ನಮ್ಮ ಜೀರ್ಣಾಂಗಗಳ ಆರೋಗ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಎಂದಿಗಿಂತ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲೂ (gut microbiome) ಅಥವಾ ʻgut healthʼ ಎನ್ನುವ ಪದ ಆಗಾಗ ಕೇಳಿ ಬರುತ್ತದೆ. ಏನು ಹೀಗೆಂದರೆ? ಇಷ್ಟು ವರ್ಷಗಳಲ್ಲಿ ಇಲ್ಲದ್ದು ಈಗ ನಮ್ಮೆಲ್ಲರ ಜೀರ್ಣಾಂಗಗಳಲ್ಲಿ ಸೇರಿಕೊಂಡಿತೇ? ಮೊದಲು ಇರಲಿಲ್ಲವೇ? ಮುಂತಾದ ಹತ್ತಾರು ಪ್ರಶ್ನೆಗಳು ಬರಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ.
ನಮ್ಮ ಜೀರ್ಣಾಂಗಗಳ ಬಗ್ಗೆ ಈವರೆಗೆ ತಿಳಿದಿದ್ದಕ್ಕಿಂತ ಹೆಚ್ಚಿನ ವಿಷಯಗಳನ್ನು ಸಂಶೋಧನೆಗಳು ಇತ್ತೀಚೆಗೆ ಹೊರಹಾಕುತ್ತಿರುವುದರಿಂದ ಮೈಕ್ರೊಬಯೋಮ್ ಎಂಬ ಪದಗಳೆಲ್ಲ ಈಗ ಕೇಳಿ ಬರುತ್ತಿವೆ. ಉದರದೊಳಗೆ ಸೂಕ್ಷ್ಮಾಣು ಜೀವಿಗಳಿರುವುದು ಹೊಸ ವಿಷಯವೇನಾಗಿರಲಿಲ್ಲ, ವೈದ್ಯ ಲೋಕಕ್ಕೆ ತಿಳಿದಿದ್ದೇ. ಆದರೆ ಆ ಸೂಕ್ಷ್ಮ ಜೀವಿಗಳ ಸಂಕುಲ ನಮ್ಮ ಮೇಲೆ ಯಾವೆಲ್ಲ ವಿಷಯಗಳ ಮೇಲೆ ಎಷ್ಟು ಗಾಢವಾಗಿ ಪ್ರಭಾವ ಬೀರುತ್ತವೆ ಎಂಬ ವಿಷಯಗಳ ತಿಳಿವಳಿಕೆ ಮಾತ್ರ ಇತ್ತೀಚೆಗೆ ಹೆಚ್ಚಾಗಿದೆ. Gut health ಎಂಬುದು ಕೇವಲ ಕರುಳಿನ ಆರೋಗ್ಯಕ್ಕೆ ಸೇರಿದ್ದಲ್ಲ, ಸಂಪೂರ್ಣ ಜೀರ್ಣಾಂಗದ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಪ್ರಚುರಪಡಿಸಲಾಗುತ್ತದೆ. ಏನು ಹಾಗೆಂದರೆ?
ಜೀರ್ಣಾಂಗಗಳ ಬಗ್ಗೆ
ಇದರಲ್ಲಿ ಹೊಸ ಅಂಗವನ್ನೇನೂ ಸೇರಿಸಿಲ್ಲ ಸಂಶೋಧಕರು! ನಮ್ಮ ಬಾಯಿಯಿಂದ ತೊಡಗಿ ಕರುಳಿನ ತುದಿವರೆಗಿನ ಭಾಗವೆಲ್ಲ ಈ ಅಂಗದ ಭಾಗ. ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಲ್ಲಿ ಎನ್ನುವ ವಿಷಯವೇ ತಿಳಿದಿದ್ದೇ. ಇಡೀ ಜೀರ್ಣಾಂಗಗಳಲ್ಲಿ ಶತಕೋಟಿಗಟ್ಟಲೆ ಸೂಕ್ಷ್ಮಾಣು ಜೀವಿಗಳಿರುತ್ತವೆ. ಅದರರ್ಥ ಅಷ್ಟೊಂದು ರೋಗಾಣುಗಳಿರುತ್ತವೆ ಎಂದಲ್ಲ, ವೈರಸ್, ಬ್ಯಾಕ್ಟೀರಿಯಾ, ಫಂಗಸ್ ಮುಂತಾದ ತರಹೇವಾರಿ ಜೀವಿಗಳಿರುತ್ತವೆ. ಅವೆಲ್ಲವೂ ರೋಗ ತರಿಸುವಂಥವು ಎನ್ನಲಾಗದು. ಅವುಗಳಲ್ಲೂ ಒಳ್ಳೆಯ ಸೂಕ್ಷ್ಮಾಣು ಜೀವಿಗಳಿರುತ್ತವೆ. ವಿಷಯ ಇರುವುದೇ ಇಲ್ಲಿ.
