Site icon Vistara News

Motivation: ಎಸೆದ ಖಾಲಿ ಚಿಪ್ಸ್‌ ಪ್ಯಾಕೆಟ್‌ ಟ್ರೆಂಡೀ ಕನ್ನಡಕವಾಗಿ ಮಾರುಕಟ್ಟೆಗೆ: ಹೊಸ ಸಂಶೋಧನೆ!

sunglasses

ಇದೊಂದು ಸ್ಫೂರ್ತಿಯಾಗಬಹುದಾದ (Motivation) ನಡೆ. ಎಲ್ಲರೂ ಚಿಪ್ಸ್‌ ಪ್ಯಾಕೆಟ್‌ ಸಿಕ್ಕಿದರೆ, ಪ್ಯಾಕೆಟ್‌ ಹರಿದು ಒಳಗಿದ್ದ ಕರುಂಕುರುಂ ಚಿಪ್ಸನ್ನು ಖರೀದಿಸಿದಷ್ಟೇ ವೇಗವಾಗಿ ಖಾಲಿ ಮಾಡುವ ಬಗ್ಗೆ ಯೋಚಿಸುತ್ತಾರೆ. ನೂರರಲ್ಲಿ ತೊಂಬತ್ತೆಂಟು ಮಂದಿ ತಿಂದು ಬಿಟ್ಟು ಖಾಲಿಯಾದ ಪ್ಯಾಕೆಟ್ಟನ್ನು ಕಸದ ಬುಟ್ಟಿಗೆಸೆಯುವುದೇ ಹೆಚ್ಚು. ಮತ್ತಿದು ಕಸದ ರಾಶಿಯೊಂದಿಗೆ ಹೋಗಿ ಭೂಮಿಗೆ ಎಂದೆಂದಿಗೂ ಭಾರವೇ. ಆದರೆ ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಈ ಭೂಮಿಗೆ ಭಾರವಾಗಿರುವ ಚಿಪ್ಸ್‌ ಪ್ಯಾಕೆಟ್‌ ಎಂಬ ಕಸದ ಬಗ್ಗೆ ಗಂಭೀರವಾಗಿ ಯೋಚಿಸುತ್ತಾರೆ. ಇಂತಹ ಪ್ಲಾಸ್ಟಿಕ್‌ ವೇಸ್ಟನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದೆಂದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಇಲ್ಲೊಬ್ಬರು ನಡೆಸಿದ ಇಂತಹ ಸಂಶೋಧನೆಯ (innovation) ಫಲವಾಗಿ ಖಾಲಿ ಚಿಪ್ಸ್‌ ಪ್ಯಾಕೆಟ್‌ ಎಂಬ ಕಸ ಟ್ರೆಂಡೀ ಕನ್ನಡಕವಾಗಿ ಪರಿವರ್ತನೆಯಾಗಿ ಮರುಬಳಕೆಯಾಗಿದೆ!

ಹೌದು, ಚಿಪ್ಸ್‌ ಪ್ಯಾಕೆಟ್‌ನಿಂದ ಕನ್ನಡಕವೇ ಎಂದು ಹುಬ್ಬೇರಿಸಬೇಡಿ. ನೀವು ಏರಿಸಿದ ಹುಬ್ಬಿನ ನಡುವೆ ಕೂರಿಸಲು ಇನ್ನು ಚಿಪ್ಸ್‌ ಪ್ಯಾಕೆಟ್ಟಿನ ಟ್ರೆಂಡೀ ಸನ್‌ ಗ್ಲಾಸನ್ನು ನೀವಿನ್ನು ದುಡ್ಡು ಕೊಟ್ಟು ಖರೀದಿಸಬಹುದು!

