Site icon Vistara News

Explainer: ಮಂಕಿಪಾಕ್ಸ್ ಮಾರಣಾಂತಿಕವೇ? ಸಲಿಂಗಕಾಮಿಗಳಿಗೆ ಹೆಚ್ಚು ಆತಂಕ?

monkeypox

ಮಂಕಿಪಾಕ್ಸ್ ವೈರಸ್ ಈಗ 12 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಪ್ರಕರಣಗಳು 100ರ ಗಡಿ ಸಮೀಪಿಸಿವೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕಣ್ಗಾವಲು ಹೆಚ್ಚಿಸಿರುವುದರಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ. ಮೇ 7ರಂದು ಯುನೈಟೆಡ್ ಕಿಂಗ್‌ಡಂನಲ್ಲಿ ಮಂಕಿಪಾಕ್ಸ್‌ ಸೋಂಕಿನ ಮೊದಲ ಪ್ರಕರಣ ಪತ್ತೆಯಾಯಿತು. ಇದುವರೆಗೆ ಒಂಬತ್ತು ಯುರೋಪಿಯನ್ ದೇಶಗಳಲ್ಲಿ ಸೋಂಕುಗಳು ದೃಢಪಟ್ಟಿವೆ: ಅವುಗಳೆಂದರೆ: ಯುಕೆ (ಯುನೈಟೆಡ್ ಕಿಂಗ್‌ಡಂ), ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ಸ್, ಇಟಲಿ, ಸ್ವೀಡನ್, ಅಮೆರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾ.

ಸಾಮಾನ್ಯವಾಗಿ ಮಂಕಿಪಾಕ್ಸ್ ಪ್ರಕರಣಗಳು ಆಫ್ರಿಕಾ ದೇಶದಲ್ಲಿ ಪತ್ತೆಯಾಗುತ್ತವೆ. ಯುಕೆಯಲ್ಲಿ ಪತ್ತೆಯಾದ ಮೊದಲ ಪ್ರಕರಣವು ನೈಜೀರಿಯಾಕ್ಕೆ ಹೊರಟಿದ್ದ ಪ್ರಯಾಣಿಕನಲ್ಲಿ ಪತ್ತೆಯಾದರೂ, ನಂತರದ ಪ್ರಕರಣಗಳು ಆಫ್ರಿಕಾದ ಜತೆ ಜೋಡಣೆಯಾಗಿಲ್ಲ. ಅನೇಕ ವಿಜ್ಞಾನಿಗಳು ಮತ್ತು ವೈದ್ಯರನ್ನು ಗೊಂದಲದಲ್ಲಿ ಕೆಡವಿದ್ದು ಇದೇ ಅಂಶ..

ಈ ರೀತಿ ವರ್ಷಕ್ಕೆ ಸುಮಾರು 3,000 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತವೆ.

ಈಗ ಕಾಣಿಸಿಕೊಂಡಿರುವ ಮಂಕಿಪಾಕ್ಸ್‌ ಪ್ರಕರಣಗಳಲ್ಲಿ ಅಸಾಮಾನ್ಯ ಸಂಗತಿಯೆಂದರೆ, ಮಂಕಿಪಾಕ್ಸ್ ಬಹಳ ಅಪರೂಪವಾಗಿರುವ ದೇಶಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ದೃಢಪಡುತ್ತಿವೆ. ಮಂಕಿಪಾಕ್ಸ್‌ನ ಸಾಂಪ್ರದಾಯಿಕ ನಾಡು ಎಂದು ಇದುವರೆಗೆ ಭಾವಿಸಲಾಗಿದ್ದ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಹೊರತಾಗಿ ಅನ್ಯ ದೇಶಗಳಲ್ಲಿ ಏಕಾಏಕಿ ಕಾಣಿಸಿಕೊಳ್ಳುತ್ತಿರುವುದು ಅಭೂತಪೂರ್ವವಾಗಿದೆ.

ಮಂಕಿಪಾಕ್ಸ್ ಎಂದರೇನು?
ಆಫ್ರಿಕಾದ ಉಷ್ಣವಲಯದ ಭಾಗಗಳಲ್ಲಿ ಸ್ಥಳೀಯ ವೈರಸ್‌ನಿಂದ ಮಂಕಿಪಾಕ್ಸ್ ಉಂಟಾಗುತ್ತದೆ. ಮಂಕಿಪಾಕ್ಸ್‌ ಎಂಬ ಹೆಸರಿದ್ದರೂ ಇದು ಸೋಂಕಿತ ಮಂಗಗಳ ಮೂಲಕ ಹರಡುವುದು ಬಹಳ ವಿರಳ. ಆದರೆ ಅಳಿಲುಗಳು, ಇಲಿಗಳು ಮತ್ತು ಹೆಗ್ಗಣಗಳಂತಹ ದಂಶಕಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ವೈರಸ್ ಅನ್ನು ಝೂನೋಟಿಕ್ ಎಂದು ಕರೆಯಲಾಗುತ್ತದೆ. ಅಂದರೆ ಇದು ಸೋಂಕಿತ ಪ್ರಾಣಿಗಳ ಮೂಲಕ ರಕ್ತ, ಸೋಂಕಿತ ದ್ರವಗಳು ಅಥವಾ ಪ್ರಾಣಿಗಳ ಮೇಲೆ ಗಾಯಗಳ ಮೂಲಕ ಮನುಷ್ಯರಿಗೆ ಹರಡುತ್ತದೆ.

