Site icon Vistara News

Ceramic Cookware: ಪಿಂಗಾಣಿ ಪಾತ್ರೆಗಳನ್ನು ಅಡುಗೆಗೆ ಬಳಸಿದರೆ ಏನಾಗುತ್ತದೆ?

Ceramic Cookware

ಸೆರಾಮಿಕ್‌ ವಸ್ತುಗಳ ಬಳಕೆ (Ceramic Cookware) ಇಂದು ನಿನ್ನೆಯದಲ್ಲ. ಇದಕ್ಕೆ ಕ್ರಿಸ್ತ ಪೂರ್ವದ ದಿನಗಳ ಇತಿಹಾಸವಿದೆ. ಈ ವಸ್ತುಗಳನ್ನು ಅಡುಗೆ ಮಾಡುವುದಕ್ಕೂ ಬಳಸುತ್ತಿದ್ದ ಇತಿಹಾಸವಿದೆ. ಈಗಿನ ಅಡುಗೆ ಮನೆಗಳಲ್ಲಿ ಸ್ಟೀಲ್‌ ಮತ್ತು ನಾನ್‌ಸ್ಟಿಕ್‌ ಪಾತ್ರೆಗಳದ್ದೇ ದರ್ಬಾರು. ಹಳೆಯ ಕಾಲದ ಮಣ್ಣಿನ ಮತ್ತು ಪಿಂಗಾಣಿ ಪಾತ್ರೆಗಳ ವೈಭವ ನಿಧಾನಕ್ಕೆ ಮರುಕಳಿಸೀತೆ ಎನ್ನುವುದನ್ನು ಕಾದು ನೋಡಬೇಕಷ್ಟೆ. ಸ್ಟೀಲ್‌ ಪಾತ್ರೆಗಳು ಎಲ್ಲ ರೀತಿಯಿಂದಲೂ ಸುರಕ್ಷಿತ. ಆದರೆ ನಾನ್‌ಸ್ಟಿಕ್‌ ಪಾತ್ರೆಗಳ ಬಗ್ಗೆ ಸಾಕಷ್ಟು ಅಪಸ್ವರಗಳಿವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೇ ಹೇಳಲಾಗುತ್ತದೆ. ಗಾಜಿನ ಪಾತ್ರೆಗಳು ಸುರಕ್ಷಿತ ಹೌದಾದರೂ ಒಡೆಯುವ ಅಪಾಯವನ್ನು ಜೊತೆಗಿಟ್ಟುಕೊಂಡೇ ಬಳಸಬೇಕು. ಮಣ್ಣಿನ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯವಾದರೂ ನಿರ್ವಹಣೆಗೆ ತೊಡಕಾಗಬಹುದು. ಕಬ್ಬಿಣದ ಕಡಾಯಿಗಳು ಭಾರ ಹೆಚ್ಚು. ತಾಮ್ರ, ಕಂಚಿನವು ಈಗ ದೊರೆಯುವುದೇ ಕಡಿಮೆ. ಈಗ ಸೆರಾಮಿಕ್‌ ಪಾತ್ರೆಗಳ ವಿಷಯಕ್ಕೆ ಬಂದರೆ, ಅವುಗಳ ಬಳಕೆ ಸುರಕ್ಷಿತವೇ? ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲವೇ?

Female shopping ceramic cookware at workshop

ಸೆರಾಮಿಕ್‌ ಸುರಕ್ಷಿತವೇ?

ಉನ್ನತ ಗುಣಮಟ್ಟದ ಸೆರಾಮಿಕ್‌ಗಳು ಸಾಮಾನ್ಯವಾಗಿ ಆರೋಗ್ಯಕ್ಕೆ ಸುರಕ್ಷಿತವೇ, ಅನುಮಾನವಿಲ್ಲ. ಇವುಗಳಲ್ಲಿ PTFE (polytetrafluoroethylene) ಮತ್ತು PFOA (perfluorooctanoic acid) ಇರುವುದಿಲ್ಲ. (ಈ ರಾಸಾಯನಿಕಗಳು ಸಾಮಾನ್ಯವಾಗಿ ನಾನ್‌ಸ್ಟಿಕ್‌ನಂಥ ಪಾತ್ರೆಗಳಲ್ಲಿ ಕಾಣುವಂಥವು) ಸೀಸ್‌, ಕ್ಯಾಡ್ಮಿಯಂ ಮುಂತಾದ ಹಾನಿಕಾರ ಲೋಹಗಳೂ ಸೆರಾಮಿಕ್‌ನಲ್ಲಿ ಇರಬಾರದು. ಇದರಲ್ಲಿರುವ ಸಿಲಿಕಾದಂಥ ವಸ್ತುಗಳಿಂದ ಆರೋಗ್ಯಕ್ಕೆ ಸಮಸ್ಯೆಗಳಿಲ್ಲ. ಆದರೂ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಅಗತ್ಯ.
ಸುಂದರವಾಗಿ ಕಾಣಲೆಂದು ಕೆಲವು ಸೆರಾಮಿಕ್‌ ಪಾತ್ರೆಗಳ ಮೇಲ್ಮೈಗೆ ಸೀಸ, ಕ್ಯಾಡ್ಮಿಯಂ, ಬ್ಯಾರಿಯಂ ಮುಂತಾದ ಹಾನಿಕಾರಕ ಲೋಹಗಳನ್ನು ಹಾಕಲಾಗುತ್ತದೆ. ಹಾಗಾಗಿ ಸೆರಾಮಿಕ್‌ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಅಗತ್ಯ. ಕಡಿಮೆ ಬೆಲೆಯಲ್ಲಿ, ಯಾವ್ಯಾವುದೋ ಅಂಗಡಿಗಳಲ್ಲಿ ದೊರೆಯುವ ಸೆರಾಮಿಕ್‌ಗಳನ್ನು ಖರೀದಿಸಿ ಬಳಸುವ ಬದಲು, ಗುಣಮಟ್ಟಕ್ಕೆ ಬೆಲೆ ನೀಡಿ. ಅಲಂಕಾರಕ್ಕೆಂದು ಹಳದಿ, ಕೆಂಪು, ನೀಲಿ ಮುಂತಾದ ಕಡು ಬಣ್ಣಗಳನ್ನು ಉಪಯೋಗಿಸಿದ ಪಾತ್ರೆಗಳಲ್ಲಿ ಲೆಡ್‌ ಮತ್ತು ಕಟು ಲೋಹಗಳೂ ಇರಬಹುದು, ಜಾಗ್ರತೆ.

ಇದನ್ನೂ ಓದಿ: High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

ಸೆರಾಮಿಕ್‌ ಬಳಕೆ

ಇವುಗಳನ್ನು ಬಳಸುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ಅವುಗಳನ್ನು ಉಪಯೋಗಿಸುವಾಗ ಕುಕ್ಕಿ, ಕೆರೆದು, ಪರಚುವಂತಿಲ್ಲ. ಇವುಗಳ ಮೇಲ್ಮೈ ಹಾಳಾದರೆ ಬಳಕೆಗೆ ಸುರಕ್ಷಿತ ಅಲ್ಲ ಎಂದೇ ಭಾವಿಸಬೇಕು. ಹಾಗಾಗಿ ಚೂಪಾದ ವಸ್ತುಗಳನ್ನು ಅಡುಗೆ ಮಾಡುವಾಗ ಬಳಸಬಾರದು. ಇವುಗಳು ಕ್ರಮೇಣ ಬಿಸಿ ಮಾಡಿ. ಒಮ್ಮೆಲೇ ಅತಿ ಹೆಚ್ಚು ಬಿಸಿಗೆ ಒಡ್ಡಬೇಡಿ. ಅಲ್ಲದಿದ್ದರೂ, ಮಧ್ಯಮ ಉರಿಗಿಂತ ಹೆಚ್ಚಿನ ಉರಿಯನ್ನು ಸೋಕಿಸಬೇಡಿ. ಬೇಕಿಂಗ್‌ ವಸ್ತುಗಳಾದರೆ 180 ಡಿ. ಗಿಂತ ಹೆಚ್ಚು ತಾಪಮಾನಕ್ಕೆ ಅವು ಯೋಗ್ಯವೇ ಎಂಬುದನ್ನು ಆಯಾ ವಸ್ತುವಿನ ಮ್ಯಾನುವಲ್‌ನಲ್ಲಿ ಪರಿಶೀಲಿಸಿ. ಎಲ್ಲ ಪಿಂಗಾಣಿಗಳೂ ಒಲೆ ಮೇಲೆ ಇರಿಸಲು ಬರುವುದಿಲ್ಲ. ʻಸೇಫ್‌ ಫಾರ್‌ ಸ್ಟೋವ್‌ ಟಾಪ್‌ʼ ಎಂಬ ಒಕ್ಕಣೆ ಅದರ ಪ್ಯಾಕಿಂಗ್‌ ಮೇಲಿಗೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಕೆಲವೊಮ್ಮೆ ಬಿಸಿ ಆಹಾರಗಳನ್ನು ಸರ್ವ್‌ ಮಾಡಲು ಮಾತ್ರವೇ ಬಳಸುವಂಥದ್ದಾಇರುತ್ತದೆ. ಬಿಸಿಯಾದ ಪಾತ್ರೆಗೆ ತಣ್ಣನೆಯ ನೀರು ಸುರಿಯಬೇಡಿ. ಇದರಿಂದ ಮೇಲ್ಮೈಗೆ ಹಾನಿಯಾಗುತ್ತದೆ. ಸ್ವಚ್ಛ ಮಾಡುವಾಗ ಸೌಮ್ಯವಾದ ಸೋಪಿನ ಜೊತೆಗೆ ಸ್ಪಾಂಜ್‌ ಬಳಸಿ. ಕಠೋರವಾದ ಡಿಟರ್ಜೆಂಟ್‌ಗಳು ಇದಕ್ಕೆ ಹೇಳಿಸಿದ್ದಲ್ಲ. ಡಿಶ್‌ವಾಷರ್‌ಗೆ ಹಾಕುವ ಮುನ್ನ, ಅದನ್ನು ಹಾಗೆ ಮಾಡಬಹುದೇ ಎಂಬ ಸೂಚನೆಯನ್ನು ಮೊದಲು ಗಮನಿಸಿ. ಸೆರಾಮಿಕ್‌ ಮೇಲೆ ಕೆಲವೊಮ್ಮೆ ನಾನ್‌ಸ್ಟಿಕ್‌ ಮೇಲ್ಮೈ ಸಹ ಇರಬಹುದು. ಉಳಿದ ನಾನ್‌ಸ್ಟಿಕ್‌ಗಳಂತೆ ಇವು ವಾತಾವರಣಕ್ಕೆ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಇದನ್ನೂ ಸಹ ಅತಿಯಾಗಿ ಬಿಸಿ ಮಾಡದೆ, ಮೇಲ್ಮೈ ಹಾಳಾಗದಂತೆ ಜಾಗ್ರತೆಯಿಂದ ಬಳಸಬೇಕು. ಸ್ವಚ್ಛಗೊಳಿಸುವಾಗಲೂ ನಾಜೂಕಾಗಿಯೇ ಆಗಬೇಕೇ ಹೊರತು, ಒರಟಾದ ವಸ್ತುಗಳಿಂದ ಉಜ್ಜುವಂತಿಲ್ಲ. ಇವುಗಳನ್ನು ಸ್ಟೋರ್‌ ಮಾಡುವಾಗಲೂ ಸ್ವಚ್ಛವಾಗಿ ಒರೆಸಿಯೇ ಕಪಾಟಿನೊಳಗಿಡಿ.

Exit mobile version