ಪುಣೆ ಮೂಲದ ಆಶಯ ಎಂಬ ಸಂಸ್ಥೆಯೊಂದು ಚಿಪ್ಸ್‌ ಪ್ಯಾಕೆಟ್‌ನಿಂದ ವಿಶ್ವದಲ್ಲೇ ಮೊದಲ ಬಾರಿಗೆ ಕನ್ನಡಕವನ್ನು ತಯಾರಿಸಿದೆ. ಕಳೆದೆರಡು ವರ್ಷಗಳಿಂದ ತನ್ನದೇ ಆದ ಸಣ್ಣ ಪ್ರಯೋಗ ಶಾಲೆಯಲ್ಲಿ ಈ ಬಗ್ಗೆ ಸತತ ಸಂಶೋಧನೆಗಳನ್ನು ನಡೆಸುವ ಮೂಲಕ ಇದು ಕೊನೆಗೂ ತನ್ನ ಪರಿಶ್ರಮಕ್ಕೆ ತಕ್ಕ ಫಲ ಕಂಡಿದೆ. ಮಲ್ಟಿ ಲೇಯರ್‌ ಪ್ಲಾಸ್ಟಿಕ್‌ (ಎಂಎಲ್‌ಪಿ) ಹಾಗೂ ಚಿಪ್ಸ್‌ ಪ್ಯಾಕೆಟ್‌ಗಳನ್ನು ಸಂಸ್ಕರಿಸಿ ಯುವಿ- ಪೋಲೈಸ್ಡ್‌ ಕನ್ನಡಕವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ.

ಆಶಯ ಸಂಸ್ಥೆಯ ಸಂಸ್ಥಾಪಕ ಅನೀಶ್‌ ಮಲ್ಪಾನಿ ಟ್ವಿಟರ್‌ನಲ್ಲಿ ತಮ್ಮ ಈ ಯಶೋಗಾಥೆಯನ್ನು ಹಂಚಿಕೊಂಡಿದ್ದು, ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ʻಈ ಸಂಶೋಧನೆ ಕಳೆದ ಎರಡು ವರ್ಷ ತಾನು ಸವೆಸಿದ ಅತ್ಯಂತ ಕ್ಲಿಷ್ಟಕರ ಹಾದಿಯಾಗಿದ್ದು, ಕೊನೆಗೂ ಈ ಕಷ್ಟಕ್ಕೆ ಫಲ ಸಿಕ್ಕಿದೆ ಎಂದು ಅತೀವ ಸಂತಸವಾಗುತ್ತಿದೆ. ವಿಶ್ವದ ಮೊತ್ತಮೊದಲ ಪ್ಲಾಸ್ಟಿಕ್‌ ಸಂಸ್ಕರಿತ ಸನ್‌ಗ್ಲಾಸ್‌ ಇದಾಗಿದ್ದು, ಭಾರತದಲ್ಲಿ ಇದು ನಮ್ಮಿಂದ ಸಾಧ್ಯವಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ತಂತ್ರಜ್ಞಾನದ ಬಗ್ಗೆ ವಿವರಗಳನ್ನೂ ಮಲ್ತಾನಿ ಅವರು ಹಂಚಿಕೊಂಡಿದ್ದು, ಕೇವಲ ಕನ್ನಡಕವಲ್ಲದೆ, ಚಿಪ್ಸ್‌ ಪ್ಯಾಕೆಟ್‌ನಿಂದ ತಯಾರಿಸಬಹುದಾದ ಅನೇಕ ಸಾಧ್ಯತೆಗಳನ್ನು ನಾವು ಕಂಡುಕೊಳ್ಳುತ್ತಿದ್ದೇವೆ. ಕೋಸ್ಟರ್‌ಗಳು, ಸರಳ ಪ್ಯಾಕೇಜಿಂಗ್‌ ವಸ್ತುಗಳು, ಸೇರಿದಂತೆ ಹಲವು ತಯಾರಿಕೆಯ ಬಗ್ಗೆ ಯೋಜನೆ ರೂಪಿಸಿದ್ದೇವೆ. ಆ ಮೂಲಕ, ಜಗತ್ತಿನಲ್ಲಿ ಸಂಗ್ರಹವಾಗುವ ಚಿಪ್ಸ್‌ ಪ್ಯಾಕೆಟ್‌ನ ಕಸಕ್ಕೂ ನಮ್ಮ ಕೈಲಾದಷ್ಟು ಮುಕ್ತಿ ನೀಡಿ ಭೂಮಿಯನ್ನು ಉಳಿಸುವೆಡೆ ನಮ್ಮ ಪುಟ್ಟ ಕಾಣಿಕೆ ನೀಡುತ್ತಿರುವ ಕನಸು ನನಸಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Viral Video: ಮಗನ ಸವಾಲಿನಲ್ಲಿ ಗೆದ್ದ ತಾಯಿ; ಭೌತಶಾಸ್ತ್ರವಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಿದ್ದಾರೆ ನೆಟ್ಟಿಗರು

