Site icon Vistara News

Vistara Explainer: ಕೇರಳದಲ್ಲಿ ಪತ್ತೆಯಾದ NOROVIRUS ಎಷ್ಟು ಡೇಂಜರಸ್‌?

two students of kerala infected with norovirus and check details

ತಿರುವನಂತಪುರ: ಕೇರಳದಲ್ಲೀಗ ನೊರೊವೈರಸ್ (NOROVIRUS) ಎಂಬ ಹೊಸ ಸೋಂಕು ಸುದ್ದಿ ಮಾಡುತ್ತಿದೆ. ಮಕ್ಕಳಲ್ಲಿ ಈ ವೈರಸ್‌ನ ಸೋಂಕು ಕಂಡುಬಂದಿರುವ ಎರಡು ಪ್ರಕರಣಗಳನ್ನು ಕೇರಳ ಸರ್ಕಾರ ದೃಢಪಡಿಸಿದೆ. ಇದು ‘ಅತ್ಯಂತ ಸಾಂಕ್ರಾಮಿಕ’ ಎಂದು ಹೇಳಲಾಗುತ್ತಿದೆ, ಕಲುಷಿತ ನೀರು ಮತ್ತು ಆಹಾರದ ಮೂಲಕ ನೊರೊವೈರಸ್ ಹರಡುತ್ತದೆ. ಆಕ್ರಮಣಕಾರಿಯಾಗಿ ಹರಡುವ ಈ ವೈರಸ್‌ನ ಸ್ವಭಾವವನ್ನು ಗಮನದಲ್ಲಿಟ್ಟುಕೊಂಡು, ಕೇರಳ ಸರ್ಕಾರವು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಸೂಚಿಸಿದೆ. “ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು” ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಹಾಗಿದ್ದರೆ ಏನಿದು ನೊರೊವೈರಸ್‌? ಏನೇನು ಲಕ್ಷಣಗಳು? ಎಷ್ಟು ಡೇಂಜರಸ್‌? ತಿಳಿಯೋಣ ಬನ್ನಿ.

  1. ನೊರೊವೈರಸ್ ಎಂದರೇನು?

ನೊರೊವೈರಸ್ ಒಂದು ವೇಗವಾಗಿ ಹರಡುವ ಸಾಂಕ್ರಾಮಿಕ ವೈರಸ್ ಆಗಿದ್ದು ಅದು ತಗುಲಿದ ಬಳಿಕ ವಾಂತಿ ಮತ್ತು ಭೇದಿಯನ್ನು ಉಂಟುಮಾಡುತ್ತದೆ. ದೇಹದ ಜಠರ, ಕರುಳಿನ ವ್ಯವಸ್ಥೆಯ ಮೇಲೆ ಅದರ ಪ್ರಭಾವದಿಂದಾಗಿ, ವೈರಸ್ ಅನ್ನು ಹೊಟ್ಟೆ ಜ್ವರ ಅಥವಾ ಹೊಟ್ಟೆಯ ದೋಷ ಎಂದೂ ಕರೆಯಲಾಗುತ್ತದೆ. ಮಕ್ಕಳು ಮಾತ್ರವಲ್ಲ, ಯಾರಾದರೂ ನೊರೊವೈರಸ್‌ ಸೋಂಕಿಗೆ ಗುರಿಯಾಗಬಹುದು. ಈ ವೈರಸ್‌ಗಳು ಕಲುಷಿತ ಆಹಾರಗಳ ಮೂಲಕ ವೇಗವಾಗಿ ಹರಡುತ್ತವೆ.

ಅಧ್ಯಯನದ ಪ್ರಕಾರ, “ಹಿಂದೆ ನಾರ್ವಾಕ್ ವೈರಸ್ ಎಂದು ಕರೆಯಲ್ಪಡುತ್ತಿದ್ದ ಇದನ್ನು ಅಮೆರಿಕದ ಓಹಿಯೋ ರಾಜ್ಯದ ನಾರ್ವಾಕ್ ಎಂಬಲ್ಲಿ ಮೊದಲು ಪತ್ತೆ ಮಾಡಲಾಯಿತು. ಅಲ್ಲಿ ಏಕಾಏಕಿ ಕರುಳು ಬೇನೆ ಕಾಣಿಸಿಕೊಂಡ ನಂತರ ಸಂಗ್ರಹಿಸಿದ ಭೇದಿಯ ಮಾದರಿಗಳಲ್ಲಿ ಈ ವೈರಸ್‌ ಅನ್ನು ಮೊದಲು ಗುರುತಿಸಲಾಯಿತು. ಗ್ಯಾಸ್ಟ್ರೋಎಂಟರೈಟಿಸ್ ಅನ್ನು ಉಂಟುಮಾಡುವ ಮೊದಲ ವೈರಲ್ ಏಜೆಂಟ್ ಇದು ಎಂದು ಪರಿಗಣಿಸಲಾಗಿದೆ.

ಈ ವೈರಸ್‌ನಿಂದ ಉಂಟಾಗುವ ಅನಾರೋಗ್ಯವನ್ನು ಆರಂಭದಲ್ಲಿ (1929) “ಚಳಿಗಾಲದ ವಾಂತಿ ರೋಗ” ಎಂದು ವಿವರಿಸಲಾಯಿತು. ಏಕೆಂದರೆ ಅಅಲ್ಲಿ ಚಳಿಗಾಲದಲ್ಲಿ ಕಂಡುಬರುವ ಕಾಯಿಲೆಯಾಗಿದೆ. ಇದರ ಪ್ರಾಥಮಿಕ ರೋಗಲಕ್ಷಣವಾಗಿ ವಾಂತಿ ಕಾಣಿಸಿಕೊಳ್ಳುತ್ತದೆ. 1968ರಲ್ಲಿ ಮತ್ತೊಮ್ಮೆ ಈ ಕಾಯಿಲೆ ಏಕಾಏಕಿ ಕಾಣಿಸಿಕೊಂಡಿತು. ಆಗ ಇದನ್ನು ನೊರೊವೈರಸ್ ಎಂದು ಹೆಸರಿಸಲಾಯಿತು. ಆ ಸಮಯದಲ್ಲಿ, 98% ಸೋಂಕಿತ ವ್ಯಕ್ತಿಗಳ ಪೈಕಿ ಶೇ.98 ಮಂದಿ ವಾಕರಿಕೆ, ಶೇ. 92 ಮಂದಿ ವಾಂತಿ, ಶೇ 58 ಮಂದಿ ಹೊಟ್ಟೆನೋವು, ಶೇ 52 ಮಂದಿ ಆಲಸ್ಯದಿಂದ, ಶೇ 38 ಮಂದಿ ಅತಿಸಾರದಿಂದ ಮತ್ತು ಶೇ 34 ಮಂದಿ ಜ್ವರದಿಂದ ಬಳಲುತ್ತಿದ್ದರು.

  1. ನೊರೊವೈರಸ್ ಹೇಗೆ ಹರಡುತ್ತದೆ?
ನೊರೊ ವೈರಸ್‌ ರಚನೆ ಹೀಗಿರುತ್ತದೆ

ನೊರೊವೈರಸ್ ಒಂದು ಸಾಂಕ್ರಾಮಿಕ ರೋಗ. ನೀವು ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿದ್ದರೆ, ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದಲ್ಲದೆ, ವೈರಸ್‌ನಿಂದ ಕಲುಷಿತವಾಗಿರುವ ಆಹಾರವನ್ನು ಅಥವಾ ದ್ರವಗಳನ್ನು ಸೇವಿಸುವುದು, ನೊರೊವೈರಸ್‌ನಿಂದ ಕಲುಷಿತವಾಗಿರುವ ಮೇಲ್ಮೈಗಳು ಅಥವಾ ವಸ್ತುಗಳನ್ನು ಸ್ಪರ್ಶಿಸುವುದು ಮತ್ತು ನಂತರ ಮುಖವನ್ನು ಸ್ಪರ್ಶಿಸುವುದು ಅಥವಾ ತೊಳೆಯದೆ ಅದೇ ಕೈಗಳಿಂದ ಏನನ್ನಾದರೂ ತಿನ್ನುವುದರಿಂದ ವೈರಸ್ ನಿಮ್ಮ ದೇಹವನ್ನು ಸೇರುತ್ತದೆ. ಕಲುಷಿತ ನೀರಿನಿಂದ ಬೆಳೆದ ಅಥವಾ ಕೊಯ್ಲು ಮಾಡಿದ ಆಹಾರವೂ ವೈರಸ್ ಹರಡಬಹುದು.

