ಇತ್ತೀಚೆಗಿನ ದಿನಗಳಲ್ಲಿ ಥರಹೇವಾರಿ ಡಯಟ್ ಪದ್ಧತಿಗಳನ್ನು ಜನರು ಅನುಸರಿಸುವುದು ಸಾಮಾನ್ಯವಾಗಿದೆ. ಬಗೆಬಗೆಯ ಡಯಟ್ ಚಾಲ್ತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ನೂರಾರು ವಿಡಿಯೋಗಳಿಂದ ಟ್ರೆಂಡ್ಗಳಿಂದ ಪ್ರೇರಣೆಗೊಂಡು ವಯಸ್ಸಿನ ಹಂಗಿಲ್ಲದೆ ಎಲ್ಲರೂ ಬಗೆಬಗೆಯ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಇದರಿಂದ ಲಾಭಗಳು ಮೇಲ್ನೋಟಕ್ಕೆ ಕಂಡರೂ ಅನೇಕ ಬಾರಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಇದು ಹೊತ್ತು ತರಬಹುದು. ಸದ್ಯದಲ್ಲಿ ಟ್ರೆಂಡ್ನಲ್ಲಿರುವ ಒಂದು ಪದ್ಧತಿ ಎಂದರೆ ಇಂಟರ್ಮಿಟೆಂಟ್ ಫಾಸ್ಟಿಂಗ್. ಇಂಟರ್ಮಿಟೆಂಟ್ ಫಾಸ್ಟಿಂಗ್ ಕೂಡಾ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಹುದು. ದೈಹಿಕ, ಮಾನಸಿಕ ಜೊತೆಗೆ ಸಾಮಾಜಿಕ ಬದಲಾವಣೆಗಳನ್ನು ತರುವುದರಿಂದ ಇವು ಸಮಸ್ಯೆಯಾಗಿಯೂ ಪರಿಣಮಿಸಬಹುದು. ಬನ್ನಿ, ಇಂಟರ್ಮಿಟೆಂಟ್ ಫಾಸ್ಟಿಂಗ್ನಿಂದ (Intermittent Fasting) ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ನೋಡೋಣ.
- ಇಂಟರ್ ಮಿಟೆಂಟ್ ಫಾಸ್ಟಿಂಗ್ ಡಯಟ್ ಪದ್ಧತಿಯಲ್ಲಿ ಸೀಮಿತ ಅವಧಿಯಲ್ಲಿ ಮಾತ್ರ ಆಹಾರ ಸೇವನೆ ಮಾಡುವ ಕಾರಣದಿಂದ ಬಹಳ ಸಾರಿ ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳ ಪೂರೈಕೆ ಸಾಧ್ಯವಾಗಲಿಕ್ಕಿಲ್ಲ. ಮುಖ್ಯವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ, ವಿಟಮಿನ್ ಡಿ ಇತ್ಯಾದಿಗಳು ದೇಹಕ್ಕೆ ಅಗತ್ಯವಿದ್ದಷ್ಟು ಬೇಕೇ ಬೇಕು. ಈ ಪದ್ಧತಿಯಲ್ಲಿ ಇಂತಹ ಮುಖ್ಯ ಪೋಷಕಾಂಶಗಳೇ ದೇಹಕ್ಕೆ ಸರಿಯಾಗಿ ಪೂರೈಕೆಯಾಗದೆ, ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.
- ಹಸಿವು ಹಾಗೂ ಬಯಕೆ ಹೆಚ್ಚಾಗಬಹುದು. ಹೆಚ್ಚು ಹೊತ್ತು ಉಪವಾಸದಲ್ಲಿರುವುದರಿಂದ ಹಸಿವೂ ಹೆಚ್ಚಾಗಬಹುದು. ಇದರಿಂದ ಅತಿಯಾಗಿ ತಿನ್ನುವ ಸಾಧ್ಯತೆಗಳಿವೆ. ಇದು ಅನಾರೋಗ್ಯಕರ ಆಹಾರಾಭ್ಯಾಸಗಳನ್ನೂ, ಜಂಕ್ ಆಹಾರದ ಆಯ್ಕೆಯನ್ನೂ ಮಾಡಲು ಪ್ರೇರಣೆಯಾಗಬಹುದು. ಹಸಿವಿನಿಂದಾಗಿ ಏಕಾಗ್ರತೆಯ ಕೊರೆತೂ ಆಗಬಹುದು.
- ದೇಹದ ಒಟ್ಟು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಬಹುದು. ಕ್ಯಾಲರಿ ಇದ್ದಕ್ಕಿದ್ದಂತೆ ಕಡಿಮೆಯಾದಾಗ ದೇಹ ಬಳಲಬಹುದು. ಇದರಿಂದ ತೂಕ ಇಳಿಕೆಯಾದರೂ, ಹೆಚ್ಚು ಕಾಲ ನಿಲ್ಲದಿರಬಹುದು.
- ಉಪವಾಸದ ಸಂದರ್ಭ ದೇಹದಲ್ಲಿ ಮಾಂಸಖಂಡಗಳ ನಷ್ಟವಾಗುತ್ತದೆ. ಇದರಿಂದ ಶಕ್ತಿ, ಸಾಮರ್ಥ್ಯ ಕುಂಠಿತವಾಗುತ್ತದೆ. ಇದು ನಮ್ಮ ಕೆಲಸ ಕಾರ್ಯಗಳ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.
- ಎಲ್ಲಕ್ಕಿಂತ ಮುಖ್ಯವಾಗಿ ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಉದ್ವೇಗವನ್ನು ಹುಟ್ಟುಹಾಕಬಹುದು. ಊಟದ ಸಮಸ್ಯೆಯನ್ನು ಹೊಂದಿದ ಮಂದಿಗೆ ಇದು ಇನ್ನಷ್ಟು ಮಾನಸಿಕವಾಗಿ ಪರಿಣಾಮ ಬೀರಬಹುದು. ಕೆಟ್ಟ ನಡತೆಗಳಿಗೂ ಕಾರಣವಾಗಬಹುದು.
- ರಕ್ತದಲ್ಲಿರುವ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗಬಹುದು. ಮಧುಮೇಹ ಹಾಗೂ ಹೈಪೋಗ್ಲಿಸೇಮಿಯಾದಂತಹ ಸಮಸ್ಯೆ ಇರುವ ಮಂದಿಗೆ ಇದು ಇನ್ನಷ್ಟು ಮಾರಕವಾಗಬಹುದು. ತಲೆಸುತ್ತು, ಸುಸ್ತು ಸೇರಿದಂತೆ ಅನೇಖ ಸಮಸ್ಯೆಗಳು ತಲೆದೋರಬಹುದು. ಹೊತ್ತು ಹೊತ್ತಿಗೆ ಸರಿಯಾಗಿ ಉಣ್ಣುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
- ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೂ ಪರಿಣಾಮ ಬೀರಬಹುದು. ಭಾರತದಂತಹ ಕೌಟುಂಬಿಕ ವ್ಯವಸ್ತೆ ಗಟ್ಟಿ ಇರುವ, ಬಗೆಬಗೆಯ ಧರ್ಮಗಳ ಬಗೆಬಗೆಯ ಹಬ್ಬಗಳ ಆಚರಣೆಯ ನಾಡಲ್ಲಿ ಇಂತಹುಗಳು ಕೆಲವೊಮ್ಮೆ ಸೈದ್ಧಾಂತಿಕ ಸಮಸ್ಯೆಗಳನ್ನೂ ಈಡು ಮಾಡಿ ಇದು ಮಾನಸಿಕ ಪರಿಣಾಮ ಬೀರಬಹುದು.
- ದೀರ್ಘಕಾಲಿಕವಾಗಿ ನೋಡಿದರೆ, ಈ ಬಗೆಯ ಆಹಾರ ಪದ್ಧತಿಯನ್ನು ಮುಂದುವರಿಸುವುದು ಬಹಳ ಕಷ್ಟ. ಕೆಲಕಾಲ ಆಡಿದರೂ ಕ್ರಮೇಣ ಪಾಲಿಸಲಾಗ ಪದ್ಧತಿ ಇದು. ಹಾಗಾಗಿ, ಪರಿಣಾಮವೂ ದೀರ್ಘಕಾಲಿಕವಾಗಿಲ್ಲದಿರಬಹುದು.
ಇದನ್ನೂ ಓದಿ: Ceramic Cookware: ಪಿಂಗಾಣಿ ಪಾತ್ರೆಗಳನ್ನು ಅಡುಗೆಗೆ ಬಳಸಿದರೆ ಏನಾಗುತ್ತದೆ?