Gut Microbiome: ಹೊಟ್ಟೆಯ ಸೂಕ್ಷ್ಮಾಣು ಜೀವಿಗಳ ಬಗ್ಗೆ ನಮಗೆಷ್ಟು ಗೊತ್ತು? - Vistara News

ಆರೋಗ್ಯ

Gut Microbiome: ಹೊಟ್ಟೆಯ ಸೂಕ್ಷ್ಮಾಣು ಜೀವಿಗಳ ಬಗ್ಗೆ ನಮಗೆಷ್ಟು ಗೊತ್ತು?

ನಮ್ಮ ಉದರದೊಳಗೆ ಸೂಕ್ಷ್ಮಾಣು ಜೀವಿಗಳಿರುವುದು ಹೊಸ ವಿಷಯವೇನಾಗಿರಲಿಲ್ಲ, ವೈದ್ಯ ಲೋಕಕ್ಕೆ ತಿಳಿದಿದ್ದೇ. ಆದರೆ ಆ ಸೂಕ್ಷ್ಮ ಜೀವಿಗಳ ಸಂಕುಲ (gut microbiome) ನಮ್ಮ ಮೇಲೆ ಯಾವೆಲ್ಲ ವಿಷಯಗಳ ಮೇಲೆ ಎಷ್ಟು ಗಾಢವಾಗಿ ಪ್ರಭಾವ ಬೀರುತ್ತವೆ ಎಂಬ ವಿಷಯಗಳ ತಿಳಿವಳಿಕೆ ಮಾತ್ರ ಇತ್ತೀಚೆಗೆ ಹೆಚ್ಚಾಗಿದೆ.

VISTARANEWS.COM


on

Gut Microbiome
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಜೀರ್ಣಾಂಗಗಳ ಆರೋಗ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಎಂದಿಗಿಂತ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲೂ (gut microbiome) ಅಥವಾ ʻgut healthʼ ಎನ್ನುವ ಪದ ಆಗಾಗ ಕೇಳಿ ಬರುತ್ತದೆ. ಏನು ಹೀಗೆಂದರೆ? ಇಷ್ಟು ವರ್ಷಗಳಲ್ಲಿ ಇಲ್ಲದ್ದು ಈಗ ನಮ್ಮೆಲ್ಲರ ಜೀರ್ಣಾಂಗಗಳಲ್ಲಿ ಸೇರಿಕೊಂಡಿತೇ? ಮೊದಲು ಇರಲಿಲ್ಲವೇ? ಮುಂತಾದ ಹತ್ತಾರು ಪ್ರಶ್ನೆಗಳು ಬರಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ.
ನಮ್ಮ ಜೀರ್ಣಾಂಗಗಳ ಬಗ್ಗೆ ಈವರೆಗೆ ತಿಳಿದಿದ್ದಕ್ಕಿಂತ ಹೆಚ್ಚಿನ ವಿಷಯಗಳನ್ನು ಸಂಶೋಧನೆಗಳು ಇತ್ತೀಚೆಗೆ ಹೊರಹಾಕುತ್ತಿರುವುದರಿಂದ ಮೈಕ್ರೊಬಯೋಮ್‌ ಎಂಬ ಪದಗಳೆಲ್ಲ ಈಗ ಕೇಳಿ ಬರುತ್ತಿವೆ. ಉದರದೊಳಗೆ ಸೂಕ್ಷ್ಮಾಣು ಜೀವಿಗಳಿರುವುದು ಹೊಸ ವಿಷಯವೇನಾಗಿರಲಿಲ್ಲ, ವೈದ್ಯ ಲೋಕಕ್ಕೆ ತಿಳಿದಿದ್ದೇ. ಆದರೆ ಆ ಸೂಕ್ಷ್ಮ ಜೀವಿಗಳ ಸಂಕುಲ ನಮ್ಮ ಮೇಲೆ ಯಾವೆಲ್ಲ ವಿಷಯಗಳ ಮೇಲೆ ಎಷ್ಟು ಗಾಢವಾಗಿ ಪ್ರಭಾವ ಬೀರುತ್ತವೆ ಎಂಬ ವಿಷಯಗಳ ತಿಳಿವಳಿಕೆ ಮಾತ್ರ ಇತ್ತೀಚೆಗೆ ಹೆಚ್ಚಾಗಿದೆ. Gut health ಎಂಬುದು ಕೇವಲ ಕರುಳಿನ ಆರೋಗ್ಯಕ್ಕೆ ಸೇರಿದ್ದಲ್ಲ, ಸಂಪೂರ್ಣ ಜೀರ್ಣಾಂಗದ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಪ್ರಚುರಪಡಿಸಲಾಗುತ್ತದೆ. ಏನು ಹಾಗೆಂದರೆ?

healthy internal organs of human digestive system

ಜೀರ್ಣಾಂಗಗಳ ಬಗ್ಗೆ

ಇದರಲ್ಲಿ ಹೊಸ ಅಂಗವನ್ನೇನೂ ಸೇರಿಸಿಲ್ಲ ಸಂಶೋಧಕರು! ನಮ್ಮ ಬಾಯಿಯಿಂದ ತೊಡಗಿ ಕರುಳಿನ ತುದಿವರೆಗಿನ ಭಾಗವೆಲ್ಲ ಈ ಅಂಗದ ಭಾಗ. ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಲ್ಲಿ ಎನ್ನುವ ವಿಷಯವೇ ತಿಳಿದಿದ್ದೇ. ಇಡೀ ಜೀರ್ಣಾಂಗಗಳಲ್ಲಿ ಶತಕೋಟಿಗಟ್ಟಲೆ ಸೂಕ್ಷ್ಮಾಣು ಜೀವಿಗಳಿರುತ್ತವೆ. ಅದರರ್ಥ ಅಷ್ಟೊಂದು ರೋಗಾಣುಗಳಿರುತ್ತವೆ ಎಂದಲ್ಲ, ವೈರಸ್‌, ಬ್ಯಾಕ್ಟೀರಿಯಾ, ಫಂಗಸ್‌ ಮುಂತಾದ ತರಹೇವಾರಿ ಜೀವಿಗಳಿರುತ್ತವೆ. ಅವೆಲ್ಲವೂ ರೋಗ ತರಿಸುವಂಥವು ಎನ್ನಲಾಗದು. ಅವುಗಳಲ್ಲೂ ಒಳ್ಳೆಯ ಸೂಕ್ಷ್ಮಾಣು ಜೀವಿಗಳಿರುತ್ತವೆ. ವಿಷಯ ಇರುವುದೇ ಇಲ್ಲಿ.

ಏನೆಲ್ಲಾ ನಡೆಯುತ್ತದೆ?

ಕೇವಲ ಆಹಾರವನ್ನು ಜೀರ್ಣ ಮಾಡುವುದಷ್ಟೇ ಅಲ್ಲ, ನಮ್ಮ ಮೆದುಳಿನ ಕ್ಷಮತೆ, ಪ್ರತಿರೋಧಕ ಶಕ್ತಿಯಿಂದ ಹಿಡಿದು ಮಾರಕ ರೋಗಗಳನ್ನು ದೂರ ಮಾಡುವವರೆಗೆ ದೇಹದ ಬಹಳಷ್ಟು ಕೆಲಸಗಳಿಗೆ ಚೋದನೆ ದೊರೆಯುವುದು ನಮ್ಮ ಜೀರ್ಣಾಂಗಗಳಲ್ಲಿರುವ ಸೂಕ್ಷ್ಮಾಣು ಜೀವಿಗಳಿಂದ ಎನ್ನುತ್ತಾರೆ ಸಂಶೋಧಕರು. ನಮ್ಮ ರೋಗ ನಿರೋಧಕ ಶಕ್ತಿಯ ಉದ್ಭವ ಬಹುಪಾಲು ಆಗುವುದು ಹೊಟ್ಟೆಯಲ್ಲಿ. ನಮ್ಮ ಮೂಡ್‌ ನಿರ್ವಹಣೆಗೆ ಅಗತ್ಯವಾದ ಸೆರೊಟೋನಿನ್‌ ಚೋದಕದ ಹೆಚ್ಚಿನಾಂಶ ಉತ್ಪಾದನೆ ಆಗುವುದು ಜೀರ್ಣಾಂಗಗಳಲ್ಲಿ. ಹಾಗಾಗಿ ನಮ್ಮ ಮಾನಸಿಕ ಒತ್ತಡ, ಹೆದರಿಕೆ, ತಳಮಳ ಮುಂತಾದ ಋಣಾತ್ಮಕ ಮಾನಸಿಕ ಸ್ಥಿತಿಗೂ ರೋಗ ಪ್ರತಿರೋಧಕ ಶಕ್ತಿಗೂ ಗಾಢವಾದ ನಂಟಿದೆ ಎಂಬುದನ್ನು ವಿಜ್ಞಾನ ಅನುಮಾನಕ್ಕೆ ಎಡೆಯಿಲ್ಲದಂತೆ ಒಪ್ಪುತ್ತದೆ.

Cognitive Health Turmeric Tea Benefits

ಇನ್ನೊಂದು ಮೆದುಳು!

ಹೌಹಾರಬೇಡಿ, ದೇಹಕ್ಕಿರುವುದು ನಿಜಕ್ಕೂ ಒಂದೇ ಮೆದುಳು. ಆದರೆ ನಮ್ಮ ಜೀರ್ಣಾಂಗವನ್ನು ʻಇನ್ನೊಂದು ಮೆದುಳುʼ ಎಂಬಂತೆ ಪರಿಗಣಿಸಲಾಗುತ್ತಿದೆ. ಜೀರ್ಣಾಂಗಗಳು, ಯಕೃತ್‌ ಮತ್ತು ಮೆದುಳಿಗಿರುವ ನಂಟು ಅಷ್ಟೊಂದು ಗಾಢವಾದದ್ದು. ಸರಳವಾಗಿ ಹೇಳುವುದಾದರೆ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಂತೆ, ಮೆದುಳಿಗೆ ಮತ್ತು ಯಕೃತ್‌ಗೆ ರವಾನೆಯಾಗುವ ಸಂದೇಶವೂ ಅದಕ್ಕೆ ತಕ್ಕನಾಗಿರುತ್ತದೆ. ಒಳ್ಳೆಯ ಆಹಾರಗಳು ಬೇಕು, ಸಂತೋಷದಾಯಕ ಕೆಲಸಗಳಲ್ಲಿ ತೊಡಗಬೇಕು ಮುಂತಾದ ಯೋಚನೆಗಳು ಮೆದುಳಿನಲ್ಲಿ ಪ್ರಚೋದನೆಯಾಗುತ್ತವೆ. ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಾದಾಗ ಜಂಕ್‌ ತಿನ್ನಬೇಕು, ಯಾಕೋ ಬೋರು… ಇಂಥವೇ ತಲೆಗೆ ಬರುವುದು! ಅಧ್ಯಯನಗಳಿಂದ ದೃಢಪಟ್ಟ ಅಂಶಗಳಿವು. ಹಾಗಾಗಿಯೇ ಜೀರ್ಣಾಂಗಗಳನ್ನು ಇನ್ನೊಂದು ಮೆದುಳು ಎಂದು ಕರೆಯುವುದು.

ಸಮತೋಲನ ಅಗತ್ಯ

ಹೊಟ್ಟೆಯಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ದೇಹದ ಒಟ್ಟಾರೆ ಸ್ವಾಸ್ಥ್ಯದ ದೃಷ್ಟಿಯಿಂದ ಅತಿ ಮುಖ್ಯ. ಕೆಟ್ಟ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚುವುದನ್ನು ಅಥವಾ ಸೂಕ್ಷ್ಮಾಣುಗಳ ಅಸಮತೋಲನವನ್ನು ಡಿಸ್‌ಬಯೊಸಿಸ್‌ ಎಂದು ಕರೆಯಲಾಗುತ್ತದೆ. ಇದರ ಆರಂಭಿಕ ಹಂತದಲ್ಲಿ ಜೀರ್ಣ ಸಂಬಂಧಿ ತೊಂದರೆಗಳು ಮಾತ್ರವೇ ಕಾಣುತ್ತವೆ. ಅಂದರೆ ಅಜೀರ್ಣ, ಹೊಟ್ಟೆಯುಬ್ಬರ ಮುಂತಾದವು. ಕ್ರಮೇಣ ಚಯಾಪಚಯ ವ್ಯತ್ಯಾಸವಾಗಿ ತೂಕ ಹೆಚ್ಚುವುದು, ಕೊಲೆಸ್ಟ್ರಾಲ್‌ ಜಮೆಯಾಗುವುದು, ಮಧುಮೇಹದಂಥ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಉರಿಯೂತ ಹೆಚ್ಚಿ ಬರಬಾರದ ರೋಗಗಳೆಲ್ಲ ಬಾಗಿಲು ತಟ್ಟುತ್ತವೆ. ಇನ್ನೊಂದೆಡೆ, ಮನಸ್ಸಿನ ಒತ್ತಡವೂ ಹೆಚ್ಚಿ, ತುದಿ-ಮೊದಲಿಲ್ಲದಷ್ಟು ದೈಹಿಕ ಸಮಸ್ಯೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಹೊಟ್ಟೆಯ ಸೂಕ್ಷ್ಮಾಣು ಜೀವಿಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯ.

Microbiome intestine factories and microbiota

ಆದರೆ ಹೇಗೆ?

ಇದು ಮುಂದಿನ ಪ್ರಶ್ನೆ. ತಿನ್ನುವ ಆಹಾರದ ಬಗ್ಗೆ ಗಮನ ನೀಡಿ. ಶುದ್ಧವಾದ ತಾಜಾ ಆಹಾರಗಳು ಬೇಕು ನಮ್ಮ ಹೊಟ್ಟೆಯ ಕ್ಷೇಮಕ್ಕೆ. ನಾರು ಸಾಕಷ್ಟಿದ್ದರೆ, ಖನಿಜಗಳು ಮತ್ತು ಜೀವಸತ್ವಗಳು ಬೇಕಷ್ಟಿದ್ದರೆ ಒಳ್ಳೆಯ ಸೂಕ್ಷ್ಮಾಣುಗಳಿಗೆ ಗ್ರಾಸ ನೀಡಿದಂತೆ. ಸಹಜವಾಗಿ ಅವುಗಳ ಸಂಖ್ಯೆ ವೃದ್ಧಿಸುತ್ತದೆ. ಮೊಳಕೆ ಕಾಳುಗಳು ಮತ್ತು ಹಣ್ಣು-ತರಕಾರಿಗಳನ್ನು ಸೂಕ್ಷ್ಮಾಣುಗಳಿಗೆ ನೈವೇದ್ಯಕ್ಕೆ ನೀಡಿ. ಹುದುಗು ಬಂದಂಥ ಮೊಸರು, ಮಜ್ಜಿಗೆಯಂಥ ಪ್ರೊಬಯಾಟಿಕ್‌ ಆಹಾರಗಳು ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ. ಒತ್ತಡ ಕಡಿಮೆ ಮಾಡುವ ಕ್ರಮಗಳತ್ತ ಗಮನ ಕೊಡಿ. ಅವುಗಳಲ್ಲಿ ಕಣ್ತುಂಬ ನಿದ್ದೆ ಮಾಡುವುದೂ ಸೇರಿದೆ. ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಂತೆ, ಕೆಟ್ಟವು ಸಂಖ್ಯೆ ನೈಸರ್ಗಿಕವಾಗಿ ಕ್ಷೀಣಿಸುತ್ತದೆ. ಇಂಥ ಕ್ರಮಗಳಿಂದ ದೇಹ-ಮನಸ್ಸುಗಳು ಸ್ವಾಸ್ಥ್ಯ ಸಾಧಿಸುವುದಕ್ಕೆ ಸಾಧ್ಯವಿದೆ.

ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Shikakai For Hair: ಕೂದಲಿನ ಪೋಷಣೆಗೆ ಶ್ಯಾಂಪು ಒಳ್ಳೆಯದೋ ಸೀಗೆಕಾಯಿ ಒಳ್ಳೆಯದೋ?

