Site icon Vistara News

Weight loss | ತೂಕ ಇಳಿಸುವಾಗ ಮಾಡುವ ಐದು ದೊಡ್ಡ ತಪ್ಪುಗಳು!

weight loss

ತೂಕ ಇಳಿಸಿಕೊಳ್ಳಬೇಕೆನ್ನುವ ಆಶಾವಾದ, ಆರೋಗ್ಯ ಪ್ರಜ್ಞೆಯೇನೋ ಒಳ್ಳೆಯದೇ. ಆದರೆ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುದು ಬಹಳ ಮುಖ್ಯವಾದ ವಿಚಾರ. ಬಹಳಷ್ಟು ಸಾರಿ ತೂಕ ಇಳಿಸಿಕೊಳ್ಳಬೇಕೆಂಬ ಹುಮ್ಮಸ್ಸು ಹಲವಾರು ಪ್ರಯೋಗಗಳನ್ನು ಮಾಡಿಸುತ್ತದೆ. ಇಂತಹ ಪ್ರಯೋಗಗಳು ಒಡನೆಯೇ ತೂಕವನ್ನೇನೋ ಇಳಿಸಿಬಿಡುತ್ತದೆ. ಆದರೆ, ಇದು ಬಹಳ ಕಾಲ ಉಳಿಯುವುದಿಲ್ಲ. ಕೆಲ ಕಾಲದ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಹಾಗಾದರೆ ತೂಕ ಇಳಿಸುವಲ್ಲಿ ಬಹುತೇಕ ಎಲ್ಲರೂ ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

೧. ಫ್ಯಾಟ್‌ ಫ್ರೀ ಡಯಟ್‌: ಕೊಬ್ಬು ರಹಿತ ಆಹಾರ ಕೇಳಲು ಇಂಟರೆಸ್ಟಿಂಗ್‌ ಆಗೇನೋ ಇದೆ. ಆದರೆ, ಇದು ಆಹಾರದ ವಿಷಯದಲ್ಲಿ ನಾವು ನಮ್ಮ ದೇಹಕ್ಕೆ ಮಾಡುವ ಬಹುದೊಡ್ಡ ಅನ್ಯಾಯ. ತೂಕ ಇಳಿಸಿಕೊಳ್ಳಬೇಕು ಎನ್ನುವುದು ಸರಿಯಾದರೂ, ಸಂಪೂರ್ಣವಾಗಿ ಕೊಬ್ಬನ್ನು ದೇಹಕ್ಕೆ ಪೂರೈಕೆ ಮಾಡುವುದು ನಿಲ್ಲಿಸಿದರೆ ದೇಹ, ಯಂತ್ರಕ್ಕೆ ಇಂಧನವಿಲ್ಲದಂತೆ! ದೇಹ ಸಶಕ್ತವಾಗಿ ಕೆಲಸ ಮಾಡಲು ಕಾರ್ಬೋಹೈಡ್ರೇಟ್‌, ಪ್ರೊಟೀನ್‌ಗಳ ಅವಶ್ಯಕತೆ ಇರುವಂತೆಯೇ, ಕೊಬ್ಬಿನ ಅವಶ್ಯಕತೆಯೂ ಇದೆ. ಝೀರೋ ಫ್ಯಾಟ್‌ ಡಯಟ್‌ ಮೊರೆ ಹೋದರೆ ದೇಹಕ್ಕೆ ಬೇಕಾಗುವ ಶಕ್ತಿಯನ್ನೇ ನೀವು ಪೂರೈಕೆ ಮಾಡದಂತೆ. ಜೊತೆಗೆ ಫ್ಯಾಟ್‌ ಫ್ರೀ ಡಯಟ್‌ ನಿಮ್ಮನ್ನು ಬೇಗ ಹಸಿವಾಗುವಂತೆ ಮಾಡುತ್ತದೆ, ಇದರಿಂದ ಹೆಚ್ಚು ಕ್ಯಾಲರಿ ಹೊಟ್ಟೆ ಸೇರುತ್ತದೆ. ಜೊತೆಗೆ ದೇಹಕ್ಕೆ ಹೆಚ್ಚಿನ ಸಕ್ಕರೆ ಪೂರೈಕೆಯಾದಂತಾಗುತ್ತದೆ.

೨. ಗ್ಲುಟೆನ್‌ ಫ್ರೀ ಡಯಟ್‌: ಗ್ಲುಟೆನ್‌ ಫ್ರೀ ಡಯಟ್‌ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ನಿಜ. ಇದರಿಂದಾಗಿ ಇಂದು ಸಾಕಷ್ಟು ಆಹಾರ ಪದಾರ್ಥಗಳು, ಚಿಪ್ಸ್‌, ಕೇಕ್‌, ಚಾಕೋಲೇಟ್‌ ಬಾರ್‌ ಮತ್ತಿತರ ಸಾಕಷ್ಟು ಆಯ್ಕೆಗಳು ಗ್ಲುಟೆನ್‌ ಫ್ರೀ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿವೆ. ಗ್ಲುಟೆನ್‌ ಫ್ರೀ ಇರುವುದೇನೋ ನಿಜ, ಆದರೆ, ಇವೆಲ್ಲ ಆಹಾರಗಳೂ ಸಾಕಷ್ಟು ಸಕ್ಕರೆಯಿಂದಲೂ, ಉಪ್ಪಿನಿಂದಲೂ ಕೂಡಿರುತ್ತದೆ. ಇದರಲ್ಲಿ ಅತಿ ಹೆಚ್ಚಿರುವ ಗ್ಲಿಸಮಿಕ್‌ ಇಂಡೆಕ್ಸ್‌ನಿಂದ ದೇಹದಲ್ಲಿ ಇದ್ದಕ್ಕಿದ್ದಂತೆ ಸಕ್ಕರೆಯ ಮಟ್ಟವನ್ನು ಏರಿಸುತ್ತದೆ. ಸಾಕಷ್ಟು ಪ್ರಿಸರ್ವೇಟಿವ್ಸ್‌, ಕೃತಕ ಬಣ್ಣಗಳೂ ಇತ್ಯಾದಿಗಳಿಂದಲೂ ಕೂಡಿರುತ್ತದೆ.

