ಪನೀರ್ ಎಂಬ ಪ್ರೊಟೀನ್‌ಯುಕ್ತ ಆಹಾರ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಉಪಯೋಗಿಸಿರುತ್ತೀರಿ. ತೂಕ ಇಳಿಸುವ, ಫಿಟ್‌ನೆಸ್ ಪ್ರಿಯರ ಮನೆಗಳಲ್ಲಂತೂ ಪನೀರ್ ಖಂಡಿತ ಇದ್ದೇ ಇರುತ್ತದೆ. ಸಸ್ಯಾಹಾರಿಗಳಿಗೆ ಪ್ರೊಟೀನ್ ಸುಲಭವಾಗಿ ದಕ್ಕಬಹುದಾದ ಆಕೆಗಳ ಪೈಕಿ ಪನೀರ್ ಕೂಡ ಒಂದು. ಇಷ್ಟಪಟ್ಟು ತಿನ್ನಬಹುದಾದ ಈ ಪನೀರ್ ಅನ್ನು ಕೆಲವರು ಮನೆಯಲ್ಲೇ ಮಾಡಿಕೊಂಡು ತಿಂದರೆ, ಇನ್ನೂ ಕೆಲವರು ಹೊರಗಿನಿಂದ ನೇರವಾಗಿ ಖರೀದಿಸಿ ತರುವುದು ಸಾಮಾನ್ಯ. ಪ್ಯಾಕಟ್ಟುಗಳಲ್ಲಿ ಅಥವಾ ಡೈರಿಗಳಲ್ಲಿ ತಾಜಾ ಪನೀರ್ ಕೂಡಾ ಇಂದು ಲಭ್ಯವಿವೆ. ಮನೆಯಲ್ಲೇ ಮಾಡುವುದಾದರೆ, ಹಾಲು ಕುದಿಸಿಕೊಂಡು ಅದು ಕುದಿಯುತ್ತಿರುವಾಗಲೇ ಅದಕ್ಕೆ ನಿಂಬೆಹಣ್ಣು ಹಿಂಡಿದರೆ, ಹಾಲು ಒಡೆಯುತ್ತದೆ. ಇದನ್ನೊಂದು ಬಟ್ಟೆಯಲ್ಲಿ ಸೋಸಿಕೊಂಡರೆ, ಇದರ ನೀರು ಪ್ರತ್ಯೇಕವಾಗಿ ಬಟ್ಟೆಯಲ್ಲಿ ಕೇವಲ ಪನೀರ್ ಉಳಿಯುತ್ತದೆ. ಪನೀರ್ ಅನ್ನು ಹಿಂಡಿಕೊಂಡು ಬಳಸಿದರೆ, ಉಳಿದ ನೀರನ್ನು ಅನೇಕರು ಚೆಲ್ಲಿ ಬಿಡುವುದು ರೂಢಿ. ಆದರೆ, ಈ ನೀರಿನಲ್ಲೂ ಸಾಕಷ್ಟು ಪ್ರೊಟೀನ್ ಇದೆ. ಅನೇಕ ಪೋಷಕಾಂಶಗಳೂ ಇವೆ. ಇವನ್ನು ಚೆಲ್ಲಿದರೆ ಪೋಷಕಾಂಶಗಳು ನಷ್ಟವಾಗುತ್ತವೆ. ಹಾಗಾಗಿ, ಈ ಉಳಿದುಕೊಂಡ ನೀರು ಅಂದರೆ, ವೇ ವಾಟರ್ ಅನ್ನು ನೀವು ಅನೇಕ ವಿಧಗಳಲ್ಲಿ ಬಳಸಬಹುದು. ಅದರಲ್ಲಿರುವ ಪೋಷಕಾಂಶ ನಮ್ಮ ದೇಹಕ್ಕೆ ಲಭ್ಯವಾಗುವಂತೆ ಮಾಡಬಹುದು. ಬನ್ನಿ, ವೇ ವಾಟರ್ ಅನ್ನು ಯಾವೆಲ್ಲ ವಿಧಾನಗಳಿಂದ ಬಳಸಬಹುದು (Use Of Paneer Water) ಎಂಬುದನ್ನು ನೋಡೋಣ.
