ಭಾರತದ ಅಡುಗೆಗಳನ್ನು ಇಷ್ಟಪಡದವರು ಕಡಿಮೆ. ಇಲ್ಲಿರುವಷ್ಟು ಬಗೆಬಗೆಯ ಅಡುಗೆಗಳು ವೈವಿಧ್ಯ ಇನ್ನೆಲ್ಲೂ ಸಿಗದು. ಹಾಗಾಗಿಯೇ ಭಾರತೀಯ ಅಡುಗೆಯೆಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಕೇವಲ ಭಾರತೀಯರಷ್ಟೇ ಅಲ್ಲ, ಪ್ರಪಂಚದ ಮೂಲೆಮೂಲೆಯಲ್ಲೂ ಭಾರತೀಯ ಅಡುಗೆಗೆ ಅದರದ್ದೇ ಆದ ವಿಶಿಷ್ಟ ಸ್ಥಾನವಿದೆ.
ಮಾಸ್ಟರ್ ಶೆಫ್ ಆಸ್ಟ್ರೇಲಿಯಾದ ಸ್ಪರ್ಧಿ ಸಾರಾ ಟೋಡ್ ಸ್ಪರ್ಧೆಯ ಸುತ್ತೊಂದರಲ್ಲಿ ಬೇಲ್‌ಪುರಿ ಮಾಡಿ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸಿದರು. ಸ್ಪರ್ಧೆಯ ತೀರ್ಪುಗಾರರು ಭಾರತೀಯರ ಈ ಬೇಲ್‌ಪುರಿ ಸವಿಗೆ ಮರುಳಾದರು. ಸಾರಾ ಮಾಡಿದ ಭಾರತೀಯ ಚಾಟ್ ಭೇಲ್‌ಪುರಿ 10 ನಿಮಿಷದಲ್ಲಿ ರೆಡಿಯಾಗಿದ್ದು ನೋಡಿ ತೀರ್ಪುಗಾರರಿಗೆ ಆಶ್ಚರ್ಯ. ಅದರಲ್ಲೂ, ಭರಪೂರ ಮಸಾಲೆ ಹಾಗೂ, ಸಾಕಷ್ಟು ವಸ್ತುಗಳನ್ನು ಬಳಸಿ, ಇಷ್ಟೊಂದು ಸರಳ ಅಡುಗೆ ಅದೂ ದಿಢೀರ್ ರೆಡಿಯಾದ ಬಗೆ ಅವರನ್ನು ಚಕಿತರನ್ನಾಗಿಸಿತು.
ಸಾರಾ ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲೂ ಇದನ್ನು ಶೇರ್ ಮಾಡಿದ್ದು, ಇದು ಟ್ರೋಲ್‌ಗೊಳಗಾಗಿದೆ. “ಇಷ್ಟೆಲ್ಲ ಸಂಕೀರ್ಣವಾದ ವಿವಿಧ ಸ್ವಾದಗಳನ್ನು ಒಂದರಲ್ಲಿ ಹಾಕಿದ್ದೂ ಅಲ್ಲದೆ ಹತ್ತೇ ನಿಮಿಷದಲ್ಲಿ ಮಾಡಿದ್ದೀರಿ. ಹಸಿ ಈರುಳ್ಳಿ ಮಜವಾಗಿದೆ” ಎಂಬ ತೀರ್ಪುಗಾರರ ಅಭಿಪ್ರಾಯವನ್ನು ಗುರಿಯಾಗಿಸಿಕೊಂಡು, ʼʼಅರೆ, ನಮ್ಮೂರಿನ ರಸ್ತೆಬದಿ ಭೇಲ್‌ಪುರಿ ಹುಡುಗ ಇದನ್ನು ಒಂದೇ ನಿಮಿಷದಲ್ಲಿ ಮಾಡುತ್ತಾನೆ” ಎಂಬಂಥ ಮೀಮ್‌ಗಳು ಹರಿದಾಡಿವೆ. ಅಂತೂ ಇಂತೂ ಆಸ್ಟ್ರೇಲಿಯಾದ ಮಾಸ್ಟರ್ ಶೆಫ್ ಅಡುಗೆಯನ್ನು ನಾವು ದಿನಾ ಬೀದಿಯಲ್ಲಿ 10 ರುಪಾಯಿಗೆ ತಿನ್ನುತ್ತೇವಲ್ಲ ಎಂದು ಟ್ರೋಲ್ ಮಾಡಿ ನಗೆಯಾಡಿದ್ದಾರೆ.
