ಅಲಕಾ ಕೆ, ಮೈಸೂರು
ಹೊಸ ವರ್ಷದ ಹೊಸಿಲಲ್ಲಿದ್ದೇವೆ. ಪ್ರತಿವರ್ಷವೂ ಬರುವಂಥದ್ದೇ ಹೌದಾದರೂ, ಈ ವರ್ಷವಾದರೂ ಏನಾದರೂ ಭಿನ್ನವಾಗಿದ್ದೀತೆ ಎಂಬ ಆಸೆ ಸರಿಯಾದದ್ದೇ. ವರ್ಷಾರಂಭಕ್ಕೆ ಏನು ಮಾಡಬಹುದು ಎಂದು ಯೋಚಿಸಿದರೆ- ಮನಸ್ಸು ತುಂಬುವಷ್ಟು ಪ್ರಯಾಣ, ಕುಡಿದು ಬೀಳುವಷ್ಟು ಪಾರ್ಟಿ, ಕಿಸೆ ಬರಿದಾಗುವಷ್ಟು ಶಾಪಿಂಗ್, ಹೊಟ್ಟೆ ಬಿರಿಯುವಷ್ಟು ತಿನಿಸು, ನಿದ್ದೆ ಬರುವಷ್ಟು ಬೋಧನೆ, ಮಾಡಲೆಡೆಯದಷ್ಟು ಪ್ರತಿಜ್ಞೆಗಳು- ಇಂಥವೆಲ್ಲಾ ಹೊಸ ಸೀಸೆಯ ಹಳೆಯ ಮಧುವಿನಂತೆ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಇಂಥ ಯಾವುದರಲ್ಲೂ ಆಸಕ್ತಿ ಇಲ್ಲದವರು ಹೊಸ ವರ್ಷಕ್ಕೆ ಹೊಸದಾಗಿ ಏನು ಮಾಡಬಹುದು? ಈವರೆಗೆ ಮಾಡದೆ ಇರುವುದನ್ನು, ಏನಾದರೂ ಸೃಜನಶೀಲವಾದ್ದನ್ನು, ನಮ್ಮ ಬದುಕಿನ ಮೌಲ್ಯವರ್ಧಿಸುವುದನ್ನು ಮಾಡುವ ಉದ್ದೇಶವಿದ್ದರೆ- ಅದಕ್ಕೂ ಆಯ್ಕೆಗಳಿವೆ. ಬದುಕಿನಲ್ಲಿ ಆಯ್ಕೆಗಳು ಮುಗಿಯುವುದೇ ಇಲ್ಲ, ಆಯ್ದುಕೊಳ್ಳುವವರಿಗೆ ಮಾಹಿತಿ ಇರಬೇಕಷ್ಟೆ.
ಮನೆಯ ಸುತ್ತಮುತ್ತ ನಾಲ್ಕಾರು ಮರ-ಗಿಡಗಳು ಇರಬಹುದಲ್ಲ, ಸಮೀಪದಲ್ಲಿ ವಾಕಿಂಗ್ ಮಾಡುವಂಥ ಪಾರ್ಕು ಇದ್ದರೆ ಇನ್ನೂ ಒಳ್ಳೆಯದು. ಕಿಸೆಯಲ್ಲೊಂದು ಸಣ್ಣ ಪುಸ್ತಕ-ಪೆನ್ನು, ಇದ್ದರೊಂದು ಬೈನಾಕ್ಯುಲರ್, ಮನದಲ್ಲಿಷ್ಟು ಆಸಕ್ತಿ- ಇವಿಷ್ಟಿದ್ದರೆ ಹೊಸದೊಂದು ಹವ್ಯಾಸ ಪ್ರಾರಂಭಿಸಬಹುದು- ಬರ್ಡ್ ವಾಚಿಂಗ್ ಅಥವಾ ಪಕ್ಷಿ ವೀಕ್ಷಣೆ. ಹೆಚ್ಚಿನ ಖರ್ಚಿಲ್ಲದೆ, ಸದ್ದು-ಗದ್ದಲವಿಲ್ಲದೆ ನಾವೆಲ್ಲೇ ಇದ್ದರೂ ನಮ್ಮಷ್ಟಕ್ಕೇ ಬೆಳೆಸಿಕೊಳ್ಳಬಹುದಾದ ಆರೋಗ್ಯಕರ ಹವ್ಯಾಸವಿದು. ಒಂದಿಷ್ಟು ಪ್ರಯಾಣ ಮಾಡಲು ಪ್ರೇರೇಪಿಸುವ, ನಿಸರ್ಗದ ಜೊತೆ ಸಮಯ ಕಳೆಯಲು ಉತ್ಸಾಹ ತುಂಬುವ, ಸಮಾನ ಮನಸ್ಕರೊಂದಿಗೆ ಮೈತ್ರಿ ಬೆಳೆಸುವಂಥ ಉತ್ತಮ ಹವ್ಯಾಸವಿದು.
