ಯಾವುದೋ ಫಂಕ್ಷನ್‌ಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡು ರೆಡಿಯಾಗಿರುತ್ತೀರಿ. ಕನ್ನಡಿ ಮುಂದೆ ನಿಂತು ನಿಮ್ಮನ್ನೇ ನೀವು ಮೇಲಿನಿಂದ ಕೆಳಗೆ ನೋಡುತ್ತೀರಿ. ಎಲ್ಲ ಚೆನ್ನಾಗಿದೆ, ಆದರೆ ಕಣ್ಣು ಮಾತ್ರ ಕಳೆಗುಂದಿದೆ ಎಂದು ನಿಮಗನಿಸಿಬಿಡುತ್ತದೆ. ಫಂಕ್ಷನ್‌ನಲ್ಲಿ ಸಿಕ್ಕ ಆತ್ಮೀಯರೂ, ಏನಾಯ್ತೇ ನಿನಗೆ? ಎನ್ನುತ್ತಾರೆ. ಇದಕ್ಕೆಲ್ಲ ಕಾರಣ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲ. ಈ ಕಪ್ಪು ವರ್ತುಲ ನಿಮ್ಮ ಸೌಂದರ್ಯಕ್ಕೇ ಕಪ್ಪುಚುಕ್ಕೆಯಂತೆ ಕಾಣಿಸುತ್ತದೆ. ಯಾಕೆಂದರೆ, ಕಣ್ಣು ಸೌಂದರ್ಯದ ಪ್ರತೀಕ. ಸುಂದರ ಆರೋಗ್ಯಯುತ ಕಣ್ಣು ಸೌಂದರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕಣ್ಣ ಸುತ್ತ ಕೊಂಚ ಕಪ್ಪು ವರ್ತುಲ ಮೂಡಿದರೂ ಸಾಕು, ಕಣ್ಣು ಕಳೆಗುಂದಿದಂತೆ ಅನಿಸುತ್ತದೆ. ಮುಖ ನಿಸ್ತೇಜವಾಗಿ, ಕಳಾಹೀನವಾಗಿ ಕಾಣುತ್ತದೆ. ತಾತ್ಕಾಲಿಕವಾಗಿ ಕನ್ಸೀಲರ್‌ನಿಂದ ನೀವು ಈ ಕಪ್ಪು ವರ್ತುಲವನ್ನು ಮುಚ್ಚಿ ಹಾಕಬಹುದು. ಆದರೆ, ಶಾಶ್ವತವಾಗಿ ಅಲ್ಲ. ಏನೇ ಮೇಕಪ್ ಮಾಡಿದರೂ, ಒಳಗಿನಿಂದ ತುಳುಕುವ ಸೌಂದರ್ಯ ಅತ್ಯಂತ ಮುಖ್ಯ. ಹಾಗಾಗಿ ಬನ್ನಿ, ಕಪ್ಪು ವರ್ತುಲವನ್ನು ಶಾಶ್ವತವಾಗಿ ದೂರ ಮಾಡಬೇಕಾದರೆ, ಕೆಲವು ಮನೆಮದ್ದುಗಳನ್ನು ಮಾಡಬಹುದು. ಅವು ಯಾವುವು ಎಂದು ನೋಡೋಣ.
ಆಲೂಗಡ್ಡೆ
ಸೌಂದರ್ಯ ಚಿಕಿತ್ಸೆಯಲ್ಲಿ ಆಲೂಗಡ್ಡೆಗೆ ಪ್ರಮುಖ ಸ್ಥಾನವಿದೆ. ನಿತ್ಯವೂ ಮುಖಕ್ಕೆ ಆಲೂಗಡ್ಡೆಯ ಪ್ರಯೋಗ ಮಾಡುವುದರಿಂದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಮುಖ್ಯವಾಗಿ ಕಣ್ಣ ಸುತ್ತಲ ಡಾರ್ಕ್ ಸರ್ಕಲ್ ಸಮಸ್ಯೆ ನಿಮಗಿದ್ದರೆ, ಆಲೂಗಡ್ಡೆಯ ರಸವನ್ನು ಕಣ್ಣಿನ ಸುತ್ತ ಹಚ್ಚಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್, ವಿಟಮಿನ್‌ಗಳು ಪೋಷಣೆ ನೀಡಿ ಕಣ್ಣಿನ ಸುತ್ತಲ ಕಪ್ಪು ವರ್ತುಲವನ್ನು ತಿಳಿಯಾಗಿಸುತ್ತದೆ, ನಿಯಮಿತವಾಗಿ ಹಚ್ಚುವ ತಾಳ್ಮೆ ಮಾತ್ರ ಅತ್ಯಗತ್ಯ.
