Site icon Vistara News

World Thyroid Day: ವಿಶ್ವ ಥೈರಾಯ್ಡ್ ದಿನ: ಸೂಕ್ತ ನಿರ್ವಹಣೆಯೇ ಸಮಸ್ಯೆಗೆ ಮದ್ದು

Thyroid Problem

World Thyroid Day: Proper management is the cure for the problem

ವಿಶ್ವದಲ್ಲಿ ಅತಿ ಹೆಚ್ಚು ಕಾಡುತ್ತಿರುವ ಅಂತಃಸ್ರಾವಕ ಗ್ರಂಥಿಗಳ ಸಮಸ್ಯೆಗಳ ಪೈಕಿ ಥೈರಾಯ್ಡ್ ಎರಡನೇ ಸ್ಥಾನದಲ್ಲಿದೆ. ಮೊದಲನೆಯ ಸ್ಥಾನ ಮಧುಮೇಹದ್ದು. ವಿಶ್ವದಲ್ಲಿ ಹತ್ತರಲ್ಲಿ ಒಬ್ಬರಿಗೆ ಥೈರಾಯ್ಡ್ ಸಂಬಂಧೀ ಸಮಸ್ಯೆಯಿದೆ. (World Thyroid Day) ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುವುದು ಕಂಡುಬಂದಿದೆ.

ಗಂಟಲಿನಲ್ಲಿರುವ ಸಣ್ಣ ಚಿಟ್ಟೆಯಾಕಾರದ ಗ್ರಂಥಿ ಎಲ್ಲರಿಗೂ ಪರಿಚಿತವಿರುವುದು ಥೈರಾಯ್ಡ್ ಗ್ರಂಥಿ ಎಂದೇ. ಪರಿಚಿತವಾಗಿರುವ ಕಾರಣ ಏನೇ ಇದ್ದರೂ, ಈ ಗ್ರಂಥಿ ಸೂಕ್ತವಾಗಿ ಕಾರ್ಯನಿರ್ವಹಿಸುವುದು ದೇಹದ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಇದೇ ಹಿನ್ನೆಲೆಯಲ್ಲಿ, ಥೈರಾಯ್ಡ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ ತಿಂಗಳ 25ನೇ ದಿನವನ್ನು ವಿಶ್ವ ಥೈರಾಯ್ಡ್ ದಿನ (World Thyroid Day) ಎಂದು ಗುರುತಿಸಲಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ಕಾಡುತ್ತಿರುವ ಅಂತಃಸ್ರಾವಕ ಗ್ರಂಥಿಗಳ ಸಮಸ್ಯೆಗಳ ಪೈಕಿ ಥೈರಾಯ್ಡ್ ಎರಡನೇ ಸ್ಥಾನದಲ್ಲಿದೆ. ಮೊದಲನೆಯ ಸ್ಥಾನ ಮಧುಮೇಹದ್ದು. ವಿಶ್ವದಲ್ಲಿ ಹತ್ತರಲ್ಲಿ ಒಬ್ಬರಿಗೆ ಥೈರಾಯ್ಡ್ ಸಂಬಂಧೀ ಸಮಸ್ಯೆಯಿದೆ. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುವುದು ಕಂಡುಬಂದಿದೆ. ಆದರೆ ಹೆಚ್ಚಿನವರಿಗೆ ಈ ಸಮಸ್ಯೆ ತಮಗಿರುವುದು ಗೊತ್ತೇ ಇರುವುದಿಲ್ಲ.

ಥೈರಾಯ್ಡ್ ಗ್ರಂಥಿ ಚೋದಕಗಳನ್ನು ಹೆಚ್ಚಾಗಿ ಸ್ರವಿಸಿದರೆ ಅದನ್ನು ಹೈಪರ್ ಥೈರಾಯ್ಡ್ ಸಮಸ್ಯೆ ಎನ್ನಲಾಗುತ್ತದೆ. ಯುವಜನತೆಯಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ. ಥೈರಾಯ್ಡ್ ಸ್ರವಿಸುವಿಕೆ ಕಡಿಮೆ ಆದರೆ ಅದನ್ನು ಹೈಪೋಥೈರಾಯ್ಡ್ ಎನ್ನಲಾಗುತ್ತದೆ. ಈ ತೊಂದರೆ ವಯಸ್ಸಾದವರಲ್ಲಿ ಹೆಚ್ಚು. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತಾಗಬೇಕಾಗುತ್ತದೆ. ಹಾಗಾಗಿ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ ತೆಗೆದುಕೊಂಡರೆ ಥೈರಾಯ್ಡ್ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಬಹುದು.

ಇದ್ದಕ್ಕಿದ್ದಂತೆ ತೂಕ ಹೆಚ್ಚುವುದು ಅಥವಾ ಇಳಿಯುವುದು, ಸುಸ್ತು, ಆಯಾಸ, ಕೂದಲು ಉದುರುವುದು, ಅನಿಯಮಿತವಾದ ಎದೆಬಡಿತ, ಮೂಡ್ ಬದಲಾವಣೆ ಮುಂತಾದ ಲಕ್ಷಣಗಳು ಕಂಡುಬಂದರೆ ಥೈರಾಯ್ಡ್ ತಪಾಸಣೆಯನ್ನು ಮಾಡಿಸುವಂತೆ ವೈದ್ಯರು ಸೂಚಿಸಬಹುದು. ಥೈರಾಯ್ಡ್ ಸಮಸ್ಯೆಗೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಹೃದಯದ ತೊಂದರೆ, ಆಸ್ಟಿಯೊಪೊರೊಸಿಸ್, ಒಳಾಂಗಗಳ ಕಾರ್ಯದಲ್ಲಿ ಏರುಪೇರು, ಫಲವಂತಿಕೆಯ ತೊಂದರೆ, ದೇಹದ ಚಯಾಪಚಯದಲ್ಲಿ ವ್ಯತ್ಯಾಸದಂಥ ಇನ್ನಷ್ಟು ಸಮಸ್ಯೆಗಳು ಗಂಟುಬೀಳಬಹುದು. ಗರ್ಭಿಣಿಯರಲ್ಲಿ ಈ ತೊಂದರೆ ಕಂಡುಬಂದರೆ ಹುಟ್ಟಲಿರುವ ಶಿಶುವಿಗೆ ಆಪತ್ತು.

