೨೦೨೩ ಇನ್ನೇನು ಬರಲಿದೆ. ಪ್ರತಿವರ್ಷದಂತೆ ಈ ವರ್ಷವೂ ಪ್ರತಿಯೊಬ್ಬರ ಬದುಕಿನಲ್ಲೂ ಒಂದಷ್ಟು ಖುಷಿಗಳನ್ನೂ, ಒಂದಿಷ್ಟು ಕಷ್ಟಗಳನ್ನೂ ಸಮಾನವಾಗಿ ಹಂಚಿಹೋಗುತ್ತದೆ, ನಿಜ. ಆದರೆ, ನಾವೆಲ್ಲರೂ ಹೊಸವರ್ಷ ಹೊಸ ಅದೃಷ್ಟಗಳನ್ನೂ, ಯಶಸ್ಸನ್ನೂ ತರಲಿ ಎಂದೇ ಬಯಸುತ್ತೇವೆ. ಅದಕ್ಕಾಗಿ ಇವುಗಳ ಹೆಸರಿನಲ್ಲಿ ಒಂದಿಷ್ಟು ನಂಬಿಕೆಗಳೂ ಆಚರಣೆಗಳೂ ಕೂಡಾ ನಡೆಯುತ್ತವೆ.
ನಿಮಗೆ ಗೊತ್ತೇ? ಈಗಲೂ ಹೊಸವರ್ಷದ ದಿನ ಬೀನ್ಸು, ನೂಡಲ್ಸ್ ಹಾಗೂ ವೃತ್ತಾಕಾರದ ತಿನಿಸುಗಳು ಹಾಗೂ ಸಿಹಿತಿಂಡಿಗಳನ್ನು ತಿಂದರೆ ಹೊಸವರ್ಷ ಖಂಡಿತ ಒಳ್ಳೆಯದನ್ನೇ ಸಿಹಿಯಾಗಿ ಉಣಬಡಿಸುತ್ತದೆ ಎಂಬ ನಂಬಿಕೆ ಪ್ರಪಂಚದಾದ್ಯಂತ ಇದೆಯಂತೆ! ಇಷ್ಟೇ ಏಕೆ. ಪ್ರತಿಯೊಂದು ದೇಶದಲ್ಲೂ ಇಂತಹ ಚಿತ್ರವಿಚಿತ್ರವಾದ ಆಚರಣೆಗಳು ಹೊಸವರ್ಷದ ಹೆಸರಿನಲ್ಲಿ ನಡೆಯುತ್ತವೆ. ನಮಗೆ ವರ್ಷಪೂರ್ತಿ ಒಳ್ಳೆಯದಾಗಲಿ ಎಂಬ ಆಶಾಬಾವನೆಯಿಂದ ಪಾಸಿಟಿವ್ ಮನಃಸ್ಥಿತಿಯಿಂದ ಜನರು ಈಗಲೂ ಆಚರಿಸುತ್ತಾರೆ ಕೂಡಾ. ವಿವಿಧ ದೇಶಗಳ ಅಂತಹ ಕೆಲವು ವಿಚಿತ್ರ ನಂಬಿಕೆ, ಆಚರಣೆಗಳನ್ನು ಇಲ್ಲಿ ನೋಡೋಣ.
೧. ಪ್ರಪಂಚದಲ್ಲಿ ಬಹಳಷ್ಟು ಮಂದಿಯಲ್ಲಿ ಹೀಗೊಂದು ನಂಬಿಕೆಯಿದೆಯಂತೆ. ಕಪ್ಪುಕಣ್ಣಿನ ಅಲಸಂಡೆ ಬೀಜದ ಜೊತೆಗೆ ಅನ್ನ ಹಾಗೂ ಹಂದಿ ಮಾಂಸವನ್ನು ಸೇರಿಸಿ ಅಡುಗೆ ಮಾಡಿ ತಿಂದರೆ, ಅದೃಷ್ಟವೂ, ನೆಮ್ಮದಿಯೂ ವರ್ಷಪೂರ್ತಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು. ಈ ಅಲಸಂಡೆ ಬೀಜವನ್ನು ನಾಣ್ಯದಂತೆ ಪರಿಗಣನೆ ಮಾಡುತ್ತಿದ್ದು ಇದು ಶುಭ ಸೂಚಕವಂತೆ. ಹಂದಿಮಾಂಸ ಅದೃಷ್ಟದ ಸಂಕೇತವಂತೆ!
