ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯ ಮಾಡಲಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸರು ಮತ್ತಿತರರಿಗೆ ನಿರ್ದೇಶನ ನೀಡಿದ್ದಾರೆ. ಮಾಸ್ಕ್ ಧಾರಣೆಯ ಜತೆಗೆ ಇನ್ನೂ ಇತರ ಕ್ರಮಗಳನ್ನೂ ಸೂಚಿಸಲಾಗಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯನ್ನು ಗಮನಿಸಲಾಗಿದೆ. ಜೂನ್ 9ರಂದು 471 ಪ್ರಕರಣಗಳು ಹಾಗು ಪಾಸಿಟಿವ್ ಪ್ರಮಾಣ 2.14% ವರದಿಯಾಗಿದೆ. ಕೋವಿಡ್ ಮೂರನೇ ಅಲೆಯ ನಂತರದ ಅವಧಿಯ ಏರಿಕೆ ಇದಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಸಲಾಗಿದ್ದು, ಈ ಕ್ರಮವನ್ನು ಜಾರಿಗೊಳಿಸಲು ಮಾರ್ಷಲ್/ ಪೊಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯಬೇಕು ಎಂದು ನಿರ್ದೇಶಿಸಲಾಗಿದೆ.
ಇದನ್ನೂ ಓದಿ: ವಿಸ್ತಾರ Explainer: Char Dham ಯಾತ್ರಾ ಸಾವುಗಳಿಗೆ ಕೋವಿಡ್ ಕಾರಣವೇ?
ಮುಚ್ಚಿದ ಒಳಾಂಗಣಗಳನ್ನು ಹೊಂದಿರುವ ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯಾ/ ಹೊಟೇಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಚೇರಿಗಳು, ಕಾರ್ಖಾನೆ ಇತ್ಯಾದಿ ಪ್ರದೇಶಗಳಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸಿ ಬರುವವರಿಗೆ ಮಾತ್ರವೇ ಪ್ರವೇಶ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಸಂಸ್ಥೆಯ ಆಡಳಿತಗಳ ಜವಾಬ್ದಾರಿ. ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ (ಬಸ್ ಹಾಗೂ ರೈಲು) ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ.
ಉಸಿರಾಟದ ತೊಂದರೆ ಲಕ್ಷಣಗಳನ್ನು ಹೊಂದಿದವರು, ಹೈ ರಿಸ್ಕ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡಬೇಕು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು. ಎಲ್ಲರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿರಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಕೋವಿಡ್ ಬಳಿಕ ಹೆಚ್ಚಿದೆ ದೈವ ಭಕ್ತಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರಿ ಡಿಮ್ಯಾಂಡ್