ವಾಷಿಂಗ್ಟನ್: ಯುರೋಪ್‌ನ ಪೋರ್ಚುಗಲ್, ಬ್ರಿಟನ್ ಮತ್ತಿತರ ದೇಶಗಳಲ್ಲಿ ಆತಂಕ ಮೂಡಿಸಿರುವ ಅಪರೂಪದ ಮಂಕಿ ಪಾಕ್ಸ್ ಸೋಂಕು ಈಗ ಅಮೆರಿಕಕ್ಕೆ ಕಾಲಿಟ್ಟಿದೆ. ಮೆಸಾಚ್ಯುಸೆಟ್ಸ್ ನಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, ಇದು ಇನ್ನಷ್ಟು ಕಡೆಗಳಿಗೆ ಹರಡುವುದನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಅಧಿಕಾರಿಗಳು ಮತ್ತು ಆರೋಗ್ಯ ರಕ್ಷಣೆ ಸಿಬ್ಬಂದಿಗಳು ರೋಗಿಯೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆಹಚ್ಚುತ್ತಿದ್ದಾರೆ. ಈ ಪ್ರಕರಣವು ಪ್ರಸ್ತುತ ಸಾರ್ವಜನಿಕರಿಗೆ ಅಪಾಯ ಉಂಟುಮಾಡುವಷ್ಟು ತೀವ್ರವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆಫ್ರಿಕಾಗೆ ಸೀಮಿತವಾದ ಈ ಕಾಯಿಲೆಯು ಇದೀಗ ಅಸಾಮಾನ್ಯವೆಂಬಂತೆ ಏಕಾಏಕಿ ಇತರ ಪ್ರದೇಶಗಳಿಗೆ ಹರಡಿದೆ. ಸ್ಪೇನ್‌ನ ಸೆಂಟ್ರಲ್ ಮ್ಯಾಡ್ರಿಡ್ ಪ್ರದೇಶದ ಆರೋಗ್ಯ ಅಧಿಕಾರಿಗಳು ಮಂಕಿಪಾಕ್ಸ್‌ನ 23 ಸಂಭವನೀಯ ಪ್ರಕರಣಗಳನ್ನು ಅಂದಾಜಿಸುತ್ತಿದ್ದಾರೆ.
ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಗಳು ಸೇರಿವೆ. ಮಂಕಿಪಾಕ್ಸ್ ಸಿಡುಬಿಗೆ ಹೋಲಿಸಬಹುದಾದ ರೋಗಲಕ್ಷಣಗಳನ್ನು ಹೊಂದಿದೆ. ಆದರೆ ತೀವ್ರತೆ ಕಡಿಮೆಯಾಗಿರುತ್ತದೆ.
ಮಂಕಿಪಾಕ್ಸ್ ಅನ್ನು ಝೂನೋಸಿಸ್ ಕಾಯಿಲೆ ಎಂದು ಗುರುತಿಸಲಾಗುತ್ತದೆ. ಅಂದರೆ ಇದು ರೋಗಪೀಡಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವೈರಸ್-ವಾಹಕ ಪ್ರಾಣಿಗಳಿಗೆ ನೆಲೆಯಾಗಿರುವ ಉಷ್ಣವಲಯದ ಮಳೆಕಾಡುಗಳ ಬಳಿ ಇದರ ಸೋಂಕು ಹೆಚ್ಚಾಗಿ ಉಂಟಾಗುತ್ತವೆ. ಮಂಕಿಪಾಕ್ಸ್ ವೈರಸ್ ಅಳಿಲುಗಳು, ಗ್ಯಾಂಬಿಯನ್ ಇಲಿಗಳು, ಡಾರ್ಮಿಸ್ ಮತ್ತು ವಿವಿಧ ಕೋತಿ ಜಾತಿಗಳಲ್ಲಿ ಕಂಡುಬಂದಿದೆ. ಇದನ್ನೂ ಓದಿ| ವಾಯು ಮಾಲಿನ್ಯ ಎಂಬ ಸೈಲೆಂಟ್ ಕಿಲ್ಲರ್ ವರ್ಷಕ್ಕೆ 23 ಲಕ್ಷ ಭಾರತೀಯರು ಬಲಿ
1980ರಲ್ಲಿ ವ್ಯಾಕ್ಸಿನೇಷನ್ ಕಾರಣದಿಂದಾಗಿ ಸಿಡುಬು ಪ್ರಪಂಚದಾದ್ಯಂತ ನಿರ್ಮೂಲನೆಯಾಯಿತು, ಆದರೆ, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರ ಕೆಲವೆಡೆಗಳಲ್ಲಿ ಅಸ್ತಿತ್ವದಲ್ಲಿದೆ.
ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರದ ಲಕ್ಷಣಗಳನ್ನು ಮತ್ತು ವಿಶಿಷ್ಟವಾದ ದಡಿಕೆ ಅಥವಾ ಗುಳ್ಳೆಗಳನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಮಂಕಿಪಾಕ್ಸ್ ರೋಗಲಕ್ಷಣಗಳು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ.
ರೋಗ ಪ್ರಸಾರ ಹೇಗೆ?
ಪ್ರಾಣಿ ಸಂಕುಲದಿಂದ ಹೆಚ್ಚಾಗಿ ಹರಡುವ ಈ ವೈರಸ್, ಮನುಷ್ಯರ ನಡುವೆ ನಿಕಟ ಸಂಪರ್ಕದ ಮೂಲಕ ಕಡಿಮೆ ಪ್ರಮಾಣದಲ್ಲಿ ಹರಡುತ್ತದೆ. ಇದು ಮೊದಲ ಬಾರಿ 1958 ರಲ್ಲಿ ಮಂಗಗಳಲ್ಲಿ ಕಂಡುಬಂದಿತು. ಆದ್ದರಿಂದಲೇ ಇದಕ್ಕೆ ಮಂಕಿಪಾಕ್ಸ್ ಎಂಬ ಹೆಸರು ಬಂದಿದೆ. ಹಾಗಿದ್ದರೂ ದಂಶಕ (ಮೂಷಿಕ ಜಾತಿಯ ಪ್ರಾಣಿಗಳು) ಗಳು ಈ ರೋಗ ಪ್ರಸರಣದಲ್ಲಿ ಮುಖ್ಯ ಪಾತ್ರವಹಿಸುತ್ತಿರುವುದು ಕಂಡುಬರುತ್ತವೆ.
ಮನುಷ್ಯರಿಂದ ಮನುಷ್ಯರಿಗೆ ಸೀಮಿತ ಪ್ರಮಾಣದಲ್ಲಿ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಓ) ಪ್ರಕಾರ, ದೈಹಿಕ ದ್ರವಗಳು, ಚರ್ಮದ ಹುಣ್ಣುಗಳು, ಬಾಯಿ ಅಥವಾ ಗಂಟಲಿನಲ್ಲಿರುವ ಆಂತರಿಕ ಲೋಳೆಪೊರೆಯ ಮೇಲ್ಮೈಗಳು, ಶ್ವಾಸಾಂಗದ (ಮೂಗಿನ) ಹನಿಗಳು ಮತ್ತು ಸೋಂಕಿತ ವಸ್ತುಗಳ ಮೂಲಕ ರೋಗ ಪ್ರಸರಣ ಆಗಬಹುದು.
ಸ್ಮಾಲ್‌ಪಾಕ್ಸ್ ಮತ್ತು ಮಂಕಿಪಾಕ್ಸ್ ನಡುವೆ ವ್ಯತ್ಯಾಸವೇನು?
ಎರಡೂ ವೈರಸ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳನ್ನು ಊದಿಕೊಳ್ಳುವಂತೆ ಮಾಡುತ್ತದೆ. (ಲಿಂಫಾಡೆನೋಪತಿ). ಆದರೆ ಸಿಡುಬು ಸೋಂಕಿನಲ್ಲಿ ಹೀಗಾಗುವುದಿಲ್ಲ.
ಇದನ್ನೂ ಓದಿ| World Hypertension Day | ಹೈಪರ್‌ಟೆನ್ಷನ್ ಗೆಲ್ಲಲು 5 ಸೂತ್ರಗಳು