ಕರ್ರಿಗಳು ಹಾಗೂ ಗ್ರೇವಿಗಳು
ಪನೀರ್‌ನ ಉಳಿದ ನೀರು ನೀವು ಮಾಡುವ ಕರ್ರಿ ಹಾಗೂ ಗ್ರೇವಿಗಳಿಗೆ ಸೇರಿಸುವುದು ಅತ್ಯುತ್ತಮ ಉಪಾಯ. ಕೇವಲ ನೀವು ಸಾಮಾನ್ಯ ನೀರನ್ನು ಬಳಸುವಲ್ಲಿ ಪನೀರ್‌ನ ಉಳಿದ ನೀರನ್ನು ಸೇರಿಸಬಹುದು. ಶಾಹಿ ಪನೀರ್, ಪನೀರ್ ಬಟರ್ ಮಸಾಲ, ಪಾಲಕ್ ಪನೀರ್ ಅಥವಾ ಸಾಮಾನ್ಯವಾದ ದಾಲ್ ತಡ್ಕಾ ಕೂಡಾ ನೀವು ಮಾಡುತ್ತಿದ್ದರೆ ಈ ಪನೀರ್‌ನ ನೀರನ್ನು ಸೇರಿಸಬಹುದು. ಇದರಿಂದ ನೀವು ಮಾಡಿದ ಈ ಡಿಶ್‌ನ ರುಚಿ ಇನ್ನಷ್ಟು ಸಮೃದ್ಧವಾಗುತ್ತದೆ. ಇದರಲ್ಲಿ ಹೆಚ್ಚು ಪ್ರೊಟೀನ್ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.
ಲಸ್ಸಿ
ಕರ್ರಿ ಅಥವಾ ಗ್ರೇವಿಗಳನ್ನು ಮಾಡುವುದು ಕಡಿಮೆ ಎಂದಾದಲ್ಲಿ ಪನೀರ್ ನೀರನ್ನು ಬಳಸಿಕೊಳ್ಳಲ್ಲು ಬೇರೆ ಉಪಾಯಗಳೂ ಇವೆ, ಚಿಂತಿಸಬೇಡಿ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಪೇಯಗಳ ಪೈಕಿ ಲಸ್ಸಿ ಕೂಡಾ ಒಂದು. ಪನೀರ್‌ನ ನೀರನ್ನು ನೀವು ಲಸ್ಸಿ ಮಾಡುವಾಗ ಸೇರಿಸಬಹುದು. ಇದರಿಂದ ಲಸ್ಸಿ ಇನ್ನಷ್ಟು ರುಚಿಕರವಷ್ಟೇ ಅಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗುತ್ತದೆ. ಮೊಸರಿಗೆ ಪನೀರ್‌ನ ನೀರನ್ನು ಸೇರಿಸಿ, ಕೊಂಚ ಸಕ್ಕರೆಯನ್ನೋ ಜೇನುತುಪ್ಪವನ್ನೋ ಸೇರಿಸಿಕೊಂಡು ಅಥವಾ ಉಪ್ಪು ಸೇರಿಸಿಕೊಂಡೋ ಕುಡಿಯಬಹುದು. ಬೇಸಿಗೆಯ ಝಳಕ್ಕೆ ಸಮೃದ್ಧವಾದ ಪ್ರೊಬಯಾಟಿಕ್ ಪೇಯವಿದು. ದೇಹವನ್ನು ತಂಪಾಗಿಸುವ ದಿವ್ಯಾಮೃತವೂ ಕೂಡ.
