Site icon Vistara News

Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

Microplastics

ನಾವು ನಿತ್ಯವೂ ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್‌ (Microplastics) ಇದೆ ಎಂದರೆ ನಂಬುತ್ತೀರಾ? ಹೌದು. ಮೈಕ್ರೋ ಪ್ಲಾಸ್ಟಿಕ್‌ ಎಂಬ ಕಣ್ಣಿಗೆ ಕಾಣದ ಪ್ಲಾಸ್ಟಿಕ್‌ ಕಣಗಳು ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್‌ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್‌ನ ಕಣಗಳು. ಬಹಳ ಸೂಕ್ಷ್ಮವಾದ ಈ ಪ್ಲಾಸ್ಟಿಕ್‌ ಕಣಗಳು ನಾವು ಉಸಿರಾಡುವ ಗಾಳಿಯಲ್ಲಿ ತೇಲಾಡುತ್ತಾ ವಾತಾವರಣದಲ್ಲಿ ಇರುತ್ತವೆ. ವಾತಾವರಣದಲ್ಲಿರುವ ಇವು ಅನೇಕ ಬಾರಿ ತೆರೆದ ಆಹಾರದ ಮೇಲೆಯೂ ಸಂಗ್ರಹವಾಗುತ್ತವೆ. ಬಹಳ ಸಾರಿ, ಕಾರ್ಖಾನೆಗಳಲ್ಲಿ ಸಂಸ್ಕರಿಸಿದ ಆಹಾರ ತಯಾರಿಸುವಾಗಲೇ ಪ್ಯಾಕೇಜಿನ ಜೊತೆಗೂ ಇವು ಸೇರಿಕೊಂಡು ಬಿಟ್ಟಿರುತ್ತವೆ. ನಾವು ಕುಡಿಯುವ ನೀರಿನಲ್ಲಿ, ಕುಡಿಯುವ ಪೇಯಗಳಲ್ಲಿ ಅಥವಾ ಯಾವುದೇ ತೆರೆದ, ತೆರೆಯದ ಆಹಾರಗಳ ಮೇಲೆ ಇಂತಹ ಕಣಗಳು ನಮಗೆ ತಿಳಿಯದೆ ಸೇರಿರುತ್ತವೆ. ಹೀಗಾಗಿ ಮುಚ್ಚಿಟ್ಟ ಆಹಾರದಲ್ಲಿಯೂ, ಮೊದಲೇ ಪ್ಯಾಕಟ್ಟಿನಲ್ಲಿರುವ ಆಹಾರದಲ್ಲಿಯೂ ಇಂತಹ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಬಂದಿರುವ ಸಾಧ್ಯತೆ ಇರುವುದರಿಂದ ನಾವು ಎಷ್ಟೇ ಜಾಗರೂಕತೆಯಿಂದ ಆಹಾರಗಳನ್ನು ಕಾಪಿಟ್ಟರೂ, ಇವು ಮೊದಲೇ ಸೇರಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಅಷ್ಟೇ ಅಲ್ಲ, ನಾವು ಓಡಾಡುವ ಪರಿಸರದ ವಾತಾವರಣದಲ್ಲಿಯೂ ಇರುವುದರಿಂದ ಇದು ಈಚೆಗೆ ಸಹಜವೇ ಆಗಿದೆ. ಒಂದು ಅಧಯಯನದ ಪ್ರಕಾರ, ಉಪ್ಪು, ಮೀನು ಮತ್ತಿತರ ಸಮುದ್ರ ಜೀವಿಗಳು, ಮಾಂಸ, ಪೇಯಗಳು ಸೇರಿದಂತೆ ಹಲು ಪ್ಯಾಕೇಜ್ಡ್‌ ಆಹಾರಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ ಇರುವ ಸಾಧ್ಯತೆಗಳು ಹೆಚ್ಚಿವೆಯಂತೆ.

ಮೈಕ್ರೋ ಪ್ಲಾಸ್ಟಿಕ್‌ ಹಾವಳಿ

ಒಂದು ಅಧ್ಯಯನದ ಪ್ರಕಾರ 1990ರಿಂದ 2018ರವರೆಗೆ 109 ದೇಶಗಳ ಪೈಕಿ ಸಮುದ್ರ ತೀರದಲ್ಲಿರುವ ದೇಶಗಳ ಮೇಲೆ ಈ ಮೈಕ್ರೋ ಪ್ಲಾಸ್ಟಿಕ್‌ ಹಾವಳಿ ಹೆಚ್ಚಿದೆಯಂತೆ. ಅದರಲ್ಲೂ ಇಂಡೋನೇಷ್ಯಾ ಈ ಸಮಸ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆಯಂತೆ. ತಿಂಗಳಿಗೆ ಇಲ್ಲಿ 15 ಗ್ರಾಂಗಳಷ್ಟು ಮೈಕ್ರೋ ಪ್ಲಾಸ್ಟಿಕ್‌ ಇಲ್ಲಿನ ಮಂದಿಯ ಹೊಟ್ಟೆ ಸೇರುತ್ತದಂತೆ. ಇನ್ನುಳಿದಂತೆ ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡದ ದೇಶಗಳಲ್ಲಿ (ಚೈನಾ ಹಾಗೂ ಯುಎಸ್‌ ಸೇರಿದಂತೆ) ಈ ಮೈಕ್ರೋ ಪ್ಲಾಸ್ಟಿಕ್‌ ದೇಹ ಸೇರುವ ಪ್ರಮಾಣ ಇತ್ತೀಚೆಗಿನ ವರ್ಷಗಳಲ್ಲಿ ಆರು ಪಟ್ಟು ಹೆಚ್ಚಿದೆಯಂತೆ.

ಹಾರ್ಮೋನುಗಳನ್ನೇ ನಕಲು ಮಾಡುತ್ತವೆ

ಸಂಶೋಧನೆಗಳ ಪ್ರಕಾರ, ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳಾದ ಬಿಪಿಎ, ಪ್ಥಲೇಟ್ಸ್‌ ಹಾಗೂ ಪಿಎಫ್‌ಎಎಸ್‌ ನಂತಹುಗಳು ಮಾನವನ ದೇಹದ ಹಾರ್ಮೋನುಗಳನ್ನೇ ನಕಲು ಮಾಡುತ್ತವೆ. ಇದರಿಂದ ಸಂತಾನಹೀನತೆಯೂ ಸೇರಿದಂತೆ ಕ್ಯಾನ್ಸರ್‌ವರೆಗೂ ಹಲವು ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣಗಳಿವೆ.
ಹಾಗಾದರೆ ಇದರಿಂದ ದೂರವಿರಲು ಏನು ಮಾಡಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಈ ಕೆಲವು ಜಾಗರೂಕತೆಗಳನ್ನು ನೀವು ವಹಿಸಬಹುದು.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಅವು ಯಾವುವೆಂದರೆ

  1. ಪ್ಲಾಸ್ಟಿಕ್‌ನ ಪಾತ್ರೆಗಳನ್ನು, ಬೌಲ್‌ಗಳನ್ನು ಮೈಕ್ರೋವೇವ್‌ನಲ್ಲಿಡಬೇಡಿ. ಅದರ ಅತಿಯಾದ ಉಷ್ಣತೆ ಪ್ಲಾಸ್ಟಿಕ್‌ನಿಂದ ಕೆಟ್ಟ ರಾಸಾಯನಿಕಗಳನ್ನು ಬಿಡುಗಡೆ ಮಾಡುವಂತೆ ಮಾಡುತ್ತವೆ. ಹೀಗಾಗಿ ಮೈಕ್ರೋವೇವ್‌ಗೆ ಸೆರಾಮಿಕ್‌ ಅಥವಾ ಗ್ಲಾಸ್‌ ಬೌಲ್‌ಗಳನ್ನೇ ಇಡಿ.
  2. ಗ್ಲಾಸ್‌ ಅಥವಾ ಸ್ಟೀಲ್‌ ನೀರಿನ ಬಾಟಲ್‌ಗಳನ್ನೇ ಬಳಸಿ. ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಬೇಡಿ.
  3. ಆದಷ್ಟೂ ಸಾವಯುವ ವಸ್ತುಗಳನ್ನೇ ಬಳಸಿ. ಕ್ರಿಮಿನಾಶಕಗಳನ್ನು ಬಳಸಿದ ತರಕಾರಿಗಳನ್ನು ಕಡಿಮೆ ಮಾಡಿ.
  4. ಮಾಂಸವನ್ನು ತಿನ್ನುವುದನ್ನು ಕಡಿಮೆ ಮಾಡಿ. ಇವು ಅತಿಯಾದ ಕೊಬ್ಬಿನ ಆಹಾರಗಳಾಗಿರುವುದರಿಂದ ಹಾಗೂ ಪ್ರಾಣಿ ಮೂಲಮೂಲವಾಗಿರುವುದರಿಂದ ಇವುಗಳಲ್ಲಿ ರಾಸಾಯನಿಕಗಳು ಹೆಚ್ಚು ಸಂಗ್ರಹವಾಗುತ್ತವೆ.
Exit mobile version