೨. ಫಿಲಿಪೈನ್ಸ್‌ನಲ್ಲಿ ೧೨ ಬಗೆಯ ವೃತ್ತಾಕಾರದ ಹಣ್ಣುಗಳನ್ನು ಹೊಸವರ್ಷದ ದಿನ ತಿಂದರೆ ವರ್ಷವಿಡೀ ನಮ್ಮ ಇಚ್ಛೆಗಳೆಲ್ಲ ಫಲಪ್ರದವಾಗುತ್ತದೆ ಎಂಬ ನಂಬಿಕೆಯಿದೆಯಂತೆ! ಅಷ್ಟೇ ಅಲ್ಲ, ಚುಕ್ಕೆ ಚುಕ್ಕೆಗಳಿರುವ ಬಟ್ಟೆಗಳನ್ನು ಹೊಸವರ್ಷದ ದಿನ ಪಾರ್ಟಿಗೆ ತೊಟ್ಟರೆ ಶುಭದಾಯಕ ಎಂಬ ನಂಬಿಕೆಯೂ ಇಲ್ಲಿದೆ.
೩. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವಾರ್‌ನಲ್ಲಿ ಪ್ರತಿ ವರ್ಷವೂ ನ್ಯೂ ಈಯರ್ ಈವ್‌ನಲ್ಲಿ ಬಾಲ್ ಡ್ರಾಪ್ ನೋಡಲು ಭಾರೀ ಜನಸ್ತೋಮವೇ ಸೇರುತ್ತದೆ. ಯಾಕೆಂದರೆ, ಅಲ್ಲಿರುವ ಚೆಂಡು ಸರಿಯಾಗಿ ೧೨ ಗಂಟೆ ಬಡಿಯುವಾಗ ಕೆಳಗೆ ಬರುವುದನ್ನು ಎದುರು ನೋಡುವ ಕೆಲಸ ಈ ಜನಸ್ತೋಮದ್ದು. ೧೯೦೭ರಿಂದ ಶುರುವಾದ ಈ ಆಚರಣೆಯಲ್ಲಿ ಮೊದಲು ಕೇವಲ ಕಬ್ಬಿಣದ ಹಾಗೂ ಮರದ ಬಾಲ್ ಬಳಕೆಯಾಗಿತ್ತು. ಈಗ ೧೨ ಅಡಿ ಎತ್ತರದ ೧೧,೮೭೫ ಪೌಂಡ್‌ನ ೩೨,೨೫೬ ಎಲ್‌ಇಡಿ ಲೈಟ್‌ಗಳಿಂದ ಮಾಡಲ್ಪಟ್ಟ ಪ್ರತಿ ವರ್ಷವೂ ವಿವಿಧ ಲೈಟ್ ವಿನ್ಯಾಸದೊಂದಿಗೆ ಹೊಸವರ್ಷಕ್ಕೆ ರೆಡಿಯಾಗುವ ಇದು ವಿಶ್ವವಿಖ್ಯಾತಿಯನ್ನು ಹೊಂದಿದೆ.
೪. ಬ್ರೆಜಿಲ್ ಮಂದಿಗೆ ಹೊಸವರ್ಷಕ್ಕೆ ಹೊಸ ಬಟ್ಟೆ ಆಯ್ಕೆ ಮಾಡುವುದುದ ಸುಲಭ. ಯಾಕೆಂದರೆ ಇಲ್ಲಿನ ಮಂದಿ ಹೊಸವರ್ಷಕ್ಕೆ ಬಿಳಿಬಟ್ಟೆಯನ್ನೇ ಧರಿಸುತ್ತಾರೆ. ಬಿಳಿ ಬಣ್ಣ ವರ್ಷಪೂರ್ತಿ ಶಾತಿ ನೆಮ್ಮದಿಯನ್ನೇ ತರುತ್ತದೆ ಎಂಬ ನಂಬಿಕೆ ಇಲ್ಲಿಯ ಮಂದಿಯದ್ದು. ಅಷ್ಟೇ ಅಲ್ಲ ಇಲ್ಲಿನ ಮಂದಿ ಸಮುದ್ರ ತೀರಕ್ಕೆ ತೆರಳಿ ಏಳು ಅಲೆಗಳನ್ನು ಜಂಪ್ ಮಾಡುತ್ತಾ ದಾಟಿದರೆ ಶುಭದಾಯಕ ಎಂಬ ನಂಬಿಕೆ. ಏಳು ಅಲೆಗಳನ್ನು ದಾಟುವಾಗ ಏಳು ಬಯಕೆಗಳನ್ನು ಮನಸ್ಸಿನಲ್ಲೇ ಹೇಳಿಕೊಂಡರೆ ಅದು ಆ ವರ್ಷ ಪೂರ್ಣಗೊಳ್ಳುತ್ತದೆ ಎಂಬುದೂ ಅವರ ನಂಬಿಕೆ.
