ನಮ್ಮ ಅಜ್ಜ ಅಜ್ಜಿಯರ ಜಮಾನಾದವರು ಎಷ್ಟೊಂದು ವರುಷಗಳ ಕಾಲ ನಿರೋಗಿಗಳಾಗಿ ಬದುಕುತ್ತಿದ್ದರಲ್ಲ, ಈಗ ನಮ್ಮ ಕಾಲದವರಿಗೇನು ಬಂದಿರುವುದು ದೊಡ್ಡರೋಗ? ಮಕ್ಕಳಲ್ಲೇ ಮಧುಮೇಹ, ಎಳೆಯರಲ್ಲೇ ಹೃದಯಾಘಾತ, ವಯಸ್ಸಾದವರಲ್ಲಂತೂ ಕೇಳುವುದೇ ಬೇಡ, ರೋಗಗಳ ಮ್ಯೂಸಿಯಂನಂತಿರುತ್ತಾರೆ!- ಈ ಭಾವ ಬಹಳ ಸಾರಿ ನಮ್ಮ ಮನಸ್ಸಿಗೆ ಬಂದಿರುತ್ತದೆ. ಸ್ವಲ್ಪ ನಮ್ಮ ಆಹಾರದ ಬಗ್ಗೆ, ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ, ನಮ್ಮ ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಲ್ಲ. ಬಾಟಲಿಯಲ್ಲಿ ರಾಸಾಯನಿಕ ಮಿಶ್ರಿತ ಹಣ್ಣಿನ ರಸ, ಸಕ್ಕರೆ ತುಂಬಿದ ಸೋಡಾಗಳು, ಪ್ಯಾಕೆಟ್ನಲ್ಲಿ ತುಂಬಿರುವ ಸಂಸ್ಕರಿತ ಕೊಬ್ಬಿನ ಕುರುಕಲುಗಳು, ಫ್ರೀಜ್ ಮಾಡಿರುವ ಆಹಾರಗಳು, ಯಾವಾಗೆಂದರೆ ಆವಾಗ ಕಾಫಿ, ಚಹಾ; ಇದಿಷ್ಟು ಸಾಲದಂತೆ, ಚಟುವಟಿಕೆ ರಹಿತ ಜೀವನ ಈಗಲೂ ಆರೋಗ್ಯ ಹಾಳಾಗದಿದ್ದರೆ ಹೇಗೆ? ರಕ್ತದೊತ್ತಡ, ಮಧುಮೇಹ, ಹೃದಯದ ಖಾಯಿಲೆ, ಪಾರ್ಶ್ವವಾಯು… ಸರಣಿ ಮುಗಿಯುವುದಿಲ್ಲ.
ವಿಶ್ವ ಹೃದಯ ದಿನದ ಈ ಸಂದರ್ಭದಲ್ಲಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುವಂಥ ಕೆಲವು ಆಹಾರವನ್ನು ತಿಳಿದುಕೊಳ್ಳೋಣ. ಮಾತ್ರವಲ್ಲ, ಪ್ರತಿದಿನದ ಆಹಾರದ ಬಗ್ಗೆ ಆದಷ್ಟೂ ಎಚ್ಚರದಿಂದ ಇದ್ದರೆ, ಮತ್ತೆ ಔಷಧವನ್ನೇ ಆಹಾರವಾಗಿಸಿಕೊಳ್ಳುವ ಪರಿಸ್ಥಿತಿಯನ್ನು ತಪ್ಪಿಸಬಹುದು. ಜೀವನಶೈಲಿಯ ಖಾಯಿಲೆಗಳಿಂದ ದೂರವಿದ್ದಷ್ಟೂ ನಮ್ಮ ಹೃದಯ ಸ್ವಸ್ಥವಾಗಿರುತ್ತದೆ.
ಇಂಥವು ಬೇಕೇಬೇಕು: ಪ್ರತಿದಿನ ಒಂದಿಷ್ಟು ಬಾದಾಮಿ ಬೇಕು. ಇದರ ಉಳಿದೆಲ್ಲಾ ಲಾಭದಾಯಕ ಗುಣಗಳ ಜೊತೆಗೆ, ದೇಹದಲ್ಲಿನ ಎಲ್ ಡಿ ಎಲ್ ಕಡಿಮೆ ಮಾಡುವ ಗುಣವನ್ನಿದು ಹೊಂದಿದೆ. ಉರಿಯೂತವನ್ನು ಶಮನ ಮಾಡುವ ಸಾಮರ್ಥ್ಯವೂ ಇದಕ್ಕಿದೆ. ಪ್ರತಿದಿನ ನಿಗದಿತ ಪ್ರಮಾಣದಲ್ಲಿ ಬಾದಾಮಿ ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮಗೊಳಿಸುವ ಸಾಧ್ಯತೆಯನ್ನು ವೈದ್ಯಕೀಯ ಲೋಕ ಸಮರ್ಥಿಸುತ್ತದೆ. ದೈನಂದಿನ ವ್ಯಾಯಾಮಕ್ಕೆ ಮೊದಲು ಒಂದಿಷ್ಟು ಬಾದಾಮಿ ಬಾಯಾಡಬಹುದು. ಮಲಗುವ ಮೊದಲು ಅಥ್ವಾ ಬೆಳಗ್ಗೆ ಎದ್ದ ಕೂಡಲೆ ಸಹ ಬಾದಾಮಿ ಬಾಯಾಡುವ ಅಭ್ಯಾಸ ಇರಿಸಿಕೊಳ್ಳಬಹುದು. ಪ್ರಯಾಣದ ಹೊತ್ತಿನಲ್ಲಂತೂ ಆಪತ್ ಬಾಂಧವ. ಒಟ್ಟಿನಲ್ಲಿ ಬಾದಾಮಿಗೆ ಬದುಕಿನಲ್ಲಿ ಜಾಗ ಕೊಡಿ.
