Site icon Vistara News

Heart attack info: ಎದೆಯುರಿಯೇ… ಎದೆನೋವೇ… ಸಂಶಯಕ್ಕೊಂದು ಕನ್ನಡಿ!

heart attack

ವಿಶ್ವದೆಲ್ಲಡೆ ಬಹಳಷ್ಟು ಸಾವುಗಳಿಗೆ ಹೃದ್ರೋಗದ ಕಾರಣವೂ ಒಂದು. ವಿಶ್ವದಲ್ಲಾಗುವ ಸಾವಿನ ಮೂರನೇ ಒಂದು ಭಾಗ ಸಾವು ಹೃದ್ರೋಗಕ್ಕೆ ಸಂಬಂಧಿಸಿದ ಸಾವೇ ಆಗಿರುತ್ತದೆ ಎಂದು ದಾಖಲೆಗಳು ಹೇಳುತ್ತವೆ. ಚೀನಾದಲ್ಲಿ ಅತೀ ಹೆಚ್ಚು ಹೃದಯ ಸಂಬಂಧೀ ಸಾವಾದರೆ, ಭಾರತ ಎರಡನೇ ಸ್ಥಾನದಲ್ಲಿಯೂ ರಷ್ಯಾ, ಯುಎಸ್‌ ಹಾಗೂ ಇಂಡೋನೇಷ್ಯಾಗಳು ನಂತರದ ಸ್ಥಾನಗಳಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಲ್ಲಿ ಇಂದು ೧.೭೯ ಕೋಟಿ ಮಂದಿ ಹೃದ್ರೋಗ ಸಮಸ್ಯೆ ಹೊಂದಿದ್ದಾರೆ.

ಹಿರಿಯ ವಯಸ್ಸಿನ ಮಂದಿಯಲ್ಲಿ ಹೃದಯ ಸಂಬಂಧೀ ತೊಂದರೆ ಜಾಸ್ತಿ ಎಂಬುದು ನಿಜವೇ ಆದರೂ, ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೂ ಇದಕ್ಕೆ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ. ಬಹಳ ಸಾರಿ ಹೃದಯದ ತೊಂದರೆಗಳನ್ನು ಸಾಮಾನ್ಯ ಎದೆಯುರಿಯೆಂದು ತಪ್ಪಾಗಿ ಅರ್ಥೈಸಿಕೊಂಡು ನಿರ್ಲಕ್ಷಿಸಲಾಗುತ್ತದೆ. ಎದೆಯ ಭಾಗದಲ್ಲಾಗುವ ಕಿರಿಕಿರಿ, ನೋವನ್ನು, ಸ್ವಲ್ಪ ಮೊದಲು ಹೆಚ್ಚು ಊಟ ಮಾಡಿದ್ದರ ಪರಿಣಾಮ ಎಂದು ಅಂದುಕೊಂಡು ಮನೆ ಮದ್ದು ಮಾಡಿಕೊಂಡು ಸುಮ್ಮನಾಗುವ ಸಂಭವ ಹೆಚ್ಚಿದೆ. ತನಗೆ ಆಗುತ್ತಿರುವ ನೋವು ಹೃದಯ ಸಂಬಂಧಿಯೋ ಅಥವಾ ಸರಿಯಾಗಿ ಜೀರ್ಣವಾಗದ್ದರ ಫಲವೋ ಎಂದು ಕಂಡುಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ಹಾಗಾದರೆ ಈ ಎರಡರ ವ್ಯತ್ಯಾಸ ತಿಳಿಯೋಣ.

೧. ಎದೆ ಉರಿ ಹಾಗೂ ಹೃದಯಾಘಾತ ಇವೆರಡರ ಅನುಭವ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ, ಮುಖ್ಯವಾಗಿ ಲಕ್ಷಣಗಳಲ್ಲಿ ಹೋಲಿಕೆ ಇರುವುದು ಹೌದಾದರೂ, ತೀವ್ರತೆಯಲ್ಲಿ ಎರಡೂ ಬೇರೆಬೇರೆಯಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಹೃದಯಾಘಾತ ಎಂಬುದು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬು ಕೊಲೆಸ್ಟೆರಾಲ್‌ನಿಂದ ತಡೆ ಉಂಟಾಗಿ ರಕ್ತಪರಿಚಲನೆ ಸಾಧ್ಯವಾಗದೆ ಇರುವುದಕ್ಕೆ ಸಂಬಂಧಿಸಿದ್ದು. ಇದು, ಜೀವಕ್ಕೇ ಅಪಾಯ ತಂದೊಡ್ಡುವ ಅಪಾಯವೂ ಇರುವುದರಿಂದ ಇದನ್ನು ನಿರ್ಲಕ್ಷಿಸುವ ಹಾಗಿಲ್ಲ.

ಆದರೆ ಎದೆಯುರಿ ಹಾಗಲ್ಲ. ಉಂಡ ಆಹಾರ ಸರಿಯಾಗಿ ಜೀರ್ಣವಾಗದೆ ಅನ್ನನಾಳದಲ್ಲಿ ಉತ್ಪತ್ತಿಯಾಗುವ ಆಮ್ಲದ ಜೊತೆಗೆ ಸೇರಿ ಹೆಚ್ಚಿನ ಆಮ್ಲೀಯತೆಯ ಪರಿಣಾಮವನ್ನುಂಟು ಮಾಡಿದರೆ ಅದು ಎದೆಯುರಿಗೆ ಕಾರಣವಾಗುತ್ತದೆ. ಆದರೆ ಕೆಲವೊಮ್ಮೆ ಹೃದಯಾಘಾತದ ಲಕ್ಷಣಗಳೂ, ಜೀರ್ಣಕ್ರಿಯೆಯಲ್ಲಾದ ತೊಂದರೆಗಳೊಂದಿಗೆ ಸೇರಿಕೊಂಡು ನಿಜವಾದ ತೊಂದರೆ ಯಾವುದು ಎಂದು ಕಂಡು ಹಿಡಿವಲ್ಲಿ ಸೋಲುವಂತೆ ಮಾಡುತ್ತದೆ. ಹೀಗಾಗಿ ಎಷ್ಟೋ ಪ್ರಕರಣಗಳಲ್ಲಿ ಹೃದಯಾಘಾತವನ್ನು ಎದೆಯುರಿ ಅಷ್ಟೇ ಎಂದುಕೊಂಡು ತೊಂದರೆ ತಂದುಕೊಳ್ಳುತ್ತಾರೆ.

೨. ಹಾರ್ವರ್ಡ್‌ ಹೆಲ್ತ್‌ ಪಬ್ಲಿಶಿಂಗ್‌ ಪ್ರಕಾರ, ಎದೆನೋವು ಕಾಣಿಸಿಕೊಳ್ಳುವುದು ಎದೆಯೆಲುಬಿನಿಂದ. ಎದೆಯುರಿಯ ಲಕ್ಷಣವೂ ಹೀಗೆಯೇ. ಆದರೆ ಒಂದು ವಿಚಾರವನ್ನು ಗಮನಿಸಬೇಕು. ಬಹಳಷ್ಟು ಹೃದಯಾಘಾತಗಳಲ್ಲಿ ಎದೆಯ ಮಧ್ಯಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಇದು ಕೆಲವು ನಿಮಿಷಗಳವರೆಗೆ ಇರುತ್ತದೆ. ಅಥವಾ ಒಮ್ಮೆ ನೋವಿನಲ್ಲಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಅತಿಯಾದ ಒತ್ತಡದಂತಹ ಅನುಭವ, ಹಿಂಡಿದಂಥ ನೋವು, ಹಾಗೂ ಭಾರವಾದಂಥ ಅನುಭವ ಉಂಟಾಗುತ್ತದೆ.

