Site icon Vistara News

International men’s day | ಓ ಗಂಡಸರೇ, ಈ ಒಂಬತ್ತು ಆಹಾರ ನಿಮ್ಮ ತಟ್ಟೆಯಲ್ಲಿರಲಿ!

superfoods

ಹಾಗೆ ನೋಡಿದರೆ ಗಂಡಸರಿಗೆ ಹೆಂಗಸರಿಗಿಂತ ಹೆಚ್ಚು ರೋಗಗಳು ಬಾಧಿಸುತ್ತವೆ. ಹೃದ್ರೋಗ, ಮಾನಸಿಕ ಸಮಸ್ಯೆ, ಮಧುಮೇಹ, ಶ್ವಾಸಕೋಶದ ಸಮಸ್ಯೆ, ಕ್ಯಾನ್ಸರ್‌, ಪಿತ್ತಕೋಶದ ಸಮಸ್ಯೆಗಳು ಹೀಗೆ ಕಾಯಿಲೆಗಳು ಪುರುಷರನ್ನು ಹೆಚ್ಚು ಪ್ರಮಾಣದಲ್ಲಿ ಕಾಡುತ್ತವೆ. ಹಾಗಾಗಿ ಪುರುಷರು ರೋಗ ಬರದಂತೆ ಸತ್ವಯುತ, ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯವೆನಿಸುತ್ತವೆ. ಪುರುಷರ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಸೂಪರ್‌ ಫುಡ್‌ ಯಾವುದು, ಅವರು ಯಾವ ಆಹಾರಗಳನ್ನು ನಿತ್ಯದ ಬದುಕಿನಲ್ಲಿ ಸೇರಿಸಬೇಕು ಎಂಬುದನ್ನು ನೋಡೋಣ.

೧. ಬೀಜಗಳು: ಬೀಜಗಳಲ್ಲಿ ಕೊಬ್ಬು ಹೆಚ್ಚಿದ್ದರೂ ಅವು ದೇಹಕ್ಕೆ ಬೇಕಾಗುವ ಕೊಬ್ಬು. ಇದರಲ್ಲಿರುವ ಮೋನೋಸ್ಯಾಚುರೇಟೆಡ್‌ ಫ್ಯಾಟ್‌ ಕೊಲೆಸ್ಟೆರಾಲ್‌ ವಿರುದ್ಧ ಹೋರಾಡಿ ಅದನ್ನು ಕಡಿಮೆಗೊಳಿಸುತ್ತದೆ. ಆಲಿವ್‌ ಎಣ್ಣೆ ಹಾಗೂ ಇತರ ಬೀಜಗಳಲ್ಲಿ ಈ ಗುಣ ಇರುವುದರಿಂದ ಇದು ಅತ್ಯವಶ್ಯಕ. ಆದರೆ ಇದು ನಿಮ್ಮ ತಿನ್ನುವ ಒಟ್ಟು ಕ್ಯಾಲರಿಯ ೨೫ರಿಂದ ೩೫ ಪ್ರತಿಶತಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

೨. ಮೀನು: ಮೀನು ಒಳ್ಳೆಯದು. ಒಳ್ಳೆಯ ಕೊಬ್ಬು ದೇಹಕ್ಕೆ ಸೇರಿಸುವುದರಲ್ಲಿ ಮೀನಾಹಾರದ ಕೊಡುಗೆಯೂ ಇದೆ. ಇದರಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಕೂಡಾ ಇದೆ. ಇದು ಹೃದ್ರೋಗ ಮತ್ತಿತರ ಕಾಯಿಲೆಗಳಿಂದ ರಕ್ಷಿಸುತ್ತದೆ. ಪ್ರತಿ ವಾರಕ್ಕೆರಡು ಸಲ ಮೀನು ತಿನ್ನುವುದು ಒಳ್ಳೆಯದು.

೩. ಶುಂಠಿ: ಶುಂಠಿಗೊಂದು ವಿಶೇಷ ಘಮವಿದೆ. ಹಾಗೂ ಭಾರತೀಯ ಅಡುಗೆಯಲ್ಲಿ ಇದು ಪ್ರತಿನಿತ್ಯ ಧಾರಾಳವಾಗಿ ಬಳಕೆಯಾಗುತ್ತದೆ. ದೇಹದಲ್ಲಿರುವ ಉರಿಯೂತ, ವ್ಯಾಯಾಮದ ಸಂದರ್ಭ ಮಾಂಸಖಂಡಗಳಿಗಾದ ಗಾಯ ಇತ್ಯಾದಿಗಳಿಗೆಲ್ಲ ಶುಂಠಿಯ ನಿತ್ಯದ ಬಳಕೆ ಒಳ್ಳೆಯದು. ಇವುಗಳನ್ನು ಶಮನ ಮಾಡುವಲ್ಲಿ ಶುಂಠಿಯ ಪಾತ್ರ ದೊಡ್ಡದು.

೪. ಕಲ್ಲಂಗಡಿ ಹಣ್ಣು: ಬೀಟಾ ಕೆರೋಟಿನ್‌ ಹಾಗೂ ವಿಟಮಿನ್‌ ಸಿ ಹೇರಳವಾಗಿರುವ ಕಲ್ಲಂಗಡಿ ಹಣ್ಣು ಹೃದ್ರೋಗಕ್ಕೆ ಒಳ್ಳೆಯದು. ಅಸ್ತಮಾದ ತೊಂದರೆಗಳಿಗೂ ಕಲ್ಲಂಗಡಿ ಒಳ್ಳೆಯದು ಎಂದರೆ ನೀವು ನಂಬಲೇಬೇಕು! ಕೆಲವು ಬಗೆಯ ಕ್ಯಾನ್ಸರ್, ಮೂಳೆ ಸವೆತ ಮತ್ತಿತರ ತೊಂದರೆಗಳಿಗೂ ಇದು ಕಡಿಮೆ ಕ್ಯಾಲೊರಿಯ ಒಳ್ಳೆಯ ಆಹಾರ.

೫. ಧಾನ್ಯಗಳು: ವಿಟಮಿನ್‌, ಖನಿಜಾಂಶ ಹಾಗೂ ನಾರಿನಂಶಗಳ ಕಂಪ್ಲೀಟ್‌ ಪ್ಯಾಕೇಜ್‌ ಈ ಧಾನ್ಯಗಳು. ಇದನ್ನು ಪ್ರತಿನಿತ್ಯ ಆಹಾರದಲ್ಲಿ ಬಳಸುವ ಮೂಲಕ ಮಾಂಸಖಂಡಗಳ ಬಲವರ್ಧನೆ, ತೂಕ ಸಮತೋಲನದಲ್ಲಿರಿಸುವುದು, ರಕ್ತದಲ್ಲಿರುವ ಸಕ್ಕರೆಯನ್ನು ಸಮತೋಲನದಲ್ಲಿರಿಸುವುದು ಇತ್ಯಾದಿಗಳಿಗೆ ಅನುಕೂಲ.

೬. ಮೊಟ್ಟೆ: ಮೊಟ್ಟೆಯ ಮಹತ್ವ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಪ್ರತಿನಿತ್ಯ ದೇಹಕ್ಕೆ ಬೇಕಾಗಿರುವ ಪ್ರೊಟೀನ್‌ ಅವಶ್ಯಕತೆಯನ್ನು ಸುಲಭವಾಗಿ ಪೂರೈಸುವ ತಾಕತ್ತು ಮೊಟ್ಟೆಯಲ್ಲಿದೆ. ವ್ಯಾಯಾಮ ಮಾಡುವ ಮಂದಿಗೆ ಮಾಂಸಖಂಡಗಳು ಗಟ್ಟಿಮುಟ್ಟಾಗಿಸುವ ಮೂಲಕ ಅತಿಯಾದ ಹಸಿವಾಗುವುದನ್ನೂ ತಡೆಯುವ ಮೂಲಕ ತೂಕವನ್ನು ಇಳಿಸುವಲ್ಲಿ ಸಹಾಯ ಮಾಡುತ್ತದೆ.‌

ಇದನ್ನೂ ಓದಿ | Banana benefits | ತೂಕ ಹೆಚ್ಚಿಸೋಕೂ, ತೂಕ ಇಳಿಸೋಕೂ ಬಾಳೆಹಣ್ಣು!