Shikakai For Hair: ʻಎಣ್ಣೆ-ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ಸಾಕು ಸ್ವಚ್ಛತೆಯಲ್ಲಿ ಸೀಗೆಕಾಯಿಯ ಸಾಮರ್ಥ್ಯ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ. ಕೂದಲಿನ ಆರೈಕೆಯಲ್ಲಿ ಶತಮಾನಗಳಿಂದ ಇದು ಪ್ರಮಾಣೀಕೃತಗೊಂಡಿದೆ. ಆದರೆ ಕೂದಲಿಗೆ ಬೇಕಾದಂಥ ಒಳ್ಳೆಯ ಸತ್ವಗಳು ಏನಿವೆ ಸೀಗೆಕಾಯಿಯಲ್ಲಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Shikakai For Hair
Koo

ಹಳೆಯ ಕಾಲದಿಂದಲೂ ತಲೆಗೂದಲ ಆರೈಕೆಗೆ ಸೀಗೆಕಾಯಿ ಅಥವಾ ಶಿಕಾಕಾಯಿ ಬಳಕೆಯಲ್ಲಿದೆ. ಈಗಿನಂತೆ ಕಡಿಮೆ ಜಿಡ್ಡಿನ ಎಣ್ಣೆಗಳು ಇಲ್ಲದ ಕಾಲದಲ್ಲಿ, ದಿನವೂ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಲೇಪಿಸುತ್ತಿದ್ದ ಕಾಲದಲ್ಲಿ ತಲೆಯ ಸ್ವಚ್ಛತೆಯ ಹೊಣೆಯನ್ನು ಶತಮಾನಗಳ ಕಾಲ ನಿರ್ವಹಿಸಿದ್ದು ಸೀಗೆಕಾಯಿಯೆ. ಯಾವುದೇ ಜಾಹೀರಾತುಗಳ ಪ್ರಚಾರವಿಲ್ಲದೆ, ಬಣ್ಣದ ಪ್ಯಾಕಿಂಗ್‌ಗಳ ಅಬ್ಬರವಿಲ್ಲದೆ ಅಜ್ಜಿ-ಅಮ್ಮಂದಿರು ತುಂಬಿಡುತ್ತಿದ್ದ ಡಬ್ಬಿಗಳಿಂದ ನೇರವಾಗಿ ತರಳೆಯರ ಹೆರಳನ್ನು ಶುಚಿ ಮಾಡಿ, ಕೇಶರಾಶಿಯನ್ನು ಆರೋಗ್ಯವಾಗಿ ಇರಿಸುತ್ತಿತ್ತು. ಬ್ಯಾಕ್ಟೀರಿಯ ವಿರೋಧಿ, ಫಂಗಸ್‌ ನಿರೋಧಕ ಸಾಮರ್ಥ್ಯವಿರುವ ಇದು ಉರಿಯೂತ ಶಾಮಕ ಗುಣವನ್ನು ಸಹ ಹೊಂದಿಗೆ. ಹಾಗಾಗಿ ತಲೆಯ ಚರ್ಮವನ್ನು ತುರಿಕೆ, ಹೊಟ್ಟು, ಸೋಂಕುಗಳಿಂದ ಮುಕ್ತವಾಗಿರಿಸುವುದಕ್ಕೆ ಸೀಗೆಕಾಯಿಗೆ ಸಾಧ್ಯ. ಇನ್ನೂ ಏನೆಲ್ಲಾ ಗುಣಗಳಿವೆ ಇದರಲ್ಲಿ ಕೇಶಗಳ ಆರೈಕೆಗೆ ಬೇಕಾಗುವಂಥದ್ದು.

Shikakai

ಸ್ವಚ್ಛತೆಯಲ್ಲಿ ಮುಂದೆ

ʻಎಣ್ಣೆ ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ನಮಗೆ ಇದರ ಸ್ವಚ್ಛತೆಯ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣಪತ್ರದಂತಿದೆ. ವಾತಾವರಣದ ಧೂಳು, ಮಣ್ಣು, ಹೊಗೆಯಂಥ ಕೊಳೆಗಳನ್ನು ನಾಜೂಕಾಗಿಯೇ ಸ್ವಚ್ಛಗೊಳಿಸುವ ಕ್ಷಮತೆ ಇದರದ್ದು. ತಲೆಯ ಚರ್ಮದ ನೈಸರ್ಗಿಕ ತೈಲದಂಶವನ್ನು ತೆಗೆಯದಂತೆ, ಕೊಳೆಯನ್ನಷ್ಟೇ ತೆಗೆದು ಕೂದಲಿಗೆ ಸ್ವಚ್ಛ ಮತ್ತು ತಾಜಾ ಅನುಭವ ನೀಡುತ್ತದೆ.

ಕೇಶವರ್ಧನೆ

ಕೂದಲಿನ ಬೆಳವಣಿಗೆಗೆ ಸೀಗೆಕಾಯಿ ನೆರವು ನೀಡುತ್ತದೆ. ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವದ ಅಂಶಗಳು ಇದರಲ್ಲಿವೆ. ಇವುಗಳು ಕೂದಲಿನ ಬುಡವನ್ನು ಬಿಗಿ ಮಾಡಿ, ಕೂದಲೆಳೆಗಳನ್ನು ಸುದೃಢಗೊಳಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಷ್ಟು ಅಲ್ಲದಿದ್ದರೂ, ಆರೋಗ್ಯಕರವಾದ ಉದ್ದ ಕೂದಲನ್ನಂತೂ ಹೊಂದಬಹುದು.

dandruff remedies

ಹೊಟ್ಟು ನಿವಾರಣೆ

ಒಮ್ಮೆ ತಲೆ ಹೊಟ್ಟಿನ ಸಮಸ್ಯೆ ಪ್ರಾರಂಭವಾದರೆ, ಅದರಿಂದ ಪಾರಾಗುವುದಕ್ಕೆ ಏನೇನೋ ಒದ್ದಾಟಗಳನ್ನು ಮಾಡಬೇಕಾಗುತ್ತದೆ. ಹೊಟ್ಟು ಹೋಗಿಸುವಂಥ ಹತ್ತಾರು ಶಾಂಪೂಗಳನ್ನು ಬಳಸುತ್ತೇವೆ. ಕೆಲವೊಮ್ಮೆ ವೈದ್ಯರ ಬಳಿ ಔಷಧಿಯನ್ನೂ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ಇಷ್ಟಾಗಿ ಹೊಟ್ಟು ದೂರ ಮಾಡಲು ಆಗದೇ ಇರಬಹುದು. ಆದರೆ ಫಂಗಸ್‌ ವಿರೋಧಿ ಗುಣವನ್ನು ಹೊಂದಿರುವ ಸೀಗೆಕಾಯಿಯ ನಿಯಮಿತವಾದ ಬಳಕೆಯಿಂದ ಹೊಟ್ಟು ಕ್ರಮೇಣ ಮಾಯವಾಗುತ್ತದೆ.

ಕಂಡೀಶನರ್

ಸೀಗೆಕಾಯಿಯಲ್ಲಿರುವ ಸಪೋನಿನ್‌ ಎಂಬ ಅಂಶವು ಕೂದಲಿನ ಕಂಡೀಶನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೂದಲುಗಳ ಪಿಎಚ್‌ ಸಹ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯಾವುದೇ ರಾಸಾಯನಿಕವಿಲ್ಲದ ಈ ನೈಸರ್ಗಿಕ ಕಂಡೀಶನರ್‌ ಬಳಕೆಯಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತದೆ. ಇದರಿಂದ ಕೂದಲು ಒರಟಾಗಿ ಬಾಚುವಾಗ ತುಂಡಾಗುವುದನ್ನು ತಪ್ಪಿಸಬಹುದು.

Shikakai photo

ತುದಿ ಕವಲಿಲ್ಲ

ಕೂದಲಿಗೆ ಅಗತ್ಯ ಪೋಷಣೆ ದೊರೆಯದಿದ್ದರೆ, ಕೇಶಗಳ ತುದಿ ಕವಲಾಗಬಹುದು. ಇದರಿಂದ ಕೂದಲು ನಿರ್ಜೀವವಾದಂತಾಗಿ, ತುಂಡಾಗುತ್ತವೆ. ಸೀಗೆಕಾಯಿಯ ಬಳಕೆಯಿಂದ ಕೂದಲಿಗೆ ಸೂಕ್ತ ಆರೈಕೆ ದೊರೆತು, ತುದಿ ಸೀಳಿದಂತಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲೆಳೆಗಳು ದಪ್ಪವಾಗಿಯೂ ಬೆಳೆದು, ಕೂದಲಿನ ಒಟ್ಟಾರೆ ಗಾತ್ರ ಹೆಚ್ಚುತ್ತದೆ.

