Site icon Vistara News

weight loss : ಪ್ರತಿವರ್ಷದಂತೇ ಈ ವರ್ಷವೂ ತೂಕ ಇಳಿಸುವ ವಿಫಲ ಹಂಬಲವೇ? ಇವನ್ನು ಮರೆಯಬೇಡಿ!

weight loss

೨೦24 ಬಂದಿದೆ. ಹೊಸ ವರ್ಷ, ಹೊಸ ಗುರಿಗಳು, ಹೊಸ ಕನಸು, ಹೊಸ ಯೋಜನೆಗಳು ಎಲ್ಲವೂ ಮನಸ್ಸಿಗೆ ಒಂದು ಬಗೆಯ ಹೊಸ ಚೈತನ್ಯವನ್ನು ನೀಡುವುದು ಸಹಜ. ಕಳೆದ ವರ್ಷ ಅಂದು ಕೊಂಡಂತೆ ಮಾಡಲಾಗದ ಕಾರ್ಯಗಳು, ಗುರಿಗಳು, ಕನಸುಗಳೆಲ್ಲವೂ ಮತ್ತೆ ಗರಿಗೆದರಿ, ಹೊಸತನದೊಂದಿಗೆ ಬಂದು ನಿಲ್ಲುತ್ತವೆ. ಕಳೆದ ವರ್ಷ ಅಂದುಕೊಂಡಂತೆ ತೂಕ ಇಳಿಸಿಕೊಳ್ಳಲಾಗಲಿಲ್ಲ (weight loss ), ಪ್ರತಿವರ್ಷವೂ ಒಂದಿಷ್ಟು ತೂಕ ಇಳಿಸಿಕೊಂಡು ಆರೋಗ್ಯಕರ ಆಹಾರ ಪದ್ಧತಿಯನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಿಕೊಂಡರೂ ಬಹಳಷ್ಟು ಮಂದಿಗೆ ಅದನ್ನು ಅನುಸರಿಸಲಾಗದೆ, ಅಂದುಕೊಂಡಂತೆ ತೂಕ ಇಳಿಸಿಕೊಳ್ಳಲೂ ಆಗದೆ, ಅಥವಾ ತೂಕ ಇಳಿಸಿಕೊಂಡರೂ, ಕೆಲವೇ ದಿನಗಳಲ್ಲಿ ಮತ್ತೆ ಯಥಾಸ್ಥಿತಿಯಲ್ಲೀ ತೂಕ ಏರಿಸಿಕೊಂಡ ಮಂದಿ ಬಹಳ. ಹಾಗಾದರೆ, ಇಂತಹ ಹೊಸವರ್ಷದ ಗುರಿಗಳೆಲ್ಲ ಕೇವಲ ಕನಸು ಮಾತ್ರ, ಆಗುವಂಥದ್ದಲ್ಲ ಎಂದು ಕೈಚೆಲ್ಲುವ ಮಂದಿ ನಿರಾಸರಾಗಬೇಕಿಲ್ಲ. ಒಂದೊಂದೇ ಹೆಜ್ಜೆಯಿಡುವ ಮೂಲಕ ಪರ್ವತವನ್ನೂ ಏರಬಹುದು ಎಂಬ ಮಾತು ಇಲ್ಲಿಗೂ ಅನ್ವಯವಾಗುತ್ತದೆ ಎಂಬ ನೆನಪಿಟ್ಟರೆ ಸಾಕು.

1. ಎಲ್ಲವೂ ಮೊದಲ ಹೆಜ್ಜೆಯಿಂದ ಆರಂಭವಾಗುತ್ತದೆ. ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯೂ ಅಷ್ಟೇ. ಯಾವುದೇ ಪ್ರಕ್ರಿಯೆಯ ಆರಂಭದ ಹಾದಿ ಕಷ್ಟ. ಒಮ್ಮೆ ಆರಂಭ ಮಾಡಿದರೆ, ನಂತರದ ಹಾದಿ ಸರಾಗವಾಗುತ್ತದೆ. ದೊಡ್ಡ ಗುರಿಗಳನ್ನು ಇಟ್ಟುಕೊಂಡು ಅವುಗಳತ್ತ ಹೆಜ್ಜೆ ಹಾಕುವುದು ಕಷ್ಟವೆನಿಸಬಹುದು, ಜೊತೆಗೆ ಸ್ಪೂರ್ತಿ ಸಿಗದೇ ಇರಬಹುದು. ಸಣ್ಣ ಗುರಿಗಳನ್ನು ಹಾಕಿಕೊಂಡು ಅವುಗಳತ್ತ ನಿದಾನವಾಗಿಯಾದರೂ ಹೆಜ್ಜೆಯಿಡುವ ಮೂಲಕ ಪ್ರತಿಫಲ ಕಾಣಬಹುದು. ಮೊಲ ಹಾಗೂ ಆಮೆಯ ಓಟದಲ್ಲಿ ಆಮೆ ನಿಧಾನಗತಿ ಹೆಜ್ಜೆಯ ಮೂಲಕ ಓಟವನ್ನು ಗೆದ್ದಂತೆ, ಇಲ್ಲಿ ನಿಮಗೆ ಖಂಡಿತಾ ಗೆಲುವು ನಿಶ್ಚಿತ. ನಿಮ್ಮ ಮೊದಲ ಹೆಜ್ಜೆ ದಿನಕ್ಕೆ ಒಂದು ಕಿಮೀ ನಡೆಯುವುದರಿಂದಲೂ ಆರಂಭ ಮಾಡಬಹುದು. ಅಥವಾ ಸೊಪ್ಪು ತರಕಾರಿಗಳನ್ನು ಹೆಚ್ಚು ತಿನ್ನುವುದರಿಂದ ಆರಂಭಿಸಬಹುದು. ನಿತ್ಯಜೀವನದಲ್ಲಿ ಸಣ್ಣ ಬದಲಾವಣೆಯಿಂದ ಆರಂಭವಾದ ಪಯಣ ದೊಡ್ಡ ಯಶಸ್ಸನ್ನೇ ತರಬಹುದು. ಇವೆಲ್ಲವುಗಳ ಆರಂಭ ಸಣ್ಣದಾಗಿ ಕಂಡರೂ, ನಿಯಮಿತ ಶಿಸ್ತುಬದ್ಧ ಹಾದಿಯಲ್ಲಿ ಕ್ರಮಿಸಿದರೆ, ಖಂಡಿತ ಪ್ರತಿಫಲ ಕಾಣಬಹುದು.

ಇದನ್ನೂ ಓದಿ : Egg Benefits: ಚಳಿಗಾಲದಲ್ಲಿ ಯಾಕೆ ಮೊಟ್ಟೆ ತಿನ್ನಲೇಬೇಕು ಗೊತ್ತೇ? ಇಲ್ಲಿವೆ ಕಾರಣಗಳು!

2. ತೂಕ ಇಳಿಸಿಕೊಳ್ಳುವುದು ಎಂದರೆ ಅದೊಂದು ಪಯಣ. ಅದೊಂದು ಸುಂದರ ಪಯಣ. ಅದರಲ್ಲಿ ಏಳು ಬೀಳುಗಳಿರಬಹುದು. ಸಣ್ಣ ಸಣ್ಣ ಖುಷಿಗಳು ಹಾದಿ ಮಧ್ಯೆ ದಕ್ಕಬಹುದು. ಇಡೀ ಪಯಣದ ಸಂತಸವನ್ನು ಅನುಭವಿಸಿ. ಅದನ್ನೊಂದು ಯಾತನಾಮಯ ಪಯಣವನ್ನಾಗಿ ಸ್ವೀಕರಿಸಬೇಡಿ. ಪ್ರಯಾಣದಲ್ಲಿ, ಕಿಟಕಿ ತಲೆಯಿಟ್ಟು ಹೊರಗಿನ ಜಗತ್ತನ್ನು ಆಸ್ವಾದಿಸುವ ಹಾಗೆ, ಪಯಣದ ಖುಷಿಯನ್ನು ಅನುಭವಿಸಿ, ಆಸ್ವಾದಿಸಿ. ಮತ್ತೆ ಮತ್ತೆ ಅವುಗಳನ್ನು ಮೆಲುಕು ಹಾಕಿಕೊಂಡು ಸ್ಪೂರ್ತಿ ಪಡೆಯಿರಿ. ಅದರಿಂದ ದಕ್ಕಿದ ಸಂತಸವನ್ನು ಮುಂದಿನ ಹೆಜ್ಜೆಗೆ ಪ್ರೇರಣೆಯಾಗಿ ಕಾಣಿ.

3. ಹಾದಿಯಲ್ಲಿನ ಖುಷಿಯ ಹಾಗೆ ದುಃಖಗಳನ್ನೂ ಸ್ವೀಕರಿಸಿ. ಅವು ನಿಮಗೆ ಬದುಕಿಗೆ ಪಾಠ. ಅವುಗಳಿಂದ ಮುಂದಿನ ಹಾದಿಗೆ ಬೇಕಾದ್ದನ್ನು ಕಲಿತುಕೊಂಡು ತಿದ್ದಿಕೊಂಡು ಮುನ್ನಡೆಯಿರಿ!

೪. ನಿಮ್ಮ ಹೊಸ ಜಗತ್ತನ್ನು ಅನುಭವಿಸಿ. ನಿಮ್ಮೊಳಗಿನ ಹೊಸತನವನ್ನು, ಈ ಪಯಣದಿಂದ ನಿಮಗೆ ದಕ್ಕುತ್ತಿರುವ ಹೊಸ ಅನುಭವವನ್ನು ಸಂಪೂರ್ಣವಾಗಿ ಅನುಭವಿಸಿ ಖುಷಿಪಡಿ. ನಿಮ್ಮ ಬೆನ್ನನ್ನು ತಟ್ಟಿಕೊಂಡು, ನಿಮ್ಮನ್ನು ನೀವೇ ಪ್ರೋತ್ಸಾಹಿಸಿಕೊಂಡು, ನಿಮಗೆ ನೀವೇ ಸ್ಪೂರ್ತಿಯಾಗಿ ಮುನ್ನಡೆಯಿರಿ. ನಿಮ್ಮ ಗೆಲುವನ್ನು ಸಂಭ್ರಮಿಸಿ. ಆದರೆ ಎಚ್ಚರ ತಪ್ಪಬೇಡಿ. ಹೀಗೆ ಒಂದೇ ಹಾದಿಯಲ್ಲಿ ಪಯಣ ಸಾಗಿದರೆ, ಖಂಡಿತವಾಗಿಯೂ, ಫಲ ಪಡೆದೇ ಪಡೆಯುತ್ತೀರಿ! ಆರೋಗ್ಯಕರ ಜೀವನಕ್ರಮ ಅಳವಡಿಸುವುದು ಕಷ್ಟವಲ್ಲ. ಆದರೆ, ಶಿಸ್ತುಬದ್ಧವಾಗಿ ಅನುಸರಿಸುವದಕ್ಕೆ ಮಾತ್ರ ತಾಳ್ಮೆ ಬೇಕು ಅಷ್ಟೇ. ಇವಿಷ್ಟು ನೆನಪಿನಲ್ಲಿಟ್ಟುಕೊಂಡರೆ, ಹಾದಿ ಸುಲಭ.

Exit mobile version