Site icon Vistara News

Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

Benefits Of Cherries

ಯಾವುದೇ ಕೇಕ್‌ ಮೇಲೆ ಅಥವಾ ಸೋಡಾದಲ್ಲಿ ಕೂತು ಕರೆಯುವ ಚೆರ್ರಿಯನ್ನು ನೋಡಿ ತಿನ್ನಲು ಆಸೆ ಪಡುವವರು ಎಷ್ಟೋ ಮಂದಿ. ಕೆಲವೊಮ್ಮೆ ಸಕ್ಕರೆಭರಿತ ಕೃತಕ ಚೆರ್ರಿಗಳು ಕೇಕ್‌ಗಳನ್ನು ಅಲಂಕರಿಸಿದರೆ, ಹಲವು ಬಾರಿ ನಿಜವಾದ ಚೆರ್ರಿ ಹಣ್ಣುಗಳೇ ಕೂತು, ತಿನ್ನುವವರ ನಡುವೆ ಜಗಳ ಸೃಷ್ಟಿಸುತ್ತವೆ. ವಿಶ್ವದೆಲ್ಲೆಡೆ ದೊರೆಯುವ ಚೆರ್ರಿಗಳನ್ನು ಗಮನಿಸಿದರೆ ನೂರಾರು ಬಗೆಗಳಿವೆ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ದೊರೆಯುವುದು ಬಿಂಗ್‌ ಚೆರ್ರಿ. ಕಡುಕೆಂಪು ಬಣ್ಣದ ಸಿಹಿಯಾದ ಚೆರ್ರಿಗಳಿವು. ಇದೊಂದೇ ಅಲ್ಲ, ಹುಳಿಯಾದ ಟಾರ್ಟ್‌ ಚೆರ್ರಿ, ರೇನರ್‌ ಚೆರ್ರಿ, ಕಪ್ಪು ಚೆರ್ರಿ, ತುಸು ಕೆಂಪು ಬಣ್ಣದ್ದು, ಅಚ್ಚ ಕೆಂಪು ಬಣ್ಣದ್ದು- ಹೀಗೆ ನಾನಾ ರೀತಿಯ ಚೆರ್ರಿಗಳು ಪ್ರಾಂತ್ಯಾವಾರ ಭಿನ್ನತೆಯೊಂದಿಗೆ ಲಭ್ಯವಿವೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೇನು ಲಾಭಗಳಿವೆ (Benefits Of Cherries) ಎಂಬುದನ್ನು ನೋಡೋಣ.

ಸತ್ವಗಳೇನು?

ನೂರು ಗ್ರಾಂ ಚೆರ್ರಿಯಲ್ಲಿ ಇರುವಂಥ ಸತ್ವಗಳನ್ನು ಗಮನಿಸಿದರೆ- ಇದರಿಂದ ಸುಮಾರು 97 ಕ್ಯಾಲರಿ ಶಕ್ತಿ ದೊರೆಯುತ್ತದೆ. ಪ್ರೊಟೀನ್-‌ 2 ಗ್ರಾಂ, ಪಿಷ್ಟ- 26 ಗ್ರಾಂ, ಸಕ್ಕರೆ- 20 ಗ್ರಾಂ, ನಾರು- 3 ಗ್ರಾಂ, ವಿಟಮಿನ್‌ ಸಿ- 18%, ಪೊಟಾಶಿಯಂ- 10%, ತಾಮ್ರ ಮತ್ತು ಮೆಗ್ನೀಶಿಯಂ- 5% ಮುಂತಾದವು. ಕಪ್ಪು ಮತ್ತು ಕಡುಕೆಂಪು ಬಣ್ಣದಿಂದ ಹಿಡಿದು ಹಳದಿ ಬಣ್ಣದವರೆಗೆ ಚೆರ್ರಿಯ ವರ್ಣಗಳು ಭಿನ್ನವಾಗಿವೆ. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ ಆದರೂ ವರ್ಣ ಗಾಢವಾದಷ್ಟೂ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ಹೇಳಬಹುದು.

ಉರಿಯೂತ ಶಾಮಕ

ಬಣ್ಣ ಯಾವುದೇ ಆದರೂ, ಚೆರ್ರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ಇದರಲ್ಲಿ ಪಾಲಿಫೆನಾಲ್‌ಗಳು ಹೇರಳವಾಗಿವೆ. ಮುಕ್ತ ಕಣಗಳಿಂದ ದೇಹದ ಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಲ್ಲಂಥ ಸಸ್ಯಜನ್ಯ ರಾಸಾಯನಿಕಗಳಿವು. ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ಹಿಡಿದು, ಹೃದಯದ ತೊಂದರೆಗಳು, ಮಧುಮೇಹದವರೆಗೆ ಮಾರಕ ರೋಗಗಳ ದಾಳಿಯಿಂದ ಶರೀರವನ್ನು ಕಾಪಾಡುವಂಥವು. ಜೊತೆಗೆ ಇದರಲ್ಲಿರುವ ಕೆರೊಟಿನಾಯ್ಡ್‌ಗಳು ಸಹ ಉರಿಯೂತ ನಿವಾರಣೆ ಮಾಡುವಂಥ ಸಾಮರ್ಥ್ಯವನ್ನು ಹೊಂದಿವೆ.

ಶೀಘ್ರ ಚೇತರಿಕೆ

ಕಠಿಣವಾದ ದೇಹಶ್ರಮ ಇಲ್ಲವೇ ವ್ಯಾಯಾಮದ ನಂತರ ಕಾಣಿಸಿಕೊಳ್ಳುವ ಸ್ನಾಯುಗಳ ನೋವಿನಿಂದ ಚೆರ್ರಿಗಳು ಶೀಘ್ರ ಚೇತರಿಕೆ ನೀಡುತ್ತವೆ. ಸ್ನಾಯುಗಳ ನೋವು, ಊತದಿಂದ ಬೇಗ ಉಪಶಮನ ಒದಗಿಸುತ್ತವೆ. ಈ ಕೆಲಸಕ್ಕೆ ಟಾರ್ಟ್‌ ಚೆರ್ರಿಯನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಸಿಹಿ ಚೆರ್ರಿಗಳಿಗಿಂತ ಕೊಂಚ ಹುಳಿಯಾದ ಚೆರ್ರಿಯಲ್ಲಿ ಈ ಸಾಮರ್ಥ್ಯ ಹೆಚ್ಚು ಎನ್ನಲಾಗುತ್ತದೆ. ಇದನ್ನು ಮ್ಯಾರಥಾನ್‌ ಓಡುವವರು, ಸೈಕ್ಲಿಸ್ಟ್‌ಗಳಂಥ ಕ್ರೀಡಾಳುಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಅವರು ಮಾತ್ರವೇ ಅಲ್ಲ, ಸಾಮಾನ್ಯರು ಸಹ ಹುಳಿ ಚೆರ್ರಿಯನ್ನು ಚೇತರಿಕೆಗಾಗಿ ಬಳಸಬಹುದು.

ಹೃದಯದ ಸ್ನೇಹಿತ

ಪೊಟಾಶಿಯಂ ಭರಪೂರ ಇರುವಂಥ ಹಣ್ಣಿದು. ರಕ್ತದೊತ್ತಡ ನಿರ್ವಹಣೆಯಲ್ಲಿ ಪೊಟಾಶಿಯಂ ಪಾತ್ರ ಹಿರಿದು. ದೇಹಕ್ಕೆ ಹೊರೆಯಾಗಿರುವ ಸೋಡಿಯಂ ಅಂಶವನ್ನು ಹೊರಹಾಕಲು ಪೊಟಾಶಿಯಂ ಅಗತ್ಯ. ದಿನವೊಂದಕ್ಕೆ ದೇಹಕ್ಕೆ ಬೇಕಾದ ಶೇ. ೧೦ ಪೊಟಾಶಿಯಂ ಒಂದು ಕಪ್‌ ಚೆರ್ರಿಯಿಂದ ದೊರೆಯುತ್ತದೆ. ಜೊತೆಗೆ, ಇದರಲ್ಲಿರುವ ಪಾಲಿಫೆನಾಲ್‌ಗಳು, ಆಂಥೋಸಯನಿನ್‌ಗಳು ಮತ್ತು ಫ್ಲೆನಾಲ್‌ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಕೆಲಸ ಮಾಡುತ್ತವೆ.

ಆರ್ಥರೈಟಿಸ್‌ ನೋವು ಶಮನ

ದೇಹದಲ್ಲಿ ಉರಿಯೂತ ಹೆಚ್ಚಿದಾಗ ಕಾಡುವ ರೋಗಗಳಲ್ಲಿ ಆರ್ಥರೈಟಿಸ್‌ ಸಹ ಒಂದು. ಶರೀರದಲ್ಲಿ ಯೂರಿಕ್‌ ಆಮ್ಲದ ಜಮಾವಣೆ ಹೆಚ್ಚಿ ಕಾಡುವಂಥದ್ದು ಗೌಟ್‌ ಆರ್ಥರೈಟಿಸ್‌. ಇವುಗಳ ನೋವು ಶಮನಕ್ಕೆ ಚೆರ್ರಿ ಸೇವನೆಯು ನೆರವು ನೀಡುತ್ತದೆ. ದೇಹದಲ್ಲಿ ಯೂರಿಕ್‌ ಆಮ್ಲ ಜಮೆಯಾಗುವುದನ್ನು ಚೆರ್ರಿ ಕಡಿಮೆ ಮಾಡುತ್ತದೆ. ಇದಲ್ಲದೆ, ಉಳಿದ ನೋವುಗಳ ಶಮನಕ್ಕೂ ಚೆರ್ರಿ ಸಹಕಾರಿ ಎನ್ನುತ್ತದೆ ಹಲವು ಅಧ್ಯಯನಗಳು.

ನಿದ್ದೆಗೆ ಪೂರಕ

ಚೆರ್ರಿಯಲ್ಲಿ ಮೆಲಟೋನಿನ ಅಂಶವಿದೆ. ಇದು ನಿದ್ರೆಯನ್ನು ಗಾಢವಾಗಿಸುತ್ತದೆ. ಜೊತೆಗೆ ನಿದ್ದೆಗೊಂದು ಸಮಯವನ್ನು ನಿಗದಿ ಮಾಡುವ ಸನ್ನಾಹದಲ್ಲಿದ್ದರೆ, ಚೆರ್ರಿ ತಿನ್ನುವುದು ಸೂಕ್ತವಾದದ್ದು. ಇದರಿಂದ ನಿದ್ದೆಯಲ್ಲಿ ಆಗಾಗ ಎಚ್ಚರಾಗುವುದು, ಕಡಿಮೆ ನಿದ್ದೆ, ಸೂಕ್ಷ್ಮ ನಿದ್ದೆಯಂಥ ತೊಂದರೆಗಳು ಮಾಯವಾಗಿ, ಗಡದ್ದಾಗಿ ರಾತ್ರಿ ಮಲಗಿ ಬೆಳಗ್ಗೆ ಎಚ್ಚರಾಗುವಂತೆ ಮಾಡುತ್ತದೆ.

Exit mobile version