Site icon Vistara News

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Weight Loss Tips

ತೂಕ ಇಳಿಯಬೇಕು (Weight Loss Tips), ಆದರೆ, ಆಹಾರ ರುಚಿಯಾಗಿರಬೇಕು ಎಂದು ಯಾರಿಗೆ ತಾನೇ ಅನಿಸುವುದಿಲ್ಲ ಹೇಳಿ! ಯಾಕೆಂದರೆ, ತೂಕ ಇಳಿಸುವುದೆಂದರೆ, ನಾಲಿಗೆಯ ಚಪಲಕ್ಕೆ ಗುಡ್‌ಬೈ ಹೇಳಿ, ರುಚಿಯಿಲ್ಲದ ಆಹಾರಗಳನ್ನು ಹಿತಮಿತವಾಗಿ ತಿನ್ನುವುದು ಎಂಬ ನಂಬಿಕೆ ಬಹುತೇಕ ಎಲ್ಲರದ್ದು. ಆದರೆ, ಇತ್ತೀಚೆಗಿನ ದಿನಗಳಲ್ಲಿ ತೂಕ ಇಳಿಕೆಯ ಬಗೆಗಿನ ಈ ಎಲ್ಲ ನಂಬಿಕೆಗಳನ್ನೂ ಡಯಟೀಶಿಯನ್‌ಗಳು ಸುಳ್ಳಾಗಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವು ಪ್ರಯೋಗಗಳೂ ಕೂಡಾ ಆಗುತ್ತಲೇ ಇವೆ. ನೀವು ಮೆಚ್ಚುವ, ನಿತ್ಯವೂ ತಿನ್ನುವ ಆಹಾರದಲ್ಲಿಯೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡು ಸರಿಯಾದ ಆರೋಗ್ಯಕರ ಜೀವನಶೈಲಿ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡಿದ್ದರೆ ತೂಕ ಖಂಡಿತವಾಗಿಯೂ ಇಳಿಯುತ್ತದೆ ಎನ್ನುತ್ತಾರೆ ಇವರು. ಇದನ್ನು ಹಲವರು ಮಾಡಿ ತೋರಿಸಿದ್ದಾರೆ ಕೂಡ.

ಇತ್ತೀಚೆಗೆ ದಕ್ಷಿಣ ಭಾರತೀಯ ಶೈಲಿಯ ಅಡುಗೆಗಳು, ಬೆಳಗಿನ ಉಪಹಾರಗಳು ಸಾಕಷ್ಟು ಪ್ರಸಿದ್ಧಿಗೆ ಬರುತ್ತಿದೆ. ದಕ್ಷಿಣ ಭಾರತೀಯ ಶೈಲಿಯ ಬೆಳಗ್ಗಿನ ಉಪಾಹಾರ ತೂಕ ಇಳಿಕೆಗೆ ಪೂರಕವಾಗಿದ್ದು, ಹಲವರು ಈಚೆಗೆ ಈ ಶೈಲಿಯ ಆಹಾರಕ್ರಮಕ್ಕೆ ವಾಲುತ್ತಿದ್ದಾರೆ ಕೂಡ. ಇದರಿಂದ ನಮ್ಮ ದೇಹಕ್ಕೆ ಅತ್ಯುತ್ತಮ ಪೋಷಣೆ ಲಭ್ಯವಾಗುತ್ತದೆ. ಹೀಗಾಗಿ ದಕ್ಷಿಣ ಭಾರತೀಯರಾದ ನಾವು ತೂಕ ಇಳಿಸಬೇಕಿದ್ದರೆ, ನಮ್ಮ ನಾಲಿಗೆಯ ಮಾತನ್ನು ಧಾರಾಳವಾಗಿ ಕೇಳಬಹುದು.
ದಕ್ಷಿಣ ಭಾರತೀಯ ತಿನಿಸುಗಳು ಯಾಕೆ ಆರೋಗ್ಯಕರ ಗೊತ್ತೇ? ಉಪ್ಪಿಟ್ಟು, ಇಡ್ಲಿ, ಪೊಂಗಲ್‌, ಉತ್ತಪ್ಪ, ಪಡ್ಡು, ಬಗೆಬಗೆಯ ದೋಸೆಗಳು ನಮ್ಮ ದಕ್ಷಿಣ ಭಾರತೀಯರ ಮನೆಗಳ ಬೆಳಗ್ಗಿನ ಆರಾಧ್ಯ ದೈವಗಳು. ಈ ಎಲ್ಲ ಬಗೆಯ ಆಹಾರಗಳಲ್ಲೂ ಬಗೆಬಗೆಯ ಧಾನ್ಯಗಳು, ಬೇಳೆ ಕಾಳುಗಳ ಬಳಕೆಯಿದೆ. ತೆಂಗಿನಕಾಯಿ, ಕರಿಬೇವು, ಕೊಂತ್ತಂಬರಿ ಸೊಪ್ಪು, ಬಗೆಬಗೆಯ ತರಕಾರಿಗಳು ಇತ್ಯಾದಿಗಳ ಬಳಕೆಯಿದೆ. ಇವೆಲ್ಲವೂ ಇಡೀ ಉಪಹಾರದ ಪೋಷಕಾಂಶಗಳ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇನ್ನೂ ಮುಖ್ಯವಾದ ಇನ್ನೊಂದು ಅಂಶವೆಂದರೆ, ದಕ್ಷಿಣ ಭಾರತೀಯರಾದ ನಮ್ಮ ಶೈಲಿಯ ತಿಂಡಿಗಳ ಹಿಟ್ಟು ತಯಾರಿಕೆಯಲ್ಲಿ ಹುಳಿಬರಿಸುವ ಪ್ರಕ್ರಿಯೆಯೂ ಇದೆ. ಎಣ್ಣೆಯಲ್ಲಿ ಹುರಿಯುವುದಕ್ಕಿಂತಲೂ ಹಬೆಯಲ್ಲಿ ಬೇಯಿಸುವ ಪ್ರಕ್ರಿಯೆಯಿದೆ. ಇವೆಲ್ಲ ಪ್ರಕ್ರಿಯೆಗಳೂ ಆರೋಗ್ಯಕ್ಕೆ ಪೂರಕವಾದವುಗಳು.
ಆದರೆ, ದಕ್ಷಿಣ ಭಾರತೀಯ ಈ ತಿನಿಸುಗಳಲ್ಲಿ ಕಾರ್ಬೋಹೈಡ್ರೇಟ್‌ ಅಧಿಕ ಎಂಬ ವಾದವೂ ಇದೆ. ಇದು ನಿಜ ಕೂಡಾ. ಆದರೂ, ತೂಕ ಇಳಿಕೆಯ ವಿಚಾರಕ್ಕೆ ಬಂದರೆ, ಖಂಡಿತವಾಗಿಯೂ ಈ ತಿಂಡಿಗಳನ್ನೇ ಹಿತಮಿತವಾಗಿ ತಿಂದರೆ, ತೂಕ ಇಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ರುಚಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಮ್ಮದೇ ಆಹಾರ ಶೈಲಿಯಲ್ಲೂ, ತೂಕ ಇಳಿಕೆ ಸಾಧ್ಯವಿದೆ ಎಂಬುದನ್ನು ಇತ್ತೀಚೆಗೆ ಹಲವರು ಸಾಧ್ಯವಾಗಿಸಿ ತೋರಿಸುತ್ತಿದ್ದಾರೆ ಕೂಡ.

