ನಮ್ಮ ಜೀವನದ ಎಲ್ಲಾ ಭಾಗಗಳೂ ಒಟ್ಟಾರೆಯಾಗಿ ಸೇರಿ ನಮ್ಮ ದೇಹಸ್ವಾಸ್ಥ್ಯವನ್ನು ರೂಪಿಸುತ್ತವೆ. ನಮ್ಮ ಆಹಾರ, ವ್ಯಾಯಾಮ, ನಮ್ಮ ಚಟುವಟಿಕೆಗಳು, ಉಸಿರಾಡುವ ಗಾಳಿಯಿಂದ ಹಿಡಿದು ಎಲ್ಲವೂ ಮಹತ್ವವೆನಿಸುತ್ತವೆ. ಸಿಗರೇಟ್ ಮತ್ತು ತಂಬಾಕಿನ ಚಟದಿಂದ ಪುಪ್ಪುಸ ಕ್ಯಾನ್ಸರ್ (Lung Cancer) ಬರುವುದೆಂಬ ಸತ್ಯ ಈಗಾಗಲೇ ಸಿದ್ಧವಾಗಿರುವಂಥದ್ದು. ಆದರೆ ಶ್ವಾಸಕೋಶದ ಕ್ಯಾನ್ಸರ್ ಬರುವುದಕ್ಕೆ ಇದೊಂದೇ ಅಲ್ಲ, ಇನ್ನೂ ಬಹಳಷ್ಟು ಕಾರಣಗಳಿವೆ ಎಂಬುದನ್ನೂ ಅಧ್ಯಯನಗಳು ಎತ್ತಿ ಹಿಡಿಯುತ್ತಿವೆ. ಇದಲ್ಲದೆ ಇನ್ನೂ ಏನೆಲ್ಲ ಕಾರಣಗಳು ಶ್ವಾಸಕೋಶದ ಕ್ಯಾನ್ಸರ್ ಅಮರಿಕೊಳ್ಳುವುದರ ಹಿಂದಿವೆ ಮತ್ತು ಅದನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಮಾಡುವುದು ಹೇಗೆ ಎಂಬ ವಿವರಗಳು ಇಲ್ಲಿವೆ.
ಪರಿಸರ ಮಾಲಿನ್ಯ
ಇತ್ತೀಚಿನ ವರ್ಷಗಳಲ್ಲಿ ಇದು ಸಹ ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತಿದೆ. ಇದಕ್ಕೆ ಕಾರಣವಾಗುವಂಥ ವಿಷಯಗಳು ಬಹಳಷ್ಟಿವೆ. ವಾಹನಗಳು ಉಗುಳುವ ಹೊಗೆ, ಕಾರ್ಖಾನೆಗಳಿಂದ ಹೊರಸೂಸುವ ವಿಷಾನಿಲಗಳಿಂದ ಹಿಡಿದು ರಸ್ತೆಬದಿಯಲ್ಲಿ ಸುಡುವ ಕಸದವರೆಗೆ ಬಹಳಷ್ಟು ರೀತಿಯ ಮಾಲಿನ್ಯಗಳೆಲ್ಲವೂ ಸೇರಿ ವಾತಾವರಣದ ಘನ ಕಣಗಳ (ಪಿಎಂ) ಸಾಂದ್ರತೆ ಹೆಚ್ಚುತ್ತದೆ. ಈ ಸಮಸ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ವಾತಾವರಣದಲ್ಲಿನ ಘನ ಕಣಗಳ ಸಾಂದ್ರತೆ ಹೆಚ್ಚಿದಂತೆ ಶ್ವಾಸಕೋಶಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರುತ್ತಿದೆ.
ರೇಡಾನ್ ಭೀತಿ
ಮಣ್ಣಿನಲ್ಲಿ ಹೆಚ್ಚಿನ ಯುರೇನಿಯಂ ಅಂಶ ಇರುವಲ್ಲಿ ನೈಸರ್ಗಿಕವಾಗಿಯೇ ಕಂಡು ಬರುವ ವಿಕಿರಣಕಾರಕ ಅನಿಲವಿದು. ಕೆಲವೊಮ್ಮೆ ಒಂದೊಂದು ಪ್ರದೇಶಗಳಲ್ಲಿ, ಮನೆಗಳಲ್ಲೂ ಇದರ ಸಾಂದ್ರತೆ ಹೆಚ್ಚಬಲ್ಲದು. ಕಾರಣ, ಆಯಾ ಪ್ರದೇಶದ ಮಣ್ಣಿನ ಗುಣ ನಮಗೆ ಅರಿವಿರುವುದಿಲ್ಲ. ಇಂಥ ಪ್ರದೇಶಗಳಲ್ಲಿ ದೀರ್ಘ ಕಾಲ ವಾಸವಿದ್ದರೆ, ಇದೇ ವಿಕಿರಣ ಅನಿಲವನ್ನು ಉಸಿರಾಡಿದರೆ ಪುಪ್ಪುಸ ಕ್ಯಾನ್ಸರ್ ಭೀತಿ ಹೆಚ್ಚುತ್ತದೆ.
