Site icon Vistara News

Lotus Seeds Benefits: ತಾವರೆ ಬೀಜಗಳನ್ನು ಸೇವಿಸಿ; ಇದು ರುಚಿಗೂ ಒಳ್ಳೆಯದು, ಹೃದಯಕ್ಕೂ ಒಳ್ಳೆಯದು

Lotus Seeds Benefits

ತಾವರೆ ಬೀಜಗಳು ಅಥವಾ ಮಖಾನಾ ಇಂದು ಬಹುತೇಕ ಎಲ್ಲರ ಮನೆಗಳಲ್ಲಿ ಸಾಮಾನ್ಯ. ಉತ್ತರ ಭಾರತವೂ ಸೇರಿದಂತೆ ಹಲವೆಡೆ ಇದು ಪ್ರಸಾದ ರೂಪದಲ್ಲಿ ದೇವಸ್ಥಾನಗಳಲ್ಲಿ ಸಿಗುತ್ತವೆ. ಇದರ ಹೊರತಾಗಿ, ದಕ್ಷಿಣ ಭಾರತದಲ್ಲಿ ಇದರ ಬಳಕೆ ಕಡಿಮೆಯಾದರೂ ಉತ್ತರ ಭಾರತದಲ್ಲಿ ಇದು ಸಾಮಾನ್ಯ ಆಹಾರ. ಇದರ ಖೀರು, ಸ್ನ್ಯಾಕ್‌ ಸೇರಿದಂತೆ ಅನೇಕ ಬಗೆಗಳಲ್ಲಿ ಇದು ಹೊಟ್ಟೆ ಸೇರುತ್ತದೆ. ಯಾವುದೇ ಹೇಳಿಕೊಳ್ಳುವ ರುಚಿ ಇರದ, ತಾವರೆಯ ಗಿಡದಿಂದ ಸಿಗುವ ಈ ಬೀಜಗಳು ಬಿಹಾರ ರಾಜ್ಯದಲ್ಲಿ ಹೇರಳವಾಗಿ ಸಿಗುತ್ತದೆ. ತನ್ನ ಪರಿಮಳ ಹಾಗೂ ರುಚಿಯಿಂದ ಇದು ಯಾರನ್ನೂ ಅಷ್ಟಾಗಿ ಆಕರ್ಷಿಸದಿದ್ದರೂ, ಇದು ತನ್ನ ಗುಣದಿಂದ ಇತ್ತೀಚೆಗೆ ಬಹುತೇಕರನ್ನು ಆಕರ್ಷಿಸಿರುವ ಆಹಾರ. ಪೊಟಾಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇದರಲ್ಲಿವೆ. ಮುಖ್ಯವಾಗಿ ತೂಕ ಇಳಿಸುವ ಮಂದಿಯನ್ನು ಆಕರ್ಷಿಸಿರುವ ಈ ಬೀಜದ ಲಾಭಗಳೇನು (Lotus Seeds Benefits) ಎಂಬುದನ್ನು ನೋಡೋಣ. ಮಖಾನ ಅಥವಾ ಈ ತಾವರೆಯ ಬೀಜದಲ್ಲಿ ಎಲ್ಲವೂ ಇದೆ. ಪೋಷಕಾಂಶಗಳ ಮಟ್ಟಿಗೆ ಹೇಳಿವುದಾದರೆ ಇದು ಚಿನ್ನ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶಗಳೂ, ಪ್ರೊಟೀನ್‌, ಕಾರ್ಬೋಹೈಡ್ರೇಟ್‌, ಒಳ್ಳೆಯ ಕೊಬ್ಬು ಸೇರಿದಂತೆ ಎಲ್ಲವೂ ಇದೆ. ಸಕ್ಕರೆ ಇಲ್ಲ. ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು.

