Site icon Vistara News

Coriander Benefits For Beauty: ನಿಮ್ಮೆಲ್ಲ ಸೌಂದರ್ಯ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪಿನಲ್ಲಿದೆ ಸರಳ ಪರಿಹಾರ!

Coriander Benefits For Beauty

ನಿಮ್ಮ ಮನೆಯ ಫ್ರಿಡ್ಜ್‌ನ ಮೂಲೆಯಲ್ಲಿ ಸದಾ ಒಣಗುತ್ತಾ ಬಿದ್ದಿರುವ ಕೊತ್ತಂಬರಿ ಸೊಪ್ಪಿನ ಬದುಕು ಕೇವಲ ಇಷ್ಟೇ ಎಂದು ನೀವು ತಿಳಿದಿದ್ದರೆ, ನೀವು ಅದರ ಅದ್ಭುತ ಸಾಧ್ಯತೆಗಳನ್ನು ನಿರ್ಲಕ್ಷಿಸಿದ್ದೀರಿ ಎಂದರ್ಥ. ಯಾಕೆಂದರೆ ಕೊತ್ತಂಬರಿ ಸೊಪ್ಪಿನಷ್ಟು ನಿರ್ಲಕ್ಷ್ಯಕ್ಕೆ ಒಳಗಾದ, ನಿತ್ಯೋಪಯೋಗಿ ವಸ್ತು ಇನ್ನೊಂದಿರಲಿಕ್ಕಿಲ್ಲ. ಕೊತ್ತಂಬರಿ ಸೊಪ್ಪು ಕೇವಲ ನಿಮ್ಮ ನಿತ್ಯದ, ಸಾರು, ಸಾಂಬಾರು ಸಬ್ಜಿಗಳಿಗೆ, ಬಿರಿಯಾನಿ ಪಲಾವುಗಳ ಮೇಲೆ ಕೇವಲ ಅಲಂಕಾರಕ್ಕೆ ಕತ್ತರಿಸಿ ಹಾಕುವ ಸೊಪ್ಪೆಂದು ತಿಳಿದುಕೊಂಡಿರುವುದೇ ಈ ಅವಜ್ಞೆಗೆ ಕಾರಣ. ಇದನ್ನು ಸರಿಯಾಗಿ ಬಳಸಿದಿರೆಂದರೆ, ನಿಮ್ಮ ಎಷ್ಟೋ ನಿತ್ಯದ ಸಮಸ್ಯೆಗಳು (Coriander Benefits For beauty) ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಯವಾಗಬಹುದು. ಆದರೆ ನಿಯಮಿತವಾಗಿ ಬಳಸುವುದು ಬಹಳ ಮುಖ್ಯ.

ಸಾಕಷ್ಟು ಪೋಷಕಾಂಶಗಳಿವೆ

ಅತ್ಯಂತ ಗಾಢ ಪರಿಮಳವನ್ನು ಹೊಂದಿರುವ ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಟಮಿನ್‌ ಎ, ಸಿ ಖನಿಜ ಲವಣಗಳು, ಪ್ರೊಟೀನ್‌ ನಾರಿನಂಶ ಎಲ್ಲವೂ ಇರುವ ಸಮೃದ್ಧವಾದ ಸೊಪ್ಪಿದು. ಹಾಗಾಗಿ ತೂಕ ಇಳಿಕೆಗೆ, ಕಣ್ಣಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಲು, ಪಚನಶಕ್ತಿ ಚುರುಕಾಗಲು ಹೀಗೆ ನಾನಾ ಆರೋಗ್ಯದ ಲಾಭಗಳಿಗೆ ಇದರಿಂದ ಭರಪೂರ ಉಪಯೋಗಗಳಿವೆ. ಕಬ್ಬಿಣ ಸತ್ವವೂ ಹೇರಳವಾಗಿರುವ ಇದು ರಕ್ತದಲ್ಲಿ ಹಿಮೋಗ್ಲೋಬೊನ್‌ ಹೆಚ್ಚಾಗಲೂ ಸಹಾಯ ಮಾಡುತ್ತದೆ. ಅನೀಮಿಯಾ ಸಮಸ್ಯೆ ಇರುವ ಮಂದಿಗೂ ಇದು ಅತ್ಯುತ್ತಮ ಅಹಾರ.

ಹಸಿ ಎಲೆ ಜಗಿಯಿರಿ

ನಿತ್ಯವೂ ಒಂದೆರಡು ಹಸಿ ಎಲೆಗಳನ್ನು ಬಾಯಲ್ಲಿ ಹಾಕಿ ಜಗಿಯುವ ಅಭ್ಯಾಸ ಇಟ್ಟುಕೊಂಡರೆ ಅದರಿಂದಲೂ ಸಾಕಷ್ಟು ಉಪಯೋಗಗಳನ್ನು ಪಡೆಯಬಹುದು. ಆದರೆ, ಮುಖ್ಯವಾಗಿ ಮಹಿಳೆಯರೂ ಸೇರಿದಂತೆ ಎಲ್ಲರೂ ಅನುಭವಿಸುವ ಚರ್ಮದ ಸಮಸ್ಯೆಗಳಿಗೂ ನಿಮ್ಮ ಫ್ರಿಡ್ಜ್‌ನ ಮೂಲೆಯಲ್ಲಿ ನರಳುತ್ತಿರುವ ಕೊತ್ತಂಬರಿ ಸೊಪ್ಪಿನಿಂದ ಪರಿಹಾರವಿದೆ ಎಂದಾದರೆ, ನೀವು ಖಂಡಿತ ಇನ್ನು ಸೊಪ್ಪನ್ನು ಹಾಗೆ ಮೂಲೆಯಲ್ಲಿ ಒಣಗಲು ಬಿಡುವುದಿಲ್ಲ.
ಚರ್ಮ ತಜ್ಞರು ಹೇಳುವ ಪ್ರಕಾರ, ಕೊತ್ತಂಬರಿ ಸೊಪ್ಪಿನಲ್ಲಿ ಚರ್ಮದ ಆರೋಗ್ಯಕ್ಕೆ ಮ್ಯಾಜಿಕ್‌ನ ರೀತಿಯ ಉತ್ತರವಿದೆ. ನಿಮ್ಮ ಚರ್ಮ ಎಂಥದ್ದೇ ಅಗಿರಬಹುದು, ಅದಕ್ಕೆ ಪೂರಕವಾಗಿರುವ ಸಮಸ್ಯೆಗಳಿಗೆಲ್ಲ ಇದರಲ್ಲಿ ಉತ್ತರವಿದೆಯಂತೆ. ಇದರ ಸೇವನೆ ಉತ್ತಮ ಡಿಟಾಕ್ಸ್‌ ತರಹದಲ್ಲಿ ವರ್ತಿಸುತ್ತದೆ. ಚರ್ಮದ ಎಕ್ಸಿಮಾದಂತಹ ಸಮಸ್ಯೆಗಳಿಗೂ ಇದರ ಬಳಿ ಉತ್ತರವಿದೆ. ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಅಸಿಡಿಟಿ ಪರಿಹಾರವಾಗುವ ಕಾರಣ, ಅಸಿಡಿಟಿಯ ಕಾರಣದಿಂದ ಚರ್ಮದಲ್ಲಿ ಉಂಟಾಗುವ ಕೆಂಪಾಗುವಿಕೆ, ಉಬ್ಬುಗಳು ಕಡಿಮೆಯಾಗುತ್ತವೆ. ಆಗಾಗ ಚರ್ಮದ ಮೇಲೆ ಉಂಟಾಗುವ ಇಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಕೊತ್ತಂಬರಿ ಸೊಪ್ಪನ್ನು ಶ್ರೀಗಂಧ, ಚಂದನ ಹಾಗೂ ಓಟ್‌ಮೀಲ್‌ ಜೊತೆ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಅಲರ್ಜಿಯಂತಹ ಸಮಸ್ಯೆಯಿಂದ ಉಂಟಾಗುವ ಕಜ್ಜಿ, ಒಣಗುವಿಕೆ ಮತ್ತಿತರ ಸಮಸ್ಯೆಗಳು ಪರಿಹಾರವಾಗುತ್ತದೆ.

