Site icon Vistara News

Home Remedies For Winter Sickness: ಚಳಿಗಾಲದ ಸೋಂಕಿಗೆ ಉಪಯುಕ್ತ ಮನೆಮದ್ದು ಇಲ್ಲಿದೆ

Home Remedies For Winter Sickness

ಚಳಿಗಾಲವೆಂದರೆ ಮೂಗು ಸೋರುವ, ಗಂಟಲು ಕೆರೆಯುವ, ಕೆಮ್ಮುತ್ತಲೇ ಕಳೆಯುವ ಕಾಲ ಆಗಬೇಕಿಲ್ಲ. ಈ ದಿನಗಳಲ್ಲಿ ವೈರಸ್‌ ಬಾಧೆ ಹೆಚ್ಚೆಂಬುದು ನಿಜ. ಮೂಗು, ಗಂಟಲು, ಶ್ವಾಸನಾಳಗಳು, ಸೈನಸ್‌ಗಳಿಗೆ ಸೋಂಕು ಥಟ್ಟನೆ ತಗುಲುತ್ತದೆ. ಪರಿಣಾಮವೇ ನಿಲ್ಲದ ನೆಗಡಿ, ಕಾಡುವ ಕೆಮ್ಮು, ಕಿರಿಕಿರಯ ಗಂಟಲು, ಬಿಗಿಯುವ ಕಫ, ಊದಿಕೊಳ್ಳುವ ಸೈನಸ್‌, ಸುಸ್ತು, ಜಡತೆ… ಪಟ್ಟಿ ದೊಡ್ಡದು. ಚಳಿ ಹೋದರೂ ಇವೆಲ್ಲ ಹೋಗುವುದಿಲ್ಲ, ಅದರಲ್ಲೂ ಕೆಮ್ಮು. ಒಮ್ಮೆ ಸೋಂಕು, ಇನ್ನೊಮ್ಮೆ ಅಲರ್ಜಿ ಎನ್ನುತ್ತಾ ಶತಮಾನಗಳಿಂದ ನಮಗೇ ಅಂಟಿದಂತೆ ಗೋಳಾಡಿಸಿಬಿಡುತ್ತದೆ ಈ ಕೆಮ್ಮು. ಚಳಿಗಾಲಕ್ಕೆಂದೇ ವಿಶೇಷವಾಗಿ ಅತಿಥಿ ಕಲಾವಿದನಾಗಿ ಆಗಮಿಸುವ ಈ ನೆಗಡಿ-ಕೆಮ್ಮನ್ನು ನಿಯಂತ್ರಿಸಲು ಒಂದಿಷ್ಟು ಮನೆಮದ್ದುಗಳನ್ನು (Home remedies for winter sickness) ಇಲ್ಲಿ ವಿವರಿಸಲಾಗಿದೆ.

ಬೆಳ್ಳುಳ್ಳಿ

ಅಲ್ಲಿಸಿನ್‌ನಂಥ ಪ್ರಬಲ ಉತ್ಕರ್ಷಣ ನಿರೋಧಕವನ್ನು ಹೊಂದಿರುವ ಬೆಳ್ಳುಳ್ಳಿ ಚಳಿಗಾಲಕ್ಕೆ ಅಗತ್ಯವಾಗಿ ಬೇಕಾದ್ದು. ಗಂಟಲು ನೋವು, ಕೆಮ್ಮಿನ ಕಿರಿಕಿರಿಗೆ ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ನಾಲ್ಕಾರು ಹರಳು ಉಪ್ಪಿನೊಂದಿಗೆ ಬಾಯಲ್ಲಿಟ್ಟುಕೊಂಡು, ಬರುವ ರಸವನ್ನು ನುಂಗುತ್ತಿದ್ದರೆ ಉಪಯುಕ್ತ. ಹಸಿ ಬೆಳ್ಳುಳ್ಳಿಯ ವಾಸನೆ ಸಹಿಸಲು ಕಷ್ಟ ಎಂದಿದ್ದರೆ, ಮಾಡುವ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಧಾರಾಳವಾಗಿ ಬಳಸಿ.

ಶುಂಠಿ

ಉರಿಯೂತ ನಿವಾರಣೆ, ಸೋಂಕು ನಿಯಂತ್ರಣ ಮತ್ತು ಕಫ ಕರಗುವುದಕ್ಕೆ ಶುಂಠಿ ಪರಿಣಾಮಕಾರಿ ಮದ್ದು. ಇದರಲ್ಲಿರುವ ಜಿಂಜರಾಲ್‌ ಅಂಶಗಳು ಉತ್ತಮ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಊದಿಕೊಂಡ ಶ್ವಾಸನಾಳಗಳನ್ನು ಹಿಗ್ಗಿಸಿ, ಕಫ ಹೊರಹೋಗುವಂತೆ ಮಾಡುವ ಒಳ್ಳೆಯ ಬ್ರಾಂಕೊ-ಡಯಲೇಟರ್‌ ಇದು. ಕೊಂಚ ಶುಂಠಿಯ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬಹುದು. ಒಣಶುಂಠಿಯನ್ನು ಬಾಯಲ್ಲಿಟ್ಟು ರಸ ನುಂಗಬಹುದು ಅಥವಾ ಶುಂಠಿಯ ಚಹಾ ಇಲ್ಲವೇ ಕಷಾಯ ಮಾಡಿ ಸೇವಿಸಬಹುದು.