ಎಲ್ಲರಿಗೂ ಸೂಕ್ತ

ರಾಸಾಯನಿಕ ಭರಿತ ಶಾಂಪೂ ಮತ್ತು ಕಂಡೀಶನರ್‌ಗಳು ಎಲ್ಲ ರೀತಿಯ ಚರ್ಮ ಮತ್ತು ಕೂದಲುಗಳಿಗೆ ಹೊಂದುವಂಥವಲ್ಲ. ಸೂಕ್ಷ್ಮ ಕೂದಲಿನವರು ಯಾವ ಶಾಂಪೂ ತಮಗೆ ಹೊಂದುತ್ತದೆ ಎಂಬ ಪ್ರಯೋಗದಲ್ಲಿಯೇ ಕೂದಲು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಸೌಮ್ಯ ಮತ್ತು ನೈಸರ್ಗಿಕವಾದ ಸೀಗೇಕಾಯಿ ಬಳಕೆಯಿಂದ ಇಂಥ ಸಮಸ್ಯೆಗಳಿಗೆ ಅವಕಾಶವಿಲ್ಲ.

ಇದನ್ನೂ ಓದಿ: Monsoon Health Tips: ಮಳೆಗಾಲದ ರೋಗಗಳಿಂದ ಪಾರಾಗುವುದು ಹೇಗೆ?

ಪರಿಸರ ಸ್ನೇಹಿ ಆಯ್ಕೆ

ಯಾವುದೇ ರಾಸಾಯನಿಕ, ಪ್ಲಾಸ್ಟಿಕ್‌ಗಳ ಹಾವಳಿಯಿಲ್ಲ ಸೀಗೆಕಾಯಿಯ ಬಳಕೆಯಲ್ಲಿ. ಪರಿಸರಕ್ಕೆ ಮಾರುಕವಾಗುವಂಥ ಯಾವುದೇ ಅಂಶ ಇದರಲ್ಲಿ ಇಲ್ಲ. ಇದನ್ನು ಬಳಸಿನ ನಂತರ ಉಳಿವಂಥ ಶೇಷವೆಲ್ಲ ವಾತಾವರಣದಲ್ಲಿ ಕರಗುವಂಥವು. ಹಾಗಾಗಿ ಕೂದಲಿನ ಸ್ವಚ್ಛತೆಗೆ ಅತ್ಯಂತ ಸೂಕ್ತವಾದ ಆಯ್ಕೆಯೆಂದರೆ ಸೀಗೆಕಾಯಿ.

Continue Reading

ಆರೋಗ್ಯ

Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Noodles Side Effect: ವ್ಯಸ್ತ ಬದುಕಿನ ಕಾರಣಕ್ಕೆ ಇನ್‌ಸ್ಟಂಟ್‌ ನೂಡಲ್‌ಗಳು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ಹಲವು ರೀತಿಯ ಆರೋಗ್ಯ ತೊಂದರೆಗಳನ್ನು ಇವು ತಂದಿಡಬಹುದು. ಅಪರೂಪಕ್ಕೆ ತಿಂದರೆ, ಜೀವಕ್ಕೆ ಅಪಾಯವಿಲ್ಲದಿದ್ದರೂ, ಇದೇ ಆಹಾರವಾದರೆ ಮಾತ್ರ ಅಪಾಯ ತಪ್ಪಿದ್ದಲ್ಲ. ಈ ಬಗ್ಗೆ ಎಚ್ಚರಿಸುವ ಲೇಖನ ಇದು.

VISTARANEWS.COM


on

Noodles Side Effect
Koo

ಸಮಯದ ಅಭಾವ ಇರುವಾಗ ಹೊಟ್ಟೆಯ ಗಲಾಟೆಯನ್ನು ತಣಿಸುವುದು ಕಷ್ಟದ ಕೆಲಸ ಎನಿಸುತ್ತದೆ. ಅದರಲ್ಲೂ ಹೊರಗಿನ ಆಹಾರ ಬೇಡ, ಮನೆಯದ್ದೇ ಇರಲಿ ಎನ್ನುವವರಿಗೆ ಹೊಟ್ಟೆ ತಾಳ ಹಾಕುವಾಗ ಬೇಯಿಸಿಕೊಳ್ಳುವುದಕ್ಕೆ ಸಮಯ ಇಲ್ಲದಿದ್ದರೆ ಅವಸ್ಥೆಯೇ ಸರಿ. ಇಂಥ ಹೊತ್ತಿಗೆಂದೇ ತ್ವರಿತವಾಗಿ ಸಿದ್ಧವಾಗುವ ಇನ್‌ಸ್ಟಂಟ್‌ ನೂಡಲ್‌ಗಳು ಅಡುಗೆಮನೆಯ ಕಪಾಟನ್ನು ಅಲಂಕರಿಸಿರುತ್ತವೆ. ಬೇಕಷ್ಟು ಪ್ಯಾಕೆಟ್‌ಗಳನ್ನು ತೆಗೆದು ಬಾಣಲೆಗೆ ಹಾಕಿದರಾಯ್ತು, ಮಸಾಲೆ ಸುರಿದರಾಯ್ತು, ನಿಮಿಷಗಳಲ್ಲಿ ಆಹಾರ ಸಿದ್ಧ. ಯಾವತ್ತೋ ಒಂದಿನ ಇಂಥವನ್ನು ಮಾಡಿದಾಗ ಆರೋಗ್ಯಕ್ಕೇನೂ ವ್ಯತ್ಯಾಸವಾಗದು. ಆದರೆ ಇನ್‌ಸ್ಟಂಟ್‌ ನೂಡಲ್‌ಗಳನ್ನು ಆಗಾಗ ತಿನ್ನುವ ಅಭ್ಯಾಸ ಇದೆ ಎಂದರೆ… ಈ ಲೇಖನ ನಿಮಗಾಗಿ! ವ್ಯಸ್ತ ಬದುಕು ಕಾರಣಕ್ಕೆ ಇದನ್ನು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ರೋಲ್‌ ಮಾಡಿದ ಓಟ್‌ಮೀಲ್‌ ಕುಕ್ಕರ್‌ಗೆ ಹಾಕಿದರೆ, ತನ್ನಷ್ಟಕ್ಕೆ ಬೆಂದುಕೊಳ್ಳುತ್ತದೆ. ಅದನ್ನು ತೆಗೆದು ಬೇಕಾದಂತೆ ಹಾಲು, ಹಣ್ಣು, ಜೇನುತುಪ್ಪ ಮುಂತಾದವನ್ನು ಸೇರಿಸಿ ಸೇವಿಸಿದರಾಯ್ತು. ಸ್ವಲ್ಪ ಗಮನ ನೀಡಿದರೆ, ಇಂಥ ಸರಳ ಮತ್ತು ಆರೋಗ್ಯಕರ ಆಯ್ಕೆಗಳು ನಮ್ಮ ಸುತ್ತ ಬಹಳಷ್ಟಿವೆ. ಇದಕ್ಕಾಗಿ ಇನ್‌ಸ್ಟಂಟ್‌ ನೂಡಲ್ಸ್‌ಗೇ ಮೊರೆ ಹೋಗಬೇಕೆಂದಿಲ್ಲ. ಇಂಥ ಸಂಸ್ಕರಿತ ಆಹಾರಗಳು ಆರೋಗ್ಯಕರವಲ್ಲ ಎಂದು ಹೇಳುವುದಕ್ಕೆ ಕಾರಣಗಳು ಒಂದೆರಡಲ್ಲ. ಏನು (Noodles Side Effect) ಕಾರಣಗಳವು?