ಏನೆಲ್ಲಾ ನಡೆಯುತ್ತದೆ?
ಕೇವಲ ಆಹಾರವನ್ನು ಜೀರ್ಣ ಮಾಡುವುದಷ್ಟೇ ಅಲ್ಲ, ನಮ್ಮ ಮೆದುಳಿನ ಕ್ಷಮತೆ, ಪ್ರತಿರೋಧಕ ಶಕ್ತಿಯಿಂದ ಹಿಡಿದು ಮಾರಕ ರೋಗಗಳನ್ನು ದೂರ ಮಾಡುವವರೆಗೆ ದೇಹದ ಬಹಳಷ್ಟು ಕೆಲಸಗಳಿಗೆ ಚೋದನೆ ದೊರೆಯುವುದು ನಮ್ಮ ಜೀರ್ಣಾಂಗಗಳಲ್ಲಿರುವ ಸೂಕ್ಷ್ಮಾಣು ಜೀವಿಗಳಿಂದ ಎನ್ನುತ್ತಾರೆ ಸಂಶೋಧಕರು. ನಮ್ಮ ರೋಗ ನಿರೋಧಕ ಶಕ್ತಿಯ ಉದ್ಭವ ಬಹುಪಾಲು ಆಗುವುದು ಹೊಟ್ಟೆಯಲ್ಲಿ. ನಮ್ಮ ಮೂಡ್ ನಿರ್ವಹಣೆಗೆ ಅಗತ್ಯವಾದ ಸೆರೊಟೋನಿನ್ ಚೋದಕದ ಹೆಚ್ಚಿನಾಂಶ ಉತ್ಪಾದನೆ ಆಗುವುದು ಜೀರ್ಣಾಂಗಗಳಲ್ಲಿ. ಹಾಗಾಗಿ ನಮ್ಮ ಮಾನಸಿಕ ಒತ್ತಡ, ಹೆದರಿಕೆ, ತಳಮಳ ಮುಂತಾದ ಋಣಾತ್ಮಕ ಮಾನಸಿಕ ಸ್ಥಿತಿಗೂ ರೋಗ ಪ್ರತಿರೋಧಕ ಶಕ್ತಿಗೂ ಗಾಢವಾದ ನಂಟಿದೆ ಎಂಬುದನ್ನು ವಿಜ್ಞಾನ ಅನುಮಾನಕ್ಕೆ ಎಡೆಯಿಲ್ಲದಂತೆ ಒಪ್ಪುತ್ತದೆ.
ಇನ್ನೊಂದು ಮೆದುಳು!
ಹೌಹಾರಬೇಡಿ, ದೇಹಕ್ಕಿರುವುದು ನಿಜಕ್ಕೂ ಒಂದೇ ಮೆದುಳು. ಆದರೆ ನಮ್ಮ ಜೀರ್ಣಾಂಗವನ್ನು ʻಇನ್ನೊಂದು ಮೆದುಳುʼ ಎಂಬಂತೆ ಪರಿಗಣಿಸಲಾಗುತ್ತಿದೆ. ಜೀರ್ಣಾಂಗಗಳು, ಯಕೃತ್ ಮತ್ತು ಮೆದುಳಿಗಿರುವ ನಂಟು ಅಷ್ಟೊಂದು ಗಾಢವಾದದ್ದು. ಸರಳವಾಗಿ ಹೇಳುವುದಾದರೆ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಂತೆ, ಮೆದುಳಿಗೆ ಮತ್ತು ಯಕೃತ್‌ಗೆ ರವಾನೆಯಾಗುವ ಸಂದೇಶವೂ ಅದಕ್ಕೆ ತಕ್ಕನಾಗಿರುತ್ತದೆ. ಒಳ್ಳೆಯ ಆಹಾರಗಳು ಬೇಕು, ಸಂತೋಷದಾಯಕ ಕೆಲಸಗಳಲ್ಲಿ ತೊಡಗಬೇಕು ಮುಂತಾದ ಯೋಚನೆಗಳು ಮೆದುಳಿನಲ್ಲಿ ಪ್ರಚೋದನೆಯಾಗುತ್ತವೆ. ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಾದಾಗ ಜಂಕ್ ತಿನ್ನಬೇಕು, ಯಾಕೋ ಬೋರು… ಇಂಥವೇ ತಲೆಗೆ ಬರುವುದು! ಅಧ್ಯಯನಗಳಿಂದ ದೃಢಪಟ್ಟ ಅಂಶಗಳಿವು. ಹಾಗಾಗಿಯೇ ಜೀರ್ಣಾಂಗಗಳನ್ನು ಇನ್ನೊಂದು ಮೆದುಳು ಎಂದು ಕರೆಯುವುದು.