ಈ ಸಮಸ್ಯೆಯನ್ನು ಸೂಕ್ತವಾಗಿ ನಿರ್ವಹಿಸುವುದೇ ಇದಕ್ಕಿರುವ ಮದ್ದು. ನಿಯಮಿತವಾದ ದೈಹಿಕ ಚಟುವಟಿಕೆಗಳು, ಒತ್ತಡ ನಿರ್ವಹಣೆ, ಅಯೋಡಿನ್, ಸೆಲೆನಿಯಂ ಮತ್ತು ಪ್ರೊಬಯಾಟಿಕ್ ಸಹಿತವಾದ ಆಹಾರ ಸೇವನೆಯಂಥವು ಥೈರಾಯ್ಡ್ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ನೆರವಾಗುತ್ತದೆ. ಜೊತೆಗೆ ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಔಷಧವೂ ಅಗತ್ಯವಾಗುತ್ತದೆ.

ಹೈಪೊ ಥೈರಾಯ್ಡ್ ಸಮಸ್ಯೆ ಇರುವವರಿಗೆ ಈ ಪೇಯಗಳು ಲಾಭದಾಯಕವಾಗಬಹುದು

ಅರಿಶಿನ ಹಾಲು: ಇದರಲ್ಲಿರುವ ಕರ್ಕುಮಿನ್ ಅಂಶದಿಂದ ಥೈರಾಯ್ಡ್ ಗ್ರಂಥಿಯ ಆರೋಗ್ಯ ಸುಧಾರಿಸುತ್ತದೆ. ಇದಕ್ಕೆ ಚಿಟಿಕೆ ಕಪ್ಪು ಕಾಳುಮೆಣಸಿನ ಪುಡಿಯನ್ನೂ ಸೇರಿಸುವ ಕ್ರಮವಿದೆ

ಮಜ್ಜಿಗೆ: ಸಾಮಾನ್ಯವಾಗಿ ದೇಹದಲ್ಲಿ ಉರಿಯೂತ ನಿಯಂತ್ರಿಸುವ ಆಹಾರಗಳು ಹೈಪೊ ಥೈರಾಯ್ಡ್ ಸಮಸ್ಯೆ ಇರುವವರಿಗೆ ಲಾಭದಾಯಕ. ದೇಹಕ್ಕೆ ಅಗತ್ಯ ಪ್ರೊಬಯಾಟಿಕ್ ಒದಗಿಸಿ, ಜೀರ್ಣಾಂಗದ ಆರೋಗ್ಯ ಸುಧಾರಿಸುವ ಮೂಲಕ ಹೈಪೊಥೈರಾಯ್ಡ್ ಸಮಸ್ಯೆಗೆ ಪರೋಕ್ಷವಾಗಿ ಮಜ್ಜಿಗೆ ನೆರವಾಗುತ್ತದೆ.

ಕೆಂಪು ಜ್ಯೂಸ್: ಬೀಟ್ರೂಟ್ ಮತ್ತು ಕ್ಯಾರೆಟ್ ಗಳನ್ನು ಮಿಶ್ರ ಮಾಡಿ ತಯಾರಿಸುವ ಜ್ಯೂಸ್ ಸಹ ಈ ವಿಷಯದಲ್ಲಿ ಪರಿಣಾಮಕಾರಿ. ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಲೈಕೋಪೇನ್ ಸತ್ವದಿಂದ ದೇಹದಲ್ಲಿನ ಉರಿಯೂತವನ್ನು ಶಮನ ಮಾಡಿ, ಥೈರಾಯ್ಡ್ ಸಾಮರ್ಥ್ಯ್ ಹೆಚ್ಚಿಸಲು ಸಾಧ್ಯ.

ಇದನ್ನೂ ಓದಿ: Thyroid Awareness Month | ನಮ್ಮ ಆರೋಗ್ಯದಲ್ಲಿ ಥೈರಾಯ್ಡ್‌ ಪಾತ್ರ ಅತಿ ಮುಖ್ಯ, ತಿಳಿದಿರಲಿ!

ಹಸಿರು ಜ್ಯೂಸ್: ಪಾಲಕ್, ಕೊತ್ತಂಬರಿ, ಪುದೀನಾ ಮುಂತಾದ ಸೊಪ್ಪುಗಳ ಜ್ಯೂಸ್ ಸಹ ಉಪಯುಕ್ತ. ಇದರಲ್ಲಿ ಇರುವ ಹರಿತ್ತಿನ ಅಂಶವು ಥೈರಾಯ್ಡ್ ಆರೋಗ್ಯ ಸುಧಾರಿಸುವಲ್ಲಿ ಪರಿಣಾಮಕಾರಿ

ಇದಲ್ಲದೆ, ಅಶ್ವಗಂಥ, ಶತಾವರಿಯಂಥವು ಥೈರಾಯ್ಡ್ ಗ್ರಂಥಿಯ ಕ್ಷಮತೆ ಹೆಚ್ಚಿಸುವಲ್ಲಿ ನೆರವಾಗಬಲ್ಲವು. ಆದರೆ ಈ ಮನೆಮದ್ದುಗಳ ಜೊತೆಗೆ ನಿಯಮಿತವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ.

Exit mobile version