  1. ನೊರೊವೈರಸ್ ‘ಹೊಟ್ಟೆಯ ದೋಷ’ದ ಲಕ್ಷಣಗಳು ಯಾವುವು?

ನೊರೊವೈರಸ್ ‘ಹೊಟ್ಟೆಯ ದೋಷ’ದ ಸಾಮಾನ್ಯ ಲಕ್ಷಣಗಳೆಂದರೆ: ವಾಂತಿ, ಅತಿಸಾರ, ಹೊಟ್ಟೆ ಸೆಳೆತ, ಶೀತ, ತಲೆನೋವು, ಸ್ನಾಯು ನೋವು. ವೈರಸ್‌ಗೆ ಒಡ್ಡಿಕೊಂಡ 12 ಗಂಟೆಗಳ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು ಮತ್ತು ಒಂದೆರಡು ದಿನಗಳ ನಂತರವೂ ಬರಬಹುದು.

  1. ಲಕ್ಷಣರಹಿತ ನೊರೊವೈರಸ್ ಪ್ರಕರಣಗಳು ಇರಬಹುದೇ?

ಹೌದು ಇರಬಹುದು. ಮಿನ್ನೆಸೋಟಾ ಆರೋಗ್ಯ ಇಲಾಖೆಯ ಪ್ರಕಾರ, ಕೆಲವೊಮ್ಮೆ ನೊರೊವೈರಸ್ ಸೋಂಕಿತ ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ, ಆದರೆ ಇತರರಿಗೆ ವೈರಸ್ ಅನ್ನು ಹರಡಬಹುದು.

  1. ವೈರಸ್ ದೇಹವನ್ನು ದುರ್ಬಲಗೊಳಿಸುವುದೇ?

ಸೋಂಕು ತಗುಲಿದವರಲ್ಲಿ ಅನೇಕ ಜನರು 1-2 ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಮತ್ತು ದೀರ್ಘಾವಧಿಯ ಆರೋಗ್ಯದ ತೊಂದರೆಗಳು ಅವರಲ್ಲಿ ಕಂಡುಬರುವುದಿಲ್ಲ. ನೊರೊವೈರಸ್ ದಾಳಿಯ ಸಮಯದಲ್ಲಿ ನಿರ್ಜಲೀಕರಣವು ಪ್ರಮುಖ ಆರೋಗ್ಯ ಅಪಾಯವಾಗಿದೆ. ಚಿಕ್ಕ ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.

  1. ನೊರೊವೈರಸ್ ಸೋಂಕನ್ನು ತಡೆಯುವುದು ಹೇಗೆ?

ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯಿರಿ; ವಿಶೇಷವಾಗಿ ಬಾತ್ರೂಮ್ ಬಳಸಿದ ನಂತರ, ತಿನ್ನುವ ಮೊದಲು, ಅಡುಗೆ ಮಾಡುವ ಮೊದಲು ಮತ್ತು ಯಾರಿಗಾದರೂ ಆಹಾರವನ್ನು ಬಡಿಸುವ ಮೊದಲು. ಪ್ರತಿ ಬಾರಿ ವಾಂತಿ ಮತ್ತು ಭೇದಿ ಆದ ಬಳಿಕ, ಇಡೀ ಮನೆಯನ್ನು ಸೋಂಕುರಹಿತಗೊಳಿಸಿ. ನಿಮ್ಮ ಚೇತರಿಕೆಯ ನಂತರವೂ ಕನಿಷ್ಠ 3 ದಿನಗಳ ಕಾಲ ಪ್ರತ್ಯೇಕವಾಗಿರಿ.

ಇದನ್ನೂ ಓದಿ: Explainer: ಮಂಕಿಪಾಕ್ಸ್ ಮಾರಣಾಂತಿಕವೇ? ಸಲಿಂಗಕಾಮಿಗಳಿಗೆ ಹೆಚ್ಚು ಆತಂಕ?

Exit mobile version