ಜಾಹೀರಾತುಗಳಲ್ಲಿ ಬಣ್ಣದ ಮೌತ್‌ವಾಷ್‌ಗಳ ವರ್ಣನೆ ನೋಡಿ, ತಾವೂ ತಂದು ಅದರಿಂದ ಬಾಯಿ ತೊಳೆದುಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಅದನ್ನು ಬಳಸುವುದು ಬ್ರಹ್ಮವಿದ್ಯೆಯೂ ಅಲ್ಲ. ಮೌತ್‌ವಾಷ್‌ನ ಮುಚ್ಚಳದಲ್ಲಿ ಒಂದಿಷ್ಟು ದ್ರಾವಣವನ್ನು ಹಾಕಿಕೊಂಡು, ಅದರಲ್ಲಿ ಕೆಲವು ಸೆಕೆಂಡುಗಳ ಕಾಲ ಚೆನ್ನಾಗಿ ಬಾಯಿ ಮುಕ್ಕಳಿಸಿ ಉಗಿದರಾಯಿತು. ಇದಿಷ್ಟು ಮಾಡಿದರೆ ಬಾಯಿಯ ಎಲ್ಲ ಸಮಸ್ಯೆಗಳೂ ಪರಿಹಾರ ಆಗುತ್ತವೆಯೇ? ಹೌದಾದರೆ, ಇದನ್ನು ನಿತ್ಯವೂ ಬಳಸಬಹುದೇ? ಇದರಿಂದ ಅಡ್ಡ ಪರಿಣಾಮಗಳು ಇಲ್ಲವೇ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇಲ್ಲಿದೆ. ಮೌತ್ ವಾಷನ್ನು ಸರಿಯಾಗಿ ಬಳಸಿದರೆ, ಬ್ರಷ್‌ಗಳು ತಲುಪಲಾರದ ಮೂಲೆಗಳನ್ನೂ ಇವು ತಲುಪಿ ಬಾಯನ್ನು ಸ್ವಚ್ಛ ಮಾಡುವುದು ಹೌದು. ಬಾಯಲ್ಲಿರುವ ಬ್ಯಾಕ್ಟೀರಿಯಗಳನ್ನು ತೆಗೆದು ಬಾಯಿಯ ದುರ್ಗಂಧ ದೂರ ಮಾಡುತ್ತವೆ. ಇದರಲ್ಲಿ ಆಂಟಿಸೆಪ್ಟಿಕ್, ಫ್ಲೂರೈಡ್, ಆಸ್ಟ್ರಿಂಜೆಂಟ್‌ಗಳು ಮುಂತಾದ ಹಲವು ಅಂಶಗಳು ಸೇರಿರುವುದರಿಂದ, ದಂತ, ಒಸಡುಗಳ ಬಹಳಷ್ಟು ಸಮಸ್ಯೆಯನ್ನು ನಿಯಂತ್ರಿಸಬಲ್ಲವು. ಆದರೆ ನಿಮ್ಮ ಅಗತ್ಯ (Mouthwash Benefits) ಯಾವುದು ಎಂಬುದು ನಿಮಗೆ ತಿಳಿದಿದೆಯೇ?
ಯಾವುದು ಅಗತ್ಯ?
ಹಲವು ರೀತಿಯ ಮೌತ್‌ವಾಷ್‌ಗಳು ಬಳಕೆಯಲ್ಲಿವೆ. ಆಂಟಿಸೆಪ್ಟಿಕ್, ಫ್ಲೂರೈಡ್‌ಯುಕ್ತ, ಕಾಸ್ಮೆಟಿಕ್, ಚಿಕಿತ್ಸಕ ಮುಂತಾದವುಗಳಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆಂಟಿಸೆಪ್ಟಿಕ್ ಮೌತ್‌ವಾಷ್‌ಗಳು ದಿನ ಬಳಕೆಗೆ ಬೇಕಾಗುವುದಿಲ್ಲ. ದಿನವೂ ಬಳಸುವುದರಿಂದ ತೊಂದರೆಗಳು ಬರಬಹುದು. ಫ್ಲೂರೈಡ್ ಇರುವಂಥವನ್ನು ದಿನಕ್ಕೊಮ್ಮೆ ಬಳಸಬಹುದು. ಅದರಲ್ಲೂ ನೀವು ಇರುವ ಭೌಗೋಳಿಕ ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೂರೈಡ್ ಅಂಶ ಕಡಿಮೆ ಇದ್ದರೆ, ಖಂಡಿತಕ್ಕೂ ದಿನಕ್ಕೊಮ್ಮೆ ಇದನ್ನು ಬಳಸಬಹುದು.