ಹಾಗಾಗಿ ಇಂತಹ ನೋವು ಕಾಣಿಸಿದ ತಕ್ಷಣ ಎದೆಯುರಿ ಎಂದು ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರಿಗೆ ತೋರಿಸಿ. ನೋವು ಎದೆಯ ಮದ್ಯಭಾಗದಿಂದ ಭುಜ, ಕುತ್ತಿಗೆ, ಬೆನ್ನು ಮತ್ತಿತರ ಇತರ ಭಾಗಗಳಿಗೂ ಪಸರಿಸುತ್ತಿದ್ದರೆ, ಕೂಡಲೇ ವೈದ್ಯರ ನೆರವು ಪಡೆಯುವುದು ಉತ್ತಮ.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

೩. ತಲೆಸುತ್ತುವುದು, ಹೊಟ್ಟೆ ತೊಳಸಿದಂತಾಗುವುದು ಹಾಗೂ ವಾಂತಿಯಂತಹ ಲಕ್ಷಣಗಳೂ ಹೃದಯಾಘಾತದ ಸಂದರ್ಭ ಕಂಡುಬರುತ್ತದೆ. ಹೃದಯಾಘಾತವಾದಾಗ ರಕ್ತನಾಳಗಳಲ್ಲಿ ತಡೆ ಇರುವುದರಿಂದಾಗಿ ಅಗತ್ಯವಿದ್ದಷ್ಟು ರಕ್ತ ಹಾಗೂ ಆ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡುವಲ್ಲಿ ರಕ್ತನಾಳ ಸೋಲುವುದರಿಂದ, ಜಠರದಲ್ಲಿನ ಪಿಎಚ್‌ ಮಟ್ಟವೂ ಕುಸಿಯುತ್ತದೆ. ಇದು ಹೊಟ್ಟೆ ತೊಳೆಸುವಿಕೆ ಹಾಗೂ ವಾಂತಿಯಂತಹ ತೊಂದರೆಗಳನ್ನು ಉಂಟುಮಾಡುತ್ತದೆ. ಆದರೆ ಕೆಲವೊಮ್ಮೆ ಇಂತಹ ತೊಂದರೆಗಳು ಎದೆಯುರಿಯ ಸಂದರ್ಭದಲ್ಲಿಯೂ ಕಂಡುಬರುತ್ತವೆ.

೪. ಈ ಎಲ್ಲ ಲಕ್ಷಣಗಳು ಎರಡರಲ್ಲೂ ಇದ್ದರೂ ಹೃದಯಾಘಾತವು ಸಾಮಾನ್ಯ ಎದೆಯುರಿಯಿಂದ ಬೇರೆಯೇ ಆಗಿ ನಿಲ್ಲುತ್ತದೆ. ಹೃದಯಾಘಾತದಲ್ಲಿ ಈ ಲಕ್ಷಣಗಳ ಜೊತೆಗೆ ಉಸಿರಾಟಕ್ಕೆ ಕಷ್ಟವಾಗಬಹುದು, ಅತಿಯಾದ ಒತ್ತಡ ಅಥವಾ ಟೆನ್ಶನ್‌ನಂತಹ ಮಾನಸಿಕ ವೈಪರೀತ್ಯಗಳೂ ಕಾಣಿಸಿಕೊಳ್ಳಬಹುದು.

೫. ಇದಲ್ಲದೆ ಬದಲಾದ ಜೀವನಕ್ರಮ, ಆಹಾರ ಅಭ್ಯಾಸಗಳು, ಧೂಮಪಾನ, ಮದ್ಯಪಾನ ಮತ್ತಿತರ ಅಭ್ಯಾಸಗಳು ಕೂಡಾ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಕೊಲೆಸ್ಟೆರಾಲ್‌ ಹೆಚ್ಚಾಗಿರುವುದು, ಹೈಪರ್‌ ಟೆನ್ಶನ್‌, ತೂಕ ಹೆಚ್ಚಿರುವುದು, ಬೊಜ್ಜು, ಅತಿಯಾದ ಒತ್ತಡದ ಜೀವನಶೈಲಿ, ಕುಟುಂಬದಲ್ಲಿ ಇಂತಹ ಪ್ರಕರಣಗಳಿರುವುದು, ಹಾಗೂ ಇತರ ಕೆಲವು ಅನಾರೋಗ್ಯಕರ ಅಭ್ಯಾಸಗಳಿಂದಲೂ ಹೃದಯಾಘಾತದ ಸಂಭವ ಹೆಚ್ಚು.

ಇದನ್ನೂ ಓದಿ: ಹಸೆಮಣೆಯೇರಿದ ಹತ್ತೇ ಗಂಟೆಯಲ್ಲಿ ಮದುಮಗ ಹೃದಯಾಘಾತದಿಂದ ಸಾವು

Exit mobile version