ಚಿಯಾ ಬೀಜಗಳು (Chia seeds) ಎಂಬ ಪುಟಾಣಿ ಬೀಜಗಳು ಇಂದು ತಮ್ಮ ಆರೋಗ್ಯಕರ ಗುಣಗಳಿಂದ ಮನೆಮಾತಾಗಿದೆ. ಎಲ್ಲರೂ ತಮ್ಮ ಡಯಟ್‌ನಲ್ಲಿ ಚಿಯಾ ಬೀಜಗಳನ್ನು ಸೇರಿಸಲಾರಂಭಿಸಿದ್ದಾರೆ. ಚಿಯಾ ಬೀಜಗಳಿಂದ ತೂಕ ಇಳಿಸುವುದೂ ಸೇರಿದಂತೆ ಹಲವಾರು ಲಾಭಗಳನ್ನು ಪಡೆಯುವ ಉದ್ದೇಶದಿಂದ ಆರೋಗ್ಯಕರ ಶೈಲಿಯತ್ತ ಹೊರಳುತ್ತಿದ್ದಾರೆ. ಇದೆಲ್ಲ ನಿಜವೇ ಆದರೂ, ನೀವು ಚಿಯಾ ಬೀಜಗಳನ್ನು ಸೇವಿಸುತ್ತಿದ್ದರೆ, ಕೊಂಚ ಎಚ್ಚರಿಕೆಯೂ ಅಗತ್ಯ. ನೀವು ಮಧುಮೇಹಿಗಳಾಗಿದ್ದರೆ, ಅದಕ್ಕಾಗಿ ಔಷಧಿ ಸೇವಿಸುತ್ತಿದ್ದರೆ, ಹೃದಯ, ರಕ್ತದೊತ್ತಡದ ಸಮಸ್ಯೆಯಿದ್ದು ಅದಕ್ಕಾಗಿ ನಿತ್ಯವೂ ಔಷಧಿ ಸೇವಿಸುತ್ತಿದ್ದರೆ ಚಿಯಾ ಬೀಜಗಳಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರುಪೇರೂ ಆಗಬಹುದು. ಬನ್ನಿ, ಈ ಬಗ್ಗೆ ವಿಸ್ತೃತವಾಗಿ ತಿಳಿಯೋಣ.
ರಕ್ತದೊತ್ತಡ ಹೆಚ್ಚು ಇಳಿಯಬಹುದು
ಚಿಯಾ ಬೀಜಗಳು ರಕ್ತದೊತ್ತಡದ ಸಮಸ್ಯೆ ಇದ್ದವರಿಗೆ ಒಳ್ಳೆಯದು ಎಂದು ನೀವು ಹೇಳಿರುವುದನ್ನು ಕೇಳಿರಬಹುದು. ನಿಜವೇ ಇದು. ಚಿಯಾ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಪೆಪ್ಟೈಡ್‌ಗಳಿದ್ದು ಇವು ನೈಸರ್ಗಿಕವಾಗಿಯೇ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆ ಮೂಲಕ ಹೃದಯದ ಆರೋಗ್ಯಕ್ಕೂ ಇವು ಸ್ನೇಹಿಯಾಗಿಯೇ ವರ್ತಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ತಾಕತ್ತು ಚಿಯಾ ಬೀಜಗಳಿಗಿರುವುದು ಹೌದೇ ಆದರೂ, ನೀವು ರಕ್ತದೊತ್ತಡಕ್ಕೆ ಈಗಾಗಲೇ ಔಷಧಿ ಸೇವಿಸುತ್ತಿದ್ದರೆ ಒಮ್ಮೆ ಯೋಚಿಸಿ. ಯಾಕೆಂದರೆ, ರಕ್ತದೊತ್ತಡಕ್ಕಾಗಿ ನೀವು ಸೇವಿಸುವ ಆಂಟಿ ಹೈಪರ್‌ಟೆನ್ಸಿವ್ ಮಾತ್ರೆಗಳ ಜೊತೆಗೆ ಚಿಯಾ ಬೀಜಗಳನ್ನೂ ಸೇವಿಸುವುದರಿಂದ ನೀವು ಅಂದುಕೊಂಡದ್ದಕ್ಕಿಂತಲೂ ರಕ್ತದ ಒತ್ತಡ ಹೆಚ್ಚು ಇಳಿಯುವ ಸಾಧ್ಯತೆಗಳಿವೆ!