ಕಾಸ್ಮೆಟಿಕ್ ಮೌತ್‌ವಾಷ್‌ಗಳು ಬಾಯಿಯ ದುರ್ಗಂಧ ನಿವಾರಣೆಗೆ ಮಾತ್ರವೇ ಸಹಕಾರಿ. ಚಿಕಿತ್ಸಕ ಮೌತ್‌ವಾಷ್‌ಗಳನ್ನು ವೈದ್ಯರೇ ನೀಡಬೇಕಾಗುತ್ತದೆ. ಯಾವುದೋ ಸಮಸ್ಯೆಯನ್ನೇ ಗುರಿಯಾಗಿಸಿ ನೀಡಲಾಗುವ ಇವುಗಳನ್ನು ಸದಾ ಕಾಲ ಉಪಯೋಗಿಸುವಂತಿಲ್ಲ. ಸಾಮಾನ್ಯ ಬಳಕೆಗೂ ದಂತ ವೈದ್ಯರ ಸಲಹೆ ಅಗತ್ಯ. ಈ ಮಾಹಿತಿಯ ಆಧಾರದ ಮೇಲೆ ದಿನವೂ ಮೌತ್‌ವಾಷ್ ಉಪಯೋಗಿಸಬಹುದೇ ಎಂಬುದನ್ನು ನೀವೇ ನಿರ್ಧರಿಸಬಹುದು. ಇದಲ್ಲದೆ, ಇನ್ನೂ ಏನೆಲ್ಲ ಉಪಯೋಗಗಳು ಇವೆ ಇದರಿಂದ?
ಹೆಚ್ಚುವರಿ ರಕ್ಷಣೆ
ಫ್ಲೂರೈಡ್ ಹೊಂದಿರುವ ಮೌತ್‌ವಾಷ್‌ಗಳು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತವೆ. ದಂತಗಳ ಎನಾಮಲ್ ರಕ್ಷಣೆ ಮಾಡಿ, ಒಡಸುಗಳನ್ನು ಸುರಕ್ಷಿತವಾಗಿ ಇರಿಸಿ, ಹಲ್ಲುಗಳ ಬೇರನ್ನು ಭದ್ರ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಹಲ್ಲುಗಳು ಹುಳುಕಾಗಿ, ಕುಳಿಯಾಗದಂತೆ ರಕ್ಷಣೆ ನೀಡುತ್ತವೆ. ಒಟ್ಟಾರೆಯಾಗಿ ಬಾಯಿಯ ಆರೋಗ್ಯಕ್ಕೆ ಇದೊಂದು ಒಳ್ಳೆಯ ಆಯ್ಕೆ.
ಬ್ಯಾಕ್ಟೀರಿಯ ದೂರ
ಬಾಯಲ್ಲಿ ಬ್ಯಾಕ್ಟೀರಿಯಗಳ ಸಾಂದ್ರತೆ ಹೆಚ್ಚಿದಂತೆ ದುರ್ಗಂಧವೂ ಹೆಚ್ಚುತ್ತದೆ. ಅದರಲ್ಲೂ ಸಾಮಾಜಿಕ ಸಂದರ್ಭಗಳಲ್ಲಿ ಬಚ್ಚಲಿನಂಥ ಬಾಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು, ಜೀರ್ಣಾಂಗಗಳ ಆರೋಗ್ಯ ನಿಭಾಯಿಸುವುದು, ಆಗಾಗ ನೀರು ಕುಡಿಯುವುದು- ಇಂಥವೆಲ್ಲ ಬಾಯಿಯ ದುರ್ಗಂಧ ನಿವಾರಣೆಯಲ್ಲಿ ಮುಖ್ಯವಾದವು. ಜೊತೆಗೆ ಮೌತ್‌ವಾಷ್ ಬಳಕೆಯಿಂದ ಬ್ಯಾಕ್ಟೀರಿಯಗಳು ಕಡಿಮೆಯಾಗಿ ದುರ್ಗಂಧವೂ ನಿವಾರಣೆಯಾಗುತ್ತದೆ.
