Site icon Vistara News

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

Toxic Shawarma

ಮುಂಬಯಿನ (mumbai) ಮಂಖುರ್ದ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ರಸ್ತೆ ಬದಿಯ ವ್ಯಾಪಾರಿಯಿಂದ ಚಿಕನ್‌ ಶವರ್ಮಾ ಸೇವಿಸಿದ (Toxic Shawarma) ಬಳಿಕ ಹೊಟ್ಟೆನೋವು (stomach pain), ವಾಂತಿ (vomiting) ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿತ್ತು. ಶವರ್ಮಾಗೆ ಬಳಸಿದ ಚಿಕನ್ ಕೆಟ್ಟುಹೋಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಥಮೇಶ್ ಭೋಕ್ಸೆ ಮೃತ ಯುವಕ. ಆತ ಸೇವಿಸಿದ ಆಹಾರ ವಿಷಪೂರಿತವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡ ಬಳಿಕ ಭೋಕ್ಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮೂರನೇ ಬಾರಿಗೆ ಮತ್ತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರು ಆಹಾರ ಮಾರಾಟಗಾರರನ್ನು ಬಂಧಿಸಿದ್ದಾರೆ. ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಬಂಧಿತರು. ಇವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ಮೊದಲಲ್ಲ

ಶವರ್ಮಾದಿಂದ ಸಾವು ಸಂಭವಿಸಿರುವುದು ಇದೇ ಮೊದಲ ಘಟನೆಯಲ್ಲ. 2022ರ ಏಪ್ರಿಲ್‌ನಲ್ಲಿ 52ಕ್ಕೂ ಹೆಚ್ಚು ಮಂದಿ ಶವರ್ಮಾ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರಿನಲ್ಲಿ ಶವರ್ಮಾವನ್ನು ತಿಂದು ಒಬ್ಬರು ಮೃತಪಟ್ಟಿದ್ದರು. 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಖಾದ್ಯವನ್ನು ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಳು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ನ ರೆಸ್ಟೋರೆಂಟ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ 14 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಲ್ಲದೆ, ಖಾದ್ಯವನ್ನು ಸೇವಿಸಿದ ಅನಂತರ ಸಂತ್ರಸ್ತೆಯ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 43 ಮಂದಿ ತೀವ್ರ ಜ್ವರ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

2023ರ ಅಕ್ಟೋಬರ್‌ನಲ್ಲಿ ಕೊಚ್ಚಿಯ ಯುವಕ ಕೇರಳದ ಮಾವೇಲಿಪುರಂನಲ್ಲಿರುವ ರೆಸ್ಟೋರೆಂಟ್‌ನಿಂದ ಶವರ್ಮಾ ಸೇವಿಸಿದ ಅನಂತರ ಸಾವನ್ನಪ್ಪಿದರು. 22 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಅವನ ಸಾವಿಗೆ ಕಾರಣವನ್ನು ಸೆಪ್ಟಿಸೆಮಿಯಾ ಎಂದು ಉಲ್ಲೇಖಿಸಿದೆ. ಇದು ಗಂಭೀರ ರಕ್ತಪ್ರವಾಹದ ಸೋಂಕಾಗಿದೆ.


ಶವರ್ಮಾ ಏಕೆ ಸಾವಿಗೆ ಕಾರಣ?

ಶವರ್ಮಾ ಭಕ್ಷ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಳಸುವ ಪದಾರ್ಥಗಳು ಇದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಳಿಮಾಂಸವನ್ನು ತಯಾರಿಸುವ, ನಿರ್ವಹಿಸುವ ಮತ್ತು ಸಂಗ್ರಹಿಸುವ ವಿಧಾನ ಸರಿಯಾಗಿ ಇಲ್ಲದೇ ಇದ್ದುದರಿಂದ ಶವರ್ಮಾವನ್ನು ತಿಂದ ಬಳಿಕ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಡಿಮೆ ಬೇಯಿಸಿದ ಮಾಂಸ ಅಥವಾ ಮಾಂಸದ ಅಸಮರ್ಪಕ ಶೈತ್ಯೀಕರಣದ ಕಾರಣದಿಂದಾಗಿ ಆಹಾರ ವಿಷವಾಗಿದೆ.

ಬೇಯಿಸದ ಮಾಂಸ ಕಾರಣ

ಶವರ್ಮಾಕ್ಕೆ ಬಳಸಲಾಗುವ ಮಾಂಸವನ್ನು ಆಳವಾಗಿ ಭೇದಿಸದ ಜ್ವಾಲೆಯನ್ನು ಬಳಸಿ ಗಂಟೆಗಳ ಕಾಲ ನಿಧಾನವಾಗಿ ಹುರಿಯಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರು ಹಲವು ಸಂದರ್ಭದಲ್ಲಿ ಸರಿಯಾಗಿ ಬೇಯಿಸದ ಮಾಂಸವನ್ನು ಪಡೆಯುತ್ತಾರೆ. ಶವರ್ಮಾದಿಂದ ಆಹಾರ ವಿಷಕ್ಕೆ ಮಾಂಸದ ಅಸಮರ್ಪಕ ಶೈತ್ಯೀಕರಣ, ಮಾಲಿನ್ಯ, ಅಥವಾ ಸಾಲ್ಮೊನೆಲ್ಲಾ ಅಥವಾ ಇ. ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಕ್ಕೆ ಕಾರಣವಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುವುದು ಮಾತ್ರವಲ್ಲ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಅನೈರ್ಮಲ್ಯ, ಸರಿಯಾಗಿ ಬೇಯಿಸದ ಅಥವಾ ಕಲುಷಿತ ಆಹಾರ ಕರುಳಿನ ಸೋಂಕನ್ನು ಉಂಟುಮಾಡಬಹುದು. ಅದು ತುಂಬಾ ಸಾಂಕ್ರಾಮಿಕವಾಗಿರುತ್ತದೆ. ಅಲ್ಲದೇ ಕಲುಷಿತ ಪಾತ್ರೆಗಳು, ಅಸಮರ್ಪಕ ಸಾಸ್ ಅಥವಾ ಪದಾರ್ಥಗಳ ಬಳಕೆ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಫ್ರಿಡ್ಜ್‌ ನಲ್ಲಿ ಮಾಂಸವನ್ನು ದೀರ್ಘಕಾಲದವರೆಗೆ ಬಿಟ್ಟರೂ ಅದು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಸುರಕ್ಷಿತ ಶವರ್ಮಾ ಸೇವಿಸಿ

ಶವರ್ಮಾ ತಿನ್ನಬೇಕಿದ್ದರೆ ಉತ್ತಮ ಆಹಾರ ಸುರಕ್ಷತಾ ಅಭ್ಯಾಸಗಳ ಇತಿಹಾಸ ಹೊಂದಿರುವ ಆರೋಗ್ಯಕರ ಮತ್ತು ಪ್ರತಿಷ್ಠಿತ ಆಹಾರ ಮಳಿಗೆಗಳು ಮತ್ತು ಮಾರಾಟಗಾರರನ್ನು ಆಯ್ಕೆ ಮಾಡಿ. ಹೊಟೇಲ್‌ನಲ್ಲಿನ ಶುಚಿತ್ವ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಗಮನ ಕೊಡಿ. ಮಾಂಸದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಅದು ಕಚ್ಚಾ ಅಥವಾ ಕಡಿಮೆ ಬೇಯಿಸಿರುವುದನ್ನು ತಿನ್ನಬೇಡಿ.

Exit mobile version