ಉಸಿರಾಟದ ಮೂಲಕ ಹಾರುವ ಸೂಕ್ಷ್ಮ ಕಣಗಳು, ಸೋಂಕಿತ ವ್ಯಕ್ತಿಯ ಚರ್ಮದ ಗಾಯಗಳು ಅಥವಾ ಕಲುಷಿತಗೊಂಡ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ಮನುಷ್ಯನಿಂದ ಮನುಷ್ಯನಿಗೆ ಹರಡಬಹುದು. ಉಸಿರಾಟದ ಕಣಗಳ ಮೂಲಕ ಪ್ರಸರಣಕ್ಕೆ ಸಾಮಾನ್ಯವಾಗಿ ದೀರ್ಘಾವಧಿಯ ಮುಖಾಮುಖಿ ಸಂಪರ್ಕದ ಅಗತ್ಯವಿರುತ್ತದೆ, ಇದು ಆರೋಗ್ಯ ಕಾರ್ಯಕರ್ತರು, ಮನೆಯ ಸದಸ್ಯರು ಮತ್ತು ಸಕ್ರಿಯ ಪ್ರಕರಣಗಳ ಜತೆ ನಿಕಟ ಸಂಪರ್ಕ ಹೊಂದಿರುವರಿಗೆ ಹೆಚ್ಚಿನ ಅಪಾಯದ ಸಂದರ್ಭವಿರುತ್ತದೆ. ಗಾಳಿಯ ಮೂಲಕ ವೈರಸ್ ಹರಡಬಹುದೇ ಎಂಬುದು ಪ್ರಸ್ತುತ ಸಂಶೋಧನೆಯ ಹಂತದಲ್ಲಿದೆ. ಆದರೂ ಸದ್ಯದ ಮಟ್ಟಿಗೆ ಗಾಳಿಯ ಮೂಲಕ ಹರಡುತ್ತದೆ ಎಂಬುದನ್ನು ಸಮರ್ಥಿಸಲು ಯಾವುದೇ ಪುರಾವೆಗಳಿಲ್ಲ.

1958 ರಲ್ಲಿ ಪ್ರಯೋಗಾಲಯದ ಮಂಗಗಳಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟಿದ್ದರೂ, ಮಾನವರಲ್ಲಿ ಮಂಕಿಪಾಕ್ಸ್ ಅನ್ನು ಮೊದಲು ಪತ್ತೆ ಮಾಡಿದ್ದು 1970 ರಲ್ಲಿ. ಇದು ಸಾಮಾನ್ಯವಾಗಿ ಆಫ್ರಿಕಾದ ಭಾಗಗಳಿಗೆ ಸೀಮಿತವಾದ ರೋಗವಾಗಿದೆ, ಇದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ, ಆದರೂ ಇದ್ದಕ್ಕಿದ್ದಂತೆ ಗ್ಯಾಬೊನ್‌, ಕೋಟ್ ಡಿ ಐವರಿ, ಲೈಬೀರಿಯಾ, ನೈಜೀರಿಯಾ, ಬೆನಿನ್, ಕ್ಯಾಮರೂನ್, ಸಿಯೆರಾ ಲಿಯೋನ್ ಮತ್ತು ದಕ್ಷಿಣ ಸುಡಾನ್‌ಗಳಲ್ಲಿ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಆಫ್ರಿಕಾದ ಹೊರಗೆ ಮೊದಲ ಪ್ರಕರಣ 2003 ರಲ್ಲಿ ಅಮೆರಿಕದಲ್ಲಿ ಕಾಣಿಸಿತು. ಇದು ಘಾನಾದಿಂದ ಆಮದು ಮಾಡಿಕೊಳ್ಳಲಾದ ಮತ್ತು ಸೋಂಕಿತ ದಂಶಕಗಳಿರುವ ಪ್ರೈರೀ ಜಾತಿಯ ಸೋಂಕಿತ ಸಾಕು ನಾಯಿಗಳಿಂದ ಹರಡಿತ್ತು. ಅಲ್ಲಿಂದೀಚೆಗೆ, ಪ್ರಪಂಚದಾದ್ಯಂತ ಸೋಂಕು ತಗುಲಿದ ವ್ಯಕ್ತಿಗಳ ವಿದೇಶ ಪ್ರಯಾಣದಿಂದಾಗಿ ಸಣ್ಣ ಸಂಖ್ಯೆಯಲ್ಲಿ ಹರಡಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಹರಡ್ತಿದೆ ಮಂಕಿ ಪಾಕ್ಸ್‌, ಏನಿದು ಹೊಸ ರೋಗ, ಎಷ್ಟು ಭಯಾನಕ?