ಅಧಿಕ ಪೋಷಕಾಂಶ

ತೂಕ ಇಳಿಸುವ ಮಂದಿಗೆ ಇದರಲ್ಲಿರುವ ಖುಷಿ ಸುದ್ದಿ ಎಂದರೆ ಇದು ಅತ್ಯಂತ ಕಡಿಮೆ ಕ್ಯಾಲರಿ ಹೊಂದಿದ ಆಹಾರಗಳಲ್ಲಿ ಒಂದು. ಹಾಗಂತ ಪೋಷಕಾಂಶಗಳ ವಿಷಯದಲ್ಲಿ ಯಾವುದೇ ರಾಜಿ ಇದು ಮಾಡಿಕೊಳ್ಳುವುದಿಲ್ಲ. ಹಸಿವಾದಾಗ ತಿನ್ನಬಹುದಾದ ಕಡಿಮೆ ಕ್ಯಾಲರಿಯ ಆಹಾರವಿದು. ಸ್ವಲ್ಪ ಮಸಾಲಾದ ಜೊತೆಗೆ ಹಗುರವಾಗಿ ಹುರಿದು ತಿಂದರೆ ರುಚಿಯಾದ ಆಹಾರವೂ ಹೌದು. ಸ್ವಲ್ಪವೇ ಸ್ವಲ್ಪ ತಿಂದರೂ ಹೊಟ್ಟೆ ತುಂಬಿರುವ ಭಾವವನ್ನು ಇದು ನೀಡುತ್ತದೆ.

ನಾರಿನಂಶ ಹೇರಳ

ಇದು ನಾರಿನಂಶದಿಂದ ಸಮೃದ್ಧವಾಗಿರುವ ಆಹಾರವಾದ್ದರಿಂದ ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು. ಹುರಿದಾಗ ಕ್ರಂಚೀಯಾಗಿ ಅತ್ಯಂತ ರುಚಿಯಾಗಿ ಇರುತ್ತದೆ. ಮಲಬದ್ಧತೆ ಸೇರಿದಂತೆ ಯಾವ ಸಮಸ್ಯೆಗಳೂ ಇದರ ಹತ್ತಿರ ಸುಳಿಯದು.

ಚರ್ಮದ ಆರೋಗ್ಯಕ್ಕೆ ಸೂಕ್ತ

ಮಖಾನಾದಲ್ಲಿ ಆಂಟಿ ಆಕ್ಸಿಡೆಂಟ್‌ ಗುಣಗಳಿದ್ದು, ಇದು ಆಂಟಿ ಏಜಿಂಗ್‌ ಕೂಡಾ ಹೌದು. ಫಿನಾಲಿಕ್‌ ಆಸಿಡ್‌ ಹಾಗೂ ಫ್ಲೇವನಾಯ್ಡ್‌ಗಳಿರುವ ಆಹಾರಗಳು ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಈ ಗುಣ ಮಖಾನಾದಲ್ಲಿರುವುದರಿಂದ, ನಿತ್ಯವೂ ಸೇವನೆ ಮಾಡುವುದರಿಂದ ಇದು ಚರ್ಮ ಬಹುಬೇಗನೆ ಸುಕ್ಕಾಗುವುದನ್ನು ತಡೆಯುತ್ತದೆ.

ಹೃದಯಸ್ನೇಹಿ

ಮಖಾನಾ ಹೃದಯಸ್ನೇಹಿ ಕೂಡಾ ಹೌದು. ಇದರಲ್ಲಿರುವ ಒಳ್ಳೆಯ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿದ್ದು ಕಡಿಮೆ ಕೊಲೆಸ್ಟೆರಾಲ್‌ ಇರುವುದರಿಂದ ಹೃದಯಕ್ಕೆ ಒಳ್ಳೆಯದು.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಮಧುಮೇಹಿಗಳಿಗೆ ಸೂಕ್ತ

ಮಧುಮೇಹಿಗಳಿಗೂ ಇದು ಒಳ್ಳೆಯದು. ಇದರ ನಿತ್ಯ ಸೇವನೆಯಿಂದ ಮಧುಮೇಹಕ್ಕೆ ಏನೂ ತೊಂದರೆಯಾಗದು ಹಾಗೂ ಇದರಲ್ಲಿರುವ ಪೋಷಕಾಂಶಗಳು ಮಧುಮೇಹವನ್ನು ದೂರ ಇರಿಸುವಲ್ಲಿ ಸಹಾಯವನ್ನೇ ಮಾಡುತ್ತದೆ.

Exit mobile version