Man Eats Instant Noodles at Home

ಸೋಡಿಯಂ ಅಧಿಕ

ಇನ್‌ಸ್ಟಂಟ್‌ ನೂಡಲ್‌ಗಳು ತಮ್ಮಲ್ಲಿರುವ ಸೋಡಿಯಂ ಪ್ರಮಾಣಕ್ಕಾಗಿ ಕುಖ್ಯಾತವಾಗಿವೆ. ಕೆಲವು ನೂಡಲ್‌ಗಳಂತೂ ಒಂದು ಸರ್ವಿಂಗ್‌ನಲ್ಲಿ ಇಡೀ ದಿನಕ್ಕೆ ನಾವು ತಿನ್ನಬಹುದಾದ ಸೋಡಿಯಂನ ಅರ್ಧ ಭಾಗದಷ್ಟನ್ನು ದೇಹಕ್ಕೆ ಸೇರಿಸಿಬಿಡುತ್ತವೆ. ಹೀಗೆ ಅತಿಯಾಗಿ ಸೋಡಿಯಂ ಅಥವಾ ಉಪ್ಪಿನಂಶವನ್ನು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯ ರೋಗಗಳು ಅಮರಿಕೊಳ್ಳುತ್ತವೆ, ಪಾರ್ಶ್ವವಾಯು ದಾಳಿ ಮಾಡುತ್ತದೆ. ಹಾಗಾಗಿ ಇನ್‌ಸ್ಟಂಟ್‌ ನೂಡಲ್‌ಗಳನ್ನು ಹೊಟ್ಟೆಗಿಳಿಸುವ ಮುನ್ನ ಈ ವಿಷಯಗಳ ಬಗ್ಗೆ ಗಮನ ಇರಲಿ.

ಸತ್ವಹೀನ

ಹೊಟ್ಟೆ ಹಸಿದಾಗ ಏನು ಸಿಕ್ಕರೂ ತಿನ್ನುವಂತೆನಿಸುವುದು ಸಹಜ. ಆ ಹೊತ್ತಿಗೆ ಇಂಥ ಗುಜರಿ ತಿಂಡಿಗಳು ಸಿಕ್ಕಿಬಿಟ್ಟರೆ ಕೆಲಸ ಕೆಟ್ಟಂತೆ. ಕಾರಣ, ಇನ್‌ಸ್ಟಂಟ್‌ ನೂಡಲ್‌ಗಳು ಕ್ಯಾಲರಿಯನ್ನೇನೋ ನೀಡುತ್ತವೆ; ಆದರೆ ಸತ್ವಗಳು ಇರುವುದಿಲ್ಲ. ಅಂದರೆ ಶರೀರಕ್ಕೆ ಬೇಕಾದಂಥ ಪ್ರೊಟೀನ್‌, ನಾರು, ಖನಿಜಗಳಂಥ ಒಳ್ಳೆಯ ಅಂಶಗಳೇನೂ ಇರುವುದಿಲ್ಲ ಇದರಲ್ಲಿ. ಬದಲಿಗೆ ಕೆಟ್ಟ ಕೊಬ್ಬುಗಳು ಮತ್ತು ಸಂಸ್ಕರಿತ ಪಿಷ್ಟ ಹೊಟ್ಟೆ ಸೇರಿತ್ತದೆ. ಸಾಲದೆಂಬಂತೆ ಕೃತಕ ಬಣ್ಣ, ರುಚಿಗಳೂ ಇದರಲ್ಲಿ ಸೇರಿರುತ್ತವೆ. ಹಾಗಾಗಿ ಇದನ್ನು ಸದಾ ತಿಂದರೆ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಾಗುವುದು ನಿಶ್ಚಿತ.

Instant noodles. Instant yakisoba

ಅನಾರೋಗ್ಯಕರ ಕೊಬ್ಬು

ಟ್ರಾನ್ಸ್‌ ಫ್ಯಾಟ್‌ ಮತ್ತು ಸ್ಯಾಚುರೇಟೆಡ್‌ ಫ್ಯಾಟ್‌ನಂಥ ಅನಾರೋಗ್ಯಕರ ಕೊಬ್ಬುಗಳು ಇದರಲ್ಲಿ ಭರಪೂರ ಇರಬಹುದು. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಜಮೆಯಾಗುವುದು ಸಹ ಅಧಿಕವಾಗುತ್ತದೆ. ಮೊದಲಿಗೆ ಈ ನೂಡಲ್‌ಗಳನ್ನು ಕರಿಯುವ ಸಂದರ್ಭದಲ್ಲಿ ಅಧಿಕ ಪ್ರಮಾಣದ ಎಣ್ಣೆಯನ್ನು ಇವು ಹೀರಿಕೊಂಡಿರುತ್ತವೆ. ನಂತರ ನಮ್ಮ ಅಡುಗೆ ಮನೆಗಳಲ್ಲಿ ನಿಮಿಷಗಳಲ್ಲಿ ಸಿದ್ಧ ಆಗುವಾಗ, ಆ ಕೊಬ್ಬಿನಂಶವೆಲ್ಲ ಸೇರುವುದು ನಮ್ಮ ಹೊಟ್ಟೆಯನ್ನೇ.

ಸಂರಕ್ಷಕಗಳು

ತಯಾರಿಕೆಯ ಹಂತದಲ್ಲೇ ಒಂದಿಷ್ಟು ಕೃತಕ ವಸ್ತುಗಳು ಇದಕ್ಕೆ ಸೇರ್ಪಡೆಯಾಗುತ್ತವೆ. ಕೃತಕವಾದ ಬಣ್ಣ, ರುಚಿ, ಘಮಗಳೆಲ್ಲ ಇದರಲ್ಲಿ ಸೇರಿವೆ. ಮಾತ್ರವಲ್ಲದೆ ಸಂರಕ್ಷಕಗಳೂ ಇದಕ್ಕೆ ಜೊತೆಯಾಗಿರುತ್ತವೆ. ಮಾನೊಸೋಡಿಯಂ ಗ್ಲೂಟಮೇಟ್‌ನಂಥ (ಎಂಎಸ್‌ಜಿ) ರಾಸಾಯನಿಕಗಳನ್ನು ಹೆಚ್ಚಿನ ನೂಡಲ್‌ಗಳಲ್ಲಿ ಸೇರಿಸಲಾಗುತ್ತದೆ. ಇಂಥ ಅಂಶಗಳು ದೇಹದಲ್ಲಿ ಸೇರಿದರೆ ತಲೆನೋವು, ಅಲರ್ಜಿಗಳು, ಜೀರ್ಣಾಂಗಗಳ ತೊಂದರೆಗಳು ಕಟ್ಟಿಟ್ಟಿದ್ದು.

Cholesterol Management Tips

ಜೀವಶೈಲಿಯ ಕಾಯಿಲೆಗಳು

ಸಂಸ್ಕರಿತ ಪಿಷ್ಟ, ಕೆಟ್ಟ ಕೊಬ್ಬು, ಅಧಿಕ ಸೋಡಿಯಂನಂಥ ಅಂಶಗಳು ದೇಹಕ್ಕೆ ಸೇರಿದರೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌, ಬೊಜ್ಜಿನಂಥ ಜೀವನಶೈಲಿಯ ಖಾಯಿಲೆಗಳು ಬೆನ್ನು ಬೀಳುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ದೇಹದ ಚಯಾಪಚಯವನ್ನೇ ಬುಡಮೇಲು ಮಾಡಿ, ಶರೀರವನ್ನು ರೋಗಗಳ ಗೂಡಾಗಿಸುತ್ತದೆ. ಹಾಗಾಗಿ ಬಾಯಿಗೆ ರುಚಿ ಎನಿಸುವ ಇನ್‌ಸ್ಟಂಟ್‌ ನೂಡಲ್‌ಗಳ ಬಗ್ಗೆ ಈ ಅರಿವು ಹೊಂದುವುದು ಅಗತ್ಯ.

Improves Digestion Karela Benefits

ಜೀರ್ಣಾಂಗಗಳ ಸಮಸ್ಯೆ

ನಾರು ಇಲ್ಲದಂಥ ಆಹಾರಗಳು ಜೀರ್ಣಾಂಗಗಳ ಸಂಕಷ್ಟವನ್ನು ಹೆಚ್ಚಿಸುತ್ತವೆ. ಅದರಲ್ಲೂ ಅತಿಯಾಗಿ ಸಂಸ್ಕರಿಸಿದ ತಿನಿಸುಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನೂ ಕೊಲ್ಲುತ್ತವೆ. ಇವೆಲ್ಲವುಗಳ ಫಲವಾಗಿ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ಕಿರಿಕಿರಿಗಳು ಹೆಚ್ಚುತ್ತವೆ. ಮಲಬದ್ಧತೆಯೂ ಕಾಡಬಹುದು. ಇವೆಲ್ಲವುಗಳಿಂದ ಜೀರ್ಣಾಂಗಗಳ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಇದರ ಬದಲಿಗೆ, ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಪ್ರೊಬಯಾಟಿಕ್‌ಗಳು ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತವೆ.