ಇದನ್ನೂ ಓದಿ | World alzheimers month | ಮರೆವಿನ ರೋಗ ಅಲ್ಜೈಮರ್ಸ್ ಬಗೆಗೆ ಇರಲಿ ಅರಿವು
ಹಸಿರಿರಲಿ ನಿಮ್ಮ ಊಟದ ತಟ್ಟೆಯಲ್ಲಿ: ಹಸಿರು ಬಣ್ಣದ ಸೊಪ್ಪು ತರಕಾರಿಗಳು ಹೃದ್ರೋಗದ ಸಾಧ್ಯತೆಯನ್ನು ಶೇ. ೧೬ ರಷ್ಟು ತಗ್ಗಿಸುತ್ತವೆ ಎನ್ನಲಾಗಿದೆ. ವಿಟಮಿನ್, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳ ಈ ಆರೋಗ್ಯಕರ ಮಿಶ್ರಣ ನಾನಾ ರೀತಿಯಲ್ಲಿ ಪ್ರಯೋಜನಕಾರಿ. ಸೊಪ್ಪಿನಲ್ಲಿರುವ ನೈಟ್ರೇಟ್ ಅಂಶ ನಮ್ಮ ರಕ್ತನಾಳಗಳು ಕಿರಿದಾಗದಂತೆ ತಡೆಯುತ್ತದೆ. ಇದರಿಂದ ಹೃದಯಕ್ಕೆ ಬೇಕಾದ ಆಮ್ಲಜನಕ ತಡೆಯಿಲ್ಲದೆ ಪೂರೈಕೆಯಾಗಲು ಸಾಧ್ಯ. ಮಾತ್ರವಲ್ಲ, ರಕ್ತದೊತ್ತಡ ನಿಯಂತ್ರಣಕ್ಕೆ ಸಹ ಅನುಕೂಲ ಎನ್ನಲಾಗಿದೆ.
ಇವುಗಳು ಬೇಡ: ಸಂಸ್ಕರಿತ ಆಹಾರಗಳು- ಅದರಲ್ಲೂ ಮಾಂಸಾಹಾರ. ಉಪ್ಪಿನಂಶ ಹೆಚ್ಚಿರುವ ಈ ಕೃತಕ ಸಂಸ್ಕಾರಭರಿತ ಆಹಾರಗಳು ಮಾಡುವ ಅವಾಂತರ ಒಂದೆರಡೇ ಅಲ್ಲ. ಹೆಚ್ಚಿನ ಪ್ರಮಾಣದ ಉಪ್ಪು, ಸಂಸ್ಕರಿತ ಕೊಬ್ಬು, ಕೊಲೆಸ್ಟ್ರಾಲ್ ಅಂಶಗಳು ಹೃದಯಕ್ಕೆ ಅಳಿಸಲಾಗದ ಬರೆ ಹಾಕುತ್ತವೆ, ಎಚ್ಚರ!
ಇವುಗಳನ್ನು ಮೊದಲು ಬಿಸಾಡಿ: ಬಾಟಲಿಯಲ್ಲಿ ರಾಸಾಯನಿಕ ಮಿಶ್ರಿತ ಹಣ್ಣಿನ ರಸ, ಸಕ್ಕರೆ ತುಂಬಿದ ಸೋಡಾಗಳು ನಿಮ್ಮ ಮನೆಯಲ್ಲಿದ್ದರೆ ಮೊದಲು ಬಿಸಾಡಿ. ಇಂಥವುಗಳನ್ನು ಎಷ್ಟು ಹೆಚ್ಚು ಹೊಟ್ಟೆಗಿಳಿಸುತ್ತೀರೊ, ಹೃದ್ರೋಗ ಬರುವ ಸಂಭವ ಅಷ್ಟೇ ಹೆಚ್ಚು. ಇವೆಲ್ಲ ಬಾಯಿಗೆ ರುಚಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಆರೋಗ್ಯ ಕೇಳುವುದಿಲ್ಲ. ತೂಕ ಹೆಚ್ಚಳ, ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆಗಳೆಲ್ಲಾ ಅಮರಿಕೊಳ್ಳುತ್ತವೆ.
ಇದನ್ನೂ ಓದಿ | ಜಿಮ್: ಯಾವುದು ಸೂಕ್ತ- ಒಳಾಂಗಣವೋ, ಹೊರಾಂಗಣವೋ?