10 ನಿಮಿಷದೊಳಗೆ ಮಾಡಬಹುದಾದ ತಿನಿಸಿನ ಚಾಲೆಂಜ್ ಕೊಟ್ಟಾಗ ನನಗೆ ಮೊದಲು ನೆನಪಾಗಿದ್ದೇ ಭೇಲ್‌ಪುರಿ. ಇದಕ್ಕಿಂತ ಅತ್ಯುತ್ತಮ ಉದಾಹರಣೆ ಭಾರತದಲ್ಲಿ ಯಾವುದು ಸಿಕ್ಕೀತು ಹೇಳಿ ಎಂದು ಆಕೆ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ, ಜನರು, ಭಾರತದ ಬೀದಿಬೀದಿಯಲ್ಲಿ ಇಂಥ ಎಷ್ಟೋ ಭೇಲ್‌ಪುರಿಗಳನ್ನು ರುಚಿರುಚಿಯಾಗಿ ಒಂದೆರಡು ನಿಮಿಷದಲ್ಲಿ ಮಾಡಿಕೊಂಡೇ ಆತ ಇನ್ನೂ ಬೀದಿಯಲ್ಲೇ ಇದ್ದಾನೆ ಎಂಬರ್ಥದ ಕಾಮೆಂಟುಗಳು ಹರಿದಾಡಿವೆ.
ಅಷ್ಟಕ್ಕೂ ಇದನ್ನಿಲ್ಲಿ ಓದ್ತಾ ಓದ್ತಾ ಭೇಲ್‌ಪುರಿ ಎರಡೇ ನಿಮಿಷದಲ್ಲಿ ಮಾಡಿ ತಿಂದೇ ಬಿಡೋಣ ಅಂತ ಅಂತ ಬಯಕೆಯಾದ್ರೆ ಯಾಕೆ ತಡ. ಈಗ್ಲೇ ಮಾಡಿಬಿಡಿ. ಹಸಿರು, ಖಾರಾ ಹಾಗೂ ಸಿಹಿ ಚಟ್ನಿ ಮೊದಲೇ ರೆಡಿ ಇದೆ ಅಂತಾದ್ರೆ ಇದು ಎರಡೇ ನಿಮಿಷದ ಕೆಲಸ ನೋ ಡೌಟ್!
ಇದನ್ನೂ ಓದಿ: mango time: ಮಾವುಪ್ರಿಯರಿಗೆ ಹಣ್ಣು ತಿನ್ನಲು 15 ಕಾರಣಗಳು!
