ಮಕ್ಕಳು ಸಣ್ಣವರಿದ್ದಾಗ ಪೋಷಕರಿಗೆ ಮಕ್ಕಳೊಮ್ಮೆ ಬೆಳೆದು ದೊಡ್ಡವರಾಗಬಾರದೇ ಎನಿಸುತ್ತದೆ. ದೊಡ್ಡವರಾಗುತ್ತಿದ್ದಂತೆ, ಸಣ್ಣವರೇ ಇದ್ದಾಗ ನೆಮ್ಮದಿಯಾಗಿದ್ದೆವು ಅನಿಸುತ್ತದೆ. ಯಾಕೆಂದರೆ ಮಕ್ಕಳನ್ನು ಬೆಳೆಸುವುದೆಂದರೆ (parenting) ಅದು ಸಣ್ಣ ವಿಷಯವಲ್ಲ. ಅದು ಜೀವನದ ಮಹತ್ತರ ಜವಾಬ್ದಾರಿ. ಸಣ್ಣದೊಂದು ತಪ್ಪು ಹೆಜ್ಜೆ ಹೆತ್ತವರಾಗಿ ನೀವು ಇಟ್ಟರೂ ಅದರ ಪರಿಣಾಮವನ್ನು ನೀವೇ ನಿಮ್ಮ ಮಕ್ಕಳ ಜೀವನದಲ್ಲಿ ಎದುರಿಸಬೇಕಾಗುತ್ತದೆ. ಜೀವನಪರ್ಯಂತ ಕೊರಗಬೇಕಾಗುತ್ತದೆ. ಅದರಲ್ಲೂ ಮಕ್ಕಳು ಕಿಶೋರಾವಸ್ಥೆ ಅಂದರೆ ಟೀನೇಜ್‌ಗೆ (teenage) ಕಾಲಿಡುತ್ತಿದ್ದಂತೆ ಎಲ್ಲ ಹೆತ್ತವರಿಗೂ ಹಗ್ಗದ ಮೇಲಿನ ನಡಿಗೆಯ ಕಷ್ಟ (Parenting guide) ಅರಿವಾಗತೊಡಗುತ್ತದೆ. ಹಾಗಾದರೆ ಬನ್ನಿ, ಕಿಶೋರಾವಸ್ಥೆಗೆ (teenage behavior) ಕಾಲಿಟ್ಟ ನಿಮ್ಮ ಮಕ್ಕಳ ಜೊತೆಗೆ ನೀವು ಹೇಗಿರಬೇಕು (Parenting Tips) ಎಂಬುದನ್ನು ನೋಡೋಣ.
1. ಕಿಶೋರಾವಸ್ಥೆ ಅಥವಾ ಟೀನೇಜ್ ಎಂಬುದು ಮಕ್ಕಳಿಗೆ ಅತ್ಯಂತ ಕಷ್ಟಕರವಾದ ಘಟ್ಟ. ಹಾಗಾಗಿ ಅಂತಹ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಆರೋಗ್ಯದತ್ತ ಗಮನ ಹರಿಸಬೇಕಾದ್ದು ಪೋಷಕರ ಕರ್ತವ್ಯ. ಈ ಸಂದರ್ಭ ಮನೆಯಲ್ಲಿ ಪೂರಕ, ಸ್ನೇಹಮಯ ಪ್ರೀತಿಯ ವಾತಾವರಣ ಮಕ್ಕಳಿಗೆ ಇರುವಂತೆ ನೋಡಿಕೊಳ್ಳುವುದು ಮುಖ್ಯ.