ಇದನ್ನೂ ಓದಿ: Night Sweats: ರಾತ್ರಿ ಇದ್ದಕ್ಕಿದ್ದಂತೆ ಮೈಬೆವರುವಷ್ಟು ಸೆಖೆ ಆಗುತ್ತದೆಯೆ? ಈ ಸಮಸ್ಯೆಗೆ ಇಲ್ಲಿದೆ ಉತ್ತರ

ಬೊಜ್ಜು

ಸತ್ವಗಳಿಲ್ಲದ ಖಾಲಿ ಕ್ಯಾಲರಿಗಳು ದೇಹವನ್ನು ನಿತ್ರಾಣದತ್ತ ದೂಡುತ್ತವೆ. ಹಾಗೆಂದು ಆ ವ್ಯಕ್ತಿ ಸಪೂರ ಕಡ್ಡಿಯಂತೇನೂ ಇರುವುದಿಲ್ಲ. ಸ್ಥೂಲಕಾಯವೇ ಇದ್ದರೂ, ನಿತ್ಯದ ಚಟುವಟಿಕೆಗೆ ಬೇಕಾದ ಚೈತನ್ಯ ಇರುವುದಿಲ್ಲ. ಇವೆಲ್ಲ ಕೆಟ್ಟ ಆಹಾರಕ್ರಮದ ಪರಿಣಾಮಗಳು. ಇನ್‌ಸ್ಟಂಟ್‌ ನೂಡಲ್‌ಗಳ ನಿಯಮಿತ ಸೇವನೆಯು ದೇಹದ ತೂಕವನ್ನು ಹೆಚ್ಚಿಸಿ, ದೇಹದಲ್ಲಿ ಬೊಜ್ಜು ತುಂಬಿಸುತ್ತದೆ. ಖಾಲಿ ಕ್ಯಾಲರಿಗಳು ಹಸಿವು ಹೆಚ್ಚಿಸುತ್ತವೆ. ಮತ್ತೆ ಇದನ್ನೇ ತಿನ್ನುತ್ತೀರಿ, ಹಸಿವು ತಣಿಯುವುದೇ ಇಲ್ಲ. ತೂಕ ಏರುತ್ತಲೇ ಹೋಗುತ್ತದೆ.

Continue Reading

ಆರೋಗ್ಯ

Night Sweats: ರಾತ್ರಿ ಇದ್ದಕ್ಕಿದ್ದಂತೆ ಮೈಬೆವರುವಷ್ಟು ಸೆಖೆ ಆಗುತ್ತದೆಯೆ? ಈ ಸಮಸ್ಯೆಗೆ ಇಲ್ಲಿದೆ ಉತ್ತರ

Night Sweats: ಹಾರ್ಮೋನಿನ ಏರುಪೇರು, ಮೆನೋಪಾಸ್‌ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳೂ ಈ ಸೆಖೆಯ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ನಮ್ಮ ಪ್ರಕೃತಿಯಲ್ಲಿ ಎಂತಹ ಶಕ್ತಿಯಿದೆ ಎಂದರೆ, ಇಂತಹ ಎಷ್ಟೋ ಸಮಸ್ಯೆಗಳಿಗೆ ನಿಸರ್ಗದಲ್ಲೇ ಉತ್ತರವಿದೆ. ನಮ್ಮ ಭಾರತೀಯ ಆಯುರ್ವೇದ ಪದ್ಧತಿಯು ಈ ನಿಸರ್ಗದ ಶಕ್ತಿಯನ್ನು ಧಾರೆಯೆರೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Sweating Sickness
Koo

ಕೆಲವರಿಗೆ ದೇಹ ಪ್ರಕೃತಿಯಿಂದಲೋ ಅಥವಾ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿಯೋ ಸೆಖೆ ಹೆಚ್ಚು. ಸೆಖೆಗಾಲವಲ್ಲದಿದ್ದರೂ, ನಡುರಾತ್ರಿ ಇದ್ದಕ್ಕಿದ್ದಂತೆ ಮೈ ಬೆವರುವುದು, ಮೈ ಬಿಸಿಯಾದಂತಾಗುವುದು, ಚಂದನೆಯ ಮಳೆಯ ಸಂಜೆಯಲ್ಲೂ, ಅಯ್ಯೋ ಸೆಖೆ ಎನ್ನುವಂತಾಗುವುದು ಇರುತ್ತವೆ. ಯಾವಾಗಲೂ ಅಲ್ಲದಿದ್ದರೂ, ಆಗಾಗ ಈ ಸಮಸ್ಯೆ (Night Sweats) ಕೆಲವರನ್ನು ಬಹಳವಾಗಿ ಕಾಡುತ್ತದೆ. ಹಾರ್ಮೋನಿನ ಏರುಪೇರು, ಮೆನೋಪಾಸ್‌ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳೂ ಈ ಸೆಖೆಯ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ನಮ್ಮ ಪ್ರಕೃತಿಯಲ್ಲಿ ಎಂತಹ ಶಕ್ತಿಯಿದೆ ಎಂದರೆ, ಇಂತಹ ಎಷ್ಟೋ ಸಮಸ್ಯೆಗಳಿಗೆ ನಿಸರ್ಗದಲ್ಲೇ ಉತ್ತರವಿದೆ. ನಮ್ಮ ಭಾರತೀಯ ಆಯುರ್ವೇದ ಪದ್ಧತಿಯು ಈ ನಿಸರ್ಗದ ಶಕ್ತಿಯನ್ನು ಧಾರೆಯೆರೆಯುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತದೆ. ಈ ಇದ್ದಕ್ಕಿದ್ದಂತೆ ಸೆಖೆಯಾಗುವ ಮೈ ಬೆವರುವ ಸಮಸ್ಯೆ ಇರುವ ಮಂದಿಗೆ ಕೊತ್ತಂಬರಿ ಸೊಪ್ಪು ಸುಲಭವಾದ ಹಾಗೂ ಸರಳವಾದ ಉತ್ತರ.

Sweating Problem

ಪಿತ್ತ ಹೆಚ್ಚಾದಾಗ ಹೀಗಾಗುತ್ತದೆ

ಆಯುರ್ವೇದದ ಪ್ರಕಾರ ಪಿತ್ತ ಹೆಚ್ಚಾದ ದೇಹ ಯಾವಾಗಲೂ ಉಷ್ಣ ಪ್ರಕೃತಿಯ ಸಮಸ್ಯೆಯನ್ನೂ ಹೊಂದಿರುತ್ತದೆ. ಇಂಥವರಿಗೆ ದೇಹದಲ್ಲಿ ಉಷ್ಣ ಹೆಚ್ಚಾಗುವುದು ಜಾಸ್ತಿ. ಅಸಿಡಿಟಿ, ಮೈಗ್ರೇನ್‌, ರಾತ್ರಿ ಸೆಖೆಯಾಗಿ ಮೈ ಬೆವರುವ ಸಮಸ್ಯೆ ಇರುವ ಮಂದಿಗೆ ಕೆಲವು ಸರಳ ಪರಿಹಾರಗಳಿಂದಲೇ ಉತ್ತರ ಸಿಗುತ್ತದೆ. ಅವುಗಳಲ್ಲಿ ಕೊತ್ತಂಬರಿ ಸೊಪ್ಪಿನ ನೀರು ಕೂಡಾ ಒಂದು. ಅತ್ಯಂತ ಕಡಿಮೆ ಕ್ಯಾಲರಿ ಹೊಂದಿರುವ ಅಂದರೆ, ನೂರು ಗ್ರಾಂ ಕೊತ್ತಂಬರಿ ಸೊಪ್ಪಿನಲ್ಲಿ 31 ಕಿಲೋಕ್ಯಾಲರಿಗಳಷ್ಟು ಇರುವುದರಿಂದ ಇದು ತೂಕ ಇಳಿಸುವ ಮಂದಿಯೂ ಸೇರಿದಂತೆ ಎಲ್ಲರಿಗೂ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್‌, ನಾರಿನಂಶ, ವಿಟಮಿನ್‌ ಸಿ ಎಲ್ಲವೂ ದಿನವೂ ನಮ್ಮ ದೇಹಕ್ಕೆ ಬೇಕಾದ ಶೇ. 70ರಷ್ಟು ಪೂರೈಕೆಯನ್ನು ಮಾಡುತ್ತದೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಇದನ್ನು ಅರ್ಧ ಲೀಟರ್‌ನಷ್ಟು ನೀರಿಗೆ ಹಾಕಿ ಚೆನಾಗಿ ಕುದಿಸಿ ತಣಿಸಯಲು ಬಿಡಿ. ಈ ನೀರನ್ನು ಇಡೀ ದಿನ ಸ್ವಲ್ಪ ಸ್ವಲ್ಪ ಕುಡಿಯುತ್ತಿರಬಹುದು. ಅಥವಾ ಬೆಳಗ್ಗೆ ಎದ್ದ ತಕ್ಷಣ ಇದನ್ನು ಮಾಡಿಕೊಂಡು ಕುಡಿಯಬಹುದು. ಇದರಿಂದ ದೇಹದ ಪಚನಕ್ರಿಯೆಯೂ ಉತ್ತಮವಾಗುವುದರ ಜೊತೆಗೆ ದೇಹ ತಂಪಾಗುತ್ತದೆ.

