ನವ ದೆಹಲಿ: ಹೆಸರಾಂತ ಜಾನ್ಸನ್ಸ್ ಬೇಬಿ ಪೌಡರ್ (Johnson & Johnson) ಮಾರಾಟ ಮುಂದಿನ ವರ್ಷದಿಂದ ಸ್ಥಗಿತವಾಗಲಿದೆ.
ಜಾನ್ಸನ್ & ಜಾನ್ಸನ್ ಕಂಪನಿಯು ೨೦೨೦ರಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ತನ್ನ ಟಾಲ್ಕಮ್ ಬೇಬಿ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಸಾವಿರಾರು ಮಹಿಳೆಯರು ಜಾನ್ಸನ್ಸ್ ಪೌಡರ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ರಾಸಾಯನಿಕ ಇದೆ ಎಂದು ಆರೋಪಿಸಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ ಬಳಿಕ, ಕಂಪನಿ ಅಲ್ಲಿ ತನ್ನ ಉತ್ಪನ್ನ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಆದರೆ ಉತ್ಪನ್ನ ಬಳಕೆಗೆ ಯೋಗ್ಯವಾಗಿದೆ ಹಾಗೂ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂದು ಕಂಪನಿ ಸಮರ್ಥಿಸಿಕೊಂಡಿದೆ.
ಜೋಳದ ಅಂಶವನ್ನು ಒಳಗೊಂಡಿರುವ ಪೌಡರ್ ಉತ್ಪನ್ನಗಳಿಗೆ ಬದಲಾಗುವ ನಿಟ್ಟಿನಲ್ಲಿ ಜಾನ್ಸನ್ಸ್ ಬೇಬಿ ಪೌಡರ್ ಮಾರಾಟವನ್ನು ೨೦೨೩ರಿಂದ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ. ಅಮೆರಿಕದಲ್ಲಿ ಜಾನ್ಸನ್ಸ್ ಪೌಡರ್‌ಗಳಿಗೆ ಸಂಬಂಧಿಸಿ ಅಪಪ್ರಚಾರ ನಡೆದಿತ್ತು. ಹೀಗಾಗಿ ಅಲ್ಲಿ ೨೦೨೦ರಲ್ಲಿ ಮಾರಾಟವನ್ನು ನಿಲ್ಲಿಸಬೇಕಾಯಿತು ಎಂದು ತಿಳಿಸಿದೆ.
ಕ್ಯಾನ್ಸರ್‌ಗೆ ಕಾರಣ ಎಂದು ಆರೋಪಿಸಿ ೩೮,೦೦೦ ಕೇಸ್: ಜಾನ್ಸನ್ಸ್ ಪೌಡರ್‌ನಲ್ಲಿ ಬಳಸುತ್ತಿದ್ದ ಟಾಲ್ಕ್ ಖನಿಜವು ಅಸ್ಬೆಸ್ಟೋಸ್‌ಗೆ ಸನಿಹದ ಖನಿಜವಾಗಿದ್ದು, ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ಆರೋಪ ಇತ್ತು. ಈ ಸಂಬಂಧ ಜಾನ್ಸನ್ & ಜಾನ್ಸನ್ ವಿರುದ್ಧ ೩೮,೦೦೦ ಮೊಕದ್ದಮೆಗಳು ದಾಖಲಾಗಿತ್ತು.
ಕೇಸ್‌ಗಳಿಂದ ತಪ್ಪಿಸಲು ಹೊಸ ಕಂಪನಿ: ಜಾನ್ಸನ್&ಜಾನ್ಸನ್ ತನ್ನ ವಿರುದ್ಧದ ಕೇಸ್‌ಗಳ ಸುದೀರ್ಘ ವಿಚಾರಣೆಯನ್ನು ತಪ್ಪಿಸಲು ಕಾನೂನಿನ ನ್ಯೂನತೆಗಳನ್ನು ಬಳಸಿತ್ತು. ಈ ವರ್ಷ ಫೆಬ್ರವರಿಯಲ್ಲಿ ಹೊಸತಾಗಿ ಎಲ್‌ಟಿಎಲ್ ಮ್ಯಾನೇಜ್‌ಮೆಂಟ್ ಎಂಬ ಅಧೀನ ಕಂಪನಿಯನ್ನು ತೆರೆದು, ಎಲ್ಲ ಕೇಸ್‌ಗಳ ನಿರ್ವಹಣೆಗೆ ನಿಯೋಜಿಸಿತ್ತು. ಹಾಗೂ ಬಳಿಕ ಎಲ್‌ಟಿಎಲ್ ಮ್ಯಾನೇಜ್‌ಮೆಂಟ್ ದಿವಾಳಿಯಾಗಿದೆ ಎಂದು ಕೋರ್ಟ್ ಆದೇಶ ತರುವಲ್ಲಿ ಸಫಲವಾಗಿತ್ತು. ದಿವಾಳಿ ಎಂದು ಘೋಷಣೆಯಾದರೆ ವೈಯಕ್ತಿಕ ಕೇಸ್‌ಗಳಿಗೆ ತಡೆಯಾಗುತ್ತದೆ. ಈ ಮೂಲಕ ಕೇಸ್‌ಗಳ ಹೊರೆಯನ್ನು ಜಾನ್ಸನ್&ಜಾನ್ಸನ್ ಇಳಿಸಿತ್ತು.