ಮಳೆಗಾಲ (Monsoon) ಜೋರಾಗಿದೆ. ಹಾಗಾಗಿ ವೈರಸ್, ಬ್ಯಾಕ್ಟೀರಿಯಾಗಳ ಸದ್ದೂ ಜೋರಾಗಿದೆ. ಎಲ್ಲೆಲ್ಲೂ ವೈರಲ್ ಜ್ವರಗಳು, ಇನ್‌ಫೆಕ್ಷನ್ ಸಮಸ್ಯೆಗಳು, ಮಳೆಗಾಲದಲ್ಲಿ ಕಾಡುವ ಶೀತ, ನೆಗಡಿ, ಕೆಮ್ಮು, ಕಫಗಳೂ ಹೆಚ್ಚಾಗಿವೆ. ಮಳೆಗಾಲದ ಸಂಭ್ರಮದ ಜೊತೆ ಈ ಎಲ್ಲ ಸಮಸ್ಯೆಗಳೂ ನಮ್ಮನ್ನು ಒಮ್ಮೆಯಾದರೂ ಕಾಡದೆ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಕೆಲವು ಆಹಾರಗಳನ್ನು ನಾವು ಕಡಿಮೆ ಮಾಡಬಹುದು. ಅವುಗಳಲ್ಲಿ ಮುಖ್ಯವಾದುದು ಹಸಿರು ಸೊಪ್ಪು. ಸೊಪ್ಪಿನ ಅಡುಗೆ ಮಾಡುವ ಮುನ್ನ ಮಳೆಗಾಲದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹಾಗಂತ ಮಳೆಗಾಲದಲ್ಲಿ ಇವನ್ನು ತಿನ್ನಲೇಬಾರದು ಎಂದಲ್ಲ. ಎಚ್ಚರಿಕೆ ಖಂಡಿತ ಬೇಕು. ಮಳೆಗಾಲದಲ್ಲಿ ಸೊಪ್ಪಿನ ಮೇಲೆ ಸಾಕಷ್ಟು ಬ್ಯಾಕ್ಟೀರಿಯಾ, ವೈರಸ್ ದಾಳಿಯಾಗಿರುತ್ತದೆ. ಹುಳು ಹುಪ್ಪಟೆಗಳೂ ಸಾಮಾನ್ಯ. ಆದ್ದರಿಂದ ಇವುಗಳು ನಮ್ಮ ದೇಹಕ್ಕೆ ಪ್ರವೇಶಿಸುವ ಮಾರ್ಗ ಸುಲಭವಾಗಿ ಬಿಡುತ್ತದೆ. ನಾವು ಅವುಗಳನ್ನು ಸರಿಯಾಗಿ ತೊಳೆದು ಬಳಸದಿದ್ದರೆ ಹೊಟ್ಟೆ ಕೆಡುವ ಸಮಸ್ಯೆ, ಬೇದಿ, ವಾಂತಿ ಇತ್ಯಾದಿಗಳೂ ಬರಬಹುದು. ಹಾಗಾಗಿ, ಮಳೆಗಾಲದಲ್ಲಿ ಸೊಪ್ಪು ಸದೆಗಳನ್ನು ಅಡುಗೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ ಎನ್ನುತ್ತಾರೆ ತಜ್ಞರು. ಬನ್ನಿ, ಸೊಪ್ಪು ಸೇವಿಸುವ ಮುನ್ನ ಯಾವ ಎಚ್ಚರಿಕೆಗಳು (Monsoon Healthy Cooking Tips) ಮುಖ್ಯ ಎಂಬುದನ್ನು ನೋಡೋಣ. ಮಳೆಗಾಲದಲ್ಲಿ, ಸಹಜವಾಗಿ ಕೆಲವು ಸೊಪ್ಪುಗಳು ತರಕಾರಿ ಮಾರುಕಟ್ಟೆಯಲ್ಲಿ ಕಾಣೆಯಾಗುತ್ತದೆ. ಬಹಳ ಸೂಕ್ಷ್ಮವಾಗಿರುವ ಪಾಲಕ್‌ನಂತಹ ಸೊಪ್ಪುಗಳು ಮಳೆಗಾಲದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಹರಿದು ಛಿದ್ರವಾಗುವುದರಿಂದ ಮಾರುಕಟ್ಟೆಗೆ ಬರುವುದೇ ಇಲ್ಲ. ಮೆಂತ್ಯ ಸೊಪ್ಪೂ ಕೂಡಾ ಅಷ್ಟೇ, ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿರುವುದಿಲ್ಲ. ಕೆಲವು ಸೊಪ್ಪುಗಳು ಮಳೆಗಾಲಕ್ಕೆ ಸರಿಯಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಆದರೆ, ಮಳೆಗಾಲವಾದ್ದರಿಂದ ಸೊಪ್ಪು ಹರದಿರುವುದು, ಬೇರುಗಳೆಲ್ಲ ಕೆಸರಾಗಿರುವುದು, ಹುಳು ಹುಪ್ಪಟೆಗಳು ಎಲೆಯನ್ನು ಕಚ್ಚಿ ಹರಿದಿರುವುದು, ಎಲೆಯ ಅಡುಭಾಗದಲ್ಲಿ ಹುಳಗಳು ಹರಿದುಹೋಗಿರುವ ಗುರುತು ಇವೆಲ್ಲವೂ ಸಾಮಾನ್ಯವಾಗಿರುತ್ತದೆ. ಹಾಗಾಗಿಯೇ ಸೊಪ್ಪಿನ ಅಡುಗೆ ಮಾಡುವಾಗ ಎಚ್ಚರಿಕೆ ಬಹಳ ಅಗತ್ಯ.