2. ಮಕ್ಕಳು ತಮ್ಮದೇ ಆಲೋಚನೆಗಳನ್ನು ನಿಧಾನವಾಗಿ ಬೆಳೆಸಿಕೊಳ್ಳುವ ವಯಸ್ಸಿದು. ತಮ್ಮದೇ ಆಸಕ್ತಿಗಳು, ತಾವು ಬಯಸುವ ಕ್ಷೇತ್ರ, ಕನಸುಗಳು, ಯೋಜನೆಗಳು ಇತ್ಯಾದಿಗಳು ಅವರ ಪುಟ್ಟ ತಲೆಯಲ್ಲಿ ಬೆಳೆಯುವ ಹೊತ್ತು. ಮಕ್ಕಳ ಜೊತೆಗೆ ಈ ವಯಸ್ಸಿನಲ್ಲಿ ಅಗತ್ಯವಾಗಿ ನಿಮ್ಮ ಸಾಥ್ ಬೇಕು. ಹಾಗಾಗಿ, ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಅವರ ಆಲೋಚನೆಗಳು, ಕನಸುಗಳು ಇತ್ಯಾದಿಗಳನ್ನು ಅವರ ಜೊತೆ ಚರ್ಚೆ ಮಾಡಲು ಸಮಯ ಕೊಡಿ.
3. ಸಾಮಾಜಿಕ ಜಾಲತಾಣಗಳ (Social media) ಬಳಕೆ ಬಗೆಗೆ ಕಾಳಜಿ ಅತ್ಯಂತ ಅಗತ್ಯ. ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣವನ್ನು ಎಷ್ಟು ಹೊತ್ತು ಬಳಸುತ್ತಿದ್ದಾರೆ? ಯಾಕೆ ಬಳಸುತ್ತಿದ್ದಾರೆ ಹಾಗೂ ಹೇಗೆ ಬಳಸುತ್ತಿದ್ದಾರೆ ಎಂಬುದರ ಅರಿವು ಪೋಷಕರಿಗಿರಬೇಕು. ಅಷ್ಟೇ ಅಲ್ಲ, ನಿಮ್ಮ ಮಕ್ಕಳಿಗೆ ಆನ್‌ಲೈನ್ ಸೇಫ್ಟಿ (online safety) ಹಾಗೂ ಸೈಬರ್ ಕ್ರೈಮ್ (cyber crime) ಬಗೆಗೆ ತಿಳಿದಿರುವುದು ಅತ್ಯಂತ ಅವಶ್ಯಕ.
4. ಮಕ್ಕಳಿಗೆ ಸೂಕ್ತ ಲೈಂಗಿಕ ತಿಳುವಳಿಕೆ (Sexual education) , ಸಮಾಜದಲ್ಲಿರುವ ಕೆಟ್ಟ ಪಿಡುಗುಗಳು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದು ಈ ವಯಸ್ಸಿನಲ್ಲಿ ಅತ್ಯಗತ್ಯ. ನಾಚಿಕೆ, ಮುಜುಗರ ಪಡದೆ, ಮಕ್ಕಳು ತಮ್ಮ ಎಲ್ಲವನ್ನೂ ನಿಮ್ಮ ಜೊತೆ ಹಂಚಿಕೊಳ್ಳಬಹುದಾದ, ತಮ್ಮ ಅರಬರೆ ವಿಷಯ ಜ್ಞಾನದಿಂದಾಗಿ ಭಯ ಬೀಳುವ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪೋಷಕರಾಗಿ ನಿಮ್ಮ ಮೇಲಿದೆ ಎಂದು ಮರೆಯಬೇಡಿ.