ಭೇಲ್‌ಪುರಿ ಮಾಡಿ, ತಿನ್ನಿ
ಮುಕ್ಕಾಲು ಕಪ್ ಕೊತ್ತಂಬರಿ ಸೊಪ್ಪು, ಕಾಲು ಕಪ್ ಪುದಿನ, ಒಂದೆರಡು ಹಸಿಮೆಣಸು, ಸಣ್ಣ ತುಂಡು ಶುಂಠಿ, ರುಚಿಗೆ ಉಪ್ಪು, ಒಂದರ್ಧ ಚಮಚ ಜೀರಿಗೆ ಪುಡಿ ಹಾಕಿ ರುಬ್ಬಿ ಖಾರಾ ಚಟ್ನಿ ಮಾಡಿಟ್ಟು ಅದಕ್ಕೆ ಎರಡು ಚಮಚ ನಿಂಬೆರಸ ಹಿಂಡಿಡಿ. ಎರಡು ಚಮಚ ಹುಣಸೇ ಪೇಸ್ಟ್, ಮೂರ್ನಾಲ್ಕು ಚಮಚ ಬೆಲ್ಲದ ಪುಡಿ, ಕಾಲು ಚಮಚ ಅಚ್ಚಕಾರದ ಪುಡಿ, ರುಚಿಗೆ ಉಪ್ಪು, ಚಿಟಿಕೆ ಓಣಶುಂಠಿ ಪುಡಿ, ಚಿಟಿಕೆ ಸೋಂಪು ಪುಡಿ ಹಾಕಿ ನಾಲ್ಕೈದು ಚಮಚ ನೀರು ಹಾಕಿ ಸ್ವಲ್ಪ ಕುದಿಸಿ ಕೆಳಗಿಳಿಸಿ. ಇನ್ನು ಕೆಂಪು ಖಾರಾ ಚಟ್ನಿ ಮಾಡಲು, ಕಾಲು ಚಮಚ ಜೀರಿಗೆ, ಹತ್ತು ನೆನೆಸಿದ ಕೆಂಪು ಮೆಣಸು, ನಾಲ್ಕೈದು ಬೆಳ್ಳುಳ್ಳಿ ಎಸಳು, ಅರ್ಧ ಚಮಚ ಬೆಲ್ಲ, ರುಚಿಗೆ ಉಪ್ಪು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಒಂದು ಚಮಚ ನಿಂಬೆರಸ ಹಾಕಿ ಬದಿಯಲ್ಲಿಡಿ. ಇವಿಷ್ಟು ನಿಮ್ಮಲ್ಲಿ ಮೊದಲೇ ಇದ್ದರೆ, ಭೇಲ್‌ಪುರಿ ಬೇಕಾದಾಗ ಮಾಡಿ ತಿನ್ನೋದು ಸುಲಭ.
ಬೇಕಾದಷ್ಟು ಮಂಡಕ್ಕಿಗೆ, ಮೊದಲೇ ಬೇಯಿಸಿ ತೆಗೆದಿಟ್ಟ ಆಲೂಗಡ್ಡೆಯ ಹೋಳುಗಳನ್ನು ಹಾಕಿ, ಒಂದಿಷ್ಟು, ಈರುಳ್ಳಿ, ಟೊಮೇಟೋ, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಸೇರಿಸಿ. ಈಗ ಕೆಂಪು ಚಟ್ನಿ, ಸಿಹಿ ಚಟ್ನಿ ಹಾಗೂ ಹಸಿರು ಚಟ್ನಿಯನ್ನು ಬೇಕಾದಷ್ಟು ಮಾತ್ರ ಸೇರಿಸಿಕೊಳ್ಳಿ. ಹುರಿದ ನೆಲಗಡಲೆ, ಚಿಟಿಕೆ ಚಾಟ್ ಮಸಾಲಾ, ಬೇಕಿದ್ದಲ್ಲಿ ಉಪ್ಪು, ಮಾರುಕಟ್ಟೆಯಿಂದ ತಂದಿಟ್ಟ ಪಾಪ್ಡಿಯನ್ನು ಕ್ರಶ್ ಮಾಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಮೇಲಿನಿಂದ ಸೇವ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ. ಈಗ ಹೊಟ್ಟೆ ತುಂಬ ಭೇಲ್ ತಿಂದು ಬೆಲ್ಲದಂತ ಮಾತಾಡಿ.
ಇದನ್ನೂ ಓದಿ: ಮೇಲೆ ಬೆಂಕಿ ಬಿಸಿಲು, ಒಳಗೆ ಮಸಾಲೆಯ ಭುಗಿಲು- ಬೇಸಿಗೆಯಲ್ಲಿ ಇದು ಬೇಡ