ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕ ಬಲೂನ್ ಸ್ಲೀವ್ ಟ್ರೆಂಡಿಯಾಗಿದೆ. ಮೊದಲೆಲ್ಲಾ ಕೇವಲ ಟ್ರೆಡಿಷನಲ್ ಉಡುಪುಗಳು ಹಾಗೂ ಸೀರೆ ಬ್ಲೌಸ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಬಲೂನ್ ಸ್ಲೀವ್ ಡಿಸೈನ್ ಇದೀಗ ಲೆಕ್ಕವಿಲ್ಲದಷ್ಟು ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಟ್ರೆಂಡಿಯಾಗಿದೆ.
ಬಲೂನ್ ಸ್ಲೀವ್ ಹಿಸ್ಟರಿ
ಕಳೆದ 1980ರ ದಶಕದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಧರಿಸುತ್ತಿದ್ದ ರಾಯಲ್ ಔಟ್‌ಫಿಟ್‌ಗಳಲ್ಲಿ ಬಲೂನ್ ಸ್ಲೀವ್‌ಗಳ ಡಿಸೈನ್‌ಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಅಷ್ಟೇ ಏಕೆ? ಬ್ರಿಟನ್ ರಾಜಕುಮಾರಿ ಡಯಾನಾ ಕೂಡ ತನ್ನ ಮದುವೆ ಔಟ್‌ಫಿಟ್‌ಗಳಲ್ಲಿ ಬಲೂನ್ ಸ್ಲೀವ್ ಡಿಸೈನ್ ಮಾಡಿಸಿದ್ದರು ಎಂದು ಸ್ಲೀವ್‌ನ ಹಿಸ್ಟರಿಯನ್ನು ತೆರೆದಿಡುತ್ತಾರೆ ಡಿಸೈನರ್ಸ್. ಬಹಳಷ್ಟು ಮಂದಿ ಬಲೂನ್ ಸ್ಲೀವ್ ನಮ್ಮ ರಾಷ್ಟ್ರದಲ್ಲಿ ಹುಟ್ಟಿದ ಡಿಸೈನ್ ಎಂದು ಭಾವಿಸಿದ್ದಾರೆ. ಆದರೆ, ಈ ಸ್ಲೀವ್ ವಿನ್ಯಾಸ ಮೊದಲು ಜನಪ್ರಿಯಗೊಂಡದ್ದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ. ನಮ್ಮ ದೇಸಿ ವಿನ್ಯಾಸಗಾರರ ಕೈಗಳಲ್ಲಿ ಬಲೂನ್ ಸ್ಲೀವ್ ಟ್ರೆಡಿಷನಲ್ ರೂಪ ಪಡೆಯಿತು. ಅದರಲ್ಲೂ ಸೀರೆಯ ಬ್ಲೌಸ್ ಡಿಸೈನ್‌ಗೆ ಸೇರಿ ಸಾಕಷ್ಟು ಟ್ರೆಂಡಿಯಾಗಿತ್ತು ಎಂದರೆ ಬಹಳಷ್ಟು ಮಂದಿಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಇನ್ನು 90ರ ದಶಕದಲ್ಲಿ ಸಾಕಷ್ಟು ಇಂಡಿಯನ್ ಸಿನಿಮಾಗಳಲ್ಲಿ ನಾಯಕಿಯರು ಸೀರೆಗೆ ಬಲೂನ್ ಬ್ಲೌಸ್‌ಗಳನ್ನು ಧರಿಸುತ್ತಿದ್ದದ್ದನ್ನು ಕಾಣಬಹುದು ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ರಂಜಿತಾ. ಅವರು ಹೇಳುವಂತೆ, ಇಂದು ಇವು ಸಾಕಷ್ಟು ಡಿಸೈನ್ ಹಾಗೂ ಪ್ಯಾಟರ್ನ್ಗಳಲ್ಲಿ ಬಿಡುಗಡೆಗೊಂಡಿವೆ.
ಏನಿದು ಬಲೂನ್ ಸ್ಲೀವ್ ಡಿಸೈನ್?
ಬಲೂನ್‌ನಂತೆ ಊದಿಕೊಂಡಿರುವ ಸ್ಲೀವ್ ವಿನ್ಯಾಸವನ್ನು ಬಲೂನ್ ಸ್ಲೀವ್ ಎನ್ನಲಾಗುತ್ತದೆ. ಫುಲ್, ಮೆಗಾ ಹಾಗೂ ಎಲ್ಬೋ ಬಲೂನ್ ಸ್ಲೀವ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಸ್ಲೀವ್‌ನ ಆರಂಭ ಹಾಗೂ ಅಂತ್ಯದಲ್ಲಿ ನೆರಿಗೆ ಹಿಡಿಯುವ ಮೂಲಕ ಎರಡೂ ಕಡೆ ಪಫ್ ಮಾಡಲಾಗಿರುತ್ತದೆ. ಹಾಗಾಗಿ ಇವು ಧರಿಸಿದಾಗ ಬಲೂನ್‌ನಂತೆ ಕಾಣುತ್ತವೆ.