ಇದನ್ನೂ ಓದಿ: Heart Attack Sign: ಹೃದಯಾಘಾತ ಆಗುವುದಿದ್ದರೆ ನಮ್ಮ ದೇಹ ಮೊದಲೇ ಈ ಸೂಚನೆಗಳನ್ನು ನೀಡುತ್ತದೆ!

ನಿಯಮಿತವಾಗಿ ಹೀಗೆ ಮಾಡಿ

ಕೇವಲ ಒಂದೆರಡು ದಿನ ಹೀಗೆ ಮಾಡುವುದಲ್ಲ. ನಿತ್ಯವೂ ನಿಯಮಿತವಾಗಿ ಇದನ್ನು ಮಾಡಿದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್‌ ಎ ಹೇರಳವಾಗಿದ್ದು ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿಯೂ ಹೇರಳವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ವಿಟಮಿನ್‌ ಸಿ ಬಹಳ ಅಗತ್ಯ. ಅಷ್ಟೇ ಅಲ್ಲ, ಮ್ಯಾಂಗನೀಸ್‌, ಪಾಸ್ಪರಸ್‌ ಇತ್ಯಾದಿಗಳೂ ಇರುವುದರಿಂದ ರಕ್ತ ಹೆಪ್ಪುಗಟ್ಟುವಿಕೆಗೆ, ಎಲುಬಿನ ಹಾಗೂ ಹಲ್ಲಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಹೀಗಾಗಿ, ಕೇವಲ ಈ ಸಮಸ್ಯೆ ಇರುವ ಮಂದಿ ಮಾತ್ರವಲ್ಲ, ಎಲ್ಲರೂ ಇದನ್ನು ಸೇವಿಸಬಹುದು. ಒಟ್ಟಾರೆ ಆರೋಗ್ಯದ ವೃದ್ಧಿಗೆ, ತೂಕ ಇಳಿಕೆಗೆ ಇದು ಒಳ್ಳೆಯದು.

Continue Reading

ಆರೋಗ್ಯ

Heart Attack Sign: ಹೃದಯಾಘಾತ ಆಗುವುದಿದ್ದರೆ ನಮ್ಮ ದೇಹ ಮೊದಲೇ ಈ ಸೂಚನೆಗಳನ್ನು ನೀಡುತ್ತದೆ!

Heart Attack Sign: ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಳ್ಳುವುದು ಜಾಣತನ. ಹೃದಯಾಘಾತ ಆಗುವ ವಾರಗಳ, ಕೆಲವೊಮ್ಮೆ ತಿಂಗಳ, ಮೊದಲಿಂದೇ ದೇಹ ಸೂಕ್ಷ್ಮವಾಗಿ ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಆದರೆ ಅದನ್ನು ತಿಳಿದುಕೊಳ್ಳುವುದಕ್ಕೆ ನಮಗೆ ಮಾಹಿತಿ ಇರಬೇಕು. ಎಂಥಾ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಬೇಕೆಂಬ ಮಾಹಿತಿ ಈ ಲೇಖನದಲ್ಲಿದೆ.

VISTARANEWS.COM


on

Heart Attack Sign
Koo

ಬದುಕು ನೀರ ಮೇಲಿನ ಗುಳ್ಳೆ ಎಂಬುದು ಮತ್ತೆ ಮತ್ತೆ ಅರ್ಥವಾಗುವುದು ಹೃದಯಾಘಾತದ ಸಂದರ್ಭದಲ್ಲಿ. ಇವೆಲ್ಲ ಗೊತ್ತಾಗುವುದರೊಳಗೇ ಹೀಗಾಗಿ ಹೋಯ್ತು ಎಂದು ಶೋಕಿಸುವಂತಾಗುತ್ತದೆ. ಹೃದಯಾಘಾತದ ಸೂಚನೆಗಳನ್ನು ದೇಹ ನೀಡಿದರೂ ಹೆಚ್ಚಿನ ಬಾರಿ ಗುರುತಿಸುವಲ್ಲಿ ವಿಫಲರಾಗುತ್ತೇವೆ. ಕಾರಣ, ಅಂಥ ಸೂಚನೆಗಳು ಯಾವುವು ಎಂಬುದೇ ನಮಗೆ ತಿಳಿದಿರುವುದಿಲ್ಲ. ಎದೆನೋವು ಮತ್ತು ಉಸಿರಾಡಲು ಕಷ್ಟವಾಗುವಂಥ ಸೂಚನೆಗಳು ಕಂಡಾಗಲೇ ನಮಗೆ ಹೃದಯದ ತೊಂದರೆ ಇರಬಹುದೆಂಬುದು ಅರಿವಾಗುತ್ತದೆ. ಆದರೆ ಇತರ ಕೆಲವು ಸೂಚನೆಗಳು ಆಸಿಡಿಟಿ, ಎದೆಯುರಿ, ಸುಸ್ತು ಮುಂತಾದ ಬೇರೆ ಸಮಸ್ಯೆಗಳ ಲಕ್ಷಣಗಳೂ ಆಗಿರಬಹುದಾದ್ದರಿಂದ ಮುಂಬರುವ ಅನಾಹುತವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಮುಂದಾಗಿ ಈ ಬಗ್ಗೆ ಕಾಳಜಿ ತೆಗೆದುಕೊಂಡಲ್ಲಿ ಆಗುವಂಥ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ. ಹೃದಯಾಘಾತವಾಗುವ ಹಲವಾರು ದಿನಗಳ ಮೊದಲಿನಿಂದಲೇ ಈ ಸೂಚನೆಗಳನ್ನು ದೇಹ ತೋರಿಸುತ್ತದೆ. ಕೆಲವೊಮ್ಮೆ ಒಂದು ತಿಂಗಳ ಮುನ್ನವೂ (Heart Attack Sign) ಇವು ಕಾಣಬಹುದು.

Cardiac Arrest

ಎದೆಯಲ್ಲಿ ಬಿಗಿ, ಒತ್ತಡ

ಎದೆಯಲ್ಲಿ ಒತ್ತಡದ ಅನುಭವ, ಏನೋ ಹಿಂಡಿದಂತೆ, ಬಿಗಿದಂತೆ ಭಾಸವಾಗುವುದು, ನೋವು ಮುಂತಾದವೆಲ್ಲ ಆರಂಭದಲ್ಲಿ ಕಾಣುತ್ತವೆ. ಇಂಥವು ಏನೇ ಕಂಡರೂ ಹೃದಯ ತಜ್ಞರಲ್ಲೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ಬಗ್ಗೆ ಉದಾಸೀನ ಸಲ್ಲದು.

Woman having headache. stressed, Migraine, World Brain Tumor day

ತಲೆ ಸುತ್ತುವುದು

ನೀರು, ಆಹಾರ ಎಲ್ಲರೂ ಕಾಲಕಾಲಕ್ಕೆ ಹೊಟ್ಟೆ ಸೇರುತ್ತಿದ್ದರೂ ನಿಲ್ಲದ ಸುಸ್ತು, ಆಯಾಸ, ಉಸಿರು ಕಟ್ಟುವುದು, ತಲೆ ಸುತ್ತುವುದು ಮುಂತಾದ ಲಕ್ಷಣಗಳು ಪದೇಪದೆ ಕಾಣುತ್ತಿವೆ ಎಂದರೆ ಇದು ನಿರ್ಲಕ್ಷ್ಯ ಮಾಡುವ ವಿಷಯವಲ್ಲ. ಹೃದಯಕ್ಕೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾದರೆ, ದೊರೆಯುವ ಆಮ್ಲಜನಕದಲ್ಲಿ ಕೊರತೆಯಾದರೆ ಇಂಥ ಸೂಚನೆಗಳು ಕಾಣುತ್ತವೆ.

It has been traditionally used for gastric lavage and vomiting Benefits Of Cardamom

ಅಜೀರ್ಣ, ವಾಂತಿ

ಹೀಗೆನ್ನುತ್ತಿದ್ದಂತೆ ನಿನ್ನೆ ತಿಂದದ್ದು ಯಾವುದೋ ಸರಿಯಾಗಲಿಲ್ಲ ಎಂದೇ ಭಾವಿಸಿ, ಅದಕ್ಕೆ ಔಷಧಿ ಮಾಡುತ್ತೇವೆ. ಅದಿಲ್ಲದಿದ್ದರೆ, ಆಸಿಡಿಟಿ ತೊಂದರೆಯಿದ್ದರೆ ಸಹ ಇಂಥದ್ದೇ ಲಕ್ಷಣಗಳು ಕಾಣಬಹುದು. ಆದರೆ ಇವೆಲ್ಲ ಹುಳಿತೇಗು, ಎದೆಯುರಿಯ ಪ್ರಕೋಪಗಳು ಎಂದು ಸುಮ್ಮನಿರಬೇಡಿ. ರಕ್ತಸಂಚಾರ ಕಡಿಮೆ ಆದಾಗಲೂ ಇಂಥ ಸೂಚನೆಗಳು ಕಾಣುತ್ತವೆ.

Sweating Sickness

ಬೆವರು

ಸೆಕೆಯಲ್ಲಿ ಬೆವರುವುದು ಸಹಜ. ಮಹಿಳೆಯರಿಗೆ ಋತುಬಂಧದ ಕಾಲದಲ್ಲಿ ವಿಪರೀತ ಬೆವರುವುದೂ ಸ್ವಾಭಾವಿಕ. ಆದರೆ ಕಾಲ ಯಾವುದೇ ಆದರೂ ಬೆವರುತ್ತಿದ್ದೀರಿ ಎಂದಾದರೆ ವೈದ್ಯರಲ್ಲಿಗೆ ಹೋಗಬೇಕು ಎಂದೇ ಅರ್ಥ. ದೇಹಕ್ಕೆ ಅಪಾಯವಾದಾಗ ಫ್ಲೈಟ್‌-ಫೈಟ್‌ ಹಂತಕ್ಕೆ ದೇಹ ತನ್ನನ್ನು ತಾನು ದೂಡಿಕೊಳ್ಳುವ ಸೂಚನೆಯಾಗಿ ಈ ಅತಿಯಾದ ಬೆವರು ಕಾಣುತ್ತದೆ.

ಉಸಿರುಗಟ್ಟುವುದು

ಸಣ್ಣ-ಪುಟ್ಟ ಕೆಲಸ ಮಾಡುವಾಗ, ಮೆಟ್ಟುಲು ಹತ್ತುವಾಗ, ಎಷ್ಟೋ ವರ್ಷಗಳಿಂದ ಮಾಡುತ್ತಿರುವ ಮಾಮೂಲಿ ವಾಕಿಂಗ್‌ನಲ್ಲೂ ಮೇಲುಸಿರು ಬರುತ್ತಿದೆ ಎಂದಾದರೆ ಮುಂಬರುವ ಅಪಾಯದ ಸೂಚನೆಯಿದು. ಅಂದರೆ ಹೃದಯಾಘಾತ ಆಗಿಯೇ ಬಿಡುತ್ತದೆ ಎಂದಲ್ಲ, ಆದರೆ ಹೃದಯದ ಆರೋಗ್ಯ ಚೆನ್ನಾಗಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

ನೋವು

ಹೀಗೆನ್ನುತ್ತಿದ್ದಂತೆ ಎದೆನೋವೇ ಬರಬೇಕೆಂದಿಲ್ಲ. ಬೆನ್ನು, ಭುಜ, ತೋಳು, ಕುತ್ತಿಗೆ, ದವಡೆಯಲ್ಲೂ ನೋವು ಕಾಣುತ್ತಿದೆ ಎಂದಾದರೆ ಖಂಡಿತಕ್ಕೂ ಏನೋ ಸರಿಯಿಲ್ಲ ಎಂಬುದು ಸ್ಪಷ್ಟ. ಹೆಚ್ಚಿನ ಸಾರಿ ರಕ್ತನಾಳಗಳಲ್ಲಿ ಜಮೆಯಾಗಿರುವ ಕೊಬ್ಬಿನಿಂದಾಗಿ ಪರಿಚಲನೆಯಲ್ಲಿ ತೊಂದರೆಯಾಗಿ ಬರುವಂಥ ತೊಂದರೆಗಳಿವು. ವೇಗಸ್‌ ನರವು ಹೃದಯದಿಂದ ಮೆದುಳು, ಎದೆ, ಕುತ್ತಿಗೆ, ಕಿಬ್ಬೊಟ್ಟೆ ಮುಂತಾದ ಹಲವೆಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಹೃದಯದಲ್ಲಿ ಆಗುವಂಥ ತೊಂದರೆಗಳನ್ನು ಇತರ ಭಾಗಗಳಿಗೆ ನೋವಿನ ಮೂಲಕ ಸೂಚನೆ ನೀಡುತ್ತದೆ.

Continue Reading
Advertisement
Talguppa Honnavar Railway Line
ಉತ್ತರ ಕನ್ನಡ5 mins ago

Talguppa Honnavar Railway Line: ಹೊನ್ನಾವರ-ತಾಳಗುಪ್ಪ ರೈಲ್ವೆ ಮಾರ್ಗ; ಮಂಕಿಯ ಬಿಜೆಪಿ ಮುಖಂಡರಿಂದ ಸಂಸದ ಕಾಗೇರಿಯವರಿಗೆ ಮನವಿ

road accident chitradurga news
ಕ್ರೈಂ26 mins ago

Road Accident: ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

Shikakai For Hair
ಆರೋಗ್ಯ36 mins ago

Shikakai For Hair: ಕೂದಲಿನ ಪೋಷಣೆಗೆ ಶ್ಯಾಂಪು ಒಳ್ಳೆಯದೋ ಸೀಗೆಕಾಯಿ ಒಳ್ಳೆಯದೋ?

Terrorist Attack
ಪ್ರಮುಖ ಸುದ್ದಿ59 mins ago

Terrorist Attack: ಕಾಶ್ಮೀರದಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದ ಸೇನೆ

karnataka weather Forecast
ಮಳೆ1 hour ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Noodles Side Effect
ಆರೋಗ್ಯ2 hours ago

Noodles Side Effect: ಇನ್‌ಸ್ಟಂಟ್‌ ನೂಡಲ್‌‌ಗಳನ್ನು ಸೇವಿಸಿದರೆ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Dina Bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿರಿ

NSUI
ದೇಶ8 hours ago

NSUI: ದೆಹಲಿ ವಿವಿಯಲ್ಲಿ ಗಲಾಟೆ ಮಾಡಿ, ರಾಮನ ಮೂರ್ತಿ ಒಡೆದ ಕಾಂಗ್ರೆಸ್‌ ವಿದ್ಯಾರ್ಥಿ ಘಟಕದ ಸದಸ್ಯರು; ಭಾರಿ ವಿವಾದ!

Yashasvi Jaiswal
ಕ್ರಿಕೆಟ್8 hours ago

Yashasvi Jaiswal : ಇನಿಂಗ್ಸ್​​ನ ಮೊದಲ ಎಸೆತಕ್ಕ 13 ರನ್​, ವಿನೂತನ ದಾಖಲೆ ಬರೆದ ಯಶಸ್ವಿ ಜೈಸ್ವಾಲ್​

MUDA Scam
ಕರ್ನಾಟಕ8 hours ago

MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 hour ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ14 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ15 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ19 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ20 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