ಇಂದು ಅಂತಾರಾಷ್ಟ್ರೀಯ ಅಪಸ್ಮಾರ ದಿನ (International Epilepsy Day). ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರವನ್ನು ಈ ರೋಗದ ಕುರಿತ ಜಾಗೃತಿ ಮತ್ತು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಈ ವರ್ಷದ ಧ್ಯೇಯ ಈ ರೋಗದ ಬಗೆಗಿನ ಕಳಂಕವನ್ನು ತೊಲಗಿಸುವುದು. ಅಪಸ್ಮಾರವನ್ನು ನಿಭಾಯಿಸುವುದಕ್ಕಿಂತ ದೊಡ್ಡ ಸವಾಲು ಈ ರೋಗದ ಮತ್ತು ರೋಗಿಗಳ ಬಗೆಗೆ ಸಮಾಜದಲ್ಲಿರುವ ಕಳಂಕವನ್ನು ನಿರ್ವಹಿಸುವುದು. ಈ ನರರೋಗದ ಬಗ್ಗೆ ಸರಿಯಾದ ಮಾಹಿತಿ ಮತ್ತು ಚಿಕಿತ್ಸೆ ಇದ್ದಲ್ಲಿ, ಅಪಸ್ಮಾರ ರೋಗಿಗಳು ಸಾಮಾನ್ಯರಂತೆ ಬದುಕು ಸಾಗಿಸಬಹುದು.
ಹೆಚ್ಚಿನ ಬಾರಿ ಮಕ್ಕಳಲ್ಲಿ ಈ ರೋಗ ಸೂಕ್ತ ಹಂತದಲ್ಲಿ ಗುರುತಿಸಲ್ಪಡದೆ, ಚಿಕಿತ್ಸೆ ವಿಳಂಬವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಮೆದುಳಿನ ಬೆಳವಣಿಗೆಯ ಮಹತ್ವದ ಹಂತಗಳು ಕಳೆದು ಹೋಗಿ, ಜೀವನವಿಡೀ ನರಳುವಂತಾಗುತ್ತದೆ. ಯಾವುದೇ ಸಾಮಾಜಿಕ ಕಳಂಕಗಳ ಬಗ್ಗೆ ಅಂಜದೆ, ಮಕ್ಕಳಿಗೆ ಅಥವಾ ಹದಿವಯಸ್ಸಿನವರಿಗೆ ರೋಗ ಪತ್ತೆಯಾದ ಕೂಡಲೆ ಚಿಕಿತ್ಸೆ ಕೊಡಿಸುವುದು ಮಹತ್ವದ್ದು. ಕೆಲವೊಮ್ಮೆ ಮಕ್ಕಳಲ್ಲಿ ಕಾಣುವ ಅಪಸ್ಮಾರ ವಯಸ್ಕರಲ್ಲಿ ಇರುವಂತೆ ಕಾಣದಿರಬಹುದು. ರೋಗ ಲಕ್ಷಣಗಳು ಗೊಂದಲ ಮೂಡಿಸುವ ಇಂಥ ಸಂದರ್ಭಗಳಲ್ಲಿ ಸಮಸ್ಯೆ ಗುರುತಿಸುವಲ್ಲೇ ವಿಳಂಬವಾಗುತ್ತದೆ.
ಅಪಸ್ಮಾರ ಲಕ್ಷಣಗಳು ಹೇಗಿರಬಹುದು?
ಒಂದೇ ಸಮ ಶೂನ್ಯವನ್ನು ದಿಟ್ಟಿಸುವುದು, ಪ್ರತಿಕ್ರಿಯಿಸದಂತೆ ಕಣ್ಣು ಮಿಟುಕಿಸುತ್ತಲೇ ಇರುವುದು, ಉಸಿರಾಟದ ತೊಂದರೆ, ಇದ್ದಕ್ಕಿದ್ದಂತೆ ಬೆಚ್ಚಿಬೀಳುವುದು, ಇದ್ದಲ್ಲೇ ಕುಸಿದು ಬೀಳುವುದು, ಕಳೆದು ಹೋದಂತೆ ಅಥವಾ ಗೊಂದಲದಲ್ಲಿದ್ದಂತೆ ವರ್ತಿಸುವುದು- ಇಂಥ ಲಕ್ಷಣಗಳು ಮಕ್ಕಳಲ್ಲಿ ಗೋಚರಿಸಿದರೆ ನರರೋಗ ತಜ್ಞರನ್ನು ಕಾಣುವುದು ಒಳಿತು. ವಯಸ್ಕರಲ್ಲಿ ಕಾಣುವಂತೆ, ಎಚ್ಚರ ತಪ್ಪುವುದು, ಬಾಯಲ್ಲಿ ನೊರೆ ಬರುವುದೇ ಮುಂತಾದ ಲಕ್ಷಣಗಳು ಮಕ್ಕಳಲ್ಲಿ ಕಾಣದೆ ಇರಬಹುದು.
ಮೆದುಳು ಬೆಳವಣಿಗೆಯ ಹಂತದಲ್ಲಿರುವಾಗ ಇಂಥ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದು ಆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಮುಖವಾದದ್ದು. ಮುಂದೆ ದೈಹಿಕ ಮತ್ತು ಮಾನಸಿಕ ವೈಕಲ್ಯಗಳಿಗೆ ಮಕ್ಕಳು ತುತ್ತಾಗುವುದನ್ನು ತಪ್ಪಿಸಲು ಈ ಮೂಲಕ ಸಾಧ್ಯವಿದೆ. ಖಿನ್ನತೆಗೆ ಒಳಗಾಗುವುದರಿಂದ, ಸಾಮಾಜಿಕ ಕಳಂಕಕ್ಕೆ ಈಡಾಗುವುದರಿಂದ ಪಾರಾಗಬಹುದು. ಒಮ್ಮೆ ಚಿಕಿತ್ಸೆ ಪ್ರಾರಂಭವಾದ ಮೇಲೆ, ಎಲ್ಲವೂ ನಿಯಂತ್ರಣಕ್ಕೆ ಬರಲು ಸಮಯ ಬೇಕು. ಮಕ್ಕಳ ಆರೋಗ್ಯ ಸುಧಾರಿಸಿದ ಕೂಡಲೇ ಔಷಧಿಯನ್ನು ನಿಲ್ಲಿಸುವುದು ಸಲ್ಲದು. ನರರೋಗ ತಜ್ಞರ ಸಲಹೆ ಇಲ್ಲದೆ ಅಪಸ್ಮಾರದ ಔಷಧಿಯನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಖಂಡಿತಾ ಸರಿಯಲ್ಲ.
ಇದನ್ನೂ ಓದಿ: SenSight : ಪಾರ್ಕಿನ್ಸನ್ ಕಾಯಿಲೆ ಚಿಕಿತ್ಸೆಗೆ ಸೆನ್‌ಸೈಟ್ ಡೈರೆಕ್ಷನಲ್ ಲೆಡ್ ಸಿಸ್ಟಮ್ ಲಾಂಚ್
ಅಪಸ್ಮಾರಕ್ಕೆ ಚಿಕಿತ್ಸೆ ಹೇಗೆ?
ಹೆಣ್ಣು ಮಕ್ಕಳಲ್ಲಿ ಈ ರೋಗ ಕಂಡರೆ, ಅದಕ್ಕೆ ಚಿಕಿತ್ಸೆ ಕೊಡಿಸುವುದಕ್ಕೆ ಹಿಂದೇಟು ಹಾಕುವ ಪ್ರಕರಣಗಳು ಬಹಳಷ್ಟಿವೆ. ಈ ವಿಷಯ ಎಲ್ಲೆಡೆ ಪ್ರಚಾರವಾಗಿ, ಮುಂದೆ ಆಕೆಯ ವೈವಾಹಿಕ ಭವಿಷ್ಯಕ್ಕೆ ಕುತ್ತಾಗಬಹುದು ಎಂಬಂಥ ಅಪ್ರಯೋಜಕ ಭೀತಿಯೇ ಇದಕ್ಕೆ ಕಾರಣ. ಆದರೆ ಈ ರೋಗಕ್ಕೆ ಚಿಕಿತ್ಸೆ ಇಲ್ಲದಿದ್ದರೆ ಆಕೆಯ ಭವಿಷ್ಯ ಎಷ್ಟು ದುರ್ಬರವಾಗಬಹುದು ಎಂಬ ಕಲ್ಪನೆ ಇದ್ದರೆ, ಸಮಾಜದ ಮನಸ್ಥಿತಿ ಸುಧಾರಿಸುತ್ತದೆ. ಒಂದೊಮ್ಮೆ ಆಕೆ ಅಪಸ್ಮಾರದ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಅದರ ಮಾಹಿತಿಯನ್ನು ಮದುವೆಯ ಸಂದರ್ಭದಲ್ಲಿ ವರನ ಕಡೆಯವರಿಗೆ ನೀಡಿ, ಅವರಿಗೆ ತಿಳುವಳಿಕೆ ನೀಡುವುದು ಮುಖ್ಯ. ಇದರಿಂದ ಆಕೆಗೆ ಅನಗತ್ಯ ಒತ್ತಡ, ಕಳಂಕ ಎದುರಾಗದೆ, ಆರೋಗ್ಯ ಮತ್ತು ಆತ್ಮವಿಶ್ವಾಸದಿಂದ ಬದುಕು ನಡೆಸಲು ಸಾಧ್ಯವಾಗುತ್ತದೆ. ರೋಗ ಪತ್ತೆಯಾಗುತ್ತಿದ್ದಂತೆ ಸಮಯ ವ್ಯರ್ಥ ಮಾಡದೆ ಚಿಕಿತ್ಸೆ ಕೊಡಿಸುವುದು ಮಹತ್ವದ್ದು. ಇದರಿಂದ ರೋಗಿಗಳು ಎಲ್ಲರಂತೆ ಬದುಕಲು ಸಾಧ್ಯ.