ಇಡ್ಲಿ, ದೋಸೆ ಹಿಟ್ಟು
ಹೌದು. ಪನೀರ್‌ನ ನೀರನ್ನು ಬಿಸಾಗಿ ವೇಸ್ಟ್ ಮಾಡುವ ಮೊದಲು ಹೀಗೂ ಬಳಸುವ ಸಾಧ್ಯತೆಗಳನ್ನು ಯೋಚಿಸಿ. ನಿತ್ಯವೂ ದೋಸೆ ಹಿಟ್ಟಂತೂ ನಿಮ್ಮಲ್ಲಿ ಮಾಡಿಯೇ ಇರುತ್ತೀರಿ. ಹುಳಿ ಬರಿಸಿದ ಹಿಟ್ಟನ್ನು ತೆಳುವಾಗಿಸಲು ನೀರು ಹಾಕುವ ಬದಲು ಪನೀರ್‌ನ ನೀರನ್ನು ಹಾಕಿ. ಅಥವಾ ಉದ್ದು ಹಾಗೂ ಅಕ್ಕಿಯನ್ನು ರುಬ್ಬುವ ಸಂದರ್ಭವೇ ನೀರಿನ ಬದಲು ಪನೀರ್ ನೀರನ್ನು ಹಾಕಿ. ಹುಳಿ ಬರುವ ಪ್ರಕ್ರಿಯೆ ಇನ್ನೂ ಸುಲಭವಾಗುತ್ತದೆ. ವೇ ವಾಟರ್ ಅಥವಾ ಈ ಪನೀರ್‌ನ ನೀರಿನಲ್ಲಿರುವ ಪೋಷಕಾಂಶಗಳೂ ಕೂಡಾ ಹಿಟ್ಟಿನ ಮೂಲಕ ದೋಸೆಯಾಗಿ, ಇಡ್ಲಿಯಾಗಿ ನಿಮ್ಮ ಹೊಟ್ಟೆ ಸೇರುತ್ತದೆ.
ಅಕ್ಕಿ ಬೇಯಿಸಲು
ಅಕ್ಕಿ ಅಥವಾ ಬೇಳೆ ಬೇಯಿಸಲೂ ಕೂಡಾ ನೀರಿನ ಬದಲು ಪನೀರ್‌ನ ನೀರನ್ನೇ ಬಳಸಬಹುದು. ಇದರಿಂದ ಅವುಗಳ ರುಚಿಯೂ ಇಮ್ಮಡಿಯಾಗುತ್ತದೆ. ಪನೀರ್‌ನ ನೀರಿನಲ್ಲಿರುವ ಪೋಷಕಾಂಶವೂ ನಷ್ಟವಾಗದು.
ಇದನ್ನೂ ಓದಿ: Benefits Of Onion Hair Oil: ಕೂದಲು ಬಿಳಿಯಾಗುತ್ತಿದೆಯೆ? ಈರುಳ್ಳಿ ತೈಲವನ್ನು ಈ ರೀತಿ ಬಳಸಿ
ಚಪಾತಿ ಹಿಟ್ಟು ಕಲಸಲು
ಹೌದು. ಈವಾವುವೂ ಬೇಡ ಎಂದಾದರೆ, ಚಪಾತಿ ಹಿಟ್ಟು ಕಲಸಿಡಿ. ಮಾರನೇ ದಿನದ ನಿಮ್ಮ ಅಥವಾ ಮಕ್ಕಳ ಟಿಫನ್ ಬಾಕ್ಸಿಗೆ ಚಪಾತಿ ಹಿಟ್ಟು ಕಲಸುತ್ತಿದ್ದರೆ, ನೀರಿನ ಬದಲು ಪನೀರ್ ನೀರನ್ನು ಹಾಕಿ. ಇದರಿಂದ ಚಪಾತಿ ಚೆನ್ನಾಗಿ ಮೆದುವಾಗಿ ಉಬ್ಬಿಕೊಂಡು ಬರುವುದಲ್ಲದೆ, ರುಚಿಕರವಾಗಿಯೂ, ಪೋಷಕಾಂಶಗಳಿಂದ ಸಮೃದ್ಧವಾಗಿಯೂ ಇರುತ್ತದೆ.