ಸಮತೋಲನ ಅಗತ್ಯ
ಹೊಟ್ಟೆಯಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ದೇಹದ ಒಟ್ಟಾರೆ ಸ್ವಾಸ್ಥ್ಯದ ದೃಷ್ಟಿಯಿಂದ ಅತಿ ಮುಖ್ಯ. ಕೆಟ್ಟ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚುವುದನ್ನು ಅಥವಾ ಸೂಕ್ಷ್ಮಾಣುಗಳ ಅಸಮತೋಲನವನ್ನು ಡಿಸ್‌ಬಯೊಸಿಸ್ ಎಂದು ಕರೆಯಲಾಗುತ್ತದೆ. ಇದರ ಆರಂಭಿಕ ಹಂತದಲ್ಲಿ ಜೀರ್ಣ ಸಂಬಂಧಿ ತೊಂದರೆಗಳು ಮಾತ್ರವೇ ಕಾಣುತ್ತವೆ. ಅಂದರೆ ಅಜೀರ್ಣ, ಹೊಟ್ಟೆಯುಬ್ಬರ ಮುಂತಾದವು. ಕ್ರಮೇಣ ಚಯಾಪಚಯ ವ್ಯತ್ಯಾಸವಾಗಿ ತೂಕ ಹೆಚ್ಚುವುದು, ಕೊಲೆಸ್ಟ್ರಾಲ್ ಜಮೆಯಾಗುವುದು, ಮಧುಮೇಹದಂಥ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಉರಿಯೂತ ಹೆಚ್ಚಿ ಬರಬಾರದ ರೋಗಗಳೆಲ್ಲ ಬಾಗಿಲು ತಟ್ಟುತ್ತವೆ. ಇನ್ನೊಂದೆಡೆ, ಮನಸ್ಸಿನ ಒತ್ತಡವೂ ಹೆಚ್ಚಿ, ತುದಿ-ಮೊದಲಿಲ್ಲದಷ್ಟು ದೈಹಿಕ ಸಮಸ್ಯೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಹೊಟ್ಟೆಯ ಸೂಕ್ಷ್ಮಾಣು ಜೀವಿಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ.
ಆದರೆ ಹೇಗೆ?
ಇದು ಮುಂದಿನ ಪ್ರಶ್ನೆ. ತಿನ್ನುವ ಆಹಾರದ ಬಗ್ಗೆ ಗಮನ ನೀಡಿ. ಶುದ್ಧವಾದ ತಾಜಾ ಆಹಾರಗಳು ಬೇಕು ನಮ್ಮ ಹೊಟ್ಟೆಯ ಕ್ಷೇಮಕ್ಕೆ. ನಾರು ಸಾಕಷ್ಟಿದ್ದರೆ, ಖನಿಜಗಳು ಮತ್ತು ಜೀವಸತ್ವಗಳು ಬೇಕಷ್ಟಿದ್ದರೆ ಒಳ್ಳೆಯ ಸೂಕ್ಷ್ಮಾಣುಗಳಿಗೆ ಗ್ರಾಸ ನೀಡಿದಂತೆ. ಸಹಜವಾಗಿ ಅವುಗಳ ಸಂಖ್ಯೆ ವೃದ್ಧಿಸುತ್ತದೆ. ಮೊಳಕೆ ಕಾಳುಗಳು ಮತ್ತು ಹಣ್ಣು-ತರಕಾರಿಗಳನ್ನು ಸೂಕ್ಷ್ಮಾಣುಗಳಿಗೆ ನೈವೇದ್ಯಕ್ಕೆ ನೀಡಿ. ಹುದುಗು ಬಂದಂಥ ಮೊಸರು, ಮಜ್ಜಿಗೆಯಂಥ ಪ್ರೊಬಯಾಟಿಕ್ ಆಹಾರಗಳು ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ. ಒತ್ತಡ ಕಡಿಮೆ ಮಾಡುವ ಕ್ರಮಗಳತ್ತ ಗಮನ ಕೊಡಿ. ಅವುಗಳಲ್ಲಿ ಕಣ್ತುಂಬ ನಿದ್ದೆ ಮಾಡುವುದೂ ಸೇರಿದೆ. ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಂತೆ, ಕೆಟ್ಟವು ಸಂಖ್ಯೆ ನೈಸರ್ಗಿಕವಾಗಿ ಕ್ಷೀಣಿಸುತ್ತದೆ. ಇಂಥ ಕ್ರಮಗಳಿಂದ ದೇಹ-ಮನಸ್ಸುಗಳು ಸ್ವಾಸ್ಥ್ಯ ಸಾಧಿಸುವುದಕ್ಕೆ ಸಾಧ್ಯವಿದೆ.
ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು