, ಕುಪ್ಪಳಿಸಿ… ಊಹುಂ, ಬಡಪಟ್ಟಿಗೆ ಜಗ್ಗದ ಹೊಟ್ಟೆಯನ್ನು ಕರಗಿಸುವುದಾದರೂ ಹೇಗೆ ಎಂಬ ಚಿಂತೆ ಆವರಿಸುತ್ತದೆ. ತೂಕ ಇಳಿಕೆ ಮತ್ತು ಕೊಬ್ಬು ಕರಗಿಸುವುದು ಎರಡೂ ಒಂದೇ ಅಲ್ಲದಿದ್ದರೂ ಒಂದಕ್ಕೊಂದು ತೀರಾ ಭಿನ್ನವೂ ಅಲ್ಲ. ಈ ನಿಟ್ಟಿನಲ್ಲಿ ಕೆಲವು ಸರಳ ಕ್ರಮಗಳು ಒಂದಿಷ್ಟು ದೂರ ದಾರಿ ತೋರಬಲ್ಲವು. ತೂಕ ಇಳಿಸುವ ಹಾದಿಯ ಆರಂಭದಲ್ಲೇ ಕಷ್ಟದ ಕೆಲಸಗಳು ಎದುರಾದರೆ, ಹಾದು ಮುಂದುವರಿಯದೇ ಅರ್ಧಕ್ಕೇ ನಿಲ್ಲುವ ಸಾಧ್ಯತೆಯೇ ಹೆಚ್ಚು. ಆದರೆ ಈಗ ಹೇಳುವಂಥ ಉಪಾಯವನ್ನು ಅನುಸರಿಸಲು ಯಾವ ಕಷ್ಟವೂ ಇಲ್ಲ; ರಾತ್ರಿ ಮಲಗುವ ಮುನ್ನ ಈ ಸಣ್ಣ ಉಪಾಯವನ್ನು ಅನುಸರಿಸಿದರೆ, ಹೊಟ್ಟೆಯ ಕೊಬ್ಬು ಕರಗಿಸಲು ಸುಲಭವಾಗುತ್ತದೆ. ಇದರ ಜೊತೆಗೆ ಒಂದಿಷ್ಟು ವ್ಯಾಯಾಮ ಮತ್ತು ಸರಿಯಾದ ಆಹಾರಕ್ರಮವನ್ನು ಅನುಸರಿಸಿದರೆ ಫಲಿತಾಂಶ ಕಾಣುವುದಕ್ಕೆ ಸಾಧ್ಯ.

ಏನು ಉಪಾಯ?

ಒಂದು ಗ್ಲಾಸ್‌ ನೀರಿಗೆ ಒಂದು ಚಮಚ ಅಜವಾನ ಅಥವಾ ಓಂಕಾಳು, ಒಂದು ಚಮಚ ಸೋಂಪು, ಚಿಟಕೆ ಅರಿಶಿನ ಮತ್ತು ಒಂದು ಚಮಚ ಧನಿಯಾ ಬೀಜಗಳನ್ನು ಹಾಕಿ, 10 ನಿಮಿಷ ಚೆನ್ನಾಗಿ ಕುದಿಸಿ. ಬೆಚ್ಚಗಿರುವಾಗಲೇ ಇದನ್ನು ಸೋಸಿ, ಮಲಗುವ ಮುನ್ನ ಕುಡಿಯಿರಿ. ಇದಕ್ಕೆ ಉಪಯೋಗಿಸುವ ಎಲ್ಲ ವಸ್ತುಗಳಲ್ಲೂ ಉತ್ಕರ್ಷಣ ನಿರೋಧಕಗಳು ಭರಪೂರ ಇವೆ. ಸೋಂಕು ನಿರೋಧಕ ಗುಣಗಳು, ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವ ಮತ್ತು ಚಯಾಪಚಯ ಸುಧಾರಿಸುವ ಸಾಮರ್ಥ್ಯ ಈ ಎಲ್ಲ ವಸ್ತುಗಳಿಗೂ ಇದೆ. ಕಳ್ಳ ಹಸಿವನ್ನು ಓಡಿಸಿ, ಅನಗತ್ಯವಾಗಿ ತಿನ್ನುವ ಚಪಲವನ್ನು ಹತ್ತಿಕ್ಕಲು ನೆರವಾಗುತ್ತವೆ. ತೂಕ ಇಳಿಸಲು ಮತ್ತು ಹೊಟ್ಟೆಯ ಕೊಬ್ಬು ಕರಗಿಸಲು ಈ ಪೇಯ ಹೇಗೆ ನೆರವಾಗುತ್ತದೆ ಮತ್ತು ಇನ್ನೂ ಏನೇನು ಲಾಭಗಳಿವೆ ಎಂಬುದನ್ನು ನೋಡೋಣ.

ತೂಕ ಇಳಿಕೆ

ಇವುಗಳಲ್ಲಿ ದೇಹದ ಚಯಾಪಚಯ ವೃದ್ಧಿಸುವ ಸಾಮರ್ಥ್ಯವಿದೆ. ಇದರಿಂದ ತೂಕ ಇಳಿಕೆಯ ಗುರಿಯನ್ನು ತಲುಪುವುದಕ್ಕೆ ದೊಡ್ಡ ನೆರವು ಸಿಕ್ಕಂತಾಗುತ್ತದೆ. ಜೀರ್ಣಾಂಗಗಳ ಕ್ಷಮತೆಯನ್ನೂ ಹೆಚ್ಚಿಸುವುದರಿಂದ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ತೊಂದರೆಗಳು ದೂರವಾಗುತ್ತವೆ. ಅದರಲ್ಲೂ ಈ ಪೇಯದಲ್ಲಿರುವ ಸೋಂಪಿನಂಥ ವಸ್ತುಗಳನ್ನು ಜಗಿದು ತಿನ್ನುವುದು ಇನ್ನೂ ಹೆಚ್ಚಿನ ಉಪಯೋಗಗಳನ್ನು ಒದಗಿಸುತ್ತದೆ. ಇವುಗಳಲ್ಲಿರುವ ನಾರಿನಂಶವು ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಉರಿಯೂತ ಶಮನ

ಈ ಪೇಯದಲ್ಲಿ ಉಪಯೋಗಿಸುವ ಎಲ್ಲ ವಸ್ತುಗಳಲ್ಲೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇದರಿಂದಾಗಿ ಉರಿಯೂತ ಶಮನ ಮಾಡುವುದಕ್ಕೆ ಅನುಕೂಲ. ಅಂದರೆ ಶರೀರದಲ್ಲಿ ಹೆಚ್ಚುವರಿ ನೀರಿನಂಶ ಉಳಿಯದಂತೆ ಈ ಮೂಲಕವೂ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Health Food Tips: ಈ ಕೆಲವು ಆಹಾರಗಳ ಸೇವನೆಯಿಂದ ಬಾಯಾರಿ, ಗಂಟಲೊಣಗಿ ನೀರು ಬೇಕೆನಿಸುತ್ತದೆ!

ಹಾರ್ಮೋನುಗಳ ಸಮತೋಲನ

ಸಾಮಾನ್ಯವಾಗಿ 30-50 ವರ್ಷಗಳ ನಡುವಿನ ವಯೋಮಾನದಲ್ಲಿ ಹಾರ್ಮೋನುಗಳ ಅಸಮತೋಲನವೂ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸೊಂಟದ ಸುತ್ತಳತೆ ಹೆಚ್ಚುವುದು, ಹೊಟ್ಟೆಯಲ್ಲಿ ಕೂರುವ ಹಠಮಾರಿ ಕೊಬ್ಬು ಮುಂತಾದವನ್ನು ನಿರ್ವಹಿಸಲು ಚೋದಕಗಳ ನಿರ್ವಹಣೆಯೂ ಅಗತ್ಯ. ರಾತ್ರಿ ಮಲಗುವ ಮುನ್ನ ಇಂಥ ಪೇಯವನ್ನು ಕುಡಿಯುವುದು ಹಾರ್ಮೋನುಗಳನ್ನು ಸಮಸ್ಥಿತಿಯಲ್ಲಿ ಇರಿಸಿ, ಪಿಸಿಒಎಸ್‌ನಂಥ ತೊಂದರೆಗಳನ್ನು ತಹಬಂದಿಗೆ ತರುತ್ತದೆ.

ಕಣ್ತುಂಬ ನಿದ್ದೆ

ಈ ಎಲ್ಲ ವಸ್ತುಗಳಲ್ಲಿ ಒತ್ತಡ ಶಮನ ಮಾಡುವ ಸಾಮರ್ಥ್ಯವಿದೆ. ಇದರಿಂದ ರಾತ್ರಿಯ ನಿದ್ದೆ ಸರಾಗವಾಗುತ್ತದೆ. ತೂಕ ಇಳಿಸುವ ಉದ್ದೇಶವಿದ್ದರೆ ನಿದ್ದೆ ಸಾಕಷ್ಟು ದೊರೆಯಬೇಕು ದೇಹಕ್ಕೆ. ಜೊತೆಗೆ ಮಾನಸಿಕ ಒತ್ತಡವೂ ನಿಯಂತ್ರಣದಲ್ಲಿ ಇರಬೇಕು. ಹಾಗಿಲ್ಲದಿದ್ದರೆ ದೇಹದ ಚಯಾಪಚಯ ಹಾಳಾಗಿ, ತೂಕ ಇಳಿಸುವುದು ಅಸಾಧ್ಯ ಎಂಬಂತೆ ಆಗುತ್ತದೆ.

Exit mobile version