ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ೨ ಅವರ ಜೀವನಶೈಲಿ ಇದೀಗ ಇತಿಹಾಸದ ಒಂದು ಭಾಗ. ಅದರಲ್ಲೂ ಅವರು ಧರಿಸುತ್ತಿದ್ದ ಕೋಟ್ ಡ್ರೆಸ್ ಆಗಬಹುದು, ಡಿಸೈನರ್ ಮ್ಯಾಚಿಂಗ್ ಹ್ಯಾಟ್, ಅತ್ಯಮೂಲ್ಯ ವಜ್ರದ ಬ್ರೋಚ್ ಹಾಗೂ ಆಲ್ ಟೈಮ್ ಫೇವರೇಟ್ ಆಗಿದ್ದ ಪ್ರಿಶಿಯಸ್ ಪರ್ಲ್ ನೆಕ್‌ಲೇಸ್…ಹೀಗೆ ಎಲ್ಲವೂ ಅವರ ರಾಯಲ್ ಫ್ಯಾಷನ್ ಲೈಫ್‌ನ ಪ್ರತೀಕವಾಗಿದ್ದವು.
ರಾಯಲ್ ಡ್ರೆಸ್‌ಕೋಡ್ ಘನತೆ
ಗ್ಲಾಮರ್‌ರಹಿತವಾಗಿದ್ದ ಅವರ ಡ್ರೆಸ್ಸಿಂಗ್ ಸೆನ್ಸ್ ಕೂಡ ರಾಯಲ್ ಮನೆತನಕ್ಕೆ ಘನತೆ ತಂದುಕೊಟ್ಟಿತ್ತು ಎಂದರೂ ಅತಿಶಯೋಕ್ತಿಯಾಗದು. ಎಲ್ಲದಕ್ಕಿಂತ ಹೆಚ್ಚಾಗಿ ಸುಮಾರು ೭೦ ವರ್ಷಗಳ ಕಾಲ ತಮ್ಮ ಫ್ಯಾಷನ್ ಹಾಗೂ ತಮ್ಮದೇ ಆದ ಯೂನಿಕ್ ಸ್ಟೈಲಿಂಗ್ ಕಾನ್ಸೆಪ್ಟ್ ಅಳವಡಿಸಿಕೊಂಡಿದ್ದು, ಫ್ಯಾಷನ್ ಲೋಕಕ್ಕೆ ಅಚ್ಚರಿ ಮೂಡಿಸುವಂತಿತ್ತು. ಅಷ್ಟೇ ಏಕೆ? ಇಂದಿಗೂ ನಮ್ಮಲ್ಲಿಯೇ ಹೈ ಫ್ಯಾಷನ್ ಫಾಲೋ ಮಾಡುವ ಸಾಕಷ್ಟು ಹೆಣ್ಣುಮಕ್ಕಳಿಗೆ ನೀನೇನು ಕ್ವೀನ್ ಎಲಿಜಬೆತ್ತಾ ಎಂದು ಟಾಂಗ್ ನೀಡುವುದನ್ನು ಕೇಳಿರಬಹುದು. ಆ ಮಟ್ಟಕ್ಕೆ ಅವರ ಫ್ಯಾಷನ್ ವಿಶ್ವದಾದ್ಯಂತ ಯೂನಿಕ್ ಆಗಿತ್ತು ಎನ್ನುತ್ತಾರೆ ಅಂತರಾಷ್ಟ್ರೀಯ ಮಟ್ಟದ ಫ್ಯಾಷನಿಸ್ಟ್‌ಗಳು.
ಹಾಗೆಂದು, ಕ್ವೀನ್ ಎಲಿಜಬೆತ್ ೨ ಮಾತ್ರ ಯಾವತ್ತೂ ಇತರೇ ರಾಷ್ಟ್ರಗಳದ್ದಾಗಲಿ ಅಥವಾ ಧರ್ಮದ್ದಾಗಲಿ ಟ್ರೆಡಿಷನಲ್ ಉಡುಪಿನ ಪ್ರಯೋಗ ಮಾಡಲೇ ಇಲ್ಲ! ಅವರ ಪ್ರತಿದಿನದ ವಾರ್ಡ್ರೋಬ್ ಮೆಂಟೇನ್ ಮಾಡಲೆಂದೇ ಸಹಾಯಕಿಯರನ್ನು ನೇಮಿಸಲಾಗಿತ್ತು. ದಶಕಗಳಿಗೊಮ್ಮೆ ಅವರೂ ಕೂಡ ಬದಲಾಗುತ್ತಿದ್ದರು. ಒಮ್ಮೆ ಕಾಣಿಸಿಕೊಂಡ ಔಟ್‌ಫಿಟ್ ಮತ್ತೊಮ್ಮೆ ಎಲ್ಲಿಯೂ ಅಪ್ಪಿ ತಪ್ಪಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅದು ಮಾತ್ರವಲ್ಲ, ಅವರು ಧರಿಸಿದ ಉಡುಪಿನ ಕಾಪಿ ಡ್ರೆಸ್‌ಗಳು ಕೂಡ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಲಂಡನ್‌ನ ಯಾವುದೇ ಫ್ಯಾಷನಿಸ್ಟ್ ಕೂಡ ಇಂತಹ ಧೈರ್ಯವನ್ನೂ ಕೂಡ ಮಾಡಲಿಲ್ಲ ಎನ್ನುತ್ತಾರೆ ಪರಿಣತ ಡಿಸೈನರ್‌ಗಳು. ಬ್ರಿಟನ್ ಸ್ಟೈಲಿಸ್ಟ್‌ಗಳು ಹೇಳುವಂತೆ, ಕ್ವೀನ್ ಎಲಿಜಬೆತ್ ಕೇವಲ ರಾಣಿಯಾಗಿರಲಿಲ್ಲ. ತಮ್ಮದೇ ಆದ ಗತ್ತು ಹಾಗೂ ಗಾಂಭಿರ್ಯ ಹೊಂದಿದ್ದ ಡ್ರೆಸ್ಸಿಂಗ್ ಸೆನ್ಸ್ ಹೊಂದಿದ್ದರು.