೫. ಇನ್ನು ಲ್ಯಾಟಿನ್ ಅಮೆರಿಕಾದಂತಹ ಕೆಲವು ದೇಶಗಳಲ್ಲಿ ತಾವು ಹೊಸವರ್ಷದ ದಿನ ಹಾಕುವ ಒಳಚಡ್ಡಿಯ ಬಣ್ಣದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರಂತೆ. ಯಾಕೆಂದರೆ ಬಣ್ಣ ಅದೃಷ್ಟವನ್ನು ನಿರ್ಧರಿಸುತ್ತದೆ ಎಂಬ ನಂಬಿಕೆ ಇವರದ್ದು. ಹಳದಿ ಬಣ್ಣದ್ದು ಅದೃಷ್ಟವನ್ನೂ, ಬಿಳಿ ಬಣ್ಣದ್ದು ವರ್ಷಪೂರ್ತಿ ಶಾಂತಿ ನೆಮ್ಮದಿಯನ್ನೂ, ಕೆಂಪು ಬಣ್ಣ ಪ್ರೀತಿಯನ್ನೂ ತರುತ್ತದೆ ಎಂಬ ನಂಬಿಕೆ ಇವರದ್ದು.
೬. ಇನ್ನೂ ಕೆಲವು ದೇಶಗಳಲ್ಲಿ ಸರಿಯಾಗಿ ೧೨ ದ್ರಾಕ್ಷಿಗಳನ್ನು ತಿಂದರೆ, ೧೨ ತಿಂಗಳುಗಳಲ್ಲಿ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ. ಇನ್ನೂ ಕೆಲವೆಡೆ, ಮೀನು ತಿನ್ನುವುದು ಹೊಸವರ್ಷಕ್ಕೆ ಒಳ್ಳೆಯದಂತೆ. ಸರಿಯಾದ ಗುರಿಯತ್ತ ಈಜುವ ಮೀನಿನಂತೆ ನಾವು ಮೀನು ತಿಂದರೆ ನಿರ್ಧಿಷ್ಟ ಗುರಿಯತ್ತ ಸಾಗುತ್ತೇವೆ ಎಂಬ ನಂಬಿಕೆ ಇವರದ್ದು.
೭. ಐರಿಷ್ ಮಂದಿ ಅಲ್ಲಿನ ಒಂದು ಜಾತಿಯ ಮರದ ಗೆಲ್ಲನ್ನು ಡಿಸೆಂಬರ್ ೩೧ರ ರಾತ್ರಿ ತಲೆದಿಂಬಿನಡಿ ಇಟ್ಟು ಮಲಗಿದರೆ ಮುಂದೆ ಜೀವನ ಸಂಗಾತಿಯಾಗುವ ವ್ಯಕ್ತಿ ಕನಸಿನಲ್ಲಿ ಬರುತ್ತಾನೆ/ಳೆ ಎಂಬ ನಂಬಿಕೆಯಿದೆ. ಜರ್ಮನಿ, ಇಂಗ್ಲೆಂಡ್ ಹಾಗೂ ಹಲವು ದೇಶಗಳಲ್ಲಿ ಪ್ರೀತಿಸುವ ವ್ಯಕ್ತಿಗೆ ಹೊಸವರ್ಷಕ್ಕೆ ಸರಿಯಾಗಿ ಕಿಸ್ ಮಾಡಬೇಕು ಎಂಬುದನ್ನು ಚಾಚೂ ತಪ್ಪದೆ ಮಾಡುತ್ತಾರೆ.
೮. ಗ್ರೀಸ್ ದೇಶದ ಮಂದಿ ತಮ್ಮ ಮನೆಯ ಬಾಗಿಲನ್ನು ಹೊಸವರ್ಷಕ್ಕೆ ಈರುಳ್ಳಿಯಿಂದ ಅಲಂಕರಿಸುತ್ತಾರೆ. ಇದು ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತವಂತೆ.
೯. ಜರ್ಮನಿ ಹಾಗೂ ಆಸ್ಟ್ರಿಯಾದಲ್ಲಿ ಅದೃಷ್ಟದ ಬೊಂಬೆಗಳನ್ನು ಹೊಸವರ್ಷಕ್ಕೆ ಖರೀದಿಸುವ ಸಂಪ್ರದಾಯವಿದೆ. ಹಂದಿ, ಅಣಬೆಯ ಗೊಂಬೆಗಳು ಇಲ್ಲಿನ ಮಾರುಕಟ್ಟೆಯಲ್ಲಿ ಸಿಗುತ್ತವೆ.
೧೦. ಬೆಲ್ಜಿಯಂನ ಮಂದಿ ಹಸವರ್ಷದ ದಿನ ಬೇಗ ಎದ್ದು ತಮ್ಮ ದನಕರು, ಎಮ್ಮೆ, ನಾಯಿ, ಕುದುರೆ, ಹಂದಿ, ಕೋಳಿಗಳಿಗೆಲ್ಲಾ ಶುಭಾಶಯ ಹೇಳುತ್ತಾರೆ. ಪಶುಪಾಲನೆಯನ್ನೇ ಮುಖ್ಯ ಉದ್ಯೋಗವಾಗಿ ನಂಬಿರುವ ಇಲ್ಲಿನ ಮಂದಿಗೆ ತಮ್ಮ ವೃತ್ತಿ ಶುಭಫಲವನ್ನೇ ತರಲಿ ಎಂಬ ಬಯಕೆಯಿಂದ ಹೀಗೆ ಮಾಡುತ್ತಾರಂತೆ.