ಇಡ್ಲಿ ಸಾಂಬಾರ್‌

ಇಡ್ಲಿ ಅತ್ಯಂತ ಪೋಷಕಾಂಶಯುಕ್ತ ಹಬೆಯಲ್ಲಿ ಬೇಯಿಸಿ ಮಾಡು ಆರೋಗ್ಯಕರ ತಿನಿಸು. ಬೆಳಗ್ಗಿನ ಹೊತ್ತಿಗೆ ಇದು ಪ್ರಶಸ್ತ. ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ಮಾಡಿದ ಇಡ್ಲಿಗೆ ತರಕಾರಿ ಹಾಕಿದ ಸಾಂಬಾರು, ತೆಂಗಿನಕಾಯಿಯ ಚಟ್ನಿ ಇದ್ದರೆ ಸ್ವರ್ಗ. ಪೋಷಕಾಂಶಗಳ ವಿಚಾರದಲ್ಲೂ ಇದು ಯಾವುದೇ ಮೋಸ ಮಾಡದು.

ದೋಸೆ

ಇಡ್ಲಿಯ ಹಿಟ್ಟಿನಿಂದಲೇ ಮಾಡಬಹುದಾದ ದೋಸೆಯೂ ಕೂಡಾ ಅಷ್ಟೇ ಆರೋಗ್ಯಕರ. ಪ್ರೊಟೀನ್‌ ಹಾಗೂ ಸಾಕಷ್ಟು ಕಾರ್ಬೋಹೈಡ್ರೇಟ್‌ ಇರುವ ಇದು ಬೆಳಗ್ಗೆಗೆ ಒಳ್ಳೆಯ ಆಹಾರ. ಕೇವಲ ಈ ಹಿಟ್ಟಲ್ಲದೆ, ನೂರಾರು ಬಗೆಯ ದೋಸೆಗಳನ್ನೂ ತರಕಾರಿ ಹಾಗೂ ಬೇರೆ ಬೇರೆ ಧಾನ್ಯಗಳನ್ನು ಬಳಸಿ ಮಾಡಬಹುದು ಎಂಬುದೇ ದೋಸೆಯ ವಿಶೇಷತೆ.

ಉಪ್ಪಿಟ್ಟು

ಗೋಧಿ/ರವೆಯಿಂದ ಮಾಡಬಹುದಾದ ಉಪ್ಪಿಟ್ಟು ಕೂಡಾ ಬೆಳಗ್ಗೆಗೆ ಹೇಳಿ ಮಾಡಿಸಿದ ತಿಂಡಿ. ಬಗೆಬಗೆಯ ತರಕಾರಿಗಳನ್ನು ಹಾಕಿ ಮಾಡಬಹುದು. ಇದೂ ಕೂಡಾ ಪೋಷಕಾಂಶಯುಕ್ತ ಆಹಾರ. ತೂಕ ಇಳಿಕೆಗೂ ಪೂರಕ.

ಇದನ್ನೂ ಓದಿ: Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

ಉತ್ತಪ್ಪ, ಪಡ್ಡು, ಪೊಂಗಲ್

ಈ ಎಲ್ಲ ತಿನಿಸುಗಳೂ ಕೂಡಾ ಇಡ್ಲಿ ದೋಸೆಗಳಂತೆಯೇ ನಿರುಪದ್ರವಿ. ಪೋಷಕಾಂಶಭರಿತವಾದವು. ಇವುಗಳನ್ನು ಹಿತಮಿತವಾಗಿ ತಿಂದರೆ, ಹೊಟ್ಟೆಗೂ ಹಿತ, ನಾಲಿಗೆಗೂ ರುಚಿ. ತೂಕವನ್ನೂ ಸಮತೋಲನದಲ್ಲಿಟ್ಟುಕೊಳ್ಳಬಹುದು.

Exit mobile version