ವೃತ್ತಿಯ ತೊಂದರೆಗಳು
ಗಣಿಯಲ್ಲಿ ಕೆಲಸ ಮಾಡುವವರು, ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವವರು, ಕೆಲವು ರಾಸಾಯನಿಕಗಳ ತಯಾರಿಕೆಯಲ್ಲಿ ತೊಡಗಿಕೊಂಡವರು- ಇಂತಹ ವೃತ್ತಿಗಳಲ್ಲಿ ಇರುವವರಿಗೆ ಶ್ವಾಸಕೋಶಗಳು ಹಾನಿಗೊಳಗಾಗುವ ಸಾಧ್ಯತೆ ಉಳಿದವರಿಗಿಂತ ಹೆಚ್ಚು. ಆಸ್‌ಬೆಸ್ಟೋಸ್, ಆರ್ಸೆನಿಕ್, ಡೀಸೆಲ್ ಹೊಗೆಯೂ ಶ್ವಾಸಕೋಶಗಳ ಕ್ಯಾನ್ಸರ್ ಬರುವುದಕ್ಕೆ ರಹದಾರಿ ನೀಡಬಲ್ಲವು.
ಆನುವಂಶಿಕ ಕಾರಣಗಳು
ಕುಟುಂಬದಲ್ಲಿ ಕ್ಯಾನ್ಸರ್‌ನ ಇತಿಹಾಸವಿದ್ದರೆ ಈ ಬಗ್ಗೆ ಎಚ್ಚರದಿಂದ ಇರುವುದು ಒಳಿತು. ಅದರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಹೊಂದಿದ ರಕ್ತಸಂಬಂಧಿಗಳಿದ್ದರೆ, ಕುಟುಂಬಸ್ಥರಿದ್ದರೆ, ಮುಂದಿನ ತಲೆಮಾರುಗಳ ಅಪಾಯವನ್ನು ಹೆಚ್ಚಿಸುತ್ತದೆ.
ಶ್ವಾಸಕೋಶದ ಸಮಸ್ಯೆಗಳು
ಪಲ್ಮನರಿ ಫೈಬ್ರೋಸಿಸ್ ಅಥವಾ ಇನ್ನಾವುದೇ ರೀತಿಯ ಉರಿಯೂತಗಳು ದೀರ್ಘಕಾಲ ಶ್ವಾಸಕೋಶಗಳನ್ನು ಕಾಡಿದರೆ, ಅದರಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಉರಿಯೂತದಿಂದ ಪುಪ್ಪುಸಗಳನ್ನು ಪಾರು ಮಾಡುವಂಥ ಕ್ರಮಗಳ ಬಗ್ಗೆ ವೈದ್ಯರಲ್ಲಿ ಚರ್ಚಿಸುವುದು ಕ್ಷೇಮ.
ಪಾರ್ಶ್ವ ಧೂಮಪಾನ
ಸಿಗರೇಟ್ ಸೇದುವ ಚಟದವರಿಗೆ ಚಟ್ಟ ಖಾತ್ರಿ. ಆದರೆ ನೇರವಾಗಿ ಅಲ್ಲದೆ, ಈ ಹೊಗೆಗೆ ತೆರೆದುಕೊಂಡವರಿಗೂ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ತಪ್ಪಿದ್ದಲ್ಲ. ಇದಿಷ್ಟೇ ಅಲ್ಲ, ನಿಕೋಟಿನ್ ಅವಶೇಷಗಳ ಸಂಪರ್ಕಕ್ಕೆ ನಿಯಮಿತವಾಗಿ ಬಂದರೂ ಈ ಭೀತಿ ಹತ್ತಿರವಾಗುತ್ತದೆ ಎನ್ನುತ್ತವೆ ಹಲವು ಅಧ್ಯಯನಗಳು. ಹಾಗಾಗಿ ಕುಟುಂಬದಲ್ಲಿ ಧೂಮಪಾನಿಗಳು ಇಲ್ಲದಿದ್ದರೂ, ಅಕ್ಕಪಕ್ಕದಲ್ಲಿ ಇದ್ದರೂ ಅಪಾಯ ಅಕ್ಕಪಕ್ಕದಲ್ಲೇ ಇದೆಯೆಂದು ಅರ್ಥ.
ಇದನ್ನೂ ಓದಿ: Painkillers Side Effects: ನೋವು ನಿವಾರಕಗಳನ್ನು ನುಂಗುತ್ತೀರಾ? ಹಾಗಾದರೆ ಈ ಮಾಹಿತಿ ತಿಳಿದಿರಲಿ!
ದೂರ ಮಾಡುವುದು ಹೇಗೆ?
ವಾಯು ಮಾಲಿನ್ಯ ಹೆಚ್ಚಿದೆ ಎನಿಸಿದ ಪ್ರದೇಶಗಳಿಂದ ದೂರ ಸರಿಯಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ಅದರಲ್ಲೂ ವಾತಾವರಣದಲ್ಲಿ ರೇಡಾನ್‌ನಂಥ ಅನಿಲಗಳಿದ್ದರೆ, ಸ್ಥಳ ಬದಲಿಸುವುದೇ ಸೂಕ್ತ. ಆನುವಂಶಿಕ ಕಾರಣಗಳಿದ್ದರೆ, ಕಾಲಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ ಆರಂಭದಲ್ಲಿ ಇರುವಂಥವೂ ಪತ್ತೆಯಾಗಬಹುದು. ಉತ್ತಮ ಆಹಾರ, ನಿದ್ದೆ, ವ್ಯಾಯಾಮದಂಥ ಕ್ರಮಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಬಹಳಷ್ಟು ರೋಗಗಳನ್ನು ದೂರ ಇರಿಸಬಲ್ಲದು.