ಕಾಗೆ, ಗುಬ್ಬಿಗಳನ್ನು ಬಿಟ್ಟು ಬೇರೆ ಹಕ್ಕಿಗಳೇ ಗೊತ್ತಿಲ್ಲ. ಇದನ್ನು ಪ್ರಾರಂಭಿಸುವುದಾದರೂ ಹೇಗೆ ಎಂಬ ಸಮಸ್ಯೆ ಬಹಳಷ್ಟು ಜನರದ್ದು. ಹಕ್ಕಿಗಳು ನೋಡಿದಾಕ್ಷಣ ಅವುಗಳ ಪ್ರವರ ತಿಳಿಯಬೇಕೆಂದೇನೂ ಇಲ್ಲ. ಮೊದಲಿಗೆ ಇವುಗಳ ಇರುವಿಕೆಯನ್ನು ಗುರುತಿಸುವುದು ಮುಖ್ಯ. ಮನೆಯ ಮಾಡಿನ ಮೂಲೆಯಲ್ಲಿ, ಮರದ ಪೊಟರೆಯಲ್ಲಿ, ಸಣ್ಣ ಪೊದೆಗಳ ಒಳಗೆ- ಹೀಗೆ ಎಲ್ಲೆಂದರಲ್ಲಿ ನಮ್ಮ ಆವಾಸಗಳ ಸುತ್ತಲೇ ಬಹಳಷ್ಟು ಬಗೆಯ ಹಕ್ಕಿಗಳು ವಾಸಿಸುತ್ತವೆ. ಸುಮ್ಮನೆ ಕೆಲಕಾಲ ನೋಡುತ್ತಿದ್ದರೂ ಅವುಗಳ ಗಾತ್ರ, ಬಣ್ಣ, ಕೂಗು, ಗೂಡಿನ ಸ್ವರೂಪಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯುತ್ತದೆ. ಇಂಥವುಗಳಿಂದಲೇ ಪ್ರಾರಂಭ! ನೋಡಿದ್ದನ್ನು ಅಲ್ಲಲ್ಲೇ ಕಿಸೆಪುಸ್ತಕದಲ್ಲಿ ಗೀಚಿಕೊಳ್ಳಲು ಪ್ರಾರಂಭಿಸಿ. ಕೈಯಲ್ಲಿ ಫೋನಿದ್ದರೆ ಫೋಟೊ ತೆಗೆಯುವುದೂ ಸೂಕ್ತವೇ. ಪಕ್ಷಿವೀಕ್ಷಕರ ಕೈಪಿಡಿಗಳು ಅಥವಾ ಇಂಟರ್ನೆಟ್‌ನಲ್ಲಿ ಮಾಹಿತಿ ದೊರೆಯುವುದು ಖಂಡಿತಾ ಕಷ್ಟವಲ್ಲ.
ಇದೇ ನೆಪದಲ್ಲಿ ಬೆಳಗಿನ ಹೊತ್ತು ಸಮೀಪದ ಪಾರ್ಕ್‌ನಲ್ಲಿ ಅಥವಾ ಹೆಚ್ಚು ಮರಗಿಡಗಳಿರುವಲ್ಲಿ ವಾಕಿಂಗ್ ಆರಂಭಿಸುತ್ತೀರಿ. ಈಗಾಗಲೇ ಮಾಡುತ್ತಿದ್ದರೆ, ಹಕ್ಕಿಗಳ ಬಗ್ಗೆ ಗಮನ ಹರಿಸಿದರಾಯಿತು. ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲೂ ಆಸಕ್ತ ಪಕ್ಷಿವೀಕ್ಷಕರ ಗುಂಪುಗಳಿರುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲೂ ಇಂಥ ಗುಂಪುಗಳು ಬೇಕಷ್ಟಿವೆ. ಇವುಗಳಲ್ಲಿ ಯಾವ ಕಾಲಕ್ಕೆ, ಯಾವ ಪ್ರದೇಶಕ್ಕೆ ಎಂಥ ಹಕ್ಕಿಗಳು ಎಲ್ಲಿಂದ ವಲಸೆ ಬರುತ್ತವೆ, ಅವುಗಳ ವಿವರಗಳೇನು ಇತ್ಯಾದಿ ಮಾಹಿತಿಗಳು ನಿಖರವಾಗಿ ದೊರೆಯುತ್ತವೆ. ನಿಸರ್ಗಕ್ಕೆ ಹತ್ತಿರವಾದಷ್ಟೂ ನೆಮ್ಮದಿ ಹತ್ತಿರವಾಗುತ್ತದೆ.
ಇಂಥ ಯಾವುದೇ ಹವ್ಯಾಸಗಳು ಬದುಕಿನ ಪಥ ಬದಲಿಸಬಲ್ಲವು. ಪರಿಸರ ಪ್ರೇಮ, ಆರೋಗ್ಯ ವೃದ್ಧಿಸುವಂಥ ನಡಿಗೆ ಅಥವಾ ಚಾರಣಗಳು, ನಿಸರ್ಗದ ನಿಯಮಗಳನ್ನು ಗೌರವಿಸುವ ಮೌಲ್ಯಗಳು, ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕುವ ಪರಿ, ಪ್ರಾಣಿ-ಪಕ್ಷಿಗಳ ಬಗೆಗಿನ ಕಾಳಜಿ- ಇಂಥ ಎಷ್ಟೋ ಗುಣಾತ್ಮಕ ಅಂಶಗಳನ್ನು ನಮ್ಮಲ್ಲಿ ಹುಟ್ಟುಹಾಕಬಲ್ಲವು. ಪಾರ್ಟಿ, ಮೋಜು, ಮಸ್ತಿಯ ಹೊರತಾಗಿಯೂ ಹೊಸವರ್ಷಕ್ಕೆ ಬೇರೇನನ್ನೋ ಹುಡುಕುತ್ತಿರುವವರು ನೀವಾಗಿದ್ದರೆ, ಇಂಥ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಜೀವನದುದ್ದಕ್ಕೂ ಸಂಗಾತಿಯನ್ನಾಗಿ ಇರಿಸಿಕೊಳ್ಳಬಹುದು.
ಇದನ್ನೂ ಓದಿ| New year Fashion | ಹೊಸ ವರ್ಷದ ನ್ಯೂ ಲುಕ್‌ಗೆ ಸಾಥ್ ನೀಡುವ 5 ಸ್ಟೈಲ್ ಸ್ಟೇಟ್‌ಮೆಂಟ್ಸ್