ಬ್ಲಡ್ ಥಿನ್ನರ್ ತೆಗೆದುಕೊಳ್ಳುತ್ತಿದ್ದರೆ ಎಚ್ಚರ
ಚಿಯಾ ಬೀಜಗಳಲ್ಲಿ ಆಂಟಿ ಪ್ಲೇಟ್‌ಲೆಟ್ ಗುಣವಿದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪೂರಕವೇ ಆದರೂ, ನೀವು ಈಗಾಗಲೇ ಬ್ಲಡ್ ಥಿನ್ನರ್‌ನಂತಹ ಔಷಧಿಗಳನ್ನು ನಿಮ್ಮ ಹೃದಯದ ಸಮಸ್ಯೆಗಾಗಿ ತೆಗೆದುಕೊಳ್ಳುತ್ತಿದ್ದರೆ, ರಕ್ರಸ್ರಾವದಂತಹ ಸಮಸ್ಯೆಗೂ ದೂಡಬಹುದು! ಹಾಗಾಗಿ ಈ ಬಗ್ಗೆ ಎಚ್ಚರಿಕೆ ಇರಲಿ.
ಸಕ್ಕರೆ ಅಂಶ ಹೆಚ್ಚು ಇಳಿಯಬಹುದು
ಚಿಯಾ ಬೀಜಗಳು ಮಧುಮೇಹಕ್ಕೆ ಬಹಳ ಒಳ್ಳೆಯದು. ಯಾಕೆಂದರೆ ಇದು ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಪ್ರಚೋದಿಸಿ, ರಕ್ತಕ್ಕೆ ಸಕ್ಕರೆಯಂಶ ಸೇರುವುದನ್ನು ನಿಧಾನಗೊಳಿಸುತ್ತದೆ. ಇದೆಲ್ಲ ಒಳ್ಳೆಯದೇ ಆದರೂ, ನೀವು ಈಗಾಗಲೇ ಮಧುಮೇಹಕ್ಕಾಗಿ ಇನ್ಸುಲಿನ್‌ನಂತಹ ಔಷಧಿಗಳನ್ನು ಪಡೆಯುತ್ತಿದ್ದರೆ, ನಿಮ್ಮ ಶುಗರ್ ಲೆವೆಲ್ ಅನ್ನು ಪರೀಕ್ಷೆ ಮಾಡಿಕೊಳ್ಳಿ. ಚಿಯಾ ಬೀಜಗಳೂ ಸ್ವಲ್ಪ ಪ್ರಮಾಣದಲ್ಲಿ ಈ ಕೆಲಸ ಮಾಡುವುದರಿಂದ ಸಕ್ಕರೆಯ ಮಟ್ಟ ಅಂದುಕೊಂಡದ್ದಕ್ಕಿಂತ ಹೆಚ್ಚು ಇಳಿಯಬಹುದು. ಹೀಗಾಗಿ, ವೈದ್ಯರನ್ನು ಸಂಪರ್ಕಿಸಿ, ಔಷಧಿಯ ಮಟ್ಟವನ್ನು ಬೇಕಾದಷ್ಟಕ್ಕೆ ಬದಲಾಯಿಸಿಕೊಳ್ಳಿ.