ಸಲಿಂಗಕಾಮಿಗಳಿಗೆ ಆತಂಕ?

ಸಲಿಂಗಕಾಮಿಗಳು, ಹೆಚ್ಚಿನ ಲೈಂಗಿಕ ಸಂಪರ್ಕಗಳನ್ನು ಹೊಂದಿರುವವರು ಈ ರೋಗದ ಬಗ್ಗೆ ಹೆಚ್ಚು ಎಚ್ಚರವಾಗಿರಬೇಕು. ʼʼಯುರೋಪ್‌ನಲ್ಲಿ ಎರಡು ಇವೆಂಟ್‌ಗಳಲ್ಲಿ ದೈಹಿಕವಾಗಿ ಅತ್ಯಂತ ನಿಕಟವಾಗಿ ಪಾಲ್ಗೊಂಡವರಲ್ಲಿ ಇದು ಹಬ್ಬಿದೆʼʼ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸಿ ವಿಭಾಗದ ಮಾಜಿ ಮುಖ್ಯಸ್ಥ ಡಾ.ಡೇವಿಡ್‌ ಹೈಮನ್‌ ಹೇಳಿದ್ದಾರೆ. ʼʼಈ ಕಾಯಿಲೆ ಯಾರಿಗೂ ಬರಬಹುದು. ಆದರೆ ಈಗಾಗಲೇ ಬಂದವರನ್ನು ಪರೀಕ್ಷಿಸಲಾಗಿ, ಅವರಲ್ಲಿ ಹೆಚ್ಚಿನವರು ಗೇಗಳು ಎಂಬುದು ಕಂಡುಬಂದಿದೆʼʼ ಎಂದು ಅಮೆರಿಕದ ಸೆಂಟರ್‌ ಫಾರ್‌ ಡಿಸೀಸಸ್‌ ಕಂಟ್ರೋಲ್‌ ಆಂಡ್‌ ಪ್ರಿವೆನ್ಷನ್‌ (ಸಿಡಿಸಿ) ಮುಖ್ಯಸ್ಥ ಡಾ.ಜಾನ್‌ ಬ್ರೂಕ್ಸ್‌ ತಿಳಿಸಿದ್ದಾರೆ.

ಆರಂಭಿಕ ಲಕ್ಷಣಗಳೇನು?
ಮಂಕಿಪಾಕ್ಸ್‌ನ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು, ಸ್ನಾಯು ನೋವು, ಬೆನ್ನುನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ ಮತ್ತು ಬಳಲಿಕೆ, ಸರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳಬಹುದು. ಈ ದದ್ದುಗಳು ಆಗಾಗ್ಗೆ ಮುಖದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ, ನಂತರ ಜನನಾಂಗಗಳು ಸೇರಿದಂತೆ ದೇಹದ ಇತರ ಭಾಗಗಳಿಗೆ ಹರಡುತ್ತದೆ. ದದ್ದುಗಳ ಸ್ವರೂಪ ಬದಲಾಗುತ್ತದೆ ಮತ್ತು ವಿವಿಧ ಹಂತಗಳ ಮೂಲಕ ಹಾದು ಹೋಗುತ್ತದೆ. ಆರಂಭದಲ್ಲಿ ಇದು ಚಿಕನ್‌ ಪಾಕ್ಸ್‌ ಅಥವಾ ಸಿಫಿಲಿಸ್ ಅನ್ನು ಹೋಲುವ ದ್ರವದಿಂದ ತುಂಬಿದ ತುರಿಕೆ ಗುಳ್ಳೆಗಳು ಆಗಿರಬಹುದು, ಅಂತಿಮವಾಗಿ ಅದು ಒಣಗಿ ಹೊಟ್ಟು ಕಳಚಿ ಉದುರುತ್ತದೆ. ಹೆಚ್ಚಿನ ಜನರು ಯಾವುದೇ ಚಿಕಿತ್ಸೆಯಿಲ್ಲದೆ ಕೆಲವೇ ವಾರಗಳಲ್ಲಿ ಮಂಕಿಪಾಕ್ಸ್‌ನಿಂದ ಚೇತರಿಸಿಕೊಳ್ಳುತ್ತಾರೆ.