5. ಕೆಟ್ಟ ಚಟಗಳು, ಕೆಟ್ಟ ಗೆಳೆತನಗಳು, ಕೆಟ್ಟ್ವರ ಸಹವಾಸವೂ ಆಗುವುದು ಇಂಥ ವಯಸ್ಸಿನಲ್ಲಿಯೇ. ಆದ್ದರಿಂದ ಮಕ್ಕಳ ಜೊತೆಗಿನ ಬಾಂಧವ್ಯ, ಅವರ ಗೆಳೆಯರ ಬಗೆಗೆ, ಅವರ ದಿನಚರಿ ಬಗೆಗೆ ನಿಮಗೆ ಗೊತ್ತಿರಲಿ. ನಿಮ್ಮ ಅವರ ಚಟುವಟಿಕೆಗಳ ನಡುವೆ ಒಂದು ಪಾರದರ್ಶಕ ವಾತಾವರಣ ಇರುವಂತೆ ನೋಡಿಕೊಳ್ಳಿ. ಹಾಗಂತ ಇದು ಬಂಧನದ ಹಾಗೆ ಇರದಿರಲಿ. ಒಂದು ಆರೋಗ್ಯಕರ ಅನ್ಯೋನ್ಯ ವಾಥಾವರಣ ಮನೆಯಲ್ಲಿದ್ದಾಗ ಮಕ್ಕಳು ಹಾದಿ ತಪ್ಪುವುದಿಲ್ಲ ಎಂಬುದು ನೆನಪಿಡಿ. ಮಕ್ಕಳಿಗೆ ಮನೆಯ ವಾತಾವರಣ ಉಸಿರುಗಟ್ಟದಂತೆ ಇಡುವುದು ನಿಮ್ಮ ಕರ್ತವ್ಯ.
6. ಬಹಳಷ್ಟು ಸಾರಿ ನಮಗೆ ಮಕ್ಕಳ ವಿಚಾರದಲ್ಲಿ ಎಲ್ಲಿ ಲಕ್ಷ್ಮಣರೇಖೆ ಹಾಕಬೇಕೆಂದು ತಿಳಿಯುವುದಿಲ್ಲ. ಕೆಲವೊಮ್ಮೆ ಲಕ್ಷ್ಮಣ ರೇಖೆ ಹಾಕಿದ್ದರಿಂದಲೇ ಸಮಸ್ಯೆ ಉದ್ಭವಿಸಿರುತ್ತದೆ. ಅಥವಾ ಲಕ್ಷ್ಮಣರೇಖೆ ಹಾಕದ ಕಾರಣದಿಂದಲೇ ತೊಂದರೆ ಎದುರಾಗುತ್ತದೆ. ಹಾಗಾಗಿ, ಎಲ್ಲಿ, ಯಾವಾಗ, ಎಷ್ಟು ಹಿಡಿತ ಇಟ್ಟುಕೊಳ್ಳಬೇಕೆಂಬುದನ್ನು ಅರಿತು ಮುಂದುವರಿಯಿರಿ. ಮಕ್ಕಳ ಜೊತೆಗೆ ಮಾತುಕತೆಯ ಚಂದದ ಬಾಂಧವ್ಯ ಬೆಳೆಸಿಕೊಳ್ಳಬೇಕಾದ್ದು ಬಹಳ ಮುಖ್ಯ.
7. ಮಕ್ಕಳಿಗೆ ಆರ್ಥಿಕ ವ್ಯವಹಾರಗಳ ಬಗೆಗೆ ಸಾಮಾನ್ಯ ಜ್ಞಾನ ಇರಬೇಕು. ಅವರಿಗಾಗಿ ಕೊಟ್ಟ ಪಾಕೆಟ್ ಮನಿಯ ಸದುಪಯೋಗ ಹೇಗೆ ಮಾಡಿಕೊಳ್ಳಬಹುದು ಎಂಬಿತ್ಯಾದಿ ಸಾಮಾನ್ಯ ತಿಳಿವಳಿಕೆ ಅವರಿಗೆ ಮೂಡಿಸಬೇಕು. ಮನೆಯಲ್ಲಿ ಎಷ್ಟೇ ಶ್ರೀಮಂತ ಪರಿಸ್ಥಿತಿ ಇದ್ದರೂ, ಹಣಕ್ಕೆ ಕೊರತೆ ಇಲ್ಲದಿದ್ದರೂ, ಮಕ್ಕಳಿಗೆ ಇದರ ಹಣದ ಮಹತ್ವ ಅರಿಯುವಂತೆ ಮಾಡುವುದು ಪೋಷಕರ ಆದ್ಯ ಕರ್ತವ್ಯ.