೭. ಡಾರ್ಕ್‌ ಚಾಕೋಲೇಟ್:‌ ಸರಿಯಾದ ಬಗೆಯ ಚಾಕೋಲೇಟ್‌ ತಿನುವ ಮೂಲಕ ರಕ್ತಪರಿಚಲನೆಯನ್ನು ಚುರುಕುಗೊಳಿಸಬಹುದು. ಕೆಟ್ಟ ಕೊಲೆಸ್ಟೆರಾಲನ್ನು ಇದು ಕಡಿಮೆಗೊಳಿಸುವುದಲ್ಲದೆ, ಅಧಿಕ ರಕ್ತದೊತ್ತಡವನ್ನೂ ಸಮತೋಲನದಲ್ಲಿರಿಸುತ್ತದೆ. ಪುರುಷರ ಲೈಂಗಿಕ ಸಮಸ್ಯೆಗಳಿಗೂ ಇದು ರಾಮಬಾಣ. ಆದರೆ ಹೆಚ್ಚು ಡಾರ್ಕ್‌ ಚಾಕೋಲೇಟ್‌ ತಿಂದರೆ ತೂಕ ಹೆಚ್ಚಾಗಬಹುದು. ದಿನಕ್ಕೆ ಒಂದು ಔನ್ಸ್‌ನಷ್ಟು ಪ್ರತಿದಿನ ತಿನ್ನಬಹುದು.

೮. ಟೊಮೇಟೋ: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದರ ಪಾತ್ರ ದೊಡ್ಡದು. ಇದರಲ್ಲಿರುವ ಲೈಕೋಪೀನ್‌ ಎಂಬ ಅಂಶವು ಹೃದಯ ಹಾಗೂ ವೃಷಣದ ಆರೋಗ್ಯಕ್ಕೆ ಸಹಕಾರಿ. ಹೃದ್ರೋಗ, ವೃಷಣದ ಕ್ಯಾನ್ಸರ್‌ ಮತ್ತಿತರ ತೋಮದರೆಗಳು ಬಾರದಂತೆ ನೋಡಿಕೊಳ್ಳುತ್ತದೆ.

೯. ಬಾಳೆಹಣ್ಣು: ಪೊಟಾಶಿಯಂ ಅಧಿಕವಾಗಿರುವ ಇದು ಎಲುಬಿನ ಆರೋಗ್ಯ, ಮಾಂಸಖಂಡಗಳ ಬಲವರ್ಧನೆಗೆ ಅನುಕೂಲ. ಅಧಿಕ ರಕ್ತದೊತ್ತಡವನ್ನೂ ಸಮತೋಲನದಲ್ಲಿರಿಸುತ್ತದೆ. ದಿನನಿತ್ಯ ಒಂದು ಮಧ್ಯಮ ಗಾತ್ರದ ಬಾಳೆಹಣ್ಣು ತಿನ್ನುವ ಆಹಾರಾಭ್ಯಾಸವನ್ನು ಹೊಂದುವುದು ಒಳ್ಳೆಯದು.

ಇದನ್ನೂ ಓದಿ | Super food | ಪುಟಾಣಿ ಚಿಯಾ ಬೀಜಗಳಲ್ಲಿದೆ ಪುಟಿದೇಳಿಸುವ ದೈತ್ಯ ಶಕ್ತಿ!

Exit mobile version