Site icon Vistara News

Tattoo Care: ಟ್ಯಾಟೂ ಪ್ರಿಯರೇ ಹುಷಾರ್‌! ಎಚ್‌ಐವಿ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು!

Tattoo Care

ಇತ್ತೀಚಿನ ವರ್ಷಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್‌ (Tattoo Care) ಜೋರಾಗಿದೆ. ಅವರಿಷ್ಟದ ಯಾರೋ ತಾರೆಯರನ್ನು ಅಥವಾ ಕ್ರೀಡಾಳುಗಳನ್ನು ನೋಡಿ ಟ್ಯಾಟೂ ಹಾಕಿಸಿಕೊಳ್ಳುವವರು ಲೆಕ್ಕವಿಲ್ಲದಷ್ಟು ಮಂದಿ. ಬರೀ ಕಪ್ಪು ಬಣ್ಣದ್ದು, ಬಣ್ಣ ಬಣ್ಣದ್ದು, ಹೆಸರುಗಳು, ಯಾರದ್ದೋ ಮುಖಗಳು, ಹೂ-ಬಳ್ಳಿಯ ಚಿತ್ರಗಳು, ಅರ್ಥವಿಲ್ಲದ ಆಕೃತಿಗಳು- ಹೀಗೆ ಏನೇನೋ ನಮೂನೆಗಳನ್ನು ಇದರಲ್ಲಿ ಕಾಣಬಹುದು. ಇದೆಲ್ಲ ಸರಿ. ಆದರೆ ಆರೋಗ್ಯ ತಜ್ಞರ ಪ್ರಕಾರ ಟ್ಯಾಟೂ ಹಾಕಿಸಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸದಿದ್ದರೆ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಗಂಟಿಕ್ಕಿಕೊಳ್ಳಬಹುದು.

ಏನು ಸಮಸ್ಯೆ?

ಟ್ಯಾಟೂ ಹಾಕಿಸಿಕೊಳ್ಳುವುದರಲ್ಲಿ ಏನಿದೆ ಸಮಸ್ಯೆ? ಜಗತ್ತಿನಲ್ಲಿ ಲಕ್ಷಗಟ್ಟಲೆ ಜನ ಹಾಕಿಸಿಕೊಂಡಿದ್ದಾರಲ್ಲ, ಹಾಕಿಸಿಕೊಳ್ಳುತ್ತಲೂ ಇದ್ದಾರಲ್ಲ ಎಂಬ ಕುತೂಹಲ ಇರಬಹುದು. ವೈದ್ಯರ ಪ್ರಕಾರ, ಹೆಪಟೈಟಿಸ್‌ ಬಿ, ಸಿ, ಎಚ್‌ಐವಿ ಹಾಗೂ ಹಲವು ರೀತಿಯ ಕ್ಯಾನ್ಸರ್‌ಗಳು ಬರಬಹುದು. ಈ ಬಗ್ಗೆ ಸ್ವೀಡನ್‌ನಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ, ಟ್ಯಾಟೂ ಹಾಕಿಸಿಕೊಂಡಿದ್ದ ೧೧,೯೦೫ ಜನರಿಂದ ಮಾಹಿತಿ ಕಲೆಹಾಕಲಾಗಿತ್ತು. ಇದರಲ್ಲಿ ಟ್ಯಾಟೂ ಹಾಕಿಸಿಕೊಂಡ ಬಹಳಷ್ಟು ಜನರಲ್ಲಿ ಲಿಂಫೋಮ ಸಾಧ್ಯತೆಗಳು ಕಂಡುಬಂದಿದ್ದವು.

ಹೀಗೇಕೆ?

ಟ್ಯಾಟೂ ಹಾಕುವುದಕ್ಕೆ ಬಳಸಲಾಗುವ ಶಾಯಿಯಲ್ಲಿ ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೋಕಾರ್ಬನ್‌ (ಪಿಎಎಚ್‌) ಎಂಬ ಕ್ಯಾನ್ಸರ್‌ಕಾರಕ ಇರುವಂಥ ಎಲ್ಲ ಸಾಧ್ಯತೆಗಳಿವೆ. ಎಲ್ಲ ಶಾಯಿಗಳೂ ಇದನ್ನು ಹೊಂದಿರುತ್ತವೆ ಎಂದಲ್ಲ, ಆದರೆ ಇದನ್ನು ಹೊಂದಿರುವಂಥ ಶಾಯಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಪಿಎಎಚ್‌ ಅಂಶ ದೇಹದೊಳಗೆ ಹೋದಾಕ್ಷಣ, ಶರೀರದ ಪ್ರತಿರೋಧಕ ಶಕ್ತಿ ಜಾಗೃತಗೊಳ್ಳುತ್ತದೆ. ಈ ಅಂಶದ ಬಹುಭಾಗ ಚರ್ಮದಿಂದ ಬೇರೆಯಾಗಿ, ಶರೀರವನ್ನು ಪ್ರವೇಶಿಸಿ, ದೇಹದ ಲಿಂಫ್‌ ನೋಡ್‌ಗಳಲ್ಲಿ ಜಮೆಯಾಗುತ್ತವೆ. ಇದರಿಂದಲೇ ಲಿಂಫೋಮದಂಥ ರೋಗಗಳು ತಲೆದೋರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.