ಸೊಪ್ಪಿನ ಅಡುಗೆ ಮಳೆಗಾಲದಲ್ಲಿ ಮಾಡುವ ಮೊದಲು ಸೊಪ್ಪನ್ನು ಮೊದಲು ಬಿಡಿಸಿ. ನೀರಲ್ಲಿ ಹಾಕಿಟ್ಟು ತೊಳೆಯಿರಿ. ಹುಳ ಹುಪ್ಪಟೆಗಳಿರುವ ಎಲೆಗಳನ್ನು ಬಳಸದಿರಿ. ಸರಿಯಾಗಿರುವ, ಆರೋಗ್ಯವಾಗಿ ಕಾಣುವ ಎಲೆಗಳನ್ನು ಆರಿಸಿಕೊಂಡು ಪ್ರತ್ಯೇಕವಾಗಿಟ್ಟು, ಉಳಿದವನ್ನು ಎಸೆಯಿರಿ. ಪ್ರತಿಯೊಂದು ಎಲೆಯನ್ನೂ ಸೂಕ್ಷ್ಮವಾಗಿ ಗಮನಿಸಿ. ಸರಿಯಾಗಿರುವ ಎಲೆಯನ್ನು ಮಾತ್ರ ಚೆನ್ನಾಗಿ ಎರಡೆರಡು ಬಾರಿ ತೊಳೆದುಕೊಂಡು ಅದರ ಕಾಂಡಗಳನ್ನು ಕತ್ತರಿಸಿ ಎಸೆಯಿರಿ.
ಹರಿಯುವ ನೀರಿಗೆ ಹಿಡಿದು ತೊಳೆಯಿರಿ. ಮಾರುಕಟ್ಟೆಯಿಂದ ತಂದ ಕೃತಕ ತೊಳೆಯುವ ಲಿಕ್ವಿಡ್‌ಗಳಲ್ಲಿ ಹಾಕಿಟ್ಟು ತೊಳೆಯುವುದರಿಂದ ಎಲೆ ಮತ್ತಷ್ಟು ಹಾಳಾಗಬಹುದು. ಅದಕ್ಕಾಗಿ, ನಳ್ಳಿಯ ಅಡಿಯಲ್ಲಿ ಹಿಡಿದು ಹರಿಯುವ ನೀರಿನಲ್ಲಿ ತೊಳೆಯಿರಿ.
ತೊಳೆದ ಎಲೆಗಳನ್ನು ಆರಲು ಬಿಡುವುದು ಬಹಳ ಮುಖ್ಯ. ಒಣ ಟವೆಲ್ ಮೇಲೆ ತೊಳೆದ ಎಲೆಗಳನ್ನು ಹರವಿಟ್ಟು ಮೃದುವಾಗಿ ಒರೆಸಬಹುದು. ಅಥವಾ ಹಾಗೆಯೇ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಿನ ನೀರಿನಂಶ ಆರಲು ಬಿಡಬಹುದು.
ಎಲೆಗಳನ್ನು ತೊಳೆದುಕೊಂಡ ಮೇಳೆ ಒಂದೆರಡು ನಿಮಿಷಗಳ ಕಾಲ ಐಸ್ ನೀರಿನಲ್ಲಿ ಹಾಕಿಟ್ಟುಕೊಂಡು ನಂತರ ತೆಗೆಯಬಹುದು. ಹೀಗೆ ಮಾಡುವುದರಿಂದ ಎಲೆಯ ತಾಜಾತನ ಹಾಗೆಯೇ ಉಳಿದುಕೊಳ್ಳುತ್ತದೆ.
ಇದನ್ನೂ ಓದಿ: Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?
ಹಸಿ ಎಲೆಗಳಿಂದ ಮಾಡುವ ಅಡುಗೆಯನ್ನು ಮಳೆಗಾಲದಲ್ಲಿ ಮಾಡಬೇಡಿ. ಬಾಣಲೆಯಲ್ಲಿ ಎಲೆಯನ್ನು ಬಾಡಿಸಿಕೊಂಡು, ಬಿಸಿ ಮಾಡುವ ಮೂಲಕ ಮಾಡುವ ಅಡುಗೆಯನ್ನೇ ಮಾಡಿ. ಮಳೆಗಾಲದಲ್ಲಿ ಹಸಿ ಸೊಪ್ಪು ತರಕಾರಿಗಳನ್ನು ಹಾಗೆಯೇ ಹಸಿಯಾಗಿ ಬಳಸಬೇಡಿ.