ನವದೆಹಲಿ: ಪ್ರತಿನಿತ್ಯ ನಾವು ನೋಡುವ ನಾಲ್ಕು ಮಂದಿಯಲ್ಲಿ ಇಬ್ಬರಿಗೆ ಬೊಜ್ಜು ಇರುವುದು ಖಚಿತ. ಅದರಲ್ಲಿ ಒಬ್ಬರು ನೀವೇ ಇದ್ದರೂ ಇರಬಹುದು. ಇದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5)ಯಲ್ಲಿ ಕಂಡುಬಂದಿರುವ ಅಧಿಕೃತ ಡೇಟಾಗಳು ತಿಳಿಸಿರುವ ಸಂಗತಿ.
ಸ್ಥೂಲಕಾಯದ ಸಮಸ್ಯೆ ಮಹಿಳೆಯರಲ್ಲಿ ಶೇಕಡಾ 21ರಿಂದ ಶೇಕಡಾ 24ಕ್ಕೆ ಮತ್ತು ಪುರುಷರಲ್ಲಿ ಶೇಕಡಾ 19ರಿಂದ ಶೇಕಡಾ 23ಕ್ಕೆ ಹೆಚ್ಚಾಗಿದೆ. ಇದೇ ಸಮಯದಲ್ಲಿ, ದೇಶದ ಒಟ್ಟು ಫಲವತ್ತತೆ ದರವು (TFR) ಈಗ ಪ್ರತಿ ಮಹಿಳೆಗೆ 2 ಮಕ್ಕಳಿಗಿಂತಲೂ ಕಡಿಮೆಯಾಗಿದೆ. ಇದು ಫಲವತ್ತತೆಯ ಮರುಪೂರಣ ಮಟ್ಟಕ್ಕಿಂತ ಕಡಿಮೆ. ಈ ದರ ಮುಂದುವರುದರೆ ಇನ್ನು 40 ವರ್ಷಗಳಲ್ಲಿ ಜನಸಂಖ್ಯೆಯು ಸ್ಥಿರಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸ್ಥೂಲಕಾಯಕ್ಕೂ ಫಲವತ್ತತೆ ಕಡಿಮೆಯಾಗಿರುವುದಕ್ಕೂ ಸಂಬಂಧ ಇರಬಹುದು. ಸ್ಥೂಲಕಾಯ ಎಂಬುದು ಇಂಥ ಅನೇಕ ಸಮಸ್ಯೆಗಳ ಮೂಲ. ಅಧಿಕ ರಕ್ತದೊತ್ತಡ, ಮಧುಮೇಹ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳು, ಮತ್ತು ಪಾರ್ಶ್ವವಾಯುವಿನ ಅಪಾಯಗಳೆಲ್ಲ ಇದಕ್ಕೆ ಅಂಟಿಕೊಂಡಿರುತ್ತವೆ.
ಭಾರತವು ವೇಗವಾಗಿ ಸ್ಥೂಲಕಾಯರ ನಾಡಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. “ಭಾರತದಲ್ಲಿ ಸರಿಸುಮಾರು 25 ಪ್ರತಿಶತ ಪುರುಷರು ಮತ್ತು ಮಹಿಳೆಯರು ಅಧಿಕ ತೂಕ ಮತ್ತು ಬೊಜ್ಜು ಹೊಂದಿದ್ದಾರೆ. ಮೂಲಭೂತವಾಗಿ ನಗರವಾಸ, ಜೀವನಶೈಲಿಯಿಂದ ಯುವಜನರು ಹೆಚ್ಚು ಬಾಧಿತರಾಗುತ್ತಿರುವುದು ಕಳವಳಕಾರಿ ಎಂದು ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯ, ಹೆಚ್ಚುವರಿ ನಿರ್ದೇಶಕ ವಿ.ಎಸ್. ಚೌಹಾನ್ ಹೇಳುತ್ತಾರೆ.
ಭಾರತೀಯ ಜನಸಂಖ್ಯೆಯ ಶೇಕಡಾ 5ರಷ್ಟು ಜನರು ಈಗ ರೋಗಗ್ರಸ್ತ ಸ್ಥೂಲಕಾಯವನ್ನು ಹೊಂದಿದ್ದಾರಂತೆ. ಗ್ರಾಮೀಣ ಪುರುಷರು ಮತ್ತು ಮಹಿಳೆಯರು ನಗರವಾಸಿಗಳಿಗೆ ಹೋಲಿಸಿದರೆ ಹೆಚ್ಚು ತೆಳ್ಳಗಿದ್ದಾರೆ.
