ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಕ್ಷಾ ಬಂಧನದ (Raksha Bandhan) ಅಂಗವಾಗಿ ಈ ಫೆಸ್ಟಿವ್ ಸೀಸನ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲೆಕ್ಕವಿಲ್ಲದಷ್ಟು ವಿನ್ಯಾಸದ ಬಗೆಬಗೆಯ ಕೈಗೆ ಕಟ್ಟುವ ರಾಖಿಗಳು ಆಗಮಿಸಿವೆ. ನೋಡಲು ಆಕರ್ಷಕವಾಗಿ ಕಾಣುವ ರಾಖಿಗಳಷ್ಟೇ ಅಲ್ಲದೇ, ನಾನಾ ಕಾನ್ಸೆಪ್ಟ್ಗೆ ಪೂರಕವಾಗುವಂತಹ ವಿಭಿನ್ನ ವಿನ್ಯಾಸದವು, ಬೆಳ್ಳಿ-ಬಂಗಾರದ ರಾಖಿಗಳು ಕಾಲಿಟ್ಟಿವೆ. ಕೆಲವು ಮಕ್ಕಳಿಗೆ ಇಷ್ಟವಾದರೇ ಮತ್ತೇ ಕೆಲವು ಯುವಕರಿಗೆ ಪ್ರಿಯವಾಗುವಂತಿವೆ. ಆಯಾ ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ಕಟ್ಟಬಹುದಾದ ಈ ರಾಖಿಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.
ಮಾರುಕಟ್ಟೆಯಲ್ಲಿ ರಾಖಿ ದರ್ಬಾರು
ರಕ್ಷಾ ಬಂಧನದ ಹಿನ್ನೆಲೆಯಲ್ಲಿ, ಇದೀಗ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ವೆರೈಟಿ ರಾಖಿಗಳು ನೇತಾಡುತ್ತಿವೆ. ಬೀದಿ ಬದಿಯ ಅಂಗಡಿಗಳಿಂದ ಹಿಡಿದು ಫ್ಯಾನ್ಸಿ ಶಾಪ್‌ಗಳಲ್ಲಿಯೂ ಇವುಗಳು ಅನಾವರಣಗೊಂಡಿವೆ. ಒಂದಕ್ಕಿಂತ ಒಂದು ವಿಭಿನ್ನ! ಊಹೆಗೂ ಮೀರಿದ ರಾಖಿಗಳು ಕಣ್ಣಿಗೆ ಬೀಳುತ್ತಿವೆ. ಮೊದಲಿನಂತೆ ಇದೀಗ ಕೇವಲ ಮಕ್ಕಳು ಮಾತ್ರ ರಾಖಿಗಳನ್ನು ಇಷ್ಟಪಡುತ್ತಿಲ್ಲ! ಬದಲಿಗೆ ಸಹೋದರರಿಗೆ ಕಟ್ಟಲು ಇದನ್ನು ಕೊಳ್ಳುವ ಯುವತಿಯರು ಹೆಚ್ಚಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ರಾಖಿ ಗಿಫ್ಟ್‌ಗಳು ಕೂಡ ಜೊತೆಯಾಗುತ್ತಿವೆ ಎನ್ನುತ್ತಾರೆ ಜಯನಗರದ ಫ್ಯಾನ್ಸಿ ಅಂಗಡಿಯೊಂದರ ಮಾರಾಟಗಾರರು.
ನಾನಾ ವಿನ್ಯಾಸದ ರಾಖಿ ಲೋಕ
ಸಿಂಪಲ್ ಡಿಸೈನ್‌ನ ಐದು ರೂ.ಗಳ ರಾಖಿಯಿಂದ ಹಿಡಿದು ಸಾವಿರಾರು ರೂ.ಗಳ ಬೆಲೆ ಬಾಳುವ ದುಬಾರಿಯ ಬೆಳ್ಳಿ- ಬಂಗಾರದ ರಾಖಿಗಳು ಇಂದು ಲಭ್ಯ. ಆಯಾ ವ್ಯಕ್ತಿಯ ಪ್ರತಿಷ್ಠೆಗೆ ಅನುಗುಣವಾಗಿ ರಾಕಿ ಕಟ್ಟುವ ರಿವಾಜು ಇಂದು ಬೆಳೆಯುತ್ತಿದೆ. ಅದು ಕಟ್ಟುವ ಸಹೋದರಿಯ ಆರ್ಥಿಕ ಸ್ಥಿತಿ ಮೇಲೂ ನಿರ್ಧರಿತವಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು. ಇನ್ನು, ಸಾಮಾನ್ಯ ರಾಖಿಗಳು ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲೂ ದೊರೆಯುತ್ತವೆ. ಇನ್ನು ಡಿಸೈನರ್ ಹಾಗೂ ಕಸ್ಟಮೈಸ್ಡ್ ರಾಖಿಗಳ ಸೌಲಭ್ಯವನ್ನು ಆನ್‌ಲೈನ್ ಶಾಪ್‌ಗಳಲ್ಲಿ ಪಡೆಯಬಹುದು. ಅಷ್ಟೇಕೆ! ಮೊದಲಿನಂತೆ ದೂರ ಇರುವ ಸಹೋದರನಿಗೆ ಕಳುಹಿಸಲು ಇದೀಗ ಪೋಸ್ಟ್ ಅಥವಾ ಕೊರಿಯರ್ ಸರ್ವಿಸ್‌ಗೆ ಮೊರೆ ಹೋಗಬೇಕಾಗಿಲ್ಲ! ಆನ್‌ಲೈನ್ ಶಾಪ್‌ಗಳಲ್ಲಿ ಕೊಂಡಲ್ಲಿ, ಅತಿ ಫಾಸ್ಟಾಗಿ ಡಿಲಿವರಿ ಮಾಡುವಂತಹ ಸರ್ವೀಸ್ ಕೂಡ ನೀಡುತ್ತವೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪಟ್ರ್ಸ್.
ರಾಖಿ ಶಾಪಿಂಗ್ ಮಾಡುವವರಿಗೆ ಟಿಪ್ಸ್
- ರಾಖಿ ಕಟ್ಟುವ ವ್ಯಕ್ತಿಯ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿ.
- ಪರ್ಸನಾಲಿಟಿಗೆ ಹೊಂದುವಂತಿರಲಿ.
- ಬೆಳ್ಳಿ-ಬಂಗಾರದ ದುಬಾರಿ ರಾಖಿಗಳನ್ನು ನೋಂದಾಯಿತ ಅಂಗಡಿಗಳಲ್ಲೆ ಕೊಳ್ಳಿ.
- ದೂರದಲ್ಲಿರುವ ಸಹೋದರನಿಗೆ ಕಳುಹಿಸುವುದಾದಲ್ಲಿ ಆನ್‌ಲೈನ್ ಶಾಪಿಂಗ್ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ.
- ಮಕ್ಕಳಿಗೆ ಆದಷ್ಟೂ ಖುಷಿ ನೀಡುವ ರಾಖಿಗಳನ್ನೇ ಖರೀದಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Festival Fashion: ಟ್ರೆಡಿಷನಲ್‌ವೇರ್ಸ್‌ನಲ್ಲಿ ಮಹಾಲಕ್ಷ್ಮಿಯರಂತೆ ಹಬ್ಬವನ್ನು ಸಂಭ್ರಮಿಸಿದ ಸೆಲೆಬ್ರೆಟಿಗಳು