ಕೊತ್ತಂಬರಿ ಸೊಪ್ಪನ್ನು ಬಗೆಬಗೆಯ ಫೇಸ್‌ ಪ್ಯಾಕ್‌ ಮಾಡಿ ಹಚ್ಚಿಕೊಳ್ಳುವುದರಿಂದಲೂ ಅನೇಕ ಚರ್ಮದ ಸಮಸ್ಯೆಗೆ ಪರಿಹಾರ ಪಡೆಯಬಹುದು. ಕೊತ್ತಂಬರಿ ಸೊಪ್ಪಿನೊಂದಿಗೆ ಅಲೊವೆರಾ ಸೇರಿಸಿ ಹಚ್ಚುವುದರಿಂದ ಚರ್ಮ ಸುಕ್ಕಾಗುವಿಕೆಗೆ ಉತ್ತಮ ಫಲ ಕಾಣಬಹುದು. ನಿಂಬೆಹಣ್ಣಿನ ರಸವನ್ನು ಕೊತ್ತಂಬರಿ ಸೊಪ್ಪಿನ ಪೇಸ್ಟ್‌ಗೆ ಸೇರಿಸಿ ಹಚ್ಚುವುದರಿಂದ ಚರ್ಮಕ್ಕೆ ಬೇಕಾದ ಸಿ ವಿಟಮಿನ್‌ ಸಿಗುವುದರಿಂದ ಮೊಡವೆಯ ಕಲೆಗಳು, ಬ್ಲ್ಯಾಕ್‌ಹೆಡ್‌ಗಳು ಮತ್ತಿತರ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಕೊತ್ತಂಬರಿ ಸೊಪ್ಪು, ಹಾಲು, ಜೇನುತುಪ್ಪ, ನಿಂಬೆ ಹಣ್ಣಿನ ರಸ ಸೇರಿಸಿಯೂ ಹಚ್ಚಬಹುದು. ಇದರಿಂದ ಚರ್ಮ ಆರೋಗ್ಯಪೂರ್ಣವಾಗಿ ಫಳಫಳಿಸಬಹುದು.

ಇದನ್ನೂ ಓದಿ: Cholesterol Management Tips: ಕೊಲೆಸ್ಟ್ರಾಲ್‌ ಹೆಚ್ಚಿದೆಯೇ? ಬೆಳ್ಳುಳ್ಳಿಯ ಈ ಉಪಾಯ ಗೊತ್ತಿರಲಿ!

ಚರ್ಮಕ್ಕೆ ಮಸಾಜ್ ಮಾಡಿ

ಕೊತ್ತಂಬರಿ ಸೊಪ್ಪು, ಅಕ್ಕಿ ಹಿಟ್ಟು ಹಾಗೂ ಮೊಸರು ಸೇರಿಸಿ ಹಚ್ಚು, ನಂತರ ತೊಳೆಯುವಾಗ ಸ್ಕ್ರಬ್‌ ಮಾಡಿಕೊಂಡು ತೊಳೆದರೆ ಚರ್ಮಕ್ಕೆ ಒಳ್ಳೆಯ ಮಸಾಜ್‌ ಸಿಕ್ಕಿ, ಮುಖದ ಚರ್ಮದ ಸ್ನಾಯುಗಳೆಲ್ಲ ರಿಲ್ಯಾಕ್ಸ್‌ ಆಗುತ್ತವೆ. ಚರ್ಮಕ್ಕೆ ರಕ್ತಪೂರಣವಾಗಿ ಚರ್ಮ ಆರೋಗ್ಯದ ಕಳೆಯಿಂದ ನಳನಳಿಸುತ್ತದೆ. ವಾಋಕ್ಕೊಮ್ಮೆ ಹೀಗೆ ಮಾಡುವುದರಿಂದ ಒಳ್ಳೆಯ ಫಲ ಕಾಣಬಹುದು. ತುಟಿಯ ಚರ್ಮ ಕಪ್ಪಾಗಿದ್ದರೆ, ಕೊತ್ತಂಬರಿ ಸೊಪ್ಪಿನ ರಸಕ್ಕೆ ಕೊಂಚ ಅಲೊವೆರಾ ಜೆಲ್‌ ಸೇರಿಸಿ ಹಚ್ಚುವ ಮೂಲಕ ಮತ್ತೆ ಪಿಂಕ್‌ ತುಟಿಗಳನ್ನು ನೀವು ಪಡೆಯಬಹುದು.

Exit mobile version