Site icon Vistara News

Multivitamins: ನಮಗೆ ವಿಟಮಿನ್‌ ಪೂರಕಗಳು ಅಗತ್ಯವೆಂದು ತಿಳಿಯುವುದು ಹೇಗೆ?

Multivitamins

ವಿಟಮಿನ್‌ ಮತ್ತು ಖನಿಜಗಳು (Multivitamins) ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಅಂಶಗಳು. ಅವುಗಳ ಕೊರತೆಯಾದರೆ ಅದನ್ನು ಶರೀರ ಹಲವು ಸೂಚನೆಗಳ ಮೂಲಕ ನಮಗೆ ತಿಳಿಸುತ್ತದೆ. ಆದರೆ ನಮಗದು ಅರ್ಥವಾಗಬೇಕಲ್ಲ? ಯಾಕೋ ಕೂದಲು ಉದುರುತ್ತಿದೆ ಎಂದು ಅಲವತ್ತುಕೊಳ್ಳುತ್ತೇವೆ; ಚರ್ಮಕ್ಕೆ ಹೊಳಪಿಲ್ಲ ಎಂದು ಗೊಣಗುತ್ತಾ ಏನೇನೋ ಕ್ರೀಮ್‌ ಬಳಿದುಕೊಳ್ಳುತ್ತೇವೆ; ಬಾಯಲ್ಲಿ ಹುಣ್ಣಾಗಿ ಒದ್ದಾಡುತ್ತೇವೆ; ದಿನವಿಡೀ ಶಕ್ತಿಯೇ ಇಲ್ಲದೆ ಪರದಾಡುತ್ತೇವೆ. ಇಷ್ಟಾದರೂ ನಮ್ಮ ಶರೀರ ನಮಗೇನು ಹೇಳುತ್ತಿದೆ ಎನ್ನುವುದನ್ನೇ ನಾವು ಕೇಳಿಸಿಕೊಳ್ಳುವುದಿಲ್ಲ. ನಮಗೆ ಬೇಕಾದ ಸತ್ವಗಳನ್ನು ನಾವು ಆಹಾರದ ಮೂಲಕವೇ ತೆಗೆದುಕೊಳ್ಳಬೇಕಾದ್ದು ಸರಿಯಾದ ಕ್ರಮ. ಆದರೆ ವಿಟಮಿನ್‌ಗಳು ಅಗತ್ಯವಿರುವ ಪ್ರಮಾಣಕ್ಕೂ, ಈಗ ದೊರೆಯುತ್ತಿರುವ ಪ್ರಮಾಣಕ್ಕೂ ಬಹಳ ವ್ಯತ್ಯಾಸವಿದ್ದರೆ, ಅದನ್ನು ಸರಿದೂಗಿಸಲು ಕೆಲ ದಿನಗಳ ಮಟ್ಟಿಗೆ ವೈದ್ಯರು ಮಲ್ಟಿವಿಟಮಿನ್‌ಗಳನ್ನು ಪೂರಕಗಳ ರೂಪದಲ್ಲಿ ನೀಡುವುದು ಸಾಮಾನ್ಯ. ಕೆಲವೇ ತಿಂಗಳ ಕಾಲ ಇದನ್ನು ನೀಡಿ, ನಂತರ ಆಹಾರದಲ್ಲೇ ಸತ್ವಗಳು ದೊರೆಯಬೇಕೆಂದು ಹೇಳುವುದೂ ಸಾಮಾನ್ಯ. ಆದರೆ ನಮಗೆ ಪೂರಕಗಳು ಅಗತ್ಯ ಎಂಬುದನ್ನು ನಾವು ತಿಳಿದುಕೊಳ್ಳುವುದು ಹೇಗೆ? ಇದಕ್ಕಾಗಿ ಏನನ್ನು ಗ್ರಹಿಸಬೇಕು ನಾವು?

ಈ ಸೂಚನೆಗಳನ್ನು ಗ್ರಹಿಸಿ

ಹೀಗೆನ್ನುತ್ತಿದ್ದಂತೆ ಈ ವಿಟಮಿನ್‌ಗಳ ಪೂರಕಗಳನ್ನು ಏಕ್‌ದಂ ಖರೀದಿಸಿ ಗುಳುಂ ಮಾಡುವುದಲ್ಲ. ಕಾರಣ, ಪ್ರತಿಯೊಂದು ಸೂಕ್ಷ್ಮ ಪೋಷಕಾಂಶಗಳಿಗೂ ಅದರದ್ದೇ ಆದ ನಿಗದಿತ ಮಟ್ಟವಿದೆ. ಅದನ್ನು ಮೀರಿ, ಏನಕ್ಕೇನೋ ಪೂರಕಗಳನ್ನು ತಿನ್ನುವಂತಿಲ್ಲ. ಅದಕ್ಕೆ ಅಡ್ಡ ಪರಿಣಾಮಗಳಿದ್ದು ಹೊಟ್ಟೆ ಬುಡಮೇಲಾಗಬಹುದು; ಪಿತ್ತಕೋಶವನ್ನೂ ಸಂಕಷ್ಟಕ್ಕೆ ದೂಡಬಹುದು. ಈ ಸತ್ವಗಳ ಕೊರತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ವೈದ್ಯರು ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೇಳಬಹುದು. ಯಾವ ಪೋಷಕಾಂಶಗಳು, ಎಷ್ಟು ಕೊರತೆಯಾಗಿದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕೆ ಇದೇ ಸರಿಯಾದ ಮಾರ್ಗ. ಉದಾ, ಕ್ಯಾಲ್ಶಿಯಂ ಹೀರಿಕೊಳ್ಳುವುದಕ್ಕೆ ಬೇಕಾಗುವ ವಿಟಮಿನ್‌ ಡಿ ಅಂಶ ದಿನಕ್ಕೆ ೧೫ ಮೈಕ್ರೋಗ್ರಾಂ ಗಳಷ್ಟು ಇದ್ದರೆ ಸಾಕಾಗುತ್ತದೆ. ಈ ಪ್ರಮಾಣ ಎಲ್ಲರಿಗೂ ಅಲ್ಲ, 19-70ರ ವಯೋಮಾನದವರಿಗೆ. 70ರ ಮೇಲ್ಪಟ್ಟವರಿಗೆ 20 ಮೈಕ್ರೋಗ್ರಾಂ ಬೇಕಾಗುತ್ತದೆ. ವಿಟಮಿನ್‌ ಸಿ ಮಾತ್ರೆಗಳನ್ನು ತೆಗೆದುಕೊಳ್ಳುವಾಗಲೂ, ಮಹಿಳೆಯರಿಗೆ ದಿನಕ್ಕೆ 75 ಮಿಲಿಗ್ರಾಂ, ಪುರುಷರಿಗೆ ದಿನಕ್ಕೆ 90 ಮಿಲಿಗ್ರಾಂ ಸಾಕು ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: Health Tips: ಅನೀಮಿಯ ತಡೆಯುವುದಕ್ಕೆ ದಿನಕ್ಕೆಷ್ಟು ಕಬ್ಬಿಣದಂಶ ಬೇಕು? ಇದನ್ನು ಆಹಾರದಿಂದ ಪಡೆಯುವುದು ಹೇಗೆ?

ಆಹಾರದ ಮೂಲಕವೇ ಏಕೆ?

ಮಾತ್ರೆಗಳ ರೂಪದಲ್ಲಿ ವಿಟಮಿನ್‌ ಖನಿಜಗಳೆಲ್ಲ ದೊರೆಯುವಾಗ, ಆಹಾರದಲ್ಲೇ ಕಷ್ಟಪಟ್ಟುಕೊಂಡು ಏಕೆ ಸೇವಿಸಬೇಕು? ಸುಮ್ಮನೆ ಮಾತ್ರೆ ನುಂಗಿದರೆ ಅಥವಾ ಟಾನಿಕ್‌ ಕುಡಿದರೆ ಆಗದೇ? ಈ ಮಾತ್ರೆಗಳಿಗಿಂತ ಸುಲಭವಾಗಿ ಆಹಾರದ ಮೂಲಕ ನೀಡುವುದನ್ನು ನಮ್ಮ ಶರೀರ ಹೀರಿಕೊಳ್ಳುತ್ತದೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ! ಅದರಲ್ಲೂ ಆಯಾ ಋತುಮಾನದಲ್ಲಿ ದೊರೆಯುವ ಹಣ್ಣು, ತರಕಾರಿಗಳೇ ಅಗತ್ಯ ಪೋಷಕಾಂಶಗಳು ಅತ್ತ್ಯುತ್ತಮ ಮೂಲ. ಕೊರತೆ ಇದ್ದಾಗ ಮಾತ್ರವೇ ಪೂರಕಗಳ ಮೊರೆ ಹೋಗಬೇಕೆ ವಿನಹ ಸದಾ ಕಾಲ ಅದನ್ನು ತಿನ್ನುವಂತಿಲ್ಲ. ಮಲ್ಟಿವಿಟಮಿನ್‌ಗಳನ್ನಾದರೂ ವೈದ್ಯರ ಸೂಚನೆ ಇಲ್ಲದೆ ಸೇವಿಸುವುದು ಸಂಕಷ್ಟಕ್ಕೆ ದಾರಿಯಾದೀತು.

Exit mobile version