8. ಮಕ್ಕಳನ್ನು ಬೆಳೆಸುವಾಗ ಅವರಿಗೆ ಉತ್ತಮ ಗುಣನಡತೆಗಳನ್ನೂ ಕಲಿಸುವುದು ಬಹಳ ಮುಖ್ಯ. ದೊಡ್ಡವರ ಜೊತೆ ಹೇಗಿರಬೇಕು, ಸತ್ಯ, ನ್ಯಾಯ, ಹಾಗೂ ಸಕಾರಾತ್ಮಕತೆ ಬಗೆಗೆ ಮಕ್ಕಳು ಬೆಳೆಯುತ್ತಲೇ ಅರಿಯುತ್ತ ಹೋಗಬೇಕು.
ಇದನ್ನೂ ಓದಿ: Parenting Tips: ಗಂಡುಮಕ್ಕಳು ಟಫ್ ಆಗಿರಬೇಕಾ? ಈ ಪೇರೆಂಟಿಂಗ್ ಮಿಥ್‌ಗಳಿಂದ ಹೊರಬನ್ನಿ!
9. ಮನೆಯ ಜವಾಬ್ದಾರಿಗಳನ್ನು ಅರಿತುಕೊಳ್ಳಬಹುದಾದ ವಯಸ್ಸಿದು. ಹಾಗಾಗಿ, ಮಕ್ಕಳನ್ನು ಈ ಸಂದರ್ಭ ಮನೆಯ ಕೆಲವು ಜವಾಬ್ದಾರಿಗಳಿಗೆ ಸಹಾಯಕ್ಕಾಗಿ ಬಳಸಿಕೊಳ್ಳಬಹುದು. ಅವರಿಗೂ ಬದುಕು ಸ್ವಲ್ಪ ಸ್ವಲ್ಪವೇ ಅರಿವು ಮೂಡಿಸಲು ಇದು ಸಕಾಲ. ಹಾಗಾಗಿ ಮನೆಯ ಕೆಲಸಗಳಲ್ಲಿ ಅವರನ್ನೂ ಭಾಗಿಯಾಗಿಸಬಹುದು.
10. ಮಕ್ಕಳು ತಮ್ಮದೇ ವ್ಯಕ್ತಿತ್ವ ಹೊಂದುವುದು ಅದರ ಬಗ್ಗೆ ಅವರಿಗೆ ಅರಿವು ಮೂಡುವುದನ್ನು ಅವರಿಗೆ ಪ್ರೇರಣೆ ನೀಡಬಹುದು.
11. ಜೀವನದಲ್ಲಿ ಪ್ರೀತಿಯ ಮಹತ್ವವನ್ನೂ ತಿಳಿಸಿಕೊಡಲು ಇದು ಸಕಾಲ. ಪ್ರೀತಿ, ದಯೆ, ಕರುಣೆ, ಇತರರಿಗೆ ಸಹಾಯ ಮಾಡುವುದು ಇತ್ಯಾದಿಗಳ ಬೆಲೆಯನ್ನು ಅರಿಯುವಂತೆ ಮಾಡಬಹುದಾದ ವಯಸ್ಸಿದು.
12. ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾದದ್ದು. ಮುಖ್ಯವಾಗಿ ಕಿಶೋರಾವಸ್ಥೆ ಬಹಳ ಸೂಕ್ಷ್ಮವಾದ ಘಟ್ಟ. ಅವರ ತಪ್ಪಿಲ್ಲದಿದ್ದಾಗಲೂ ಅವರು ತಪ್ಪಿತಸ್ಥನಾಗುವುದನ್ನು ನೀವು ತಪ್ಪಿಸಿ. ಮಕ್ಕಳಿಗೆ ಅವರ ಹಕ್ಕುಗಳಿವೆ, ಅದನ್ನು ಹೊಂದುವ ಸಂಪೂರ್ಣ ಅಧಿಕಾರ ಅವರಿಗಿದೆ ಎಂಬುದನ್ನು ಮರೆಯಬೇಡಿ.
ಇದನ್ನೂ ಓದಿ: Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!