ಆಲೋವೆರಾ
ಆಲೋವೆರಾದಲ್ಲಿ ಆಲೋಸಿನ್ ಹೇರಳವಾಗಿದ್ದು ಇದು ಪಿಗ್ಮೆಂಟೇಶನ್ ಸಮಸ್ಯೆಗೆ ಅತ್ಯುತ್ತಮವಾಗಿ ಪರಿಹಾರ ನೀಡುತ್ತದೆ. ಇದು ಚರ್ಮಕ್ಕೆ ಬೇಕಾದ ನೀರಿನಂಶವನ್ನು ನೀಡಿ, ಚರ್ಮದ ಉರಿಯೂತವನ್ನೂ ಕಡಿಮೆ ಮಾಡುತ್ತದೆ. ಚರ್ಮ ತಿಳಿಯಾಗಲು ಕೂಡಾ ಇದು ಒಳ್ಳೆಯದು. ಆಲೋವೆರಾ ಜೆಲ್ ಅನ್ನು ಹೆಚ್ಚು ಒತ್ತಡ ಹಾಕದೆ ನಿಧಾನವಾಗಿ ಕಣ್ಣ ಸುತ್ತ ಹಚ್ಚಿಕೊಳ್ಳುವುದನ್ನು ನಿಯಮಿತವಾಗಿ ಮಾಡಿದರೆ ಉತ್ತಮ ಪ್ರತಿಫಲ ಕಾಣಬಹುದು.
ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆ ಕೇವಲ ತಲೆಕೂದಲಿಗೆ ಎಂದು ಯಾರು ಹೇಳಿದ್ದು? ಚರ್ಮಕ್ಕೆ ಇದು ಅತ್ಯಂತ ಒಳ್ಳೆಯದು. ಯಾಕೆಂದರೆ ಇದರಲ್ಲಿ ವಿಟಮಿನ್ ಇ, ಮೆಗ್ನೀಶಿಯಂ, ಪಾಸ್ಪರಸ್, ಆಂಟಿ ಆಕ್ಸಿಡೆಂಟ್ಸ್ ಎಲ್ಲವೂ ಇದೆ. ಕಣ್ಣ ಸುತ್ತ ಇದನ್ನು ಹಚ್ಚಿ ಮೆದುವಾಗಿ ಮಸಾಜ್ ಮಾಡುವುದರಿಂದ ಕಣ್ಣಿನ ಸುತ್ತಲ ಚರ್ಮಕ್ಕೆ ರಕ್ತಪರಿಚಲನೆ ಹೆಚ್ಚಿ ಕಣ್ಣಿನ ಕಪ್ಪು ವರ್ತುಲ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.
ಕೇಸರಿ
ಕೇಸರಿ ಕೇವಲ ಆಹಾರವಾಗಿ ಅಲ್ಲ, ಸೌಂದರ್ಯವರ್ಧಕವಾಗಿಯೂ ಇದಕ್ಕೆ ಅತ್ಯುನ್ನತ ಸ್ಥಾನವಿದೆ. ಎರಡರಿಂದ ಮೂರು ಕೇಸರಿ ದಳಗಳನ್ನು ತಣ್ಣಗಿನ ಹಾಲಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿಡಿ. ಹತ್ತಿಯನ್ನು ಇದರಲ್ಲಿ ಅದ್ದಿ, ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಇದೂ ಕೂಡಾ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ತೆಗೆದು ಹಾಕಲು ಒಳ್ಳೆಯ ಮನೆಮದ್ದು.
ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ
ಗ್ರೀನ್ ಟೀ ಬ್ಯಾಗ್
ಗ್ರೀನ್ ಟೀ ಕುಡಿಯುತ್ತಿದ್ದರೆ ಬಳಸಿದ ಟೀ ಬ್ಯಾಗನ್ನು ಎಸೆಯಬೇಡಿ. ಅವುಗಳನ್ನು ಹಾಗೆಯೇ ಫ್ರಿಡ್ಜ್‌ನಲ್ಲಿ ಇಡಿ. ನಿತ್ಯವೂ ಹದಿನೈದು ನಿಮಿಷ ಈ ತಂಪಾದ ಟೀ ಬ್ಯಾಗನ್ನು ಕಣ್ಣ ಮೇಲಿರಿಸಿ ರಿಲ್ಯಾಕ್ಸ್ ಮಾಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕಣ್ಣ ಸುತ್ತಲ ಕಪ್ಪು ವರ್ತುಲದ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಒತ್ತಡ, ಕೆಲಸದಿಂದ ಬಸವಳಿದಾಗ, ಹೆಚ್ಚು ಸ್ಕ್ರೀನ್‌ಟೈಮ್‌ನಲ್ಲಿದ್ದಾಗ, ನಿದ್ದೆಯಿಲ್ಲದಿದ್ದಾಗ ಇಂತಹ ಕಪ್ಪು ವರ್ತುಲದ ಸಮಸ್ಯೆ ಹೆಚ್ಚಾಗುತ್ತದೆ. ಅಂಥ ಸಂದರ್ಭ ಈ ಟೀ ಬ್ಯಾಗ್ ಕಣ್ಣಿಗೆ ರಿಲ್ಯಾಕ್ಸ್ ಮಾಡುತ್ತದೆ. ಮತ್ತೆ ಕಣ್ಣು ತಾಜಾತನವನ್ನು ಮರಳಿ ಪಡೆಯುತ್ತದೆ.