ಮಲ್ಟಿ ಲೇಯರ್‌ ಪ್ಲಾಸ್ಟಿಕ್ಕನ್ನು ಸಂಸ್ಕರಿಸುವುದು ಬಹಳ ಕಷ್ಟ ಹಾಗೂ ಸಾಧ್ಯವೇ ಇಲ್ಲ ಎಂಬ ನಂಬಿಕೆ ಮಾರುಕಟ್ಟೆಯಲ್ಲಿದೆ. ಈವರೆಗೆ ಅದಕ್ಕೆ ಯಾರೂ ಕೈ ಹಾಕಿಲ್ಲ. ಇದು ಜಗತ್ತಿನಲ್ಲಿ ಸಂಸ್ಕರಣೆಯಾಗದ ಪ್ಲಾಸ್ಟಿಕ್‌. ಶೇ.೮೦ರಷ್ಟು ಪ್ಲಾಸ್ಟಿಕ್‌ ಸಾಗರಕ್ಕೂ ಸೋರಿಕೆಯಾಗುತ್ತಿರುವುದು ಅತ್ಯಂತ ಖೇದಕರ. ಇದನ್ನು ನಾವು ಮೊದಲ ಬಾರಿಗೆ ಪ್ರಯತ್ನಿಸಿದ್ದೇವೆ. ಇದರಿಂದ ಕನ್ನಡಕದ ಫ್ರೇಮನ್ನು ತಯಾರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಕನ್ನಡಕದಲ್ಲಿರುವ ವಿಶೇಷವೆಂದರೆ, ಕನ್ನಡಕದಲ್ಲಿರುವ ಕ್ಯು ಆರ್‌ ಕೋಡ್‌ ಮೂಲಕ ನಾವು ಖರೀದಿಸಿದ ಕನ್ನಡಕಕ್ಕಾಗಿ ಯಾರೆಲ್ಲ ಶ್ರಮಿಸಿದ್ದಾರೆ, ಇದರಲ್ಲಿ ಬಳಸಲಾದ ಕಸ ಎಲ್ಲಿಂದ ಬಂದಿದೆ ಹಾಗೂ ಯಾರೆಲ್ಲ ಈ ಕಸ ಹೆಕ್ಕಿದ್ದಾರೆ ಎಂಬ ವಿವರಗಳನ್ನು ಓದಬಹುದಂತೆ! ಆ ಮೂಲಕ ನಾವು ಧರಿಸುವ ಕನ್ನಡಕದ ಹಿಂದಿರುವ ಶ್ರಮ ಹಾಗೂ ಕಥೆಯನ್ನೂ ತಿಳಿದುಕೊಳ್ಳಬಹುದು. ಈ ಕನ್ನಡಕವನ್ನು ಆರ್ಡರ್‌ ಮಾಡಿ ತರಿಸಿಕೊಂಡರೂ, ಪ್ಲಾಸ್ಟಿಕ್‌ ರಹಿತ ಪ್ಯಾಕೇಜಿಂಗ್‌ ಮೂಲಕವೇ ಈ ಸಂಸ್ಥೆ ಕನ್ನಡಕವನ್ನು ನಮ್ಮ ಮನೆ ಬಾಗಿಲಿಗೆ ಕಳಿಸುತ್ತದಂತೆ. ಒಟ್ಟಾರೆ, ಪ್ಲಾಸ್ಟಿಕ್‌ ಮುಕ್ತ ಹಾಗೂ ಸಂಸ್ಕರಣೆಯ ಮೂಲಕ ಭೂಮಿಗೆ ಒಳಿತನ್ನೇ ಮಾಡುವ ವಿಚಾರಕ್ಕೆ ಬದ್ಧವಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್​ ಕೊಹ್ಲಿಗೆ ಲಿಪ್​ ಕಿಸ್​ ನೀಡಿದ ಯುವತಿ; ವಿಡಿಯೊ ವೈರಲ್​

Exit mobile version