ತುಳಸಿ

ಕೆಮ್ಮು ಮತ್ತು ಕಫ ನಿವಾರಣೆಯ ಗುಣ ಹೊಂದಿರುವ ತುಳಸಿಯಲ್ಲಿ ಸೋಂಕು ನಿರೋಧಕ ಸಾಮರ್ಥ್ಯವೂ ಇದೆ. ನೆಗಡಿ, ಜ್ವರದಂಥ ಸೂಕ್ಷ್ಮಾಣುಗಳ ಸೋಂಕಿಗೂ ಇದು ಔಷಧಿಯಾಗಬಲ್ಲದು. ಶ್ವಾಸನಾಳಗಳನ್ನು ಹಿಗ್ಗಿಸಿ ಬಿಗಿದ ಕಫವನ್ನು ಸಡಿಲ ಮಾಡುತ್ತದೆ. ಒಣ ಕೆಮ್ಮಿಗೆ ತುಳಸಿಯ ಕಷಾಯ ಪರಿಣಾಮಕಾರಿ ಮದ್ದು. ತುಳಸಿಯ ರಸವನ್ನು ತೆಗೆದು ಕೊಂಚ ಜೇನುತುಪ್ಪ ಸೇರಿಸಿ ಸೇವಿಸಿದರೂ ಫಲಿತಾಂಶ ಉತ್ತಮವಾಗಿರುತ್ತದೆ.

ವಿಟಮಿನ್‌ ಸಿ

ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸುವ ಸಿ ಜೀವಸತ್ವಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಸೋಂಕುಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು. ಕಿತ್ತಳೆ ಹಣ್ಣು, ದ್ರಾಕ್ಷಿ, ನಿಂಬೆರಸ, ಕಿವಿ ಹಣ್ಣು, ನೆಲ್ಲಿಕಾಯಿ, ಪರ್ಸಿಮನ್‌, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ, ಮೊಳಕೆ ಕಾಳುಗಳು, ಹೂ ಕೋಸು ಮುಂತಾದವುಗಳಿಂದ ಹೆಚ್ಚಿನ ವಿಟಮಿನ್‌ ಸಿ ಪಡೆಯಬಹುದು.

ಈರುಳ್ಳಿ

ಇದರಲ್ಲಿರುವ ಸಲ್ಫರ್‌ ಅಂಶಗಳು ಕಫ ಕರಗುವುದಕ್ಕೆ ನೆರವಾಗುತ್ತವೆ. ನೆಗಡಿಯನ್ನು ಕಡಿಮೆ ಮಾಡುವುದಕ್ಕೆ ಮತ್ತು ಬಿಗಿದ ಕಫವನ್ನು ಕರಗಿಸುವುದಕ್ಕೆ ಇದನ್ನು ಪರಂಪರಾಗತ ಔಷಧಿಯಲ್ಲಿ ಬಳಸಲಾಗುತ್ತದೆ. ಈರುಳ್ಳಿಯನ್ನು ಜಜ್ಜಿ ರಸ ತೆಗೆದು. ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಸೇವಿಸುವುದು ಕ್ರಮ. ಅದಿಲ್ಲದಿದ್ದರೆ, ಈರುಳ್ಳಿಯನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುದಿಸಿ ಕಷಾಯ ಮಾಡಿ. ಶೋಧಿಸಿದ ಕಷಾಯಕ್ಕೆ ನಾಲ್ಕಾರು ಹನಿ ನಿಂಬೆ ರಸ ಹಾಕಿ ಕುಡಿಯುವುದು ಪರಿಣಾಮಕಾರಿ.

ಅರಿಶಿನ

ನೆಗಡಿ-ಕೆಮ್ಮಿಗೆ ಅರಿಶಿನ ಹಾಲು ಅಥವಾ ಕಷಾಯದ ಸೇವಿಸುವುದು ಅಜ್ಜಿಯರ ಕಾಲದಿಂದ ಬಳಕೆಯಲ್ಲಿದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೂ ಹಿತವಾಗುವಂಥ ಮದ್ದು. ಸೋಂಕು ನಿವಾರಿಸುವ, ಉರಿಯೂತ ಶಮನ ಮಾಡುವಂಥ ಉತ್ಕರ್ಷಣ ನಿರೋಧಕ ಕರ್ಕುಮಿನ್‌ ಅರಿಶಿನದಲ್ಲಿದೆ. ಗಂಟಲು ನೋವು, ಕಿರಿಕಿರಿಗಳಿಗೆ ಬಿಸಿ ನೀರಿಗೆ ಉಪ್ಪಿನೊಂದಿಗೆ ಅರಿಶಿನವನ್ನೂ ಹಾಕಿ ಗಾರ್ಗಲ್‌ ಮಾಡುವುದು ಉತ್ತಮ.

ಕುಂಬಳಕಾಯಿ ಬೀಜ

ವಿಟಮಿನ್‌ ಸಿ ಜೊತೆಗೆ ಸತು ಅಥವಾ ಜಿಂಕ್‌ ಇರುವಂಥ ಆಹಾರಗಳು ಸಹ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಬಲ್ಲವು. ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಪ್ರಚೋದಿಸುವ ಶಕ್ತಿ ಜಿಂಕ್‌ಗೆ ಇದೆ. ಯಾವುದೋ ಸೋಂಕುಗಳ ವಿರುದ್ಧ ಹೋರಾಡಲು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತಕಣಗಳು ಬೇಕು. ಹಾಗಾಗಿ ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಗೋಡಂಬಿ, ಹೆಂಪ್‌ ಬೀಜ, ಮೊಟ್ಟೆ, ಅಣಬೆ ಮುಂತಾದ ಜಿಂಕ್‌ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಪ್ರಯೋಜನಕಾರಿ.

ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು

Exit mobile version