೧೧. ಜಪಾನಿನಲ್ಲಿ ಉದ್ದದ ತಿಂಡಿಯನ್ನು ತಿನ್ನಬೇಕು ಎಂಬ ನಂಬಿಕೆಯಂತೆ. ಹೀಗಾಗಿ ಇಲ್ಲಿನ ಮಂದಿ ತೊಶಿಕೋಶಿ ಸೋಬಾ ಎಂಬ ಉದ್ದದ ನೂಡಲ್‌ಗಳನ್ನು ಹೊಸವರ್ಷದ ಸಂದರ್ಭ ಆಯ್ಕೆ ಮಾಡುತ್ತಾರೆ.
ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ, ಬೆಂಗಳೂರಿನಲ್ಲಿ ಸಕಲ ಸಿದ್ಧತೆ, ಬಂದೋಬಸ್ತ್
೧೨. ಡೆನ್ಮಾರ್ಕ್‌ನಲ್ಲಿ ಪಾತ್ರೆಗಳನ್ನು ಒಡೆಯುವುದು ಶುಭಸೂಚಕವಂತೆ. ಎಲ್ಲರ ಮನೆಯ ಮುಂದೆ ಹೊಸವರ್ಷದ ದಿನ ಒಡೆದ ಪಿಂಗಾಣಿ ಪಾತ್ರೆಗಳನ್ನು ನೋಡಬಹುದು. ಹೆಚ್ಚು ಪಾತ್ರೆ ಒಡೆದ ಮನೆಯಿದ್ದರೆ ಅದಕ್ಕೆ ಹೆಚ್ಚು ಅದೃಷ್ಟ ಎಂದು ಅರ್ಥವಂತೆ!
೧೩. ಟರ್ಕಿಯಲ್ಲಿ ದಾಳಿಂಬೆ ಹಣ್ಣನ್ನು ತಿನ್ನುವುದು ಒಳ್ಳೆಯದೆಂದು ನಂಬಿಕೆ. ಅವರ ಪಾಲಿಗೆ ದಾಳಿಂಬೆ ಸಮೃದ್ಧಿಯ ಸಂಕೇತ. ಹಾಗಾಗಿ ಎಲ್ಲರೂ ಅವರವರ ಮನೆಮುಂದೆ ದಾಳಿಂಬೆಯನ್ನು ನಾವು ತೆಂಗಿನಕಾಯಿ ಒಡೆದಂತೆ ಒಡೆಯುತ್ತಾರೆ.
೧೪. ಪೋರ್ತೋರಿಕೋನಲ್ಲಿ ಒಂದು ಬಕೆಟ್ ನೀರನ್ನು ತಮ್ಮ ಮನೆಯ ಕಿಟಕಿಯಿಂದ ಹೊರಚೆಲ್ಲುತ್ತಾರೆ. ಇದು ಕೆಟ್ಟ ಶಕ್ತಿಘಲನ್ನು ಮನೆಯಿಂದಾಚೆ ಕಳಿಸುತ್ತೇವೆ ಎಂಬ ನಂಬಿಕೆ. ಜೊತೆಗೆ ಮನೆ ಮುಂದೆ ಸಕ್ಕರೆಯನ್ನು ಚೆಲ್ಲುವ ಮೂಲಕ ಒಳ್ಳೆಯ ಶಕ್ತಿ ಮನೆಯೊಳಗೆ ಬರಲಿ ಎಂದು ನಂಬುತ್ತಾರಂತೆ.
೧೫. ೧೯೦೦ರಿಂದಲೇ ಹಲವು ದೇಶಗಳಲ್ಲಿ ಹೊಸವರ್ಷದ ದಿನ ಎಷ್ಟೇ ಚಳಿಯಿದ್ದರೂ ಸಮುದ್ರಸ್ನಾನ ಮಾಡುವ ಪದ್ಧತಿಯೂ ಇದೆ. ಪೋಲಾರ್ ಬೇರ್ ಪ್ಲಂಜ್ ಎಂದು ಇದಕ್ಕೆ ಕರೆಯುತ್ತಾರೆ.
ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ನಂದಿ ಗಿರಿಧಾಮ, ಮುತ್ತತ್ತಿ, ಬಲಮುರಿ ಸೇರಿ ಇನ್ನಷ್ಟು ಕಡೆ ಪ್ರವೇಶ ನಿರ್ಬಂಧ