ತಪ್ಪು ಮಾಹಿತಿ

ಟ್ಯಾಟೂ ಶಾಯಿಗಳ ಬಾಟಲಿಯ ಮೇಲೆ ನೀಡಿರುವ ಮಾಹಿತಿಗೂ, ಆ ಶಾಯಿಯಲ್ಲಿ ಇರುವಂಥ ಅಂಶಗಳಿಗೂ ಎಷ್ಟೋ ಬಾರಿ ತಾಳೆಯೇ ಬೀಳುವುದಿಲ್ಲ ಎಂಬ ಅಂಶವನ್ನು ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ನಡೆಸಲಾದ ಅಧ್ಯಯನ ಬಯಲು ಮಾಡಿತ್ತು. ಪರೀಕ್ಷೆಗೆ ಒಳಪಡಿಸಲಾದ ಶೇ 20ಕ್ಕಿಂತ ಹೆಚ್ಚಿನ ಶಾಯಿಗಳಲ್ಲಿ ಪಿಎಎಚ್‌ ಅಂಶಗಳು ಕಂಡಿದ್ದವು. ಮಾತ್ರವಲ್ಲ, ಪಾದರಸ, ಬ್ಯಾರಿಯಂನಂಥ ಭಾರೀ ಖನಿಜಗಳು ಸಹ ಇದರಲ್ಲಿ ಇದ್ದವು ಎಂದು ಅಧ್ಯಯನದ ವಿವರಗಳನ್ನು ನೀಡುತ್ತಾ ತಜ್ಞರು ತಿಳಿಸುತ್ತಾರೆ. ಈ ರಾಸಾಯನಿಕಗಳು ಕೆಲವೊಮ್ಮೆ ಚರ್ಮದ ತೊಂದರೆಗಳಿಂದ ಹಿಡಿದು ಚರ್ಮದ ಕ್ಯಾನ್ಸರ್‌, ಯಕೃತ್‌ ಕ್ಯಾನ್ಸರ್‌, ಮೂತ್ರಪಿಂಡದ ಕ್ಯಾನ್ಸರ್‌ ಮತ್ತು ರಕ್ತದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಇದಲ್ಲದೆ, ಟ್ಯಾಟೂ ಹಾಕುವುದಕ್ಕೆ ಬಳಸುವ ಸೂಜಿಗಳ ವಿಚಾರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ, ಎಚ್‌ಐವಿ, ಹೆಪಟೈಟಿಸ್‌ ಬಿ, ಸಿ ಯಂಥ ರೋಗಗಳು ಅಂಟಬಹುದು.

ಇದನ್ನೂ ಓದಿ: Quitting Smoking: ಈ ಆಹಾರ ಸೇವಿಸುವ ಮೂಲಕ ಸಿಗರೇಟು, ಗುಟ್ಕಾ ಚಟದಿಂದ ದೂರ ಆಗಬಹುದು!

ಭಾರತದಲ್ಲಿಲ್ಲ

ಟ್ಯಾಟೂ ಶಾಯಿಗಳಲ್ಲಿ ಬಳಸಬಹುದಾದ ರಾಸಾಯನಿಕಗಳ ಬಗ್ಗೆ ಭಾರತದಲ್ಲಂತೂ ಸ್ಪಷ್ಟ ನಿರ್ದೇಶನಗಳಿಲ್ಲ. ಶಾಯಿ ಬಾಟಲಿಯ ಮೇಲೆ ನಮೂದಿಸಿದ ಅಂಶಗಳೇ ಒಳಗೂ ಇವೆಯೇ ಎಂಬುದನ್ನೂ ಯಾರೂ ಪರಿಶೀಲಿಸುವುದಿಲ್ಲ. ಟ್ಯಾಟೂ ಹಾಕುವ ಸ್ಥಳಗಳು ಮತ್ತು ಹಾಕುವವರ ಬಗ್ಗೆ ನಿಗಾ ಇಡುವಂಥ ವ್ಯವಸ್ಥೆ ಇಲ್ಲ. ಅಲ್ಲಿ ಪಾಲನೆಯಾಗುವ ಸ್ವಚ್ಛತೆ ಮತ್ತು ಇತರ ಕ್ರಮಗಳು ಸರಿಯಿಲ್ಲದಿದ್ದರೆ, ಶಿಸ್ತುಕ್ರಮ ಜರುಗಿಸುವಂಥ ವ್ಯವಸ್ಥೆಯೂ ಇಲ್ಲ. ಈ ಎಲ್ಲ ವಿಷಯಗಳ ಕುರಿತಾಗಿ ಯಾವುದೇ ನೀತಿ-ನಿಯಮಾವಳಿಗಳು ರಚನೆಗೊಂಡಿಲ್ಲ. ಹಾಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.

Exit mobile version