ಬೆಂಗಳೂರು: ರಾತ್ರಿ 9 ಗಂಟೆಗೆ ಮಲಗುವುದು ಮತ್ತು ಬೆಳಗ್ಗೆ 5 ಗಂಟೆಗೆ ಏಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ರಾತ್ರಿ ಬೇಗ ಮಲಗುವುದರಿಂದ ಬೆಳಗ್ಗೆ ಮೈಮನಗಳು ಉಲ್ಲಸಿತವಾಗುತ್ತವೆ. ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ಇಡೀ ದಿನ ಚೇತೋಹಾರಿಯಾಗಿ ಇರಬಹುದು ಎಂದು ಆನ್‌ಲೈನ್ ಷೇರು ಬ್ರೋಕರೇಜ್ ವಲಯದ ದಿಗ್ಗಜ ಕಂಪನಿಯಾದ ಜೆರೋಧಾದ ಸಂಸ್ಥಾಪಕ ಮತ್ತು ಸಿಒಒ ನಿತಿನ್ ಕಾಮತ್ (Fitness tips by Nithin Kamath) ತಿಳಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ಸರಣಿ ಟ್ವೀಟ್ ಮಾಡಿರುವ ನಿತಿನ್ ಕಾಮತ್ ಅವರು ನೀಡಿರುವ ಆರೋಗ್ಯ ಸಲಹೆಗಳು ಇಂತಿವೆ.
೧. ನಾನು ಪೌಷ್ಟಿಕ ಆಹಾರವನ್ನು ಸೇವಿಸಲು ಬಯಸುತ್ತೇನೆ. ಒಳ್ಳೆಯ ಆಹಾರ, ಸಿಹಿ, ಪಾನೀಯಗಳನ್ನು ಸೇವಿಸುತ್ತೇನೆ. ಸಕಾಲದಲ್ಲಿ ಊಟ ಮಾಡುತ್ತೇನೆ. ಸಿಹಿಗಾಗಿ ಸಂಸ್ಕರಿತ ಸಕ್ಕರೆ ಬದಲಿಗೆ ಹಣ್ಣುಗಳು, ಒಣ ಹಣ್ಣು, ಸ್ಟೀವಿಯಾ ಮೂಲಕ ತೆಗೆದುಕೊಳ್ಳುತ್ತೇನೆ.
2. ಮಲಗುವುದಕ್ಕೆ ಒಂದು ಗಂಟೆ ಮುನ್ನ ಎಲ್ಲ ಕೆಲಸ, ಮಾತುಕತೆಗಳನ್ನು ನಿಲ್ಲಿಸಬೇಕು. ಸಂಜೆ 6 ಗಂಟೆ ಬಳಿಕ ತೀರ ಅಗತ್ಯ ಕರೆಗಳನ್ನು ಮಾತ್ರ ಸ್ವೀಕರಿಸಬೇಕು. ರಿಲ್ಯಾಕ್ಸ್ ಆಗಿರಬೇಕು. ಮನೆಯ ಸದಸ್ಯರು, ಮಕ್ಕಳೊಂದಿಗೆ ಕಾಲ ಕಳೆಯಬೇಕು ಎನ್ನುತ್ತಾರೆ ನಿತಿನ್ ಕಾಮತ್.
3. ಆರೋಗ್ಯದ ದೃಷ್ಟಿಯಿಂದ ನಿದ್ದೆಯನ್ನು ತೀರಾ ಕಡೆಗಣಿಸಲಾಗಿದೆ. ಕಡಿಮೆ ನಿದ್ದೆ ಮತ್ತು ಹೆಚ್ಚು ಕೆಲಸ ಮಾಡುವುದನ್ನು ವೈಭವೀಕರಿಸಲಾಗಿದೆ ಎಂಬುದೇ ನನ್ನ ಭಾವನೆ. ಜೀವನ ಎನ್ನುವುದು ಮ್ಯಾರಥಾನ್ ಇದ್ದಂತೆ. ನೀವು ತೀರಾ ವೇಗವಾಗಿ ಓಡಿದರೆ ಸುಸ್ತಾಗಬಹುದು. ಮ್ಯಾರಥಾನ್ ಅನ್ನು ಪೂರ್ಣಗೊಳಿಸಲೂ ಸಾಧ್ಯವಾಗದೆಯೂ ಇರಬಹುದು.
4. ಗಂಟೆಗಂಟ್ಟಲೆ ಕುಳಿತುಕೊಳ್ಳುವುದು ಸ್ಮೋಕಿಂಗ್ ಮಾಡುವುದಕ್ಕೆ ಸಮಾನ. ಕುಳಿತುಕೊಂಡೇ ಕೆಲಸ ಮಾಡುವವರು ಪ್ರತಿ 45 ನಿಮಿಷಕ್ಕೊಮ್ಮೆ ಎದ್ದು ನಿಲ್ಲುವುದು ಒಳ್ಳೆಯದು. ಈ ವಿಧಾನ ನನ್ನ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.
5. ಆರೋಗ್ಯದ ಗುರಿಗಳು ನೀವು ಹೇಗೆ ಕಾಣಬೇಕು ಎಂಬುದಕ್ಕೆ ಸಂಬಂಧಿಸಿದ್ದಲ್ಲ, ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನೆ ಸಂಬಂಧಿಸಿದೆ.
6. ಹಣ ಸಂಪಾದನೆಯ ಗುರಿಯನ್ನು ಬೆನ್ನಟ್ಟುವಾಗ ಹಣದಿಂದ ಉತ್ತಮ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ನಾವು ಬೆಳೆಯುತ್ತಾ ಹೋದಂತೆಲ್ಲ ಜೀವನದ ಗುಣಮಟ್ಟವನ್ನು ನಿರ್ಧರಿಸುವುದು ನಮ್ಮ ಆರೋಗ್ಯವೇ ಹೊರತು ಹಣವಲ್ಲ. ಜೀವನದಲ್ಲಿ ಅಹಿತಕರ ಘಟನೆಗಳು ಸಂಭವಿಸಿದಾಗ ಶೀಘ್ರ ಚೇತರಿಸಿಕೊಳ್ಳುವುದು ಕೂಡ ಉತ್ತಮ ಆರೋಗ್ಯದ ಲಕ್ಷಣ.