ಆರೋಗ್ಯಕರ ಒಸಡು
ಕೆಲವು ಮೌತ್‌ವಾಷ್‌ಗಳು ಬ್ಯಾಕ್ಟೀರಿಯ ವಿರೋಧಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥವುಗಳ ನಿಯಮಿತ ಬಳಕೆಯಿಂದ ದಂತ ಕುಳಿಗಳನ್ನು, ಒಸಡಿನ ಸೋಂಕುಗಳನ್ನು ಮಟ್ಟ ಹಾಕಬಹುದು. ಬಾಯಲ್ಲಿ ಬ್ಯಾಕ್ಟೀರಿಯಗಳ ಪ್ಲೇಕ್‌ಗಳು ನಿರ್ಮಾಣವಾಗಿ ಒಸಡಿನ ಆರೋಗ್ಯಕ್ಕೆ ಸವಾಲೊಡ್ಡುವ ಸಾಧ್ಯತೆ ಇರುತ್ತದೆ. ಇವುಗಳಿಗೂ ಕೆಲವು ಮೌತ್‌ವಾಷ್‌ಗಳು ಪರಿಹಾರ ಒದಗಿಸಬಲ್ಲವು.
ಉಪಯೋಗ ಸುಲಭ
ಮನೆಯಲ್ಲಿದ್ದರೂ, ಪ್ರಯಾಣದಲ್ಲಿದ್ದರೂ ಇವುಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದು ಸುಲಭ. ಫ್ಲೋಸಿಂಗ್‌ನಂಥ ಕ್ರಮಗಳು ಸಮಯ ಬೇಡುತ್ತವೆ. ಮಾತ್ರವಲ್ಲ, ವಿಮಾನದಲ್ಲಿ, ಟ್ರೇನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಮಾಡಲೂ ಸಾಧ್ಯವಿಲ್ಲ. ಆದರೆ ಮೌತ್‌ವಾಷ್ ಬಳಕೆಗೆ ಅಂಥ ಯಾವುದೇ ಅಡೆ-ತಡೆಗಳಿಲ್ಲ; ಇದರ ಬಳಕೆ ಅತಿ ಸುಲಭ.
ಅಡ್ಡ ಪರಿಣಾಮಗಳಿವೆ
ಬಹಳಷ್ಟು ಮೌತ್‌ವಾಷ್‌ಗಳು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ. ಇದು ಬಾಯಿ ಒಣಗಿದಂತೆ ಮಾಡಿ, ಕಿರಿಕಿರಿ ಉಂಟುಮಾಡಬಹುದು. ದೀರ್ಘಕಾಲ ಇಂಥ ಮೌತ್‌ವಾಷ್ ಬಳಸುವುದರಿಂದ, ಈ ಸಮಸ್ಯೆಗಳು ಹೆಚ್ಚುತ್ತವೆ. ಹಾಗಾಗಿ ಸೂಕ್ಷ್ಮ ಒಸಡುಗಳು ಇರುವವರಿಗೆ ಮತ್ತು ಗರ್ಭಿಣಿಯರಿಗೆ ಆಲ್ಕೋಹಾಲ್ ಇಲ್ಲದಂಥ ಮೌತ್‌ವಾಷ್ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: Kidney Stones: ಈ ಅಭ್ಯಾಸ ನಿಮಗಿದ್ದರೆ ಕಿಡ್ನಿಯಲ್ಲಿ ಕಲ್ಲಾಗುವ ಅಪಾಯ ಹೆಚ್ಚು!
ಇನ್ನೂ ಇವೆ
ಬಾಯೆಲ್ಲ ಒಣಗಿದಂತಾಗುವುದು, ಉರಿ, ಬಾಯಿಯ ರುಚಿಯೇ ಬದಲಾದ ಅನುಭವ, ಅತಿಯಾಗಿ ಬಳಸಿದರೆ ನಾಲಿಗೆ ಮತ್ತು ಹಲ್ಲುಗಳ ಬಣ್ಣಗೆಡುವುದು, ಸಂವೇದನೆ ಹೆಚ್ಚುವುದು ಇತ್ಯಾದಿ ಹಲವು ಸಮಸ್ಯೆಗಳು ಮೌತ್‌ವಾಷ್ ಬಳಕೆ ಅತಿಯಾದರೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಈ ಅಂಶಗಳು ಹೊಟ್ಟೆ ಸೇರಿದರೆ, ಜೀರ್ಣಾಂಗಗಳಲ್ಲಿ ಕಿರಿಕಿರಿ, ಹೊಟ್ಟೆ ತೊಳೆಸಿದಂತಾಗುವುದು ಸಾಮಾನ್ಯ. ಹಾಗಾಗಿ ಮಕ್ಕಳು ಇದನ್ನು ಬಳಸುವುದಾದರೆ ಅವರತ್ತ ಲಕ್ಷ್ಯ ನೀಡಿ. ಇದನ್ನು ಸಂಪೂರ್ಣವಾಗಿ ಉಗಿಯಬೇಕೇ ಹೊರತು ನುಂಗುವಂತಿಲ್ಲ.