ರೋಗನಿರ್ಣಯ ಹೇಗೆ?
ರೋಗನಿರ್ಣಯವು ಸಾಮಾನ್ಯವಾಗಿ ಕ್ಲಿನಿಕಲ್ ಆಗಿದೆ. ಅಂದರೆ ಪರೀಕ್ಷೆಗಳ ಅಗತ್ಯವಿಲ್ಲದೇ ರೋಗನಿರ್ಣಯ ಮಾಡಲು ವೈದ್ಯರಿಗೆ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಗೋಚರಿಸಿದರೆ ಸಾಕಾಗುತ್ತವೆ. ಆದಾಗ್ಯೂ, ಮಂಕಿಪಾಕ್ಸ್ ಶಂಕಿತವಾಗಿದ್ದರೆ, ವೈದ್ಯರು ಒಂದು ಗಾಯದಿಂದ ದ್ರವದ ಮಾದರಿಯನ್ನು ತೆಗೆದುಕೊಳ್ಳಬೇಕು ಮತ್ತು ರೋಗನಿರ್ಣಯವನ್ನು ಖಚಿತಪಡಿಸಲು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಈ ರಕ್ತ ಪರೀಕ್ಷೆಗಳು ನಿಖರವಾದವು ಎಂದು ಭಾವಿಸುವಂತಿಲ್ಲ. ಅಲ್ಲದೆ, ಈ ರಕ್ತ ಪರೀಕ್ಷೆ ಮಾದರಿಯನ್ನು ಪದೇ ಪದೇ ಬಳಸುವ ವಾಡಿಕೆ ಮಾಡಿಕೊಳ್ಳಬಾರದು.

ಮಂಕಿಪಾಕ್ಸ್ ವೈರಸ್ “ಡಿಎನ್ಎ ವೈರಸ್‌ಗಳು” ಎಂದು ಕರೆಯಲ್ಪಡುವ ವೈರಸ್‌ಗಳ ಕುಟುಂಬಕ್ಕೆ ಸೇರಿದೆ. ಆರ್‌ಎನ್‌ಎ ವೈರಸ್‌ ಆಗಿರುವ ಕೋವಿಡ್-19 ಗೆ ಕಾರಣವಾಗುವ ಎಸ್‌ಎಆರ್‌ಎಸ್‌-ಸಿಒವಿ-2 ವೈರಸ್‌ಗಿಂತ ಭಿನ್ನವಾಗಿ, ಡಿಎನ್‌ಎ ವೈರಸ್‌ಗಳು ತಮ್ಮ ಆನುವಂಶಿಕ ರಚನೆಯಲ್ಲಿನ ದೋಷಗಳನ್ನು ಗುರುತಿಸುವಲ್ಲಿ ಮತ್ತು ಪುನರಾವರ್ತನೆಯ ಪ್ರಕ್ರಿಯೆಯಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳುವ ಕಾರಣ ರೂಪಾಂತರಗೊಳ್ಳುವ ಪ್ರಮಾಣ ಕಡಿಮೆ.

ಮಾರಣಾಂತಿಕ ಎನ್ನುವಂತಿಲ್ಲ:
ಮಂಕಿಪಾಕ್ಸ್‌ ಈಗಿನ ಪ್ರಸರಣ ಏಕೆ ಮತ್ತು ಹೇಗೆ ನಡೆಯುತ್ತಿದೆ ಎಂಬುದನ್ನು ವಿಜ್ಞಾನಿಗಳು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಧ್ಯಯನ ಮುಖ್ಯವಾಗಿದೆ. ವೈರಸ್ ಸ್ವತಃ ಬದಲಾಗಿದೆಯೇ ಅಥವಾ ಎಂದಿನಂತೆ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಕಾಣಿಸಿಕೊಂಡಿದೆಯೇ? ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ವೈರಸ್‌ನ ಈಗಿನ ತಳಿ ಸಾಮಾನ್ಯವಾಗಿ ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುವ ಒಂದು ತಳಿ ಅಥವಾ ಅದಕ್ಕೆ ಸಂಬಂಧಿಸಿದ್ದು ಎಂದು ಭಾವಿಸಲಾಗಿದೆ, ಇದು ಸೌಮ್ಯವಾದ ರೋಗಲಕ್ಷಣಗಳು ಮತ್ತು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿದೆ. ಹತ್ತಿರ ಹತ್ತಿರ ಶೇಕಡ ಒಂದರಷ್ಟು ಮಾತ್ರ ಈ ಮಂಕಿಪಾಕ್ಸ್ ನಿಂದ ಸಾವುಗಳು ಸಂಭವಿಸಿವೆ.‌

ಇದನ್ನೂ ಓದಿ: ಕೊಡಗಿನ ಗಡಿಭಾಗದಲ್ಲಿ ಟೊಮ್ಯಾಟೊ ಫ್ಲೂ : ಆರೋಗ್ಯ ಇಲಾಖೆ ಹದ್ದಿನ ಕಣ್ಣು

Exit mobile version