ಲಕಾಯದವರ ಸಂಖ್ಯೆಯ ಶೇಕಡಾವಾರು ಪ್ರಮಾಣ ಗ್ರಾಮೀಣ ಪ್ರದೇಶಗಳಿಗಿಂತ (ಶೇ 20) ನಗರಗಳಲ್ಲಿ (ಶೇ 33) ಹೆಚ್ಚು. ಶ್ರೀಮಂತಿಕೆ ಹೆಚ್ಚಿದಂತೆ ಮೈಯ ತೂಕ ಅಥವಾ ಸ್ಥೂಲಕಾಯ ಹೆಚ್ಚುವುದೂ ಕಂಡುಬಂದಿದೆ. ಕಡಿಮೆ ಸಂಪತ್ತಿರುವವರಲ್ಲಿ ಶೇಕಡಾ 10 ಮಹಿಳೆಯರಿಗೆ ಮತ್ತು ಅಷ್ಟೇ ಪ್ರಮಾಣದಲ್ಲಿ ಪುರುಷರಿಗೆ, ಅಧಿಕ ಸಂಪತ್ತಿರುವವರಲ್ಲಿ ಶೇಕಡಾ 39 ಮಹಿಳೆಯರಿಗೆ ಮತ್ತು ಶೇಕಡಾ 37 ಪುರುಷರಿಗೆ ಸ್ಥೂಲಕಾಯವಿದೆಯಂತೆ.
ಪುದುಚೇರಿ (ಶೇ. 46), ಚಂಡೀಗಢ (ಶೇ. 44), ದೆಹಲಿ, ತಮಿಳುನಾಡು ಮತ್ತು ಪಂಜಾಬ್ (41 ಪ್ರತಿಶತ)ಗಳಲ್ಲಿ ಸ್ಥೂಲಕಾಯದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ. 38) ಕೂಡ ಬೊಜ್ಜು ಹೊಂದಿರುವ ಮಹಿಳೆಯರಲ್ಲಿ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿವೆ.
ಜಾರ್ಖಂಡ್, ಬಿಹಾರ, ಗುಜರಾತ್ ನಂತರ ಅತಿ ಹೆಚ್ಚು ತೆಳ್ಳಗಿನ ಮಹಿಳೆಯರನ್ನು ಹೊಂದಿದೆ. ಮತ್ತೊಂದೆಡೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ. 45), ಪುದುಚೇರಿ (ಶೇ. 43) ಮತ್ತು ಲಕ್ಷದ್ವೀಪ (ಶೇ. 41) ಅಧಿಕ ತೂಕದ ಪುರುಷರನ್ನು ಹೊಂದಿವೆ. ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಅತಿ ಹೆಚ್ಚು ತೆಳ್ಳಗಿನ ಪುರುಷರಿದ್ದಾರೆ.
ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ
ಕಾರಣಗಳೇನು?
- ಹಳ್ಳಿಗಳಲ್ಲಿ ಸ್ಥೂಲಕಾಯದ ಪ್ರಮಾಣ ಕಡಿಮೆಯಿದೆ. ನೈಸರ್ಗಿಕ ಆಹಾರ, ಸಹಜ ದಿನಗೆಲಸಗಳು ವ್ಯಾಯಾಮದಂತೆ ಕೆಲಸ ಮಾಡುವ ಕಾರಣ ಸ್ಥೂಲಕಾಯ ಕಡಿಮೆ.
- ನಗರಪ್ರದೇಶಗಳ ಜೀವನಶೈಲಿ ಬೊಜ್ಜನ್ನು ಹೆಚ್ಚಿಸಿದೆ. ಅನಿಯಮಿತ ಸಮಯದಲ್ಲಿ ಆಹಾರ, ಕಲಬೆರಕೆ ಆಹಾರ, ವ್ಯಾಯಾಮದ ಕೊರತೆ, ಒತ್ತಡಗಳು ಬೊಜ್ಜು ಸೃಷ್ಟಿಸುತ್ತವೆ.
- ಆಹಾರ ಹಾಗೂ ಜೀವನಶೈಲಿಯಲ್ಲಿ ಆರೋಗ್ಯಕರ ವ್ಯತ್ಯಾಸಗಳನ್ನು ಮಾಡಿಕೊಳ್ಳುವುದು ಮಾತ್ರವೇ ಇದಕ್ಕೆ ಪರಿಹಾರ.
ಇದನ್ನೂ ಓದಿ: ಗಂಟೆಗಟ್ಲೆ ಬಿಂಜ್ ವಾಚಿಂಗ್ ಮಾಡಿದ್ರೆ ರಕ್ತ ಹೆಪ್ಪುಗಟ್ಟಬಹುದು ಹುಷಾರ್!