ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಕೈಗೆಟುಕದಂತಾಗಿರುವ ಇಂದಿನ ವ್ಯವಸ್ಥೆಯಲ್ಲಿ, ಕಿಂಡರ್ ಆಸ್ಪತ್ರೆಯು (Kinder Hospital) ನೂರಾರು ಮಹಿಳೆಯರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಯೋಜನೆಗೆ ಚಾಲನೆ ನೀಡಿರುವುದು ನಿಜಕ್ಕೂ ಶ್ಲಾಘನೀಯ, ಎಂದು ಮಹದೇವಪುರದ ಮಾಜಿ ಶಾಸಕ ಅರವಿಂದ ಲಿಂಬಾವಳಿ (Former MLA Arvind Limbavali) ಹೇಳಿದರು.
ಬೆಂಗಳೂರಿನ ಮಹದೇವಪುರದ ಕಿಂಡರ್ ಆಸ್ಪತ್ರೆಯು ಸಿಎಸ್‍ಆರ್ ಉಪಕ್ರಮದಡಿ ಆರಂಭಿಸಿರುವ ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಸ್ತ್ರೀಸಂಬಂಧಿ ಕಾಯಿಲೆ ಹಾಗೂ ಸಾಮಾನ್ಯ ಸಮಸ್ಯೆಗಳಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ನೀಡುವ ‘ಕಿಂಡರ್ ಮಾ ಜೀವನ’ ಯೋಜನೆಗೆ ಮಹದೇವಪುರದ ಎಸ್‌ಕೆಜಿ ಕಲ್ಯಾಣ ಮಂಟಪದಲ್ಲಿ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ, “ಆರೋಗ್ಯ ಸೇವೆಯು ಇಂದು ಬಡವರ ಕೈಗೆಟುಕದಂತಾಗಿದೆ. ಪ್ರತಿ ವ್ಯಕ್ತಿಗೂ ಆಹಾರ, ಆರೋಗ್ಯ ಹಾಗೂ ಶಿಕ್ಷಣ ಸುಲಭವಾಗಿ ದೊರೆಯುವಂತಾಗಬೇಕು. ಆದರೆ ಇವುಗಳೇ ಇಂದು ವ್ಯಾಪಾರೀಕರಣವಾಗಿವೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಿಂಡರ್ ಮೊದಲ ಹಂತದಲ್ಲಿ ಮಹದೇವಪುರ ವ್ಯಾಪ್ತಿಯ ನೂರಾರು ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಶಸ್ತ್ರಚಿಕಿತ್ಸೆಯ ಮೂಲಕ ಆಶಾಭಾವನೆ ಮೂಡಿಸುತ್ತಿದೆ. ಇಂಥ ಕಾರ್ಯಗಳು ಮತ್ತಷ್ಟು ನಡೆಯಲಿ ಎಂದು ಆಶಿಸುತ್ತೇನೆ,” ಎಂದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ,”ಒಬ್ಬ ಮಹಿಳೆಯಾಗಿ ಈ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಭಾಗವಾಗುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ಅದೆಷ್ಟೋ ಬಡ ಕುಟುಂಬದ ಮಹಿಳೆಯರಿಗೆ ಈ ರೀತಿಯ ಯೋಜನೆಗಳ ಬಗೆಗೆ ಮಾಹಿತಿಯಿಲ್ಲ. ಸಮಸ್ಯೆಗಳನ್ನ ಇಟ್ಟುಕೊಂಡೆ ಜೀವನ ಮಾಡುತ್ತಿದ್ದಾರೆ. ಅಂಥ ಮಹಿಳೆಯರಿಗೆ ಈ ಯೋಜನೆ ತಲುಪಲಿ. ಹೆಚ್ಚು, ಹೆಚ್ಚು ಮಹಿಳೆಯರೆಲ್ಲಾ ಈ ಯೋಜನೆಯ ಲಾಭ ಪಡೆಯಲಿ. ಕಿಂಡರ್ ಆಸ್ಪತ್ರೆಯ ಈ ಯೋಜನೆ ಒಂದು ಅದ್ಭುತ ಪ್ರಯತ್ನ. ಇಂಥ ಯೋಜನೆಗಳು ಎಲ್ಲ ಕಡೆ ನಡೆಯಲಿ. ಬಡ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯುವಂತಾಗಲಿ,” ಎಂದು ಹೇಳಿದರು.
ಕಿಂಡೋರಮಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಡಾ ವಿ.ಕೆ. ಪ್ರದೀಪ್ ಕುಮಾರ್ ಮಾತನಾಡಿ,”ಕಿಂಡರ್ ಇಂಥ ಪ್ರಯತ್ನಗಳನ್ನ ಕೈಗೊಳ್ಳುವುದಕ್ಕೆ ಸದಾ ಉತ್ಸುಕವಾಗಿರುತ್ತದೆ. ಕೇವಲ ನೂರು ಮಹಿಳೆಯರಿಗಲ್ಲ. ನಿಜಕ್ಕೂ ಸಮಸ್ಯೆಯುಳ್ಳ, ಆರ್ಥಿಕವಾಗಿ ತುಂಬಾ ದುರ್ಬಲವಾಗಿರುವ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಕಿಂಡರ್ ಆಸ್ಪತ್ರೆಯು ಸದಾ ಸಿದ್ಧವಾಗಿರುತ್ತದೆ. ಭವಿಷ್ಯದಲ್ಲಿ ಇಂಥ ಹಲವು ಯೋಜನೆಗಳನ್ನ ನಮ್ಮ ಸಮಾಜಕ್ಕೆ ಒದಗಿಸಲು ನಾವು ಬದ್ಧರಾಗಿದ್ದೇವೆ”, ಎಂದು ಹೇಳಿದರು.
ಕಿಂಡರ್ ವುಮೆನ್ ವೆಲ್ಫೇರ್ ಟ್ರಸ್ಟ್, ಸಿಎಸ್‍ಆರ್ ಉಪಕ್ರಮದಡಿ ಬೆಂಗಳೂರಿನ ಮಹದೇವಪುರ ವ್ಯಾಪ್ತಿಯ ಮಹಿಳೆಯರಿಗೆ ಕಿಂಡರ್ ಮಾ ಜೀವನ ಯೋಜನೆಯ ಮೂಲಕ ಉಚಿತ ಶಸ್ತ್ರಚಿಕಿತ್ಸೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಯೋಜನೆಯು ಮುಂದಿನ ಒಂದು ವರ್ಷಗಳ ಕಾಲ ನಡೆಯಲಿದ್ದು, ಇದರ ಮೂಲಕ ಮಹದೇವಪುರ ವ್ಯಾಪ್ತಿಯ ಆರ್ಥಿಕ ದುರ್ಬಲ ವರ್ಗದ ಮಹಿಳೆಯರಿಗೆ ಕೆಲ ಗಂಭೀರ ಸ್ತ್ರೀಸಂಬಂಧಿ ಸಮಸ್ಯೆಗಳಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಕಿಂಡರ್ ವುಮೆನ್ ವೆಲ್ಫೇರ್ ಟ್ರಸ್ಟ್ ಈ ಯೋಜನೆಗಾಗಿ ರೂ. 2 ಕೋಟಿ ವಿನಿಯೋಗಿಸಲಿದ್ದು, ಈ ಮೂಲಕ 100 ರಿಂದ 150 ಮಹಿಳೆಯರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದೆ.
ಕಾರ್ಯಕ್ರಮದಲ್ಲಿ ಕಿಂಡರ್ ಗ್ರೂಪ್ ಸಿಇಒ ರೆಂಜಿತ್ ಕೃಷ್ಣನ್, ಕಿಂಡರ್ ಆಸ್ಪತ್ರೆಯ ಶಿಶು ಹಾಗೂ ಮಕ್ಕಳ ತಜ್ಞ ಡಾ ಸುಶಾಂತ್ ಶಿವಸ್ವಾಮಿ ಸೇರಿದಂತೆ ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ: Budget 2024: ಮಹಿಳಾ ಉದ್ಯೋಗಿಗಳಿಗೆ ಇನ್ನಷ್ಟು ಸಂಬಳಸಹಿತ ರಜೆ; ಬಜೆಟ್‌ನಲ್ಲಿ ಏನಿದೆ ನಿರ್ಮಲಾ ಕೊಡುಗೆ?