ನಾನಾ ಉಡುಪುಗಳಲ್ಲಿ ಬಲೂನ್ ಸ್ಲೀವ್
ನಾನಾ ಉಡುಪುಗಳಲ್ಲಿ ಬಲೂನ್ ಸ್ಲೀವ್‌ನ ವಿನ್ಯಾಸ ಕಾಣಬಹುದು. ಉದಾಹರಣೆಗೆ, ಸಿಂಗಲ್‌ಶೋಲ್ಡರ್, ಬಾಡಿಕಾನ್ ಡ್ರೆಸ್, ಗೌನ್, ಬಾಡಿ ಫೀಟ್ ಫ್ರಾಕ್, ಕೋಲ್ಡ್ ಶೋಲ್ಡರ್ ಟಾಪ್ ಇಲ್ಲವೇ ಫ್ರಾಕ್, ಸ್ಲಿಮ್ ಫಿಟ್ ಉಡುಪುಗಳಲ್ಲೂ ಬಲೂನ್ ಸ್ಲೀವ್ ಡಿಸೈನ್‌ಗಳನ್ನು ಕಾಣಬಹುದು. ಕೆಲವು ಬಲೂನ್ ಸ್ಲೀವ್‌ಗಳು ತ್ರೀ ಫೋರ್ತ್‌ವರೆಗೂ ಹಾಗೂ ಅಂಗೈವರೆಗೂ ಮುಂದುವರೆದಿರುತ್ತವೆ. ಇನ್ನು ಕೆಲವಲ್ಲಿ ಸ್ಲೀವ್ ಜಾಗದಲ್ಲಿ ರೆಕ್ಕೆಯಂತಹ ಹಾರಾಡುವ ಎಕ್ಸ್‌ಟ್ರಾ ವಿಂಗ್ಸ್ ಸ್ಲೀವ್‌ಗಳನ್ನು ಡಿಸೈನ್‌ಮಾಡಲಾಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಸೀರೆಗೂ ಬಲೂನ್ ಸ್ಲೀವ್ ಬ್ಲೌಸ್
ಸೀರೆಗೂ ಬಲೂನ್ ಸ್ಲೀವ್ ಬ್ಲೌಸ್‌ಗಳು ಟ್ರೆಂಡಿ ಲುಕ್ ನೀಡುತ್ತವೆ. ನೋಡಲು ವಿಭಿನ್ನವಾಗಿ ಕಾಣಬೇಕೆಂದುಕೊಂಡಾಗ ಈ ಶೈಲಿಯ ಸ್ಲೀವ್‌ನ ಬ್ಲೌಸ್‌ಗಳನ್ನು ಸೀರೆಗೆ ಧರಿಸಬಹುದು ಎನ್ನುತ್ತಾರೆ ಡಿಸೈನರ್ಸ್.
ತಾರೆಯರ ಡಿಸೈನರ್ ಸ್ಲೀವ್ ಪ್ರೇಮ
ಇತ್ತೀಚೆಗೆ ತಾರೆಯರು ಬಲೂನ್ ಸ್ಲೀವ್ ಡಿಸೈನರ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ನಟಿ ಶೆಹನಾಝ್ ಗಿಲ್ ಧರಿಸಿದ್ದ ನೀಲಿ ವರ್ಣದ ಬಲೂನ್ ಸ್ಲೀವ್ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರನ್ನು ಸೆಳೆದಿತ್ತು. ಇನ್ನು ನಟಿ ನಿಯತಿ ಫತ್ನಾನಿ ಧರಿಸಿದ ಪಿಂಕ್ ಶೇಡ್‌ನ ಬಲೂನ್ ಸ್ಲೀವ್ ಟಾಪ್ ಕೂಡ ನೆಟ್ಟಿಗರನ್ನು ಆಕರ್ಷಿಸಿತ್ತು.
ಬಲೂನ್ ಸ್ಲೀವ್ ಡ್ರೆಸ್ ಧರಿಸುವವರಿಗೆ ಒಂದಿಷ್ಟು ಟಿಪ್ಸ್:
- ಬಲೂನ್ ಸ್ಲೀವ್ ಡ್ರೆಸ್ಗೆ ನೆಕ್ಲೈನ್ ಅಗಲವಾಗಿರಬೇಕು.
- ರೆಟ್ರೊ ಲುಕ್ ಬೇಡವಾದಲ್ಲಿ ಫಂಕಿ ಲುಕ್ಗೆ ಆದ್ಯತೆ ನೀಡಿ.
- ಬಲೂನ್ ಸ್ಲೀವ್ ಆದಷ್ಟೂ ಬಾಡಿ ಫಿಟ್ ಉಡುಪುಗಳಿಗೆ ಮಾತ್ರ ಸೂಟ್ ಆಗುತ್ತದೆ.
- ಪ್ಲಂಪಿಯಾಗಿರುವವರಿಗೆ ಈ ಔಟ್ಫಿಟ್ ಮತ್ತಷ್ಟು ದಪ್ಪನಾಗಿರುವಂತೆ ಬಿಂಬಿಸುತ್ತದೆ.
- ತೆಳ್ಳಗಿರುವವರಿಗೆ ಇದು ಹೇಳಿ ಮಾಡಿಸಿದ ಸ್ಲೀವ್ ಡಿಸೈನ್.
- ಫ್ಯಾಬ್ರಿಕ್ಗೆ ತಕ್ಕಂತೆ ಸ್ಲೀವ್ ಡಿಸೈನ್ ಇರುವುದು ಉತ್ತಮ.
……………
ಇದನ್ನೂ ಓದಿ | Celebrity Fashion | ಪುರುಷರಲ್ಲೂ ಇರಬೇಕು ಫ್ಯಾಷನ್ ಸೆನ್ಸ್