ಕ್ವೀನ್ ಎಲಿಜಬೆತ್‌ಗೆ ಬಲು ಪ್ರಿಯವಾಗಿದ್ದ ಔಟ್‌ಫಿಟ್‌ಗಳು
ಕ್ವೀನ್‌ಗೆ ಒಂದಿಷ್ಟು ಬಣ್ಣಗಳು ಕೊನೆಯವರೆಗೂ ಫೇವರಿಟ್ ಲಿಸ್ಟ್‌ನಲ್ಲಿದ್ದವು. ಅವುಗಳಲ್ಲಿ ಕ್ಯಾಂಡಿ ಪಿಂಕ್, ಎಮರಾಲ್ಡ್ ಗ್ರೀನ್, ವೈಟ್, ರಾಯಲ್ ಬ್ಲ್ಯೂ, ಲೆಮನ್ ಯೆಲ್ಲೋ ಸೇರಿದ್ದವು. ಇಲ್ಲಿಯವರೆಗೂ ಅವರು ಧರಿಸಿರುವ ಸಾಕಷ್ಟು ಡ್ರೆಸ್‌ಗಳು ಈ ವರ್ಣಗಳ ಆಚೀಚೆ ಇವೆಯಷ್ಟೇ! ರಾಯಲ್ ಫ್ಯಾಮಿಲಿಯೊಂದಿಗೆ ಔಟಿಂಗ್ ಹೋಗುವಾಗ ಮಾತ್ರ ಫ್ಲೋರಲ್ ಡ್ರೆಸ್ ಧರಿಸುವುದು ಅವರ ಆಯ್ಕೆಯಲ್ಲಿ ಸೇರಿತ್ತು.
ಕ್ವೀನ್ ಎಲಿಜಬೆತ್ ಫೇವರಿಟ್ ಆಕ್ಸೆಸರೀಸ್‌ಗಳಿವು
· ಪರ್ಲ್ ನೆಕ್‌ಲೇಸ್ ಅವರ ಆಲ್ ಟೈಮ್ ಫೇವರೆಟ್ ಲಿಸ್ಟ್‌ನಲ್ಲಿತ್ತು.
· ಕೆಲವು ಡ್ರೆಸ್‌ಗಳಿಗೆ ಡೈಮಂಡ್ ಬ್ರೊಚ್ ಧರಿಸದೇ ಹೊರ ಹೋಗುತ್ತಿರಲಿಲ್ಲ.
· ಬಹಳಷ್ಟು ಬಾರಿ ಉಡುಪುಗಳಿಗೆ ಡಿಸೈನರ್ ಹ್ಯಾಟ್ ಮ್ಯಾಚ್ ಮಾಡುತ್ತಿದ್ದರು.
· ಒಮ್ಮೆ ಮಾತ್ರ ಮೆಟಾಲಿಕ್ ಡ್ರೆಸ್ ಹಾಗೂ ಲೆಮನ್ ಯೆಲ್ಲೊ ಪೊಲ್ಕಾ ಡ್ರೆಸ್ ಧರಿಸಿದ್ದರು. ಮತ್ತೊಮ್ಮೆ ಇಂತಹವನ್ನು ಪ್ರಯೋಗಿಸಲೇ ಇಲ್ಲ.
· ೧೯೯೭ರಲ್ಲಿ ಅಮೃತ್‌ಸರ್ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದಾಗ ಕೇಸರಿ ಫ್ರಾಕ್ ಜತೆಗೆ ಮ್ಯಾಚಿಂಗ್ ಹ್ಯಾಟ್ ಧರಿಸಿದ್ದರು.
· ಹೈದರಾಬಾದ್‌ನ ನಿಜಾಮರು ಕೊಡುಗೆಯಾಗಿ ನೀಡಿದ್ದ ಪ್ಲಾಟಿನಂ ಡೈಮಂಡ್ ಹಾರವನ್ನು ಕ್ವೀನ್ ಬಹಳಷ್ಟು ಬಾರಿ ಇಷ್ಟಪಟ್ಟು ಧರಿಸಿದ್ದರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)