ನಾರಿನ ಹೆಚ್ಚಾದರೂ ಒಳ್ಳೆಯದಲ್ಲ
ಚಿಯಾ ಬೀಜಗಳಲ್ಲಿ ಹೆಚ್ಚು ನಾರಿನಂಶವಿದೆ. ಕೆಲವೊಮ್ಮೆ ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ನಾರಿನಂಶ ಇದರಿಂದ ಲಬ್ಯವಾಗಬಹುದು. ನಿತ್ಯವೂ ಚಿಯಾ ಬೀಜಗಳನ್ನು ಸೇವಿಸುವ ಮಂದಿ ಹಿತಮಿತವಾಗಿ ತೆಗೆದುಕೊಳ್ಳುವ ಬಗ್ಗೆ ಯೋಚಿಸಿ. ನಾರಿನಂಶ ಹೆಚ್ಚಾದರೆ, ಔಷಧ ದೇಹದಲ್ಲಿ ಕರಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ನೀವು ಮಾತ್ರೆಗಳನ್ನು ನಿತ್ಯವೂ ಸೇವಿಸುವವರಾಗಿದ್ದರೆ, ಚಿಯಾ ಬೀಜಗಳು ನಿಮ್ಮ ಮಾತ್ರೆಗಳನ್ನು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಹೀರಿಕೆಯಾಗದಂತೆ ಮಾಡಬಹುದು. ಹೀಗಾಗಿ, ನೀವು ಔಷಧಿ ಸೇವಿಸುವ ಹೊತ್ತು ಹಾಗೂ ಚಿಯಾ ಬೀಜಗಳನ್ನು ಸೇವಿಸುವ ಹೊತ್ತಿನ ಸಮತೋಲನ ಮಾಡಿಕೊಳ್ಳಲು ವೈದ್ಯರ ಸಲಹೆ ಪಡೆಯಿರಿ. ಅಗತ್ಯಕ್ಕಿಂತ ಹೆಚ್ಚು ಚಿಯಾಬೀಜಗಳನ್ನು ಸೇವಿಸಬೇಡಿ.
ಇದನ್ನೂ ಓದಿ: Breakfast Tips: ಬೆಳಗಿನ ಉಪಾಹಾರಕ್ಕೆ ಈ 5 ಬಗೆಯ ಆಹಾರಗಳನ್ನು ಸೇವಿಸಬೇಡಿ!
ಕಡಿಮೆ ಪ್ರಮಾಣದಿಂದ ಆರಂಭಿಸಿ
ನೀವು ಚಿಯಾ ಬೀಜಗಳನ್ನು ಸೇವಿಸಲು ಆರಂಭಿಸುವವರಾಗಿದ್ದರೆ, ಒಮ್ಮೆಲೇ ಅಧಿಕವಾಗಿ ತೆಗೆದುಕೊಳ್ಳಬೇಡಿ. ಕಡಿಮೆ ಪ್ರಮಾಣದಿಂದ ಆರಂಭಿಸಿ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ, ವೈದ್ಯರನ್ನು ಸಂಪರ್ಕಿಸಿ, ನಂತರ ಸೇವಿಸಿ. ಚಿಯಾ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಒಮೆಗಾ- 3, ನಾರಿನಂಶ, ಆಂಟಿ ಆಕ್ಸಿಡೆಂಟ್‌ಗಳೆಲ್ಲ ಇದ್ದರೂ, ಇವುಗಳು ಔಷಧಿ ಸೇವಿಸುತ್ತಿರಯವ ಮಂದಿಯ ದೇಹದಲ್ಲಿ ವರ್ತಿಸುವ ಪರಿಣಾಮವೇ ಬೇರೆ. ಹಾಗಾಗಿ, ಈಗಾಗಲೇ, ರಕ್ತದೊತ್ತಡ, ಹೃದಯದ ಸಮಸ್ಯೆ, ಮಧುಮೇಹ ಮತ್ತಿತರ ಸಮಸ್ಯೆಗಳಿಗೆ ಔಷಧಿ ಸೇವಿಸುತ್ತಿರುವ ಮಂದಿ ವೈದ್ಯರ ಸಲಹೆ ಪಡೆದು ಸೇವಿಸಿ. ಅಥವಾ, ಔಷಧಿಯ ಸಮಯಕ್ಕೂ ಚಿಯಾ ಬೀಜಗಳ ಸೇವನೆಗೂ ಕೊಂಚ ಅಂತರವಿಟ್ಟು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಯಾವುದಕ್ಕೂ ವೈದ್ಯರ ಸಲಹೆ ಬಹಳ ಮುಖ್ಯ, ನೆನಪಿಡಿ.