Site icon Vistara News

Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

Ghee benefits

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿದೆ. ತುತ್ತು ಎತ್ತುವುದಕ್ಕೆ ತುಪ್ಪ ಬೇಕು ಎಂದವರೂ ಇದ್ದಾರೆ. ಇಂಥ ಮಾತುಗಳು ತುಪ್ಪ ನಮಗೆಷ್ಟು ಆವಶ್ಯಕ ಎನ್ನುವುದನ್ನು ತೋರಿಸುವಂತಿದೆ. ನಮ್ಮ ಆರೋಗ್ಯದ ಮೇಲೆ ತುಪ್ಪವು ಹಲವು ರೀತಿಯಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಬಲ್ಲದು ಎಂಬುದು ನಿಸ್ಸಂಶಯ. ಹಾಗೆಂದು ತಿನ್ನುವುದಕ್ಕೆಲ್ಲ ತುಪ್ಪ ಸುರಿದುಕೊಳ್ಳಬಹುದೇ? ಅಷ್ಟೊಂದು ಜಿಡ್ಡಿನ ಪದಾರ್ಥವನ್ನು ಒಳ್ಳೆಯದೆಂದು ತಿನ್ನುತ್ತಾ ಹೋದರೆ ಆರೋಗ್ಯದ ಗತಿ ಏನು? ಸಾಲ ಮಾಡಿ ತಿನ್ನುವಷ್ಟು ತುಪ್ಪ ನಮಗೆ ಬೇಕೆ! ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು? ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು. ಹಾಗಾಗಿ ನಮ್ಮ ವಯಸ್ಸು, ಆರೋಗ್ಯ, ತೂಕ ಇತ್ಯಾದಿಗಳ ಮೇಲೆ, ದಿನಕ್ಕೆಷ್ಟು ತುಪ್ಪ ಬೇಕು ಮತ್ತು ಸಾಕು ಎನ್ನುವುದನ್ನು ನಿರ್ಧರಿಸಬಹುದು. ಈಗಾಗಲೇ ಸಾಕಷ್ಟು ಎಣ್ಣೆ ಮತ್ತು ಜಿಡ್ಡಿನಂಶ ನಮ್ಮ ಆಹಾರದಲ್ಲಿದ್ದರೆ, ಅದಕ್ಕೆ ತುಪ್ಪವನ್ನೂ ಹೆಚ್ಚುವರಿಯಾಗಿ ಸೇರಿಸಬೇಕಿಲ್ಲ. ಬದಲಿಗೆ, ಈಗಾಗಲೇ ಇರುವ ಕೆಲವು ಜಿಡ್ಡಿನ ವಸ್ತುಗಳನ್ನು ಕಡಿಮೆ ಮಾಡಿ, ಅದರ ಬದಲಿಗೆ ತುಪ್ಪವನ್ನು (Ghee For Health) ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಎಷ್ಟು ಬೇಕು?

ಸಾಮಾನ್ಯ ಅಂದಾಜಿಗೆ ಹೇಳುವುದಾದರೆ, ವಯಸ್ಕರಿಗೆ ದಿನಕ್ಕೆ 2-4 ಚಮಚ ತುಪ್ಪ ದಿನಕ್ಕೆ ಸಾಕಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ತುಪ್ಪವನ್ನು ತಿನ್ನುವುದು, ಅದರಲ್ಲೂ ಬೆಚ್ಚಗಿನ ತುಪ್ಪದ ಸೇವನೆ ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಆದರೆ ಅವರ ಆರೋಗ್ಯ ಮತ್ತು ಜೀವನಶೈಲಿಯನ್ನು ಗಮನಿಸಿಕೊಳ್ಳಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ತುಪ್ಪ ಅಗತ್ಯವಾಗಿ ಬೇಕು. ಅದೇ ಹೃದ್ರೋಗಿಗಳಿಗಾದರೆ ವೈದ್ಯರಲ್ಲಿ ಮಾತಾಡಿಯೇ ನಿರ್ಧರಿಸಬೇಕು. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು.

ಚಯಾಪಚಯ ಚುರುಕು

ತುಪ್ಪದಲ್ಲಿ ಕಿರುಕೊಂಡಿಗಳ ಕೊಬ್ಬಿನಾಮ್ಲ (SCFAs) ಇರುತ್ತದೆ. ಇವು ಸುಲಭವಾಗಿ ದೇಹಕ್ಕೆ ಹೀರಲ್ಪಡುತ್ತವೆ. ಇದರಿಂದ ಉತ್ಪತ್ತಿಯಾಗುವ ಶಾಖವು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ನೆರವಾಗುತ್ತದೆ. ಅಂದರೆ, ಇದರಿಂದ ಚುರುಕಾಗುವ ಚಯಾಪಚಯ ಕ್ರಿಯೆಯಿಂದ ಹೆಚ್ಚಿನ ಕ್ಯಾಲರಿಗಳು ಕರಗಿ, ಕೊಬ್ಬೂ ಕಡಿಮೆಯಾಗುತ್ತದೆ

ಜೀರ್ಣಾಂಗಗಳ ಆರೋಗ್ಯ ಸುಧಾರಣೆ

ಖಾಲಿ ಹೊಟ್ಟೆಗೆ ಬೀಳುವ ಬೆಚ್ಚನೆಯ ತುಪ್ಪವು ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ. ಇದರಲ್ಲಿರುವ ಬಟೈರೇಟ್‌ ಅಂಶವು ಜಠರ ಮತ್ತು ಕರುಳಿನ ಒಳಪದರಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಜೀರ್ಣ, ಆಸಿಡಿಟಿಯಂಥವು ಕಡಿಮೆಯಾಗುತ್ತವೆ. ಹೊಟ್ಟೆಯ ಆರೋಗ್ಯಕ್ಕೆ ಅಗತ್ಯವಾದ ಉತ್ತಮ ಬ್ಯಾಕ್ಟೀರಿಯಗಳ ಸಂಖೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸಿ, ಆಹಾರದಲ್ಲಿನ ಪೋಷಕಾಂಶಗಳು ಚೆನ್ನಾಗಿ ಹೀರಲ್ಪಡುತ್ತವೆ.

ತಿನ್ನುವ ಬಯಕೆಗೆ ಕಡಿವಾಣ

ಬೆಳಗಿನ ಸಮಯದಲ್ಲಿ ದೇಹಕ್ಕೆ ದೊರೆಯುವ ಆರೋಗ್ಯಕರ ಕೊಬ್ಬಿನಿಂದ ದಿನವಿಡೀ ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಇದರಿಂದ ಕಳ್ಳ ಹಸಿವಿಗೆ ಏನಾದರೂ ಬಾಯಾಡಬೇಕೆಂಬ ಚಟ ನಿಂತು, ದೇಹಕ್ಕೆ ಆರೋಗ್ಯಕರ ತೂಕವನ್ನು ಕಲ್ಪಿಸುವುದಕ್ಕೆ ಸಹಾಯವಾಗುತ್ತದೆ. ಹೊಟ್ಟೆ ತುಂಬಿದ ಭಾವವನ್ನು ಪ್ರಚೋದಿಸುವ ಚೋದಕಗಳ ಬಿಡುಗಡೆಗೂ ಇದು ನೆರವಾಗುತ್ತದೆ. ತಿಳಿದು ತಿಂದರೆ ತುಪ್ಪದಿಂದ ತೂಕವನ್ನು ಇಳಿಸಲೂ ಬಹುದು.

ಶಕ್ತಿ ಸಂಚಯನ

ಇದರ ಕೊಬ್ಬಿನ ಸ್ವರೂಪವು ಹೇಗಿದೆಯೆಂದರೆ ದೀರ್ಘಕಾಲದವರೆಗೆ ದೇಹಕ್ಕೆ ಸುಸ್ಥಿರವಾಗಿ ಶಕ್ತಿಯನ್ನು ನೀಡುತ್ತಲೇ ಇರುವಂತೆ ರೂಪಿತವಾಗಿದೆ. ತ್ವರಿತವಾಗಿ ಶಕ್ತಿಯ ಸ್ವರೂಪ ಪಡೆದು, ದೇಹಕ್ಕೆ ಬೇಕಾದ ಇಂಧನವನ್ನು ಒದಗಿಸುವುದು ತುಪ್ಪದಲ್ಲಿರುವ ಕೊಬ್ಬಿಗೆ ಸಾಧ್ಯ.

ಇದನ್ನೂ ಓದಿ: Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

ಹೃದಯದ ಆರೋಗ್ಯಕ್ಕೂ ಪೂರಕ

ತುಪ್ಪದಲ್ಲಿ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕ ಸತ್ವಗಳಿವೆ. ಇದು ಶರೀರದಲ್ಲಿ ಆಗಬಹುದಾದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ, ಮಾರಕ ರೋಗಗಳನ್ನು ದೂರ ಇರಿಸುತ್ತವೆ. ಉತ್ತಮ ಕೊಬ್ಬನ್ನು ದೇಹಕ್ಕೆ ನೀಡುತ್ತಾ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ನೆನಪಿಡಿ, ಅತಿಯಾದರೆ ಅಮೃತವೂ ವಿಷ! ತುಪ್ಪ ಒಳ್ಳೆಯದು ಎಂಬ ಕಾರಣಕ್ಕಾಗಿ ಹೆಚ್ಚು ತಿನ್ನುವಂತಿಲ್ಲ. ಅದೇ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತವಾಗಿಯೇ ಬೆಳಗಿನ ತಿಂಡಿಯ ಜೊತೆಗೆ ಸೇರಿಸಿಕೊಂಡರೆ, ಹಲವು ರೀತಿಯ ಲಾಭಗಳನ್ನು ಪಡೆಯಬಹುದು.

Exit mobile version