೩. ಅತಿಯಾದ ಉಪವಾಸ: ಅತಿಯಾದ ಉಪವಾಸ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಅತಿಯಾದ ಉಪವಾಸ ಮಾನಸಿಕವಾಗಿ ಬಳಲಿಸುತ್ತದೆ. ತಾತ್ಕಾಲಿಕವಾಗಿ ಉಪವಾಸ ಸಾಧ್ಯವಾದರೂ, ಕೊನೆಗೆ ಹೆಚ್ಚು ತಿನ್ನುವಂತೆ ಮಾಡುತ್ತದೆ. ಇದು ತೂಕ ಇಳಿಕೆಯನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುವುದಿಲ್ಲ. ಅಲ್ಲದೆ, ಅತಿಯಾದ ಉಪವಾಸ ಜೀರ್ಣಕ್ರಿಯೆಯನ್ನೇ ಕೆಡಿಸುವುದಲ್ಲದೆ, ಶಕ್ತಿಯನ್ನೂ ಕುಂದಿಸುತ್ತದೆ. ಮಾನಸಿಕವಾಗಿಯೂ ದೈಹಿಕವಾಗಿಯೂ ಶಕ್ತಿಕುಂದಿಸುವ ಕ್ರಮವಿದು.

ಇದನ್ನೂ ಓದಿ | Almond benefits | ಬಾದಾಮಿ ಎಷ್ಟು ತಿನ್ನಬೇಕು? ಇಲ್ಲಿದೆ ಉತ್ತರ

೪. ಸಮತೋಲಿತ ಆಹಾರದ ಕೊರತೆ: ಡಯಟ್‌ ಹೆಸರಿನಲ್ಲಿ ಇದ್ದಕ್ಕಿದ್ದಂತೆ ಆಹಾರದ ಏರುಪೇರು ದೇಹದ ಸಂಪೂರ್ಣ ವ್ಯವಸ್ಥೆಯನ್ನೇ ಮೇಲುಕೆಳಗಾಗಿಸುತ್ತದೆ. ತೂಕ ಕೂಡಲೇ ಇಳಿದರೂ ದೇಹ ಒಗ್ಗಿಕೊಂಡ ಆಹಾರದಲ್ಲಿ ವ್ಯತ್ಯಾಸವಾಗಿ ಶಕ್ತಿಹೀನತೆ, ತಲೆನೋವು, ತಲೆ ಸುತ್ತುವುದು ಮತ್ತಿತರ ತೊಂದರೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ, ನಮ್ಮ ಪಾಡಿಗೆ ನಾವು ಯಾರೋ ಹೇಳಿದರೆಂದು ನಮ್ಮ ಆಹಾರ ವ್ಯವಸ್ಥೆಯನ್ನೇ ಬದಲಿಸಿ ಬೇರೆ ಮಾದರಿಯ ಆಹಾರಕ್ರಮಕ್ಕೆ ಬದಲಾಯಿಸಿಕೊಂಡು, ಅದರಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳ ಕೊರತೆ ಆದಲ್ಲಿ ಕೆಳಗಿಳಿದ ತೂಕದಿಂದ ಯಾವ ಪ್ರಯೋಜನವೂ ಆಗುವುದಿಲ್ಲ.

೫. ಅಸಾಧ್ಯವಾದ ಗುರಿಗಳು: ಸಾಧ್ಯವಾಗದ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವುದ ದೊಡ್ಡ ತಪ್ಪು. ಒಂದೇ ವಾರದಲ್ಲಿ ನಮ್ಮ ದೇಹದ ಶೇ.೧೦ರಷ್ಟು ತೂಕವನ್ನು ಇಳಿಸಿಬಿಡುತ್ತೇನೆ ಎಂದು ಆಹಾರಕ್ರಮದಲ್ಲಿ ಭಾರೀ ವ್ಯತ್ಯಾಸಗಳನ್ನು ಮಾಡಿಕೊಂಡು ಗುರಿ ತಲುಪುವುದು ಆರೋಗ್ಯಕರವಲ್ಲ. ೧೫ರಿಂದ ೩೦ ದಿನಗಳಲ್ಲಿ ಒಂದರಿಂದ ಎರಡು ಕಿಲೋ ತೂಕ ಇಳಿಸಿಕೊಳ್ಳುವುದಷ್ಟೇ ಸಾಧ್ಯವಿರುವ ಆರೋಗ್ಯಕರ ಕ್ರಮ. ಅದಕ್ಕಿಂತ ಹೆಚ್ಚು ಇಳಿಸಿಬಿಡುವ ಫಟಾಫಟ್‌ ಮಾದರಿಗಳು ಯಾವತ್ತೂ ಒಳ್ಳೆಯದಲ್ಲ ಎಂಬುದು ನೆನಪಿರಲಿ. ಲೈಫ್‌ಸ್ಟೈಲ್‌ನಲ್ಲಿ ದಿಢೀರ್‌ ಬದಲಾವಣೆ ಆರೋಗ್ಯಕರವಲ್ಲ. 

ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ

Exit mobile version