ಬಹಳಷ್ಟು ಸಾರಿ ಸುಲಭವಾಗಿ ಮಾಡಬಹುದಾದ ಹಲವು ಉಪಕರಣಗಳು ನಮ್ಮ ಅಡುಗೆ ಮನೆಯನ್ನು ಪ್ರವೇಶಿಸಿ ನಮ್ಮ ಜೀವನವನ್ನು ಸರಳವಾಗಿಸಿದೆ (smart kitchen) ನಿಜ. ಆದರೆ, ಅಷ್ಟೇ ಸಂಕೀರ್ಣವನ್ನಾಗಿಸಿದೆ ಎಂಬುದೂ ಅಷ್ಟೇ ನಿಜ. ಹಿಂದಿನ ಕಾಲದ ಹಾಗೆ ರುಬ್ಬುವ ಕಲ್ಲಿನಲ್ಲೀಗ ನಿತ್ಯವೂ ರುಬ್ಬಬೇಕಿಲ್ಲ. ಮಿಕ್ಸಿಗೆ ಹಾಕಿದರೆ, ಎರಡು ನಿಮಿಷದಲ್ಲಿ ಹಿಟ್ಟು ರೆಡಿ. ರುಬ್ಬುವ ಆಯಾಸವಿಲ್ಲ. ಸಮಯವೂ ಉಳಿತಾಯವೇ. ಆದರೆ, ಸಮಸ್ಯೆ ಎದುರಾಗುವುದು ಇಂತಹ ಉಪಕರಣಗಳನ್ನು ತೊಳೆಯುವ ವಿಚಾರ ಬಂದಾಗ.ಮಿಕ್ಸಿ, ಗ್ರೈಂಡರ್ ಎಂಬಿತ್ಯಾದಿ ಉಪಕರಣಗಳನ್ನು ತೊಳೆಯಲು (kitchen tips) ಸ್ವಲ್ಪ ಹೆಣಗಾಡಬೇಕಾಗುತ್ತದೆ. ಎಷ್ಟೋ ಬಾರಿ ಎಷ್ಟು ತೊಳೆದರೂ, ಮಿಕ್ಸಿಯ ಬ್ಲೇಡ್‌ಗಳ ಮಧ್ಯದಲ್ಲೆಲ್ಲೋ ಉಳಿದುಹೋದ ಆಹಾರದ ತುಣುಕುಗಳು ಹೋಗುವುದೇ ಇಲ್ಲ. ಸಿಕ್ಕಿಹಾಕಿಕೊಂಡು, ಅತ್ತ ನಮ್ಮ ಕೈಯಿಂದ ಅದನ್ನು ತೊಳೆಯಲೂ ಆಗದೆ, ಹಾಗೇ ಬಿಡಲೂ ಆಗದೆ ಒದ್ದಾಡುತ್ತೇವೆ. ಜಿಡ್ಡಿನ ವಸ್ತುಗಳನ್ನು ರುಬ್ಬಿದಾಗ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ. ಜಿಡ್ಡು ಅಂಟಿಕೊಂಡು ಉಳಿದುಬಿಡುತ್ತದೆ. ಹಲವು ಬಾರಿ ಆಹಾರದ ವಾಸನೆ ಹಾಗೆಯೇ ಉಳಿದುಕೊಂಡು ಬಿಡುತ್ತದೆ.
ಹಾಗಾದರೆ, ಇಂಥ ಸಮಸ್ಯೆಯಿಂದ ಮುಕ್ತಿ ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ನಿತ್ಯವೂ ಅಲ್ಲದಿದ್ದರೂ, ಯಾವಾಗಲಾದರೊಮ್ಮೆ ಮಿಕ್ಸಿಯನ್ನು ಅಥವಾ ಇಂತಹ ಉಪಕರಣಗಳನ್ನು ಸರಿಯಾಗಿ ತೊಳೆಯಬೇಕಾಗುತ್ತದೆ. ಹೀಗೆ ಉಳಿದುಹೋದ ವಾಸನೆ ಹಾಗೂ ಜಿಡ್ಡು, ಆಹಾರ ತುಣುಕುಗಳನ್ನು ಸರಿಯಾಗಿ ಸ್ವಚ್ಛವಾಗಿ ತೊಳೆದುಕೊಳ್ಳಲು ಸಲಹೆಗಳು ಇಲ್ಲಿವೆ.
1. ಲಿಕ್ವಿಡ್ ಡಿಟರ್ಜೆಂಟ್: ಬಹಳ ಸುಲಭ ಹಾಗೂ ಸಾಮಾನ್ಯ ಪ್ರಕ್ರಿಯೆ ಇದು. ಇದು ಆಹಾರದ ಕೊಳೆಯನ್ನು ತೊಳೆಯಲು ಅತ್ಯುತ್ತಮ ಸರಳ ವಿಧಾನ. ಹೋಗದೆ ಉಳಿದ ಜಿಡ್ಡು ಅಥವಾ ಆಹಾರ ಇದ್ದರೆ, ಆಗ ಲಿಕ್ವಿಡ್ ಡಿಟರ್ಜೆಂಟನ್ನು ಆ ಜಾಗಕ್ಕೆ ಹಾಕಿ, ಜಾಗ್ರತೆಯಿಂದ ತೊಳೆಯುವ ಸ್ಪಾಂಜ್‌ನಲ್ಲಿ ಉಜ್ಜಿ ತೊಳೆದು ನೀರಿನಿಂದ ಆಮೇಲೆ ತೊಳೆದುಕೊಳ್ಳಬಹುದು.
2. ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಕೂಡಾ ಹೌದು. ಮಿಕ್ಸಿ ಜಾರಿನಲ್ಲಿ ಬ್ಲೇಡುಗಳ ನಡುವೆ ಸಿಕ್ಕಿ ಹಾಕಿಕೊಂಡ ಆಹಾರ ಅಥವಾ ಹಳೆಯ ಆಹಾರದ ವಾಸನೆ ಇದ್ದಲ್ಲಿ, ನೀರಿನ ಜೊತೆ ಬೇಕಿಂಗ್ ಸೋಡಾ ಹಾಕಿ ಮಿಕ್ಸಿಯನ್ನು ಕೆಲವು ಸೆಕೆಂಡುಗಳ ಕಾಲ ರನ್ ಮಾಡಿ. ನಂತರ ಕಲೆಗಳು ಅಥವಾ ಆಹಾರ ಉಳಿದಿದ್ದರೆ ಮೆದುವಾಗಿ ಸ್ಪಾಂಜಿನಿಂದ ಉಜ್ಜಿ ತೊಳೆಯಿರಿ. ಬಿಸಿನೀರು ಹಾಕಿ ತೊಳೆಯಿರಿ. ಎಂಥ ವಾಸನೆಯಿದ್ದರೂ ಹೋಗುತ್ತದೆ.
ಇದನ್ನೂ ಓದಿ: Kitchen Tips: ನಿಂಬೆಹಣ್ಣಿನ ರಸವೇ ನಿಮ್ಮ ಕಿಚನ್ ಕ್ಲೀನರ್: ಸ್ವಚ್ಛ ಅಡುಗೆಮನೆಗೆ ಇಲ್ಲಿವೆ ಟಿಪ್ಸ್!
3. ವಿನೆಗರ್: ಅಸಿಡಿಕ್ ಆಗಿರುವ ವಿನೆಗರ್ ಎಂಬ ದ್ರಾವಣ ಕ್ಲೀನಿಂಗ್ ಏಜೆಂಟ್ ಕೂಡಾ ಹೌದು. ಎರಡು ಚಮಚ ವಿನೆಗರ್ ಅನ್ನು ಒಂದು ಲೋಟ ನೀರಿನ ಜೊತೆ ಮಿಕ್ಸ್ ಮಾಡಿ ಮಿಕ್ಸಿಗೆ ಹಾಕಿ ಮಿಕ್ಸಿಯನ್ನು ಕೆಲವು ಸೆಕೆಂಡುಗಳ ಕಾಲ ರನ್ ಮಾಡಿ. ನಂತರ ನೀರಿನಿಂದ ತೊಳೆದುಕೊಳ್ಳಿ. ಇದೇ ನೀರನ್ನು, ಮಿಕ್ಸಿಯ ಹೊರಮೈಯನ್ನು ಕ್ಲೀನ್ ಮಾಡಿಕೊಳ್ಳಲೂ ಬಳಸಬಹುದು.
4. ನಿಂಬೆಹಣ್ಣಿನ ಸಿಪ್ಪೆ: ನಿಂಬೆಹಣ್ಣು ಬಳಸಿದ ಮೇಲೆ ಸಿಪ್ಪೆಯನ್ನು ಬಿಸಾಡಬೇಡಿ. ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಇದು ಅತ್ಯುತ್ತಮವಾಗಿ ಕಲೆಗಳನ್ನು ತೆಗೆಯುತ್ತದೆ. ವಾಸನೆಯನ್ನೂ ಹೋಗಲಾಡಿಸುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಮಿಕ್ಸಿಗೆ ಹಾಕಿ ಬೇಕಿದ್ದರೆ ಕೊಂಚ ನೀರು ಸೇರಿಸಿ ನಾಲ್ಕೈದು ನಿಮಿಷ ಮಿಕ್ಸಿ ರನ್ ಮಾಡಿ. 10 ನಿಮಿಷ ಹಾಗೆಯೇ ಬಿಟ್ಟು ನಂತರ ಬಿಸಿ ನೀರಿನಲ್ಲಿ ಆಮೇಲೆ ತೊಳೆದುಕೊಳ್ಳಿ. ಮಿಕ್ಸಿಯಲ್ಲಿರುವ ಕೆಟ್ಟ ಹಳೆಯ ವಾಸನೆಯೆಲ್ಲವೂ ಮಾಯವಾಗುತ್ತದೆ.
5. ಆಲ್ಕೋಹಾಲ್: ಮೇಲಿನ ಯಾವ ಉಪಾಯಗಳೂ ಕೆಲಸಕ್ಕೆ ಬಾರದೆ ಇದ್ದರೆ, ಈ ಉಪಾಯವನ್ನು ಟ್ರೈ ಮಾಡಬಹು5ದು. ಆಲ್ಕೋಹಾಲನ್ನು ಮಿಕ್ಸಿಯ ಬ್ಲೇಡ್‌ಗಳಿಗೆ ಹಾಗೂ ಒಳ ಮೈಗೆ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟ ಮೇಲೆ ತೊಳೆದುಕೊಳ್ಳಿ. ಎಂಥ ಕಲೆ ಹಾಗೂ ವಾಸನೆಯಿದ್ದರೂ ಹೋಗುತ್ತದೆ